ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಕುಸಿತ:ಸಂಪರ್ಕ ಕಡಿತ

Last Updated 19 ಸೆಪ್ಟೆಂಬರ್ 2017, 8:47 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಗೌಡಳ್ಳಿ ಹೊರಟ್ಟಿಯಲ್ಲಿರುವ ಸೇತುವೆಯು ಕುಸಿದಿದ್ದು, ಈ ಭಾಗದ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನಿಂದ ಗೌಡಳ್ಳಿ ಹೊರಟ್ಟಿಯ ಮೂಲಕ ಹೊಸಳ್ಳಿ, ಮೇಕನಗದ್ದೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 5 ದಶಕಗಳಿಗೂ ಹಿಂದೆ ನಿರ್ಮಿಸಿದ್ದು, ನಾಲ್ಕು ವರ್ಷಗಳ ಹಿಂದೆ ಸುರಿದಿದ್ದ ಮಳೆಗೆ ಗುಂಡಿ ಕಾಣಿಸಿಕೊಂಡಿತ್ತು. 4ವರ್ಷಗಳಿಂದಲೂ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮ ಸ್ಥರು ಒತ್ತಾಯಿಸಿದರೂ, ಇಲಾಖೆ ಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಮತ್ತೊಂದು ಭಾಗ ತುಂಡಾಗುವ ಹಂತಕ್ಕೆ ತಲುಪಿದ್ದು, ಸೇತುವೆಯ ಮೇಲೆ ತಿರುಗಾಡಲೂ ಆಗದಂತಾಗಿದೆ. ಇದರಿಂದಾಗಿ ವಾಹನಗಳು ಸಹ ಸಂಚರಿಸಲಾಗದ ಸ್ಥಿತಿ ಉಂಟಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಗ್ರಾಮದಿಂದ ಹೊರಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಕುಸಿತವಾಗಿರುವುದರಿಂದ, ಹೊರಟ್ಟಿ, ಅಕ್ಕಿರುದ್ದಿ, ಮೇಕನಗದ್ದೆ, ಮರಗುಂದ, ಬಕ್ಕಡಿ, ಹೊಸಳ್ಳಿ, ಕೊಗ್ರಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.

ತಾಲ್ಲೂಕು ಕೇಂದ್ರದಿಂದ ಈ ಮಾರ್ಗದಲ್ಲಿ ಮುಂಜಾನೆ 2, ಮಧ್ಯಾಹ್ನ 1 ಹಾಗೂ ರಾತ್ರಿ 2 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ ಸಂಚಾರ ನಡೆಸುತ್ತಿದ್ದು, ಇದೀಗ ಸೇತುವೆ ತುಂಡಾಗಿರುವುದರಿಂದ, ಈ ಗ್ರಾಮದಗಳಿಗೆ ಬಸ್‌ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಈ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗವನ್ನು ಬದಲಾಯಿಸಿ ಚಲಾಯಿಸುತ್ತಿದ್ದು, ಸ್ಥಳೀಯ ಜನರು ಪರದಾಡುತ್ತಿದ್ದಾರೆ.

ಈ ಭಾಗದ ಜನರಿಗೆ ಮಂಗಳವಾರ ಬಿಳ್ಳೂರು ಗ್ರಾಮದಲ್ಲಿ ನಡೆಯುವ ವಾರದ ಸಂತೆಯು, ದಿನಸಿ ವಸ್ತುಗಳನ್ನು ಖರೀದಿಸುವ ಪ್ರಧಾನ ಕೇಂದ್ರವಾಗಿದ್ದು, ಎರಡು ದಿನಗಳ ಹಿಂದೆ ಕುಸಿದಿರುವ ಸೇತುವೆಯಿಂದ ದಿನಸಿಗಳನ್ನು ಕೊಳ್ಳ ಲಾಗದ ಸ್ಥಿತಿ ಉಂಟಾಗಿದೆ.

ಗ್ರಾಮೀಣ ರಸ್ತೆಗಳ ಪಟ್ಟಿ ಯಲ್ಲಿರುವ ಈ ಸೇತುವೆಯನ್ನು ದುರಸ್ತಿ ಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ, ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದ್ದು, ಜಿಲ್ಲಾಡಳಿತವು ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಸೇತುವೆ ನಿರ್ಮಾಣದವರೆಗೂ ತಾತ್ಕಲಿಕ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT