ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ದಸರಾ ಮಹೋತ್ಸವಕ್ಕೆ ₹ 1.40 ಕೋಟಿ

Last Updated 19 ಸೆಪ್ಟೆಂಬರ್ 2017, 9:11 IST
ಅಕ್ಷರ ಗಾತ್ರ

ಶಿವಮೊಗ್ಗ: ಈ ಬಾರಿ ₹ 1.40 ಕೋಟಿ ಬಜೆಟ್‌ನಲ್ಲಿ ವೈಭವಯುತ ದಸರಾ ಆಚರಿಸಲು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧತೆ ರೂಪಿಸಿವೆ.
ರಾಜ್ಯ ಸರ್ಕಾರ ಕಳೆದ ಬಾರಿಯಂತೆ ಈ ಬಾರಿಯೂ ₹ 1 ಕೋಟಿ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಪಾಲಿಕೆ ₹ 40 ಲಕ್ಷ ತೆಗೆದಿಟ್ಟಿದೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆನೆ ಅಂಬಾರಿ ಆಭಾದಿತ: ಕಳೆದ ವರ್ಷದಂತೆ ಈ ಬಾರಿಯೂ ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ದಸರಾ ಅಂಬಾರಿ ಹೋರುತ್ತಿವೆ. ಮೈಸೂರು ಹೊರತುಪಡಿಸಿ ಸಾಂಪ್ರದಾಯಿಕ ದಸರಾ ಮಹೋತ್ಸವ ನಡೆಯುವುದು ಶಿವಮೊಗ್ಗದಲ್ಲಿ. ಹಾಗಾಗಿ, ಸರ್ಕಾರ ವಿಶೇಷ ಹಬ್ಬ ಎಂದು ಪರಿಗಣಿಸಿ ಆನೆಗಳನ್ನು ದಸರಾ ಉತ್ಸವದಲ್ಲಿ ಬಳಸಿಕೊಳ್ಳಲು ಅನುಮತಿ ನೀಡುತ್ತಿದೆ ಎಂದು ವಿವರ ನೀಡಿದರು.

10 ದಿನಗಳ ಉತ್ಸವ: ಸೆ. 21ರಿಂದ 30ರವರೆಗೆ 10 ದಿನ ಉತ್ಸವ ನೆರವೇರಲಿದೆ. 21ರಿಂದ 29ರವರೆಗೆ ನವರಾತ್ರಿ, ಕೊನೆಯ ದಿನ ವಿಜಯ ದಶಮಿ ಆಚರಣೆ ನಡೆಯಲಿದೆ. ಸೆ. 21ರ ಬೆಳಿಗ್ಗೆ 11ಕ್ಕೆ ಕೋಟೆ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮಾಡಲಾಗುವುದು. ಅಂದು ಜನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.

ಮೇಯರ್‌ ಎನ್. ಏಳುಮಲೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿನಯ ವಿ.ಪ್ರಭು ಮತ್ತು ಅಜಯ್ ವಾರಿಯರ್ ತಂಡ ನವರಾತ್ರಿ ವಿಶೇಷ ಸಂಗೀತ ಕಾರ್ಯಕ್ರಮ ನಡೆರಸಿಕೊಡಲಿದೆ. ದಸಾರಾ ಮಹೋತ್ಸವವನ್ನು ವಿಭಿನ್ನವಾಗಿ ಹಲವು ಭಾಗಗಳಾಗಿ ವಿಂಗಡಿಸಲಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ರೈತರ ದಸರಾ, ಚಲನಚಿತ್ರ ದಸರಾ ಅವುಗಳಲ್ಲಿ ಮುಖ್ಯವಾದವು.

ಮಹಿಳಾ ದಸರಾ: ಕುವೆಂಪು ರಂಗಮಂದಿರದಲ್ಲಿ ಸೆ. 21ರ ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಟ್ಟ ಗೌರಿ ಮದುವೆ ಧಾರವಾಹಿಯ ನಟಿ ಚಂದ್ರಕಲಾ ಮೋಹನ್ ಕಾರ್ಯಕ್ರಮ ಉದ್ಘಾಟಿಸುವರು. ಸೆ.22ರ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಉದ್ಘಾಟಿಸುವರು.

ರಂಗ ದಸರಾ:
ಹವ್ಯಾಸಿ ರಂಗ ತಂಡಗಳ ಒಕ್ಕೂಟದ ಸಹಯೋಗದಲ್ಲಿ ಸೆ. 22 ಹಾಗೂ 26ರಿಂದ 29ರವರೆಗೆ ಅಂಬೇಡ್ಕರ್ ಭವನದಲ್ಲಿ ಪ್ರತಿದಿನ ಸಂಜೆ 6ಕ್ಕೆ ರಂಗಗೀತೆ ಗಾಯನ, 7ಕ್ಕೆ ನಾಟಕ ಪ್ರದರ್ಶನ ಇರುತ್ತದೆ. ವಿವಿಧ ರಂಗ ತಂಡಗಳು ಮುತ್ತಣ್ಣನ ಪ್ರಮೋಷನ್ ಪ್ರಸಂಗ, ವೀರ ಉತ್ತರ ಕುಮಾರ, ಕುಂಟಕೋಣ ಮೂಕ ಜಾಣ, ಪೊಲೀಸ್ ಚೌಕಿ, ಗುಣಮುಖ ನಾಟಕಗಳು ಪ್ರದರ್ಶಿಸಲಿದ್ದಾರೆ. ಸೆ.22ರ ಬೆಳಿಗ್ಗೆ 10ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಏಕಪಾತ್ರಾಭಿನಯ, ಸೆ. 22ರ ಬೆಳಿಗ್ಗೆ 10ಕ್ಕೆ ರಂಗಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಮಕ್ಕಳ ದಸರಾ: ಸೆ.23ರ ಬೆಳಿಗ್ಗೆ 8ಕ್ಕೆ ಶಿವಪ್ಪ ನಾಯಕ ವೃತ್ತದಲ್ಲಿ 10ನೇ ತರಗತಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಎನ್. ಶುಭಾಷಿಣಿ ಮಕ್ಕಳ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಸೆ.16ರಂದು ಸಂಜೆ 4.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ದಿವ್ಯಾಂಗ ಮಕ್ಕಳ ಓಟದ ಸ್ಪರ್ಧೆ, ಸಂಜೆ 6ಕ್ಕೆ 16 ವರ್ಷದ ಒಳಗಿನ ಬಾಲಕ-ಬಾಲಕಿಯರ ಹೊನಲು ಬೆಳಕಿನ ಕಬ್ಬಡ್ಡಿ ಕ್ರೀಡಾಕೂಟ ನಡೆಯಲಿವೆ. 23ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ರಂಗಮಂದಿರ ಎದುರು ಸ್ಲೋ ಸೈಕಲ್ ಸ್ಪರ್ಧೆ, 11ಕ್ಕೆ ರಂಗಮಂದಿರದ ಹೊರಾಂಗಣದಲ್ಲಿ ಮಕ್ಕಳ ದಸರಾ ಜಾತ್ರೆ, ಮಧ್ಯಾಹ್ನ 12ಕ್ಕೆ ಪೊಲೀಸ್ ಶ್ವಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಯೋಗ ದಸರಾ: ಸೆ.24ರ ಬೆಳಿಗ್ಗೆ 6ಕ್ಕೆ ಕುವೆಂಪು ರಂಗಮಂದಿರದ ಬಳಿ ಯೋಗಾಭ್ಯಾಸ ಮತ್ತು ಧ್ಯಾನ ಏರ್ಪಡಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ಯೋಗ ನಡಿಗೆ ನಡೆಯಲಿದೆ. ಯೋಗ ಪ್ರದರ್ಶನ ಮತ್ತು ಸಾಂಸ್ಕೃತಿಕ ನಾಟ್ಯ ಯೋಗ ಕಾರ್ಯಕ್ರಮ ಪ್ರಸ್ತುತವಾಗಲಿವೆ.

ಕಲಾ ದಸರಾ: ಶಿವಪ್ಪ ನಾಯಕ ಅರಮನೆಯಲ್ಲಿ ಸೆ. 27ರ ಸಂಜೆ 6ಕ್ಕೆ ಕಲಾ ದಸರಾ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಉದ್ಘಾಟಿಸುವರು. ದಸರಾ ನೃತ್ಯ, ಜಾದು ಪ್ರದರ್ಶನ, ಸಮೂಹ ಗೀತೆ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿವೆ. ಸೆ.28ರ ಸಂಜೆ 6ಕ್ಕೆ ಶಾಸಕಿ ಶಾರದಾ ಪೂರ್ಯಾನಾಯ್ಕ ಕಲಾ ದಸರಾ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಯುವ ದಸರಾ: ನೆಹರೂ ಕ್ರೀಡಾಗಣದಲ್ಲಿ ಸೆ. 25ರಂದು ಸಂಜೆ 5ಕ್ಕೆ ನಟಿ ಅನುಪ್ರಭಾಕರ್ ಯುವ ದಸರಾ ಕಾರ್ಯಕ್ರಮ ಉದ್ಘಾಟಿಸುವರು. ಶಮಿತಾ ಮಲ್ನಾಡ್ ಮತ್ತು ತಂಡ ಮ್ಯೂಸಿಕಲ್ ನೈಟ್ ನಡೆಯಲಿದೆ. ಸೆ. 26 ರ ಸಂಜೆ 5 ಗಂಟೆಗೆ ವಿನೋಬ ನಗರ ಡಿವಿಎಸ್ ಕಾಲೇಜು ಆವರಣದಲ್ಲಿ ಸರಿಗಮಪ ಖ್ಯಾತಿಯ ಶ್ರೀಹರ್ಷ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಇರುತ್ತದೆ. ಸೆ. 24 ರ ಬೆಳಿಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಮೂಹ ನೃತ್ಯ ಸ್ಪರ್ಧೆ ನಡೆಯಲಿವೆ.

ಪರಿಸರ ದಸರಾ: ಕುವೆಂಪು ರಂಗಮಂದಿರದಲ್ಲಿ ಸೆ. 24ರಂದು ಬೆಳಿಗ್ಗೆ 7ಕ್ಕೆ ಪರಿಸರ ದಸರಾ ಮಹೋತ್ಸವ ಅಂಗವಾಗಿ ಸೈಕಲ್ ಜಾಥ ನಡೆಯಲಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಉದ್ಘಾಟಿಸುವರು. ಸೆ. 25ರ ಬೆಳಿಗ್ಗೆ 10ಕ್ಕೆ ಶಿವಪ್ಪ ನಾಯಕ ವೃತ್ತದಲ್ಲಿ ಸೈಕಲ್ ಜಾಥಾ ಏರ್ಪಡಿಸಲಾಗಿದೆ. ಬಸವ ಮರುಳಸಿದ್ದ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡುವರು.

ರೈತ ದಸರಾ: 26 ರಂದು ಬೆಳಿಗ್ಗೆ 10ಕ್ಕೆ ರೈತ ದಸರಾ ಮಹೋತ್ಸವ ಅಂಗವಾಗಿ ಬೀದಿ ನಾಟಕಗಳೊಂದಿಗೆ ರೈತ ಮೆರವಣಿಗೆ. ಅಶೋಕ ವೃತ್ತ ಬಸ್‌ನಿಲ್ದಾಣದಿಂದ ಕುವೆಂಪು ರಂಗಮಂದಿರದವರೆಗೆ ನಡೆಯಲಿವೆ. ಪ್ರಗತಿ ಪರ ರೈತರಾದ ಆಶಾ ಶೇಷಾದ್ರಿ ಕಾರ್ಯಕ್ರಮ ಉದ್ಘಾಟಿಸುವರು. ಕುವೆಂಪು ರಂಗಮಂದಿರದಲ್ಲಿ ನಡೆಯುವ ರೈತ ದಸರಾ ಕಾರ್ಯಕ್ರಮಕ್ಕೆ ಸಾಣೆಹಳ್ಳಿ ಪಂಡಿತಾರಾಧ್ಯ ಶ್ರೀ ಚಾಲನೆ ನೀಡುವರು.

ಸಾಂಸ್ಕೃತಿಕ ದಸರಾ: ಕುವೆಂಪು ರಂಗಮಂದಿರದಲ್ಲಿ 27ರಂದು ವಿದ್ವಾನ್ ದತ್ತಮೂರ್ತಿ ಭಟ್ ಅವರ ನಾಟ್ಯಶ್ರೀ ಕಲಾತಂಡ ಯಕ್ಷಗಾನ ಪ್ರದರ್ಶನ ಏರ್ಪಡಿಸಿದೆ. ಸೆ.28 ರ ಸಂಜೆ 5.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ವಿಜಯ ಪ್ರಕಾಶ್ ತಂಡದಿಂದ ಮ್ಯೂಸಿಕಲ್ ನೈಟ್ಸ್, ಸೆ. 29ರಂದು ಜಾನಪದ ಕಲಾ ಮೇಳ ಹಾಗೂ ಸಮೂಹ ಗಾಯನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮೇಯರ್ ಏಳುಮಲೈ ಬಾಬು, ಉಪ ಮೇಯರ್ ರೂಪಾ ಲಕ್ಷ್ಮಣ್, ಆಯುಕ್ತ ಮುಲೈ ಮುಹಿಲನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ನಾಗರಾಜ್, ಅರ್ಚನಾ ಬಳ್ಳಕೆರೆ, ಎನ್.ಜೆ. ರಾಜಶೇಖರ್, ನಾಗರಾಜ್ ಕಂಕಾರಿ, ಎಚ್.ಫಾಲಾಕ್ಷಿ, ಮಾಲತೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT