ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಬ್ಯಾಂಕ್ ನೌಕರರ ಆರೋಗ್ಯ ವಿಮೆ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲ್ಯ, ಯೌವನ ಹಾಗೂ ಮುಪ್ಪು ಮನುಷ್ಯನಿಗೆ ಕಟ್ಟಿಟ್ಟ ಬುತ್ತಿ. ಅದೇ ರೀತಿ 60 ಮುಗಿಯುತ್ತಲೇ ನೌಕರರು ತಮ್ಮ ಉದ್ಯೋಗದಿಂದ ನಿವೃತ್ತರಾಗುವುದು ಕೂಡಾ ಸಹಜ. ಭಾರತದಲ್ಲಿ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಎಂಬುದೇ ಇಲ್ಲ. ಯಾವುದೇ ವ್ಯಕ್ತಿಗೆ ಯಾವುದೇ ವಯಸ್ಸಿನಲ್ಲಿ ಕಾಯಿಲೆ ಕಸಾಲೆ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಇದೇ ವೇಳೆ ಮುಪ್ಪಿನಲ್ಲಿ ಕಾಯಿಲೆ ಅನುಭವಿಸದಿರುವವರು ಬಹಳ ವಿರಳ.

ಇಂದು ಶೇ 70ಕ್ಕೂ ಹೆಚ್ಚಿನ ಹಿರಿಯ ನಾಗರಿಕರು ರಕ್ತದ ಒತ್ತಡ, ಮಧು ಮೇಹ ಅಥವಾ ಹೃದಯಕ್ಕೆ ಸಂಬಂಧಿಸಿದ ಹೀಗೆ ಒಂದಲ್ಲಾ ಒಂದು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಇದನ್ನು ಮನಗಂಡ ಭಾರತೀಯ ಬ್ಯಾಂಕುಗಳ ಸಂಘವು (Indan Banks Association) ಯುನೈಟೆಡ್ ಇಂಡಿಯಾ ಇನ್ಶುರನ್ಸ್ ಕಂಪೆನಿ ಮೂಲಕ ತನ್ನ ಎಲ್ಲಾ ಸದಸ್ಯ ಬ್ಯಾಂಕುಗಳ ನಿವೃತ್ತ ನೌಕರರ ಸಲುವಾಗಿ ಒಂದು ಉತ್ತಮ ಆರೋಗ್ಯ ವಿಮಾ ಯೋಜನೆ ಪರಿಚಯಿಸಿದೆ.

ಏನಿದು ಆರೋಗ್ಯ ವಿಮೆ?
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ವ್ಯಕ್ತಿಯು ಕಾಯಿಲೆಗೆ ತುತ್ತಾಗಿ, 24 ಗಂಟೆಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ, ವಿಮಾ ಕಂಪೆನಿಯವರು ವಿತರಿಸಿದ ಗುರುತಿನ ಚೀಟಿ ಹಾಗೂ ಪ್ಯಾನ್ ಕಾರ್ಡು ನಕಲು ಆಸ್ಪತ್ರೆಗೆ ಒದಗಿಸಿ, ಈ ಮೊದಲೇ ಪಡೆದುಕೊಂಡಿದ್ದ ವಿಮೆಯ ಸೇವೆಯ ನಿಗದಿತ ಮೊತ್ತದೊಳಗೆ ನಗದು ರಹಿತ  ಚಿಕಿತ್ಸೆ ಪಡೆಯುವ ವಿಧಾನವನ್ನು ಆರೋಗ್ಯ ವಿಮೆ ಎಂಬುದಾಗಿ ಕರೆಯುತ್ತಾರೆ. ಇದೇ ವೇಳೆ, ಆಸ್ಪತ್ರೆಗೆ ಸೇರದೆ, ತಾನು ಅನುಭವಿಸುತ್ತಿರುವ ಕಾಯಿಲೆಗಳಿಗೆ ಪರಿಣತ ವೈದ್ಯರ ಸಲಹೆಯಂತೆ ಪಡೆಯುವ ಚಿಕಿತ್ಸೆ ಹಾಗೂ ಸೇವಿಸುವ ಔಷಧಗಳಿಗೆ, ಬರುವ ಖರ್ಚನ್ನು ವಿಮಾ ಕಂಪೆನಿಯಿಂದ ಪಡೆಯಲು, ಪ್ರತ್ಯೇಕ ಪ್ರೀಮಿಯಂ ಹಣ ತುಂಬಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪಡೆದ ಒಟ್ಟು ವಿಮಾ ಮೊತ್ತದ ಶೇ 10ರಷ್ಟು (₹ 4 ಲಕ್ಷ ವಿಮೆ ಇಳಿಸಿದ್ದರೆ, ₹ 40,000 ತನಕ) ಆಸ್ಪತ್ರೆಗೆ ಸೇರದೇ ಪಡೆಯುವ ಚಿಕಿತ್ಸೆ ಹಾಗೂ ಔಷಧ ಖರೀದಿಗೆ ಮೀಸಲಾಗಿ ಇಡಲಾಗುವುದು. ಈ ಕ್ರಮವನ್ನು  'Domicilary Treatment ಎನ್ನುತ್ತಾರೆ.

ಇಲ್ಲಿ ನಗದು ರಹಿತ ಸೌಲತ್ತು ಇರುವುದಿಲ್ಲ. ಡಾಕ್ಟರರ ಸಲಹೆಯಂತೆ ಹಣಕೊಟ್ಟು ಅಥವಾ ಔಷಧ ಪಡೆದು, ಡಾಕ್ಟರರ ಸಲಹಾ ಪತ್ರ (Doctors Prescription) ಹಾಗೂ ಚಿಕಿತ್ಸಾ ವೆಚ್ಚದ, ಔಷಧಿ ಖರೀದಿಯ ಮೂಲ ಬಿಲ್‌ಗಳನ್ನು  ವಿಮಾ ಕಂಪೆನಿ ನಿರ್ಧರಿಸಿರುವ ಮೂರನೇ ಕಕ್ಷಿ ಆಡಳಿತದಾರರಿಗೆ (Third Party Administrators) ಕಳಿಸಿ ಅವರಿಂದ ಹಣ ಪಡೆಯಬಹುದು. ಹೀಗೆ ಕಳಿಸುವ ಕಾಗದ ಪತ್ರಗಳು ಹಾಗೂ ಬಿಲ್ಲು
ಗಳನ್ನು ರೆಜಿಸ್ಟರ್ಡ್‌ ಅಥವಾ ಸ್ಪೀಡ್ ಪೋಸ್ಟ್‌ ಮುಖಾಂತರವೇ ಕಳಿಸಬೇಕು.

ಎಲ್ಲಾ ನಿವೃತ್ತ ನೌಕರರು 1–11–2017 ರಿಂದ 31–10–2018ರ ಅವಧಿಯಲ್ಲಿ ಈ ಆರೋಗ್ಯ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಈ ಅವಧಿಯಲ್ಲಿ ಈ ಹಿಂದೆ  ಅಧಿಕಾರಿಗಳಿಗೆ (Officers) ಹಾಗೂ ಉಳಿದವರಿಗೆ (Award Staff) ಒದಗಿಸಿದ ವಿಮಾ ಸೌಲತ್ತು (₹ 4 ಲಕ್ಷ ಹಾಗೂ ₹ 3 ಲಕ್ಷ) ಹೊರತು ಪಡಿಸಿ ಕ್ರಮವಾಗಿ ₹ 5 ಲಕ್ಷ ಹಾಗೂ ₹ 4 ಲಕ್ಷ (₹ 4+5= ₹ 9 ಲಕ್ಷ– ₹ 3+4= ₹ 7 ಲಕ್ಷ) ಹೆಚ್ಚಿನ ವಿಮಾ ಸೌಲಭ್ಯವು ಬಾಕ್ಸ್‌ನಲ್ಲಿ ನಮೂದಿಸಿದಂತೆ ಸ್ವಲ್ಪ ಹೆಚ್ಚಿನ ಪ್ರೀಮಿಯಂ ಹಣ ಪಡೆದು ಒದಗಿಸಲಾಗುವುದು. ಹೀಗೆ ಒದಗಿಸುವ  ಹೆಚ್ಚುವರಿ ಸೌಲಭ್ಯದಲ್ಲಿ ಡಾಮಿಸಿಲರಿ ಪ್ರಯೋಜನವು (Domicilary benifit) ಇರುವುದಿಲ್ಲ. ಆದರೆ, ಹೆಚ್ಚುವರಿ ಸೌಲಭ್ಯ ಪಡೆಯುವುದು ಕಡ್ಡಾಯವಲ್ಲ.

ಆರೋಗ್ಯ ವಿಮಾ ಸೌಲಭ್ಯಗಳ ವೈಶಿಷ್ಟ್ಯತೆ
ಇದೊಂದು ಗಂಡ ಹೆಂಡತಿ  ಇಬ್ಬರಿಗೂ ಅನ್ವಯಿಸುವ Floater Policy ಆಗಿರುತ್ತದೆ. ಈಗಲೇ ಇರುವ ಕಾಯಿಲೆಗಳಿಗೂ ಅನ್ವಯವಾಗುತ್ತದೆ. ವಿಮಾ ಯೋಜನೆಗೆ ಸೇರುವ ವ್ಯಕ್ತಿಯ ವಯಸ್ಸು ಹಾಗೂ ಸಂಪೂರ್ಣ ಜೀವಿತಕಾಲ, ವಯಸ್ಸಿನ ಪರಿಮಿತಿ ಇಲ್ಲದೆ ಈ ಯೋಜನೆಗೆ ಸೇರಬಹುದು. ಇಂತಹ ಸೌಲಭ್ಯವನ್ನು ಬೇರೆ ಯಾವುದೇ ಆರೋಗ್ಯ ವಿಮೆ ಕಂಪೆನಿಗಳು ಒದಗಿಸುವುದಿಲ್ಲ.

ಇಂದಿನ ಅತ್ಯಾಧುನಿಕ ವೈದ್ಯಕೀಯ ವಿಜ್ಞಾನದಲ್ಲಿ   ಯಾವುದೇ ಗಂಭೀರ ಸ್ವರೂಪದ ಕಾಯಿಲೆಗಳನ್ನೂ ಗುಣಪಡಿಸುವ ಶಸ್ತ್ರ ಚಿಕಿತ್ಸೆ ಹಾಗೂ ಔಷಧಗಳು ಲಭ್ಯ ಇರುತ್ತವೆ.  ಅತ್ಯಾಧುನಿಕ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಈ ಎಲ್ಲಾ ಸೌಲತ್ತುಗಳು ದೊರೆಯುತ್ತವೆ. ಆದರೆ, ಜನಸಾಮಾನ್ಯರಿಂದ ಇಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ರೋಗಿಯು ಬಂದ ತಕ್ಷಣ ತೀವ್ರ ನಿಗಾ ಘಟಕಕ್ಕೆ (ICU) ಸೇರಿಸಲಾಗುವುದು. ರೋಗಿಯು ಆಸ್ಪತ್ರೆ ಸೇರುತ್ತಿದ್ದಂತೆ ₹ 50,000 ಮುಂಗಡವಾಗಿ ಜಮೆ ಮಾಡಬೇಕಾಗುತ್ತದೆ. ಐ.ಸಿ.ಯು. ದಲ್ಲಿ ನಡೆಸುವ ವಿವಿಧ ತಪಾಸಣೆ ಗಳಿಗೆ ದಿವಸಕ್ಕೆ ₹ 70,000 ರಿಂದ ₹ 1 ಲಕ್ಷ ಖರ್ಚು ಬರುತ್ತದೆ. (ಇದು ನನ್ನ ಸ್ವಂತ ಅನುಭವ) ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ಒಂದು ದೊಡ್ಡ ವರದಾನವಾಗಿರುತ್ತದೆ.

ಆಸ್ಪತ್ರೆಯ ಖರ್ಚು ಲಕ್ಷಗಟ್ಟಲೆ ಬರುವುದರಿಂದ ಹೆಚ್ಚುವರಿ ಸೌಲಭ್ಯ ಮರೆಯದೆ ಪಡೆಯಿರಿ. ಹಾಗೂ ಗಂಡ ಹೆಂಡತಿ ಸೇರಿದಂತೆ ತಿಂಗಳಿಗೆ ಕನಿಷ್ಠ ₹ 1,500 ಔಷಧ ಖರ್ಚು ಬರುವಲ್ಲಿ Domicilary ಸೌಲತ್ತನ್ನು ಪಡೆಯಿರಿ. ಇದರಿಂದ ಹಾಗೂ ಆರೋಗ್ಯ ವಿಮೆಗೆ ದೊರೆಯುವ ಆದಾಯ ತೆರಿಗೆ ವಿನಾಯ್ತಿ (See.80D) ಸೇರಿದಾಗ ನೀವು ವಾರ್ಷಿಕವಾಗಿ ಕಟ್ಟುವ ಆರೋಗ್ಯ ವಿಮಾ ಕಂತಿನ ಬಹುಭಾಗ ಪಾಪಸು ಪಡೆದಂತಾಗುತ್ತದೆ.

ಎಲ್ಲಕ್ಕೂ ಮುಖ್ಯವಾಗಿ ಈ ವರ್ಷ ಈ ಸೌಲಭ್ಯ ಪಡೆಯದಿದ್ದರೆ ಮುಂದೆ ಪಡೆಯುವಂತಿಲ್ಲ ಎನ್ನುವುದು ನೆನಪಿರಲಿ. ಆರೋಗ್ಯ ವಿಮೆಯಲ್ಲಿ ತೊಡಗಿಸುವ ಹಣ ಹೊರ ನೋಟಕ್ಕೆ ಖರ್ಚು ಅಥವಾ ವೆಚ್ಚ ಎಂಬಂತೆ ಕಂಡು ಬಂದರೂ ಇದೊಂದು ಆಪತ್ತಿನಲ್ಲಿ ಸಂಪತ್ತನ್ನು ಕಾಣುವ ಹೂಡಿಕೆ ಎಂದರೆ ತಪ್ಪಾಗಲಾರದು.

(ಅನಿವಾರ್ಯ ಕಾರಣಗಳಿಂದ ಈ ವಾರ ‘ಪ್ರಶ್ನೋತ್ತರ’ ಅಂಕಣ ಪ್ರಕಟವಾಗಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT