ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾತ್ರಿ’ ಕಾಮಗಾರಿ: ಕೋಟ್ಯಂತರ ರೂಪಾಯಿ ಅವ್ಯವಹಾರ

ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ಸಂದಾಯವಾಗಿಲ್ಲ. ಆದರೆ, ಕೆಲವು ಅಧಿಕಾರಿಗಳ ಜೇಬು ಸೇರಿದೆ.
ಜಿಲ್ಲೆಯ ಹತ್ತು ಗ್ರಾಮ ಪಂಚಾಯ್ತಿಗಳಲ್ಲಿ ‘ನರೇಗಾ’, 14ನೇ ಹಣಕಾಸು, ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (ಬಿಆರ್‌ಜಿಎಫ್‌), ವರ್ಗ–1, ನೈರ್ಮಲ್ಯ ಯೋಜನೆ... ಹೀಗೆ ವಿವಿಧ ಯೋಜನೆಗಳ ಕಾಮಗಾರಿಯಲ್ಲಿ ಅಂದಾಜು ₹ 4.32 ಕೋಟಿ ಅವ್ಯವಹಾರ ನಡೆದಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಕೆಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳು ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದು ಅದೇ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಮೂಲಕ ‘ಸಾಮರ್ಥ್ಯ’ ಪ್ರದರ್ಶಿಸಿದ್ದಾರೆ. ಇದಕ್ಕೆ ಜಿಲ್ಲಾ ಪಂಚಾಯ್ತಿಯ ಕೆಲ ಹಿರಿಯ ಅಧಿಕಾರಿಗಳ ‘ಆಶೀರ್ವಾದ’ ಕೂಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇನ್ನು ಕೆಲ ಅಧಿಕಾರಿಗಳನ್ನು ಬೇರೆ ಸ್ಥಳಕ್ಕೆ ನಿಯೋಜಿಸಲಾಗಿದೆ.

10 ಗ್ರಾ.ಪಂ.ಗಳಲ್ಲಿ ಅವ್ಯವಹಾರ:ಜಗಳೂರು ತಾಲ್ಲೂಕಿನ 8 ಗ್ರಾಮ ಪಂಚಾಯ್ತಿ, ಹರಪನಹಳ್ಳಿ ಹಾಗೂ ಹೊನ್ನಾಳಿ ತಾಲ್ಲೂಕುಗಳ ತಲಾ ಒಂದು ಗ್ರಾಮ ಪಂಚಾಯ್ತಿಗಳಲ್ಲಿ ಇದುವರೆಗೆ ಒಟ್ಟು ₹ 4.32 ಕೋಟಿ ಅವ್ಯವಹಾರ ಬಹಿರಂಗವಾಗಿದೆ. ಆದರೆ, ₹ 20 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬುದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ಬಲವಾದ ಆರೋಪವಾಗಿದೆ.

ಜಗಳೂರು ತಾಲ್ಲೂಕಿನ ಅಣಬೂರು, ಬಿಳಿಚೋಡು, ಬಿಸ್ತುವಳ್ಳಿ, ಕೆಚ್ಚೇನಹಳ್ಳಿ, ಹನುಮಂತಾಪುರ, ದಿದ್ದಿಗೆ, ದೊಣ್ಣೆಹಳ್ಳಿ ಹಾಗೂ ತೋರಣಗಟ್ಟೆ ಗ್ರಾಮ ಪಂಚಾಯ್ತಿಗಳಲ್ಲಿ ನಡೆದ ಕಾಮಗಾರಿಗಳಲ್ಲಿ ₹ 4 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ. ಇದರಲ್ಲಿ ಹನುಮಂತಾಪುರ ಗ್ರಾಮ ಪಂಚಾಯ್ತಿ ಒಂದರಲ್ಲಿಯೇ ₹ 1.83 ಕೋಟಿ ಹಣ ದುರುಪಯೋಗವಾಗಿದೆ. ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಮತ್ತು ಹೊನ್ನಾಳಿಯ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳಲ್ಲಿಯೂ ಅವ್ಯವಹಾರ ನಡೆದಿದೆ.

ಕಾಮಗಾರಿ ಹಣ ಲೂಟಿ!: ‘ನರೇಗಾ ಕಾಮಗಾರಿ ಎಂದರೆ ಸರ್ಕಾರದ ಹಣವನ್ನು ಲೂಟಿ ಮಾಡುವುದು ಎಂದು ಕೆಲ ಅಧಿಕಾರಿಗಳು ಅರ್ಥೈಸಿಕೊಂಡಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಇಂತಹ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಕಾಣಬಹುದು. ಇದಕ್ಕೆ ಸ್ಥಳೀಯ ಕೆಲ ರಾಜಕಾರಣಿ ಹಾಗೂ ಹಿರಿಯ ಅಧಿಕಾರಿಗಳ ಬೆಂಬಲವೂ ಇದೆ’ ಎಂದು ಜಿಲ್ಲಾ ಜಾಗೃತ ಸಮಿತಿ ಸದಸ್ಯ ಆರ್‌.ಲಕ್ಷ್ಮಣ್‌ ದೂರುತ್ತಾರೆ.

ಇಲ್ಲಿನ ತೋರಣಗಟ್ಟೆ ಗ್ರಾಮ ಪಂಚಾಯ್ತಿಯಲ್ಲಿ 2 ಕೊಳವೆಬಾವಿ ಮೋಟರ್‌ ಖರೀದಿಸಿ, 14 ಮೋಟರ್‌ಗಳಿಗೆ ಬಿಲ್‌ ಹಾಕಲಾಗಿದೆ. ಬಸವನ ಕೋಟೆ ವ್ಯಾಪ್ತಿಯಲ್ಲಿಯೂ ಸುಮಾರು ₹ 40 ಲಕ್ಷ ಅವ್ಯವಹಾರ ನಡೆದಿದೆ. ಜಗಳೂರು ತಾಲ್ಲೂಕಿನ ಎಂಟು ಗ್ರಾಮ ಪಂಚಾಯ್ತಿಯಲ್ಲಿ ಸರ್ಕಾರದ ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಈಗಾಗಲೇ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಇಲಾಖಾ ತನಿಖೆ ನಡೆಯತ್ತಿದೆ ಎಂದು ಹೇಳಲಾಗುತ್ತದೆ. ಆದರೆ, ಇದೆಲ್ಲವೂ ಕಣ್ಣೊರೆಸುವ ತಂತ್ರವಾಗಿದೆ ಎನ್ನುತ್ತಾರೆ ಅವರು.

ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿರುವ ಕೆಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒಗಳಿಗೂ ಅದೇ ಸ್ಥಾನದಲ್ಲಿ ಮುಂದುವರಿಯಲು ಹಿರಿಯ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಕಳ್ಳರ ಕೈಗೆ ಖಜಾನೆಯ ಬೀಗ ಕೊಟ್ಟಂತಾಗಿದೆ’ ಎಂಬುದು ಅವರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT