ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖತಗಾಂವ್‌: ಮೂಲ ಸೌಕರ್ಯ ಒದಗಿಸಲು ಗ್ರಾ.ಪಂ ಎದುರು ಧರಣಿ

Last Updated 19 ಸೆಪ್ಟೆಂಬರ್ 2017, 5:50 IST
ಅಕ್ಷರ ಗಾತ್ರ

ಕಮಲನಗರ: ಸಮೀಪದ ಮದನೂರ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖತಗಾಂವ್‌ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆ ಪ್ರಮುಖರು, ಗ್ರಾಮಸ್ಥರು ಸೋಮವಾರ ಧರಣಿ ನಡೆಸಿದರು. ನಾಗರಿಕ ಸೇವಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ, ನಿಮ್ಮ ಹಕ್ಕಿಗೆ ನಮ್ಮ ಧ್ವನಿ ವೇದಿಕೆ ಹಾಗೂ ಕರ್ನಾಟಕ ರೈತ ಸಂಘಗಳ ಪದಾಧಿಕಾರಿಗಳು ಮದನೂರ್‌ ಗ್ರಾಮ ಪಂಚಾಯಿತಿ ಎದುರು ಧರಣಿ ಮಾಡಿದರು.

‘ಖತಗಾಂವ್‌ ಗ್ರಾಮದಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಚರಂಡಿಗಳಲ್ಲಿ ಹೂಳು ತುಂಬಿದೆ. ರಸ್ತೆಗಳೆಲ್ಲ ಕೆಸರಿನ ಕೊಂಪೆಯಾಗಿ ಮಾರ್ಪಟ್ಟಿವೆ. ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ’ ಎಂದು ದೂರಿದರು.

‘ಗ್ರಾಮದ ರಾಮ ಚೌಕ್‌ನಿಂದ ಸರ್ಕಾರಿ ಪ್ರಾಥಮಿಕ ಶಾಲೆವರೆಗಿನ ರಸ್ತೆ ಕೆಸರುಮಯವಾಗಿದೆ. ಈ ಮಾರ್ಗವಾಗಿ ಸಂಚರಿಸುವ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ನಡೆದಾಡಲು ಬಾರದಂತಹ ಪರಿಸ್ಥಿತಿ ಇದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಮಾರ್ಗದಲ್ಲಿ ಕೊಳವೆ ಬಾವಿ ಸುತ್ತ ಕೊಳಚೆ ನೀರು ಸಂಗ್ರಹವಾಗಿದೆ. ಈ ನೀರು ಸೇವನೆ ರೋಗಗಳಿಗೆ ಕಾರಣವಾಗುತ್ತಿದೆ. ಶುಚಿತ್ವ ಕಾಪಾಡುವಂತೆ ತಿಳಿಸಿದರೂ ಪ್ರಯೋ
ಜನವಾಗಿಲ್ಲ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಕೊಳಚೆ ನೀರು ಸಂಗ್ರವಾಗಿವೆ. ಜಾನುವಾರುಗಳಿಗಾಗಿ ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಪಾಚಿಗಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶೌಚಾಲಯ ಕಟ್ಟಿಸಿಕೊಳ್ಳಲು ಪ್ರೋತ್ಸಾಹ ದೊರಕುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪಂಚಾಯಿತಿಯವರು ವಿಫಲರಾಗಿದ್ದಾರೆ’ ಎಂದು ದೂರಿದರು.
‘ಸರ್ಕಾರದ ಯೋಜನೆಗಳನ್ನು ಪಂಚಾಯಿತಿ ನಾಮಫಲಕದಲ್ಲಿ ಅಳವಡಿಸುವುದು, ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಸುವುದು, ಸೊಳ್ಳೆಗಳ ಕಾಟ ತಪ್ಪಿಸಲು ಫಾಗಿಂಗ್‌ ಮಾಡಿಸುವುದು ಸೇರಿದಂತೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು.

ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ಮುಖಂಡ ಪ್ರಮೋದ್‌ ಧರಣೆ, ಓಂಕಾರ್‌ ಸೊಲ್ಲಪುರೆ, ಮನೋಹರ ಗಾಯಕವಾಡ್‌, ಸಂಗ್ರಾಮ ಪಾಟೀಲ, ದೇವಿದಾಸ ಚವಾಣ್‌, ನಾಗೇಶ ಭಿವಾಜಿ, ಮಹೇಂದ್ರ ಭಾಲೇರಾವ್‌, ಅಂತೇಶ್‌ ಗುಣವಂತರಾವ್‌, ರಾಜಕುಮಾರ ರೊಟ್ಟೆ ಎಚ್ಚರಿಕೆ ನೀಡಿದ್ದಾರೆ.

ಲಿಖಿತ ಭರವಸೆ: ಧರಣಿ ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯಿತಿ ಇಒ ಜಗನ್ನಾಥ ಮೂರ್ತಿ ಭೇಟಿ ನೀಡಿ, ‘ಒಂದು ತಿಂಗಳೊಳಗಾಗಿ ಖತಗಾಂವ್‌ ಗ್ರಾಮದಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು’ ಎಂದು ಲಿಖಿತ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT