ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್‌.ವೈಗೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ: ಕತ್ತಿ

Last Updated 19 ಸೆಪ್ಟೆಂಬರ್ 2017, 5:12 IST
ಅಕ್ಷರ ಗಾತ್ರ

ಹುಕ್ಕೇರಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಹುಕ್ಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದರೆ ತಾವು ಕ್ಷೇತ್ರ ಬಿಟ್ಟುಕೊಟ್ಟು ಬೇರೆಡೆ ಸ್ಪರ್ಧಿಸಲು ಸಿದ್ಧ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯು 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಸರ್ಕಾರದ ಬಗ್ಗೆ ಜನರಲ್ಲಿ ಜಿಗುಪ್ಸೆ ಉಂಟಾಗಿದ್ದು, ಜನರು ಮೋದಿಯ ಕಾರ್ಯವೈಖರಿ ಮತ್ತು ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಕೆಲಸ ನೋಡಿ ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆಎಂದರು.

ತಾಲ್ಲೂಕಿನ ಒಂದೆರಡು ಹಳ್ಳಿಗೆ ಹೋಗಿ ನೀರು ಕೊಡಿಸಿದ್ದು ನಾನೇ ಎಂದು ಬಿಂಬಿಸಿ ಅಲ್ಲಿಯ ಜನರಿಂದ ಮತ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ನಡೆಯದು ಎಂದು ಹೆಸರು ಹೇಳದೆ ಮಾಜಿ ಸಚಿವ ಎ.ಬಿ.ಪಾಟೀಲರ ವಿರುದ್ಧ ಕಿಡಿಕಾರಿದ ಶಾಸಕರು ನೀರಾವರಿ ಸೌಲಭ್ಯ ಮಾಡಿದ್ದು ಮಾಜಿ ಶಾಸಕ ಹೊನ್ನಪ್ಪ ನೂಲಿ ಎಂದು ಸ್ಮರಿಸಿದರು.

ದೀಪಾವಳಿ ವೇಳೆಗೆ ಕಾರ್ಯಾರಂಭ: ತಾಲ್ಲೂಕಿನ 22 ಕೆರೆಗೆ ನೀರು ತುಂಬುವ ಯೋಜನೆ ಕಾಮಗಾರಿ ಭರದಿಂದ ನಡೆದಿದ್ದು, ಬರುವ ದೀಪಾವಳಿಗೆ ಕಾರ್ಯಾರಂಭ ಮಾಡಲಿದೆ. ಆ ಸಮಯದಲ್ಲಿ ಹಿರಣ್ಯಕೇಶಿ ನದಿಯಲ್ಲಿ ನೀರು ಹರಿಯುತ್ತಿರಬೇಕು ಎಂದರು.

ಪಟ್ಟಣದಲ್ಲಿ ಚಂದ್ರಶೇಖರ ಸ್ವಾಮೀಜಿಯ ರಜತ ಮಹೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಲಿದ್ದು, ಪುರಸಭೆ ವತಿಯಿಂದ ಕುಡಿಯುವ ನೀರಿನ ಪೂರೈಕೆ ಮತ್ತು ವಿದ್ಯುತ್ ಸಹಕಾರಿ ಸಂಘದಿಂದ ನಿರಂತರ ವಿದ್ಯುತ್ ಪೂರೈಕೆಯಾಗುವಂತೆ ಉಪಸ್ಥಿತರಿದ್ದ ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ ಮತ್ತು ಸಂಘದ ಅಧ್ಯಕ್ಷ ಬಸವರಾಜ ಮರಡಿ ಅವರಿಗೆ ಸೂಚಿಸಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಸಂಕನ್ನವರ, ವಿದ್ಯುತ್ ಸಂಘದ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಎಸ್.ಕೆ.ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪಿಂಟು ಶೆಟ್ಟಿ, ಸುಭಾಸ ನಾಯಿಕ, ಸುರೇಶ ಜಿನರಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT