ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌; ಜನಜೀವನ ಅಸ್ತವ್ಯಸ್ತ

Last Updated 19 ಸೆಪ್ಟೆಂಬರ್ 2017, 6:06 IST
ಅಕ್ಷರ ಗಾತ್ರ

ಹನುಮಸಾಗರ: ಹೂಲಗೇರಿ-ಇಳಕಲ್‌ ರಸ್ತೆ ಪುನರ್‌ ನಿರ್ಮಾಣ ಮಾಡಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ ಹೂಲಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರ ಹೂಲಗೇರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಗಡಿಭಾಗದಲ್ಲಿರುವ ಹೂಲಗೇರಿಯಿಂದ ಇಳಕಲ್‌ಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹಲವಾರು ವರ್ಷಗಳಿಂದ ಈ ರಸ್ತೆ ದುಸ್ಥಿತಿಯಲ್ಲಿದೆ. ಈ ಕುರಿತು ಸಾಕಷ್ಟು ಬಾರಿ ಮಂತ್ರಿಗಳಿಗೆ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ರಸ್ತೆಯ ಪುನರ್ ನಿರ್ಮಾಣಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಈ ಪ್ರತಿಭಟನೆ ಅನಿವಾರ್ಯವಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಅತಿ ಹೆಚ್ಚು ಕಂದಾಯ ಕಟ್ಟುವ ಹೂಲಗೇರಿ ಗ್ರಾಮ ಕುಷ್ಟಗಿ ಹಾಗೂ ಹುನಗುಂದ ತಾಲ್ಲೂಕುಗಳ ಸರಹದ್ದಿನಲ್ಲಿದೆ. ಹೂಲಗೇರಿ ಗ್ರಾಮದ ಮೂಲಕವೇ ಎಲ್ಲ ಹಳ್ಳಿಗಳಿಗೆ, ಪಟ್ಟಣಗಳಿಗೆ ಮುಖ್ಯ ರಸ್ತೆ ಸಂಪರ್ಕ ಹೊಂದಿದೆ. ಈಗಾಗಲೇ ಶಾಸಕರು ಹೈದರಾಬಾದ್‌ ಕರ್ನಾಟಕ ವಿಶೇಷ ಅಭಿವೃದ್ದಿ ಯೋಜನೆಯಲ್ಲಿ ₹ 50 ಲಕ್ಷ ಅನುದಾನ ಬಿಡುಗಡೆಗೊಳಿಸಿ ಕೆಲಸ ಆರಂಭಿಸಲು ಅನುಮತಿ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಮುಖಂಡರು ಪ್ರತಿಭಟನಾಕಾರರ ಗಮನಕ್ಕೆ ತಂದರು.

ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ಅನುದಾನಗಳನ್ನು ಬಿಡುಗಡೆ ಮಾಡಿಸಿ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆಂದು ಮುಖಂಡರಾದ ಮಹಾಂತೇಶ ಅಗಸಿಮುಂದಿನ, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ ಕುಂಟನಗೌಡರ ತಿಳಿಸಿದರು.

ಮುಖಂಡ ಎಂ.ಆರ್.ಪಾಟೀಲ ಮಾತನಾಡಿ, ಮಾಜಿ ಶಾಸಕ ಕೆ.ಶರಣಪ್ಪ ಅವರ ಅವಧಿಯಲ್ಲಿ ಇಳಕಲ್‌ನಿಂದ ಹೂಲಗೇರಿ ಮಾರ್ಗವಾಗಿ ನಾಗೂರ ವರೆಗೆ ನಬಾರ್ಡ್‌ ಯೋಜನೆಯಲ್ಲಿ ಪಕ್ಕಾ ರಸ್ತೆ ನಿರ್ಮಾಣವಾಗಿತ್ತು. ಅದರಿಂದ ಸುಮಾರು 15 ಹಳ್ಳಿಗಳಿಗೆ ಅನುಕೂಲವಾಗಿತ್ತು. ಒಂದು ವೇಳೆ ರಸ್ತೆ ಕಾಮಗಾರಿ ಮತ್ತಷ್ಟು ವಿಳಂಬವಾದರೆ ತಾಲ್ಲೂಕುಮಟ್ಟದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮದ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಶಾಲೆಗಳಿಗೆ ಅಘೋಷಿತ ರಜೆಯಾಗಿತ್ತು. ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿತ್ತು. ಸಾರಿಗೆ ಮತ್ತು ಇತರ ವಾಹನಗಳು ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಅಬ್ದುಲ್‌ಸಾಬ್‌ ಬೇವಿನಗಿಡದ, ಶಶಿಕಾಂತಗೌಡ ಪಾಟೀಲ, ವಿರುಪಾಕ್ಷಗೌಡ ಪಾಟೀಲ, ಬಾಲನಗೌಡ ಪಾಟೀಲ ಬಂಡರಗಲ್, ಅಶೋಕ ಕುಂಟನಗೌಡರ್, ನಿಂಗನಗೌಡ ಹೇರೂರ, ಮಹಾಂತೇಶ ನಾಗೂರ, ಮಹಾಂತೇಶ ಗಾಣಿಗೇರ, ಮುತ್ತು ಬಂಡರಗಲ್, ಮಹಾಂತೇಶ ಜಾನ್ಸಿ, ಶಂಕ್ರಪ್ಪ ಬಳಿಗೇರ, ಅಶೋಕ ಚಳಗೇರಿ, ಮಹೇಶ ಪಾಟೀಲ, ಪ್ರವೀಣ ಕುಂಟನಗೌಡರ್ ಇದ್ದರು. ಹನುಮಸಾಗರ ಪೊಲೀಸರು ಸೂಕ್ತ ಬಂದೋಬಸ್ತ್ ನಡೆಸಿದರು. ನಾಡ ತಹಶೀಲ್ದಾರ ವಿನಾಯಕ ಗೋಡಬೋಲೆ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT