ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕಿಗೆ ₹ 12 ಕೋಟಿ ನಿವ್ವಳ ಲಾಭ

Last Updated 19 ಸೆಪ್ಟೆಂಬರ್ 2017, 5:33 IST
ಅಕ್ಷರ ಗಾತ್ರ

ವಿಜಯಪುರ: ‘2016–-17ನೇ ಆರ್ಥಿಕ ವರ್ಷದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ₹ 12.47 ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಪ್ರಕಟಿಸಿದರು. ‘ಪ್ರಸಕ್ತ ವರ್ಷ ಡಿಸಿಸಿ ಬ್ಯಾಂಕ್‌ನ ನಿವ್ವಳ ಲಾಭಾಂಶ ದಾಖಲೆ ಪ್ರಮಾಣ ದಲ್ಲಿ ಏರಿಕೆಯಾಗಿದೆ, ಬ್ಯಾಂಕ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕ ಲಾಭ ಗಳಿಸಲಾಗಿದೆ. ಈ ಹಿಂದಿನ ಆರ್ಥಿಕ ವರ್ಷಕ್ಕಿಂತಲೂ ಗಣನೀಯ ಪ್ರಮಾಣದಲ್ಲಿ ಬ್ಯಾಂಕ್‌ ಪ್ರಗತಿ ಸಾಧಿಸಿದೆ’ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘2016-–17ನೇ ಆರ್ಥಿಕ ವರ್ಷದಲ್ಲಿ ₹ 877 ಕೋಟಿ ಕೃಷಿ ಉದ್ದೇಶಕ್ಕಾಗಿ, ₹ 755 ಕೋಟಿ ಕೃಷಿಯೇತರ ಚಟುವಟಿಕೆ ಗಳಿಗೆ ಸೇರಿದಂತೆ ಒಟ್ಟಾರೆ ₹ 1632 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಕೃಷಿ ಸಾಲ ವಸೂಲಾತಿ ಶೇ 97.66 ರಷ್ಟಾಗಿದ್ದು, ಕೃಷಿಯೇತರ ಸಾಲ ವಸೂಲಾತಿ ಶೇ 83.02ರಷ್ಟಾಗಿದ್ದು, ಒಟ್ಟಾರೆ ಸಾಲ ವಸೂಲಾತಿ ಶೇ 91.76ರಷ್ಟಾಗಿದೆ.

ಭಾರತೀಯ ರಿಸರ್ವ ಬ್ಯಾಂಕ್ ನಿರ್ದೇಶನದಂತೆ ಜಿಲ್ಲಾ ಬ್ಯಾಂಕ್ ಶೇ 9ರಷ್ಟು ಸಿಆರ್ಎಆರ್ ಹೊಂದಬೇಕಿದ್ದು, 2017ರ ಮಾರ್ಚ್‌ 31ರ ಅಂತ್ಯಕ್ಕೆ ಶೇ 12.05ರಷ್ಟು ಹೊಂದಿತ್ತು’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಜಿಲ್ಲೆಯಾದ್ಯಂತ 35 ಶಾಖೆಗಳನ್ನು ಹೊಂದಿದೆ, ಹಿಂದಿನ ಆರ್ಥಿಕ ವರ್ಷದ ಮಾರ್ಚ್‌ ಮಾಸಾಂತ್ಯಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣ ಶೇ 4.80ರಷ್ಟಿದ್ದು, ನೆಟ್ ಎನ್‌ಪಿಎ ಪ್ರಮಾಣ ಶೇ 074ರಷ್ಟಿದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯ 269 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ 201 ಸಂಘಗಳಲ್ಲಿ ಗೋದಾಮು, ಕಚೇರಿ ಹೊಂದಲಾಗಿದೆ. ಬಾಕಿ ಉಳಿದ 68 ಸಂಘಗಳ ಪೈಕಿ ಈಗಾಗಲೇ 10 ಸಂಘ ಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 256 ಸಹಕಾರ ಸಂಘ ಗಳು ಲಾಭ ಗಳಿಸಿದ್ದು, 13 ಸಹಕಾರ ಸಂಘಗಳು ನಷ್ಟದಲ್ಲಿವೆ’ ಎಂದರು.

ಶತಮಾನೋತ್ಸವ: ‘28/07/2019ಕ್ಕೆ ಬ್ಯಾಂಕ್‌ ನೂರು ವಸಂತ ಪೂರೈಸಲಿದೆ. ಶತಮಾನೋತ್ಸವ ಪ್ರಯುಕ್ತ ಹಲವಾರು ಗುರಿ, ಕಾರ್ಯಕ್ರಮಗಳನ್ನು ಸಂಘಟಿಸ ಲಾಗುತ್ತಿದೆ. ಬ್ಯಾಂಕಿನ ಕೇಂದ್ರ ಕಚೇರಿ ಆವರಣದಲ್ಲಿ ಶತಮಾನೋತ್ಸವ ಭವನ ನಿರ್ಮಾಣ, ಬ್ಯಾಂಕಿನ ಎಲ್ಲ ಶಾಖೆಗಳಿಗೂ ಸ್ವಂತ ಕಟ್ಟಡ, ಪ್ರಸಕ್ತ ಬ್ಯಾಂಕಿನ ವ್ಯವಹಾರ ₹ 3116 ಕೋಟಿಯಿದ್ದು, ಅದನ್ನು ₹ 4 ಸಾವಿರ ಕೋಟಿಗೆ ಏರಿಕೆ ಮಾಡುವುದು.

10 ಹೊಸ ಶಾಖೆ ಆರಂಭ, ಎಲ್ಲ ತಾಲ್ಲೂಕು ಮಟ್ಟದ, ವಿವಿಧ ಶಾಖೆಗಳಲ್ಲಿ ಎಟಿಎಂ ಅಳವಡಿಕೆ ಸೇರಿದಂತೆ ಹಲ ಗುರಿ–-ಉದ್ದೇಶಗಳನ್ನು ಹೊಂದಲಾಗಿದೆ’ ಎಂದು ಪಾಟೀಲ ವಿವರಿಸಿದರು.

ಹೊಸ ಸಾಲ ಕೊಟ್ಟಿಲ್ಲ: ‘ಬ್ಯಾಂಕ್‌ನಿಂದ ರೈತರಿಗೆ ಹೊಸ ಸಾಲ ಕೊಡುವುದು ಕಷ್ಟವಾಗುತ್ತಿದೆ. ಮೂರು ತಿಂಗಳಿಂದ ಯಾರೊಬ್ಬರಿಗೂ ಹೊಸ ಸಾಲ ನೀಡಿಲ್ಲ. ₹ 150 ಕೋಟಿ ಮೊತ್ತ ರಾಜ್ಯ ಸರ್ಕಾರ ದಿಂದ ಡಿಸಿಸಿ ಬ್ಯಾಂಕ್‌ಗೆ ಬರಬೇಕಿದೆ.

ಆದಷ್ಟು ಶೀಘ್ರದಲ್ಲಿ ಈ ಮೊತ್ತ ಬಿಡುಗಡೆ ಮಾಡಿದರೆ, ರೈತರಿಗೆ ಹೊಸ ಸಾಲ ನೀಡಲಾಗುವುದು. ಸಾಲ ಮನ್ನಾದ ಪ್ರಯೋಜನವೂ ದಕ್ಕಲಿದೆ’ ಎಂದು ಶಿವಾನಂದ ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸರ್ಕಾರ ಮನ್ನಾ ಆದ ಸಾಲದ ಮೊತ್ತವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡದ ಕಾರಣ ದಿಂದಾಗಿಯೇ ಹೊಸ ಸಾಲ ನೀಡ ಲಾಗುತ್ತಿಲ್ಲ. ರೈತರ ಹಿತರಕ್ಷಣೆ ದೃಷ್ಟಿ ಯಿಂದ ವಿವಿಧ ಆರ್ಥಿಕ ಸಂಪನ್ಮೂಲಗಳ ಸಹಾಯ ಪಡೆದು, ರೈತರಿಗೆ ಸಾಲ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕ್‌ನ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಾಪುಗೌಡ ಪಾಟೀಲ, ನಿರ್ದೇಶಕರಾದ ಸಿದ್ದಪ್ಪ ಕೋರಿ, ರಾಜಶೇಖರ ಗುಡದಿನ್ನಿ, ಮಲ್ಲನಗೌಡ ಪಾಟೀಲ ಬಳ್ಳೊಳ್ಳಿ, ತಿಪ್ಪಣ್ಣ ಮೂಲಿಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಂಕಿ–ಅಂಶ
269 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಜಿಲ್ಲೆಯಲ್ಲಿ

256 ಸಹಕಾರ ಸಂಘಗಳು ಲಾಭದಲ್ಲಿ ಮುನ್ನಡೆದಿವೆ

₹44.4 ಲಕ್ಷ ಆರ್ಥಿಕ ನೆರವು 77 ಕ್ರೀಡಾಪಟುಗಳಿಗೆ

₹143.78 ಕೋಟಿ ಬೆಳೆ ವಿಮೆ ವಿತರಣೆ 2001ರಿಂದ 15ರವರೆಗೆ

* * 

2016–17ನೆ ಹಣಕಾಸು ವರ್ಷದಲ್ಲಿ  ಬ್ಯಾಂಕ್ ₹ 12.47 ಕೋಟಿ ಲಾಭ ಗಳಿಸುವ ಮೂಲಕ, ಹಿಂದಿನ ಆರ್ಥಿಕ ವರ್ಷಕ್ಕಿಂತ ₹ 1.82 ಕೋಟಿ ಹೆಚ್ಚಿನ ಲಾಭ ಗಳಿಸಿದೆ
ಶಿವಾನಂದ ಪಾಟೀಲ
ಡಿಸಿಸಿ ಬ್ಯಾಂಕ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT