ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಸೂರಿಗಾಗಿ ಹೆಗಡೆ ನಗರ ನಿವಾಸಿಗಳ ಪ್ರತಿಭಟನೆ

Last Updated 19 ಸೆಪ್ಟೆಂಬರ್ 2017, 9:25 IST
ಅಕ್ಷರ ಗಾತ್ರ

ದಾವಣಗೆರೆ: ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಮಾಗನಹಳ್ಳಿ ರಸ್ತೆಯ ಹೆಗಡೆ ನಗರದ ನಿವಾಸಿಗಳು ಸೋಮವಾರ ನಗರದಲ್ಲಿ ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ಆಶ್ರಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

‘ಹೆಗಡೆ ನಗರದ ನಿವಾಸಿಗಳು ಯಾವುದೇ ಮೂಲಸೌಕರ್ಯ ಇಲ್ಲದೇ 34 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಾ ಬಂದಿದ್ದಾರೆ. ಆಶ್ರಯ ಮನೆಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದರೂ, ಇದುವರೆಗೂ ಪ್ರಯೋಜನವಾಗಿಲ್ಲ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಬಂದಿದ್ದಾರೆ’ ಎಂದು ಧರಣಿಯ ನೇತೃತ್ವ ವಹಿಸಿದ್ದ ವೇದಿಕೆಯ ಸಂಚಾಲಕ ಜೆ.ಅಮಾನುಲ್ಲಾ ಖಾನ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಪಾಲಿಕೆ ವ್ಯಾಪ್ತಿಯ ಎಸ್‌ಜಿಎಂ ನಗರದ ಬಳಿ ಇರುವ ಪಾಲಿಕೆ ಜಾಗದಲ್ಲಿಯೇ ಇಲ್ಲಿನ ನಿವಾಸಿಗಳಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು. ಇದರಿಂದ ನಿವಾಸಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಸಹಾಯವಾಗಲಿದೆ ಎಂದು ತಿಳಿಸಿದರು. ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಚರ್ಚಿಸಿ ತೀರ್ಮಾನ: ‘ಅರ್ಹರಿಗೆ ನಿವೇಶನ ನೀಡುವ ಸಂಬಂಧ ಶೀಘ್ರದಲ್ಲಿ ಆಶ್ರಯ ಸಮಿತಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆಯ ಉಪ ಆಯುಕ್ತೆ ಅಶ್ವಿನಿ ಭರವಸೆ ನೀಡಿದರು.

‘ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಮೂರು ದಿನದೊಳಗೆ ತೀರ್ಮಾನ ತೆಗೆದುಕೊಳ್ಳಬೇಕು. ನಿರ್ಲಕ್ಷಿಸಿದಲ್ಲಿ ಸೆ.21ರಂದು ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಅಮಾನುಲ್ಲಾ ಖಾನ್‌ ಅವರು ಎಚ್ಚರಿಸಿದರು.

ಧಾರ್ಮಿಕ ಗುರು ಅಲ್ಲಾಮ ಮೌಲಾನಾ, ಮಹಮ್ಮದ್‌ ಹನೀಫ್‌, ರಜಾ ಖಾದ್ರಿ, ಮೌಲನಾ ಷಾಹಿದ್‌, ಮುಷ್ರಫ್‌ ಅಲಂ ರಜ್ವಿ, ಖಾದರ್‌ ಬಾಷಾ, ಸೈಯದ್‌ ರಸೂಲ್‌, ಜಿಕ್ರಿಯಾ, ಎಸ್‌.ಕೆ.ಹುಸೇನ್‌ ಫೇರ್‌ , ಮನ್ಸೂರ್‌ ಅಲಿ, ಅಕ್ರಂ, ಹುಸೇನ್‌ ಖಾನ್‌, ಅಹಮ್ಮದ್‌ ಬಾಷಾ, ಶಬ್ಬೀರ್‌, ಸಲೀಂ, ಕಿರಣ್‌, ಮುಬಾರಕ್‌, ರಜಿಯಾ ಬೇಗಂ, ಕಲಾವತಿ, ರೇಣುಕಮ್ಮ, ನಾಗವೇಣಿ, ಅಕ್ಕಮ್ಮ ಜತೆಗೆ ಹೆಗಡೆ ನಗರದ ಬಹುತೇಕ ನಿವಾಸಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT