ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ತಂತ್ರಜ್ಞಾನದಲ್ಲಿ ಅಡಗಿದೆ ಸ್ಮಾರ್ಟ್‌ಫೋನ್ ಭವಿಷ್ಯ!

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಳೆದ ಒಂದು ದಶಕದಲ್ಲಿ ಸ್ಮಾರ್ಟ್‌ಫೋನ್ ಬೆಳೆದು ಬಂದ ಪರಿ ವಿಸ್ಮಯಕಾರಿಯಾದದ್ದು. ಗಾತ್ರ ತೆಳ್ಳಗಾಗುತ್ತಲೇ ವೇಗ ಹೆಚ್ಚಿಸಿಕೊಂಡಿರುವುದು ಸ್ಮಾರ್ಟ್‌ಫೋನ್‌ಗಳ ಸಾಧನೆ. ಹಾಗಿದ್ದರೆ ಮುಂದೆ ಏನು ಕಾದಿದೆ ಎನ್ನುವ ಕುತೂಹಲ ಮೂಡುವುದು ಸಹಜ. ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಕಾಲಕ್ಕೆ ತಕ್ಕಂತೆ ತನ್ನ ಅನಿವಾರ್ಯತೆ   ಹೆಚ್ಚಿಸಿಕೊಳ್ಳುತ್ತಾ ಬಂದಿರುವ ಸ್ಮಾರ್ಟ್‌ಫೋನ್‌ನ ಭವಿಷ್ಯ ಮುಂದೆ ಕ್ಯಾ‌ಮೆರಾ ತಂತ್ರಜ್ಞಾನದಲ್ಲಿ ಅಡಗಿದೆಯೇ? ಸದ್ಯದ ಬೆಳವಣಿಗೆಗಳನ್ನು ಗಮನಿಸಿದಾಗ ಹೌದೆನ್ನಬೇಕಾಗುತ್ತದೆ.

ಸ್ಮಾರ್ಟ್‌ಫೋನ್‌ ಅನ್ನು ನಾವು ಕೈಗೆತ್ತಿಕೊಂಡರೆ ಸಾಕು. ನಮ್ಮ ಮುಖ ನೋಡಿ ನಾವೇ ಅದರ ಮಾಲೀಕ ಹೌದೋ ಅಲ್ಲವೋ ಎಂಬುದನ್ನೂ ಅದು ಗುರುತು ಹಿಡಿಯಲಿದೆ. ಇಂತಹ ತಂತ್ರಜ್ಞಾನ ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿದೆ. ಐಷಾರಾಮಿ ಹೋಟೆಲ್‌ಗಳಿಗೆ ತೆರಳಿ ಅಲ್ಲಿರುವ ಆಹಾರ ವಸ್ತುಗಳ ಪಟ್ಟಿಯನ್ನು (ಮೆನು) ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದರೆ ಸಾಕು. ಪಟ್ಟಿಯಲ್ಲಿ ನಮೂದಿಸಿರುವ ಅಷ್ಟೂ ಹೆಸರುಗಳನ್ನು ಸ್ಮಾರ್ಟ್‌ಫೋನ್ ನಮ್ಮದೇ ಭಾಷೆಗೆ ತರ್ಜುಮೆ ಮಾಡಿಕೊಡುವ ದಿನ ದೂರವಿಲ್ಲ.

ಪೀಠೋಪಕರಣ ಖರೀದಿಗೆ ಅಂಗಡಿಗೆ ತೆರಳಿದಾಗ ಅಲ್ಲಿರುವ ಮೇಜು ನಮ್ಮ ಮನೆಯ ಕೊಠಡಿಯಲ್ಲಿ ಹೇಗೆ ಕಾಣಬಹುದು ಎಂಬುದನ್ನು ನೋಡಲೂ ಸ್ಮಾರ್ಟ್‌ಫೋನ್ ಕ್ಯಾಮೆರಾ ಸಾಕು. ಇದನ್ನು ವರ್ಚುವಲ್ ರಿಯಾಲಿಟಿ ಮೂಲಕ ಸ್ಮಾರ್ಟ್‌ಫೋನ್ ತೋರಿಸಿ ಕೊಡುವ ದಿನ ಹತ್ತಿರವಾಗುತ್ತಿದೆ. ಈ ಪೈಕಿ ಕೆಲವು ಸಾಧ್ಯತೆಗಳ ಅನಾವರಣ ಈಗಾಗಲೇ ಆರಂಭವಾಗತೊಡಗಿದೆ.

ನಮ್ಮ ಮುಖವನ್ನೂ ಗುರುತುಹಿಡಿಯಬಲ್ಲ ತ್ರೀಡಿ ಆಬ್ಜೆಕ್ಟ್‌ಗಳನ್ನು ಒಳಗೊಂಡ ಹೊಸ ಐಫೋನ್‌ಗಳನ್ನು  ಆ್ಯಪಲ್‌ ಕಂಪೆನಿ  ಈಗಾಗಲೇ ಪರಿಚಯಿಸಿದೆ. ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಸ್ಯಾಮ್‌ಸಂಗ್, ಅತಿವೇಗದ ಡ್ಯುಯಲ್ ಲೆನ್ಸ್‌ ಕ್ಯಾಮೆರಾ ಒಳಗೊಂಡಿರುವ, ಸಿಗ್ನೇಚರ್ ಫೀಚರ್ ಹೊಂದಿರುವ ‘ಗ್ಯಾಲಕ್ಸಿ ನೋಟ್ 8’ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಮತ್ತು ಆ್ಯಪಲ್‌ ಹಾದಿಯಲ್ಲೇ ಇತರ ಸ್ಮಾರ್ಟ್‌ಫೋನ್ ಕಂಪೆನಿಗಳೂ ಮುಂದುವರಿಯುವುದು ನಿಶ್ಚಿತ.

ಇದೇ ಕಾರಣಕ್ಕೆ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಿಗೆ ಬಿಡಿ ಭಾಗಗಳನ್ನು ಒದಗಿಸುವ ಕ್ವಾಲ್ಕಂ ಕಂಪೆನಿಯ ಉತ್ಪನ್ನ ನಿರ್ವಾಹಕ ಫಿಲಿಪ್ ಜೇಮ್ಸ್ ಜೇಕಬ್‌ವಿಟ್ಜ್ ಅವರು, ‘2018, ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ತಂತ್ರಜ್ಞಾನವನ್ನು ಉತ್ತುಂಗಕ್ಕೆ ಕೊಂಡೊಯ್ಯಲಿರುವ ವರ್ಷವಾಗಿರಲಿದೆ ’ ಎಂದು ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ನ ಸುರಕ್ಷತಾ ಗುಣಲಕ್ಷಣಗಳಲ್ಲಿಯೂ ಕ್ಯಾಮೆರಾ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಲಿದೆ ಎಂಬುದು ಜೇಕಬ್‌ವಿಟ್ಜ್ ಅಂಬೋಣ.

ನಮ್ಮ ಬೆರಳಚ್ಚು ಅಥವಾ ಪಾಸ್ ಕೋಡ್ ನಮೂದಿಸುವ ಮೂಲಕ ಸ್ಮಾರ್ಟ್‌ಫೋನ್‌ ಅನ್‌ಲಾಕ್ ಮಾಡುವ ವಿಧಾನ ಕಳೆದ ಕೆಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಆದರೆ, ಆ್ಯಪಲ್ ಕಂಪೆನಿ  ಬಿಡುಗಡೆ ಮಾಡಿರುವ ಹೊಸ ಐಫೋನ್‌ನಲ್ಲಿ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ ಅನ್‌ಲಾಕ್  ಸೌಲಭ್ಯ ಇದೆ. ಅಂದರೆ, ಸ್ಮಾರ್ಟ್‌ಫೋನ್‌ನ ಮಾಲೀಕ ಅದನ್ನು ಕೈಗೆತ್ತಿಕೊಂಡಾಗ ಆತನ ಮುಖದ ಚಹರೆಯ ಗುರುತು ಹಿಡಿದು ಅದು ತನ್ನಿಂತಾನೆ ಅನ್‌ಲಾಕ್ ಆಗಲಿದೆ! ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೂ ಭವಿಷ್ಯದಲ್ಲಿ ಹೊಸ ಸಾಧ್ಯತೆಯೊಂದಕ್ಕೆ ಇದು ಮುನ್ನುಡಿಯಾಗಲಿದೆ ಎಂಬುದನ್ನು ಅಲ್ಲಗಳೆಯಲಾಗದು. ಆದರೆ, ಮುಖದ ಸ್ಕ್ಯಾನಿಂಗ್‌ ವ್ಯವಸ್ಥೆ ಸ್ಮಾರ್ಟ್‌ಫೋನ್‌ನಲ್ಲಿ ಹೇಗೆ ಕೆಲಸ ಮಾಡಬಲ್ಲದು ಎಂಬುದಕ್ಕೆ ಕ್ವಾಲ್ಕಂ ಕಂಪೆನಿಯ ‘ಸ್ಪೆಕ್ಟ್ರಾ’ ಡೆಪ್ತ್ ಸೆನ್ಸಿಂಗ್ ಕ್ಯಾಮೆರಾ ಸಿಸ್ಟಂ ಉತ್ತಮ ಉದಾಹರಣೆಯಾಗಬಲ್ಲದು ಎಂಬುದು ತಂತ್ರಜ್ಞಾನ ಪರಿಣತರ ಅಭಿಪ್ರಾಯ.

ತ್ರೀಡಿ ತಂತ್ರಜ್ಞಾನದ ಮೂಲಕ ನಮ್ಮ ಮುಖದಲ್ಲಿರುವ ಸಣ್ಣ ಸಣ್ಣ ಚುಕ್ಕಿಯನ್ನೂ ಗುರುತು ಹಿಡಿಯುವ ‘ಸ್ಪೆಕ್ಟ್ರಾ’, ಸ್ಮಾರ್ಟ್‌ಫೋನ್ ಅನ್‌ಲಾಕ್ ಆಗಲು ನೆರವಾಗುತ್ತದೆ.

ಹೊಸ ಐಫೋನ್‌ನಲ್ಲಿ ಅಡಕವಾಗಿರಲಿರುವ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ (ಮುಖ ಗುರುತು ಹಿಡಿಯುವ ವ್ಯವಸ್ಥೆ) ಎಲ್ಲೋ 10 ಲಕ್ಷದಲ್ಲಿ ಒಂದು ತಪ್ಪಾಗಿ ಗುರುತು ಹಿಡಿದರೂ ಹಿಡಿಯಬಹುದು. ಉಳಿದಂತೆ ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬುದು ತಜ್ಞರ ಹೇಳಿಕೆಯಾಗಿದೆ.

ಈ ಮೊದಲಿನ, ಮುಖವನ್ನು ಗುರುತು ಹಿಡಿಯುವ ವ್ಯವಸ್ಥೆ 100ಕ್ಕೆ ಒಂದರಂತೆ ತಪ್ಪಾಗಿ ಕಾರ್ಯನಿರ್ವಹಿಸುತ್ತಿದ್ದವು ಎನ್ನಲಾಗಿದೆ. ಈ ವ್ಯವಸ್ಥೆಯು ಮೊಬೈಲ್‌ನಲ್ಲಿದ್ದ ಫೋಟೊದ ಆಧಾರದಲ್ಲಿ ಗುರುತು ಹಿಡಿಯುವ ಕಾರ್ಯವನ್ನು ನಿರ್ವಹಿಸುತ್ತಿತ್ತು. ಮೊಬೈಲ್‌ನ ಮಾಲೀಕನ ಫೋಟೊವನ್ನು ಹೇಗಾದರೂ ಮಾಡಿ ಸಂಪಾದಿಸಿಕೊಂಡರೆ ದುರ್ಬಳಕೆ ಮಾಡಿಕೊಳ್ಳುವುದು ಕಷ್ಟವಿರಲಿಲ್ಲ. ಆದರೆ, ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ನಲ್ಲಿ ಇಂತಹ ಅಕ್ರಮ ಎಸಗಲು ಸಾಧ್ಯವಾಗಲಾರದು.

ಇತಿಮಿತಿ

ಆದಾಗ್ಯೂ, ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ಗೂ ಇತಿ–ಮಿತಿಗಳಿವೆ. ನಾವು ಧರಿಸಿರುವ ಟೋಪಿ, ಸ್ಕಾರ್ಫ್‌ ಮತ್ತಿತರ ವಸ್ತುಗಳು ಕ್ಯಾಮೆರಾದ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಲ್ಲ ಸಾಧ್ಯತೆ ಇದೆ ಎಂಬುದು ಕ್ವಾಲ್ಕಂ ಅಭಿಮತ.

ಮನೆಯಿಂದ ಹೊರಗಿರುವ ಸಂದರ್ಭದಲ್ಲಿ, ಪ್ರಖರವಾದ ಸೂರ್ಯನ ಕಿರಣಗಳು ಮುಖದ ಮೇಲೆ ಬೀಳುತ್ತಿರುವಾಗ ಮುಖದ ಸ್ಕ್ಯಾನಿಂಗ್‌ಗೆ ಅಡಚಣೆಯಾಗಬಹುದು ಎಂಬುದು ತಜ್ಞರ ಅನುಮಾನವಾಗಿದೆ. ಇದು ನಿಜವಾದಲ್ಲಿ ಬಯಲು, ಸಮುದ್ರ ತೀರ ಮತ್ತಿತರ ಪ್ರದೇಶಗಳಲ್ಲಿ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಅನುಮಾನವಿದೆ.

ಈಗಾಗಲೇ ಮಾರುಕಟ್ಟೆಗೆ ಬಂದಿರುವ ಹೊಸ ಐಫೋನ್‌ನ ‘ಇನ್‌ಫ್ರಾರೆಡ್‌ ಫೇಷಿಯಲ್ ರೆಕಗ್ನಿಷನ್’ನ ಯಶಸ್ಸಿನ ಬಗ್ಗೆ ಈಗಲೇ ಖಚಿತವಾಗಿ ಏನನ್ನೂ ಹೇಳಲಾಗದು. ಆದರೆ, ಸ್ಮಾರ್ಟ್‌ಫೋನ್‌ನ ಹೊಸ ಸಾಧ್ಯತೆಗಳಿಗೆ ಇದು ನಾಂದಿ ಹಾಡಿರುವುದಂತೂ ನಿಶ್ಚಿತ.

⇒ಬ್ರೇನ್‌ ಎಕ್ಸ್‌. ಚೇನ್‌, (ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT