ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಪಕ್ಷ: ಗಗನಕ್ಕೇರಿದ ಸೊಪ್ಪು, ಸೌತೆ ಕಾಯಿ ಬೆಲೆ

Last Updated 19 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಪಿತೃಪಕ್ಷ ಆಚರಣೆ (ಮಹರ್ನವಮಿ ಹಬ್ಬ) ಬಲು ಜೋರಾಗಿ ನಡೆಯುತ್ತಿದೆ. ಮಂಗಳವಾರ (ಸೆ.19) ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಗರ ಸೇರಿ ಜಿಲ್ಲೆಯ ವಿವಿಧೆಡೆ ಪಿತೃಪಕ್ಷ ಇರುವ ಕಾರಣ ಮಾರುಕಟ್ಟೆಯಲ್ಲಿ ಸೊಪ್ಪು, ಸೌತೆ ಕಾಯಿ, ನಿಂಬೆಹಣ್ಣಿನ ಬೆಲೆ ಗಗನಮುಖಿಯಾಗಿದೆ.

ಕಳೆದ ತಿಂಗಳು ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ಕೇವಲ ₹ 5 ಇತ್ತು. ಪಿತೃಪಕ್ಷ ಮಾಸ ಆರಂಭವಾದೊಡನೆ ಕೊತ್ತಂಬರಿ ಸೊಪ್ಪಿನ ಬೆಲೆ ₹ 20ಕ್ಕೆ ಏರಿತ್ತು. ಆದರೆ ಸೋಮವಾರ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದವರೆಲ್ಲ ಬೆಚ್ಚಿ ಬಿದ್ದರು. ಒಂದು ಕಟ್ಟು ₹ 60ಕ್ಕೇರಿದ್ದು ವ್ಯಾಪಾರಿಗಳು ಕೊತ್ತಂಬರಿಯನ್ನು ಚಿನ್ನದಂತೆ ಮಾರಾಟ ಮಾಡುತ್ತಿದ್ದಾರೆ.

ಪಿತೃಪಕ್ಷದಲ್ಲಿ ಮಾಂಸಹಾರ ಮಾಡುವ ಕಾರಣ ಕೊತ್ತಂಬರಿ ಬೆಲೆ ಗಗನಕ್ಕೇರಿದೆ. ಕಳೆದ ರಂಜಾನ್‌ ಆಚರಣೆ ದಿನವೂ ಕೊತ್ತಂಬರಿ ಸೊಪ್ಪಿನ ಬಲೆ ₹ 60ಕ್ಕೇರಿತ್ತು. ಮತ್ತೆ ಅದೇ ದಿನ ಮರುಕಳಿಸಿದ್ದು ಗ್ರಾಹಕರ ಜೇಬಿಗೆ ಬರೆ ಬಿದ್ದಿದೆ. ಇತರ ಎಲ್ಲಾ ಸೊಪ್ಪುಗಳ ಬೆಲೆ ಕೂಡ ಏರಿಕೆ ಕಂಡಿದ್ದು ಕಟ್ಟು ಮೆಂಥೆ ₹ 40, ಸಬ್ಬಸಿಗೆ ₹30, ಪಾಲಕ್‌ ₹ 20, ಪುದೀನಾ ₹ 20ಕ್ಕೆ ಮಾರಾಟವಾಗುತ್ತಿದೆ.

ಎರಡು ದಿನಗಳಿಂದ ಸೌತೆಕಾಯಿ ಬೆಲೆ ಕೂಡ ಏರಿಕೆ ಕಂಡಿದೆ. ಮೂರು ಸೌತೆಕಾಯಿ ₹ 20ಕ್ಕೆ ಮಾರಾಟವಾಗುತ್ತಿವೆ. ಮೂರು ನಿಂಬೆ ಹಣ್ಣಿಗೆ ₹ 10 ತೆರಬೇಕಾಗಿದೆ. ಹಸಿ ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು ರಸ್ತೆಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. 5 ಬಾಳೆ ಎಲೆಗಳು ₹ 20ಕ್ಕೆ ಮಾರಾಟವಾಗುತ್ತಿವೆ.

‘ಪಿತೃಪಕ್ಷ ಬಂತೆಂದರೆ ಕೊತ್ತಂಬರಿ ಸೊಪ್ಪಿನ ಬೆಲೆ ದುಬಾರಿಯಾಗುತ್ತದೆ. ₹ 100ಕ್ಕೇರಿದರೂ ಜನರು ಕೊತ್ತಂಬರಿ ಕೊಳ್ಳಲೇಬೇಕು. ಮಾಂಸದ ಅಡುಗೆಗೆ ಕೊತ್ತಂಬರಿ ಸೊಪ್ಪು ಬಹಳ ಮುಖ್ಯ. ಹೀಗಾಗಿ ವ್ಯಾಪಾರಿಗಳು ಇಂತಹ ಸಮಯದಲ್ಲಿ ಬಾಯಿಗೆ ಬಂದ ಬಲೆ ಹೇಳುತ್ತಾರೆ’ ಎಂದು ಗ್ರಾಹಕ ರಾಮೇಗೌಡ ಹೇಳಿದರು.

ಎಡೆ ಸಾಮಾಜಿಗೆ ಬೇಡಿಕೆ: ಪಿತೃಪಕ್ಷದಲ್ಲಿ ಮೃತಪಟ್ಟ ಹಿರಿಯರಿಗೆ ಎಡೆ ಇಡುವುದು ವಾಡಿಕೆ. ಮಾಂಸದೂಟದ ಜೊತೆಗೆ ಎಡೆ ಸಾಮಾನುಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಸಾಮಾನುಗಳನ್ನು ಮಾರುವವರು ಹೆಜ್ಜೆಗೊಬ್ಬರಂತೆ ಸ್ಟಾಲ್‌ ಹಾಕಿಕೊಂಡಿದ್ದಾರೆ. ಹರಿಶಿಣ–ಕುಂಕುಮ, ಧೂಪ, ಕರ್ಪೂರ, ಗಂಧದ ಪುಡಿ, ಎಲೆ–ಅಡಿಕೆ, ಬಾಚಣಿಗೆ, ವಿಭೂತಿ, ದಾರ, ಬಳೆ ಮುಂತಾದ ವಸ್ತುಗಳನ್ನು ಒಳಗೊಂಡ ಎಡೆ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತಿದೆ.

₹ 20 ಕೆ.ಜಿ ಟೊಮೆಟೊ: ತರಕಾರಿ ಬೆಲೆ ಸ್ಥಿರವಾಗಿದ್ದು ₹ 20ಕ್ಕೆ ಕೆ.ಜಿ. ಟೊಮೆಟೊ ಮಾರಾಟವಾಗುತ್ತಿದೆ. ₹ 60ಕ್ಕೆ ಕ್ಯಾರೇಟ್‌, ಬೀಟರೂಟ್‌ ₹ 40, ಬೀನ್ಸ್‌ ₹ 40, ಆಲೂಗಡ್ಡೆ ₹ 20, ಬೆಂಡೆ ಕಾಯಿ ₹ 20ಕ್ಕೆ ಮಾರಾಟವಾಗುತ್ತಿದೆ.

‘ಎಲ್ಲೆಡೆ ಉತ್ತಮ ಮಳೆ ಸುರಿಯುತ್ತಿರುವ ಕಾರಣ ತರಕಾರಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಬಿಸಿಲು ಇದ್ದರೆ ಮಾಲು ಬರುವುದಿಲ್ಲ. ಅಂತಹ ಸಮಯದಲ್ಲಿ ಬೆಲೆ ಹೆಚ್ಚಾಗಿರುತ್ತದೆ’ ಎಂದು ತರಕಾರಿ ವ್ಯಾಪಾರಿ ಲವೇಶ್‌ ಹೇಳಿದರು.

ಹಣ್ಣಿನ ಬೆಲೆಯಲ್ಲಿ ಸ್ಥಿರತೆ: ಏಲಕ್ಕಿ ಬಾಳೆಹಣ್ಣು ಕಳೆದ ತಿಂಗಳು ₹ 100ರ ಗಡಿ ದಾಟಿ ಮುಂದೆ ಹೋಗಿತ್ತು. ಆದರೆ ಈಗ ₹ 80ರಲ್ಲಿ ಸ್ಥರತೆ ಕಂಡಿದೆ. ಕೆ.ಜಿ. ವಾಷಿಂಗ್‌ಟನ್‌ ಸೇಬು ₹ 120, ಮೂಸಂಬಿ ₹ 60, ಚಿಕ್ಕಬಳ್ಳಾಪುರ ದಪ್ಪ ದ್ರಾಕ್ಷಿ ₹ 80, ಪಪ್ಪಾಯ ₹ 20, ದಾಳಿಂಬೆ ₹ 80, ಸಪೋಟ ₹ 60, ಸೀತಾಫಲ ₹ 60 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT