ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಧಿರಿಸಿನ ಕಮಾಂಡೊಗಳ ‘ಜಾಗೃತಿ ಜಾಥ’

Last Updated 19 ಸೆಪ್ಟೆಂಬರ್ 2017, 9:35 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಪ್ಪು ಬಣ್ಣದ ಬುಲೆಟ್‌ ವಾಹನಗಳು. ಅವುಗಳಿಗೆ ತೂಗು ಹಾಕಿದ್ದ ಕಪ್ಪು ಬಣ್ಣದ ಹೆಲ್ಮೆಟ್‌ಗಳು. ಪ್ರತಿ ವಾಹನದ ಪಕ್ಕದಲ್ಲಿ ಹಿಂದಕ್ಕೆ ಕೈಕಟ್ಟಿ ಎದೆಯುಬ್ಬಿಸಿ ನಿಂತಿದ್ದ ಕಪ್ಪು ಧಿರಿಸಿನ ಹುರಿ ಮೀಸೆಯ ಯುವಕರ ಪಡೆ... ಕೈಯಲ್ಲಿ ಕಪ್ಪನೆಯ ಗನ್ನು, ಕಣ್ಣಿಗೆ ಕಪ್ಪನೆಯ ಕನ್ನಡಕ.. ಭಯೋತ್ಪಾದನೆ ವಿರುದ್ಧ ಹೋರಾಟ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸೋಮವಾರ ನಗರಕ್ಕೆ ಬಂದಿದ್ದ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೊಗಳು (ಎನ್‌ಎಸ್ ಜಿ) ಹೀಗೆ ಕಾಣಿಸಿಕೊಂಡರು.

ನಗರದ ಎಸ್‌ಜೆಎಂಐಟಿ ಕಾಲೇಜು ಆವರಣದಲ್ಲಿದ್ದ ವೇದಿಕೆಯ ಎದುರು ಸಾಲುಗಟ್ಟಿ ನಿಂತಿದ್ದ ಎನ್‌ಎಸ್‌ಜಿಯ 32 ಬೈಕ್‌ ಸವಾರರು ಮತ್ತು ವೇದಿಕೆಯ ಮೇಲಿದ್ದ ತಂಡದ ನಾಯಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಜತೆಗೆ, ಭಯೋತ್ಪಾದನೆ ವಿರುದ್ಧದ ಹೋರಾಟ ಕುರಿತು ಸಂವಾದ ನಡೆಸಿದರು.

ಬೈಕ್‌ ರ‍್ಯಾಲಿಗೂ ಮುನ್ನ  ಕಮಾಂಡೊಗಳ ನಾಯಕ ಅಮಿತ್ ಕುಮಾರ್ ಮಾತನಾಡಿ, ‘ಭಯೋತ್ಪಾದಕರ ವಿರುದ್ಧದ ಹೋರಾಟ ಮತ್ತು ದೇಶದ ರಕ್ಷಣೆಗಾಗಿ 1984ರಲ್ಲಿ ರಾಷ್ಟ್ರೀಯ ಭದ್ರತಾ ಪಡೆ ಆರಂಭವಾಯಿತು. ದೇಶಕ್ಕೆ ಎದುರಾಗುವ ಉಗ್ರ ದಾಳಿಗಳನ್ನು ನಿಗ್ರಹಿಸುವುದು ಭದ್ರತಾ ಪಡೆಯ ಮುಖ್ಯ ಕರ್ತವ್ಯ’ ಎಂದು ಹೇಳಿದರು.

‘2008ರ ಮುಂಬೈ ದಾಳಿ ಮತ್ತು ಕಳೆದ ವರ್ಷ ಪಠಾಣ್ ಕೋಟ್‌ನಲ್ಲಿ ನಡೆದ ಉಗ್ರರ ದಾಳಿಯ ಕಾರ್ಯಾಚರಣೆಯಲ್ಲಿ ಎನ್‌ಎಸ್‌ಜಿ ಕಮಾಂಡೊಗಳ ಪಾತ್ರವನ್ನು ನೀವು ಗಮನಿಸಿದ್ದೀರಿ. ದೇಶದ ಬೇರೆ ಬೇರೆ ಭಾಗದ ಕಾರ್ಯಾಚರಣೆಗಳಲ್ಲೂ ಎನ್‌ಎಸ್‌ಜಿ ಕಮಾಂಡೊಗಳನ್ನು ನಿಯೋಜಿಸಲಾಗಿದ್ದು, ಅವುಗಳು ಬೆಳಕಿಗೆ ಬಂದಿಲ್ಲ’ ಎಂದು ವಿವರಿಸಿದರು.

‘ಬೈಕ್‌ ಜಾಥಾದ ಉದ್ದೇಶ ಕುರಿತು ಮಾಹಿತಿ ನೀಡಿದ ಅವರು, ‘ಭಯೋತ್ಪಾದನೆ ವಿರುದ್ಧದ ಹೋರಾಟ ಕೇವಲ ಎನ್‌ಎಸ್‌ಜಿ, ಪೊಲೀಸ್ ಜವಾಬ್ದಾರಿ ಮಾತ್ರವಲ್ಲ. ಅದು ಸಂಘಟಿತ ಹೋರಾಟ. ಇದನ್ನು ತಿಳಿಸುವುದಕ್ಕಾಗಿ ದೇಶದಾದ್ಯಂತ ಬೈಕ್ ಜಾಥಾ ಆಯೋಜಿಸಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾಗರಿಕರ ಜವಾಬ್ದಾರಿ ಮತ್ತು ಭದ್ರತಾ ಪಡೆಗಳ ಪಾತ್ರ ಏನು ಎನ್ನುವುದರ ಕುರಿತು ಯುವಕರು, ವಿದ್ಯಾರ್ಥಿಗಳು, ನಾಗರಿಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

‘ಭಯೋತ್ಪಾದನೆ ನಿಗ್ರಹದ ಹೋರಾಟದ ಮೊದಲ ನಾಗರಿಕರು, ನಂತರ ಪೊಲೀಸರು. ಮೂರನೆಯ ಜವಾಬ್ದಾರಿ ಎನ್‌ಎಸ್‌ಜಿ ಕಮಾಂಡೊಗಳದ್ದು’ ಎಂದು ವಿವರಿಸಿದ ಅವರು, ‘ನಾಗರಿಕರು ಈ ದೇಶದ ಕಣ್ಣು ಮತ್ತು ಕಿವಿಗಳು.

ಆ ಹಂತದಿಂದಲೇ ಭಯೋತ್ಪಾದನೆ ವಿರುದ್ಧದ ಹೋರಾಟ ಆರಂಭವಾಗಬೇಕು. ನಮ್ಮ ಸುತ್ತಮುತ್ತ ನಡೆಯುವ  ವಿದ್ಯಮಾನಗಳ ಮೇಲೆ ಕಣ್ಣಿಟ್ಟಿರಬೇಕು. ಘಾತುಕ ಘಟನೆಗಳನ್ನು ಪೊಲೀಸರಿಗೆ ತಿಳಿಸುವ ಮೂಲಕ, ಘಟನೆ ನಡೆಯದಂತೆ ತಡೆಯುವ ಜವಾಬ್ದಾರಿ ನಾಗರಿಕರ ಮೇಲಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಬೈಕ್ ಜಾಥಾ ಉದ್ದೇಶ’ ಎಂದರು.

‘ಈ ಜಾಥಾದ ತಂಡದಲ್ಲಿ ಒಟ್ಟು 32 ಕಮಾಂಡೊಗಳಿದ್ದಾರೆ. ಅದರಲ್ಲಿ 20 ಬೈಕ್ ರೈಡರ್ಸ್‌. 12 ಮಂದಿ ಅವರಿಗೆ ಸಹಕಾರ ನೀಡುತ್ತಿರುವ ಕಮಾಂಡೊಗಳು. ನಾವು 13 ರಾಜ್ಯಗಳನ್ನು 40 ದಿನಗಳಲ್ಲಿ ತಲುಪುತ್ತಿದ್ದೇವೆ. ಒಟ್ಟು 7 ಸಾವಿರ ಕಿ.ಮೀ ಕ್ರಮಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಈಗಾಗಲೇ ದೆಹಲಿ, ಜೈಪುರ, ಅಜ್ಮೇರ್, ಉದಯಪುರ,  ಅಹ್ಮದಾಬಾದ್, ಸೂರತ್, ಮುಂಬೈ, ಸತಾರ, ಬೆಳಗಾವಿ ಮುಗಿಸಿ, ಈಗ ಚಿತ್ರದುರ್ಗದಲ್ಲಿದ್ದೇವೆ. ಜಾಥಾದಲ್ಲಿ ಶಾಲಾ– ಕಾಲೇಜುಗಳು, ವಕೀಲರ ಸಂಘ, ಯುವಕ ಸಂಘಗಳನ್ನು ಭೇಟಿಯಾಗಿದ್ದೇವೆ. ಎಲ್ಲ ಕಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಂಬಾ ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿ, ಆತಿಥ್ಯ ನೀಡಿದ್ದಾರೆ. ಮುಂದೆ, ಇಲ್ಲಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್, ಭುವನೇಶ್ವರ್, ಕೋಲ್ಕತ್ತಾ ನಂತರ ಪುನಃ ದೆಹಲಿ ತಲುಪುತ್ತೇವೆ’ ಎಂದರು.

ಸಭಾ ಕಾರ್ಯಕ್ರಮ ನಂತರ ವಿದ್ಯಾರ್ಥಿಗಳು ಕೇಳಿದ ಪ್ರಶನ್ಎಗಳಿಗೆ ಕಮಾಂಡೊಗಳು ಉತ್ತರಿಸಿದರು. ಎಎಸ್‌ಪಿ ಲಕ್ಷ್ಮಣ್ ನಿಂಬರಗಿ ಎನ್‌ಎಸ್‌ಜಿ ತಂಡವನ್ನು ಸ್ವಾಗತಿಸುವ ಜತೆಗೆ, ಜಾಥಾದ ಉದ್ದೇಶ ವಿವರಿಸಿದರು. ಸಂವಾದದ ವೇಳೆ, ಕಮಾಂಡೊಗಳ ಪ್ರತಿಕ್ರಿಯೆಯನ್ನು ಕನ್ನಡಕ್ಕೆ ಅನುವಾದ ಮಾಡಿದರು. ಕಮಾಂಡೊಗಳಾದ ರಮೇಶ್ ಕುಮಾರ್, ಸುನಿಲ್, ರಾಹುಲ್, ಪಂಕಜ್, ಕೋಟೆ ಠಾಣೆ ಸಿಪಿಐ ಫೈಜುಲ್ಲಾ, ನಗರ ಠಾಣೆ ಸಿಪಿಐ ಎಸ್. ಟಿ. ಒಡೆಯರ್, ಪಿಎಸ್ ಐ ಸತೀಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮದ ನಂತರ ಕಮಾಂಡೊಗಳು ಬುಲೆಟ್ ಏರಿ ನಗರದಾದ್ಯಂತ ‘ಜಾಥಾ’ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT