ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಹರಣಕ್ಕೆ ಬೇಕಾದರೆ ಇದೆ ಪಾಡ್‌ಕಾಸ್ಟ್‌‌

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ದೂರದ ಊರಿಗೆ ಪ್ರಯಾಣಿಸುವಾಗ, ಸುಮ್ಮನೆ ಕುಳಿತಿದ್ದಾಗ ಬೇಸರವೆನಿಸಿದರೆ, ಕೂಡಲೇ ಮೊಬೈಲ್‌ ಫೋನ್‌ ಕೈಗೆತ್ತಿಕೊಂಡು ಹಾಡು ಕೇಳುತ್ತಾ, ವಿಡಿಯೊಗಳನ್ನು ನೋಡುತ್ತಾ, ಗೇಮ್ಸ್‌ ಆಡುತ್ತಾ ಕಾಲಹರಣ ಮಾಡುತ್ತೇವೆ.

ಸ್ವಲ್ಪಹೊತ್ತು ಕಾಲಹರಣ ಮಾಡಿದರೇ ಪರವಾಗಿಲ್ಲ. ಗಂಟೆಗಟ್ಟಲೇ ಹೀಗೆ ಮಾಡಿದರೆ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮಗೆ ಇಷ್ಟ ಎನಿಸುವ, ನಿಮಗೆ ಆಸಕ್ತಿ ಇರುವ ವಿಷಯಗಳ ಬಗೆಗಿನ ಸುದ್ದಿ, ಮಾಹಿತಿ ತಿಳಿದುಕೊಂಡು ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಇದಕ್ಕೆಂದೇ ಕೆಲವು ಪಾಡ್‌ಕಾಸ್ಟ್‌‌ಗಳಿವೆ. ಅವುಗಳ ಮೇಲೆ ಸ್ವಲ್ಪ ಕಣ್ಣು ಹಾಯಿಸಿ.

ಆರ್ಥಿಕ ಸಮಾಚಾರ

ಷೇರುಪೇಟೆ, ಸೆನ್ಸೆಕ್ಸ್‌, ನಿಫ್ಟಿ, ಆರ್ಥಿಕ ವ್ಯವಹಾರಗಳ ಕುರಿತು ನಿಮಗೆ ಆಸಕ್ತಿ ಇದ್ದರೆ, ಇಂತಹ ವಿಷಯಗಳನ್ನು ತಿಳಿಸುವ ಕೆಲವು ಪಾಡ್‌ಕಾಸ್ಟ್‌ಗಳಿವೆ. ಇಂಥವುಗಳಲ್ಲಿ Planet money ಪಾಡ್‌ಕಾಸ್ಟ್‌ ಕೂಡ ಒಂದು. ಇದರಲ್ಲಿ ವಿಷಯಗಳನುಸಾರ ಆಡಿಯೋ ಫೈಲ್‌ಗಳು ಇರುತ್ತವೆ. ಇವನ್ನು ಕ್ಲಿಕ್ಕಿಸಿ ಹಾಡು ಕೇಳುವ ರೀತಿ ಮಾರುಕಟ್ಟೆ ಸಮಾಚಾರವನ್ನು ಕೇಳಬಹುದು. ಏನಾದರೂ ಸಂದೇಹಗಳಿದ್ದರೆ, ಕಾಮೆಂಟ್‌ಬಾಕ್ಸ್‌ನಲ್ಲಿ ಅಭಿಪ್ರಾಯ ತಿಳಿಸಿ ತಜ್ಞರ ಸಲಹೆ ಪಡೆಯಬಹುದು.

ವಾರಕ್ಕೊಮ್ಮೆ... ಆರು ನಿಮಿಷ

ಮಾರುಕಟ್ಟೆ ಸಮಾಚಾರವನ್ನು ನಿತ್ಯ ಕೇಳುವ ಸಮಯವಿಲ್ಲ ಎನ್ನುವವರಿಗೆ ವಾರಾಂತ್ಯದಲ್ಲಿ ಅಥವಾ ವಾರಕ್ಕೊಮ್ಮೆ ಬಿಡುವಿನ ದಿನದಂದು ಇಡೀ ವಾರದ ವಹಿವಾಟಿನ ಮಾಹಿತಿ ಪಡೆಯಬಹುದು. ಇದಕ್ಕೆ Hard Pass ಪಾಡ್‌ ಕಾಸ್ಟ್‌ ಉತ್ತಮ ಆಯ್ಕೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ, ವಾಣಿಜ್ಯದಲ್ಲಿ ಆಗುತ್ತಿರುವ ಬದಲಾವಣೆ, ಮುಂದಿನ ಪರಿಣಾಮಗಳ ಬಗ್ಗೆ ಇಬ್ಬರು ಚರ್ಚಿಸುತ್ತಿರುವ ರೀತಿ ಮಾಹಿತಿ ನೀಡಲಾಗುತ್ತೆ. ಪ್ರತಿ ಆಡಿಯೊ ಫೈಲ್ 6 ನಿಮಿಷ ಇರುತ್ತದೆ.

ಸುದ್ದಿ ಕೇಳುತ್ತೀರಾ?

ಎಲ್ಲಿ, ಏನು ನಡೆಯುತ್ತಿದೆ ಎಂಬ ವಿಶ್ವದ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವವರು ನಿತ್ಯ ಹಲವು ಜಾಲತಾಣಗಳನ್ನು ಭೇಟಿ ನೀಡುತ್ತಾರೆ. ಸುದ್ದಿಗಾಗಿ ಹುಡುಕುತ್ತಾರೆ. ಇದಕ್ಕೆ ಹೆಚ್ಚು ಡೇಟಾ ಖರ್ಚಾಗುತ್ತದೆ.

ಹೀಗೆ ಹುಡುಕುವ ಬದಲು The daily ಪಾಡ್‌ಕಾಸ್ಟ್‌ ಆಡಿಯೋ ಫೈಲ್‌ಗಳ ಮೂಲಕ ಸುದ್ದಿ ತಿಳಿದುಕೊಳ್ಳಬಹುದು. ಇದರಲ್ಲಿ ನಿತ್ಯ ನಡೆಯುವ ವಿದ್ಯಮಾನಗಳು, ಅದರ ವಿಶ್ಲೇಷಣೆ ಆಡಿಯೋ ತುಣುಕಗಳ ರೂಪದಲ್ಲಿ ದೊರೆಯುತ್ತದೆ.

ಅಂದು ನಡೆದದ್ದು

ಅಂದಿನ ಈ ದಿನ, ಈ ದಿನದ ಚರಿತ್ರೆ, ಚರಿತ್ರೆಯಲ್ಲಿ ಈ ದಿನ ಇತ್ಯಾದಿ ಶೀರ್ಷಿಕೆಗಳ ಮೂಲಕ ಕೆಲವು ಪತ್ರಿಕೆ, ದೃಶ್ಯ ಮಾಧ್ಯಮಗಳು ಹಿಂದೆ ನಡೆದ ಮಹತ್ವದ ಘಟನೆಗಳ ಬಗ್ಗೆ ತಿಳಿಸುತ್ತವೆ.

ಇಂತಹ ವಿಷಯಗಳನ್ನು ಆಡಿಯೋ ರೂಪದಲ್ಲಿ ತಿಳಿಸುವ ಪಾಡ್‌ಕಾಸ್ಟ್‌ಗಳೂ ಇವೆ. The memory palace ಪಾಡ್‌ಕಾಸ್ಟ್‌ನಲ್ಲಿ ವಿಶ್ವದಾದ್ಯಂತ ಹಿಂದೆ ನಡೆದ ಮುಖ್ಯ ಘಟನೆಗಳ ಬಗ್ಗೆ ವಿವರಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ತುಂಬಾ ಉಪಯುಕ್ತ.

ತಂತ್ರಜ್ಞಾನ ಮಾಹಿತಿ

ಕಂಪ್ಯೂಟರ್, ಮೊಬೈಲ್‌ ಇತ್ಯಾದಿ ವಿದ್ಯುತ್‌ ಉಪಕರಣಗಳ ಬಗ್ಗೆ, ಮಾರುಕಟ್ಟೆಗೆ ಬರುತ್ತಿರುವ ಹೊಸ ತಂತ್ರಜ್ಞಾನದ ಬಗ್ಗೆ ತಿಳಿಯುವ ಆಸಕ್ತಿ ಇದೆಯೇ?
ಇಂತಹವುಗಳ ಬಗ್ಗೆ ಮಾಹಿತಿ ತಿಳಿಸಲು, ಅನುಮಾನಗಳನ್ನು ಬಗೆಹರಿಸಲು Code breaker ಪಾಡ್‌ಕಾಸ್ಟ್‌ ಇದೆ.

ಇದರಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ವಿಷಯಗಳನುಸಾರ ತಜ್ಞರು ಬರೆದ ಲೇಖನಗಳು ಆಡಿಯೊ ರೂಪದಲ್ಲಿ ಇರುತ್ತವೆ. ನಿಮಗೆ ಅನುಮಾನಗಳಿದ್ದರೆ, ಮಾಹಿತಿ ಬೇಕಿದ್ದರೆ, ಈ ಫೈಲ್‌ಗಳ ಕೆಳಗೆ ಇರುವ ಕಾಮೆಂಟ್‌ ಬಾಕ್ಸ್‌ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿದರೆ ತಜ್ಞರು ಮಾಹಿತಿ ನೀಡುತ್ತಾರೆ.

ಭಾಷೆ ಕಲಿಯಲು

ಇಂಗ್ಲಿಷ್‌ ಕಲಿಯುತ್ತಿರುವವರಿಗೆ The Allusionist ಪಾಡ್‌ಕಾಸ್ಟ್‌ ಉತ್ತಮ ಆಯ್ಕೆ. ಇದರಲ್ಲಿ ಆಂಗ್ಲಭಾಷೆಯ ಹಲವು ಪದಗಳ ಬಗ್ಗೆ, ಅವನ್ನು ಬಳಸುವ ಬಗ್ಗೆ ಉದಾಹರಣೆ ಸಹಿತ ತಿಳಿಸಲಾಗುತ್ತದೆ. ಕೇವಲ ಆಡಿಯೊ ರೂಪದಲ್ಲಿ ಅಲ್ಲದೆ, ಬರಹ ರೂಪದಲ್ಲೂ ತಿಳಿಯಬಹುದು. ಒಂದೊಂದು ಪದಕ್ಕೂ ಬೇರೆ ಬೇರೆ ರೂಪದಲ್ಲಿ ವಿವರ ಸಿಗುತ್ತದೆ.

***

ಪಾಡ್‌ಕಾಸ್ಟ್‌ ಎಂದರೆ

ಪಾಡ್‌ಕಾಸ್ಟ್‌ ಎಂಬುದು ಸಾಮಾನ್ಯ ವೆಬ್‌ಸೈಟ್‌ ರೂಪದಲ್ಲಿ ಇರುತ್ತದೆ. ಆದರೆ, ಇಲ್ಲಿ ಮಾಹಿತಿ ಧ್ವನಿ ರೂಪದಲ್ಲಿ ಇರುತ್ತದೆ. ಆಯಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಕ್ಷಿಪ್ತವಾಗಿ ಬರಹ ರೂಪದಲ್ಲಿ ಕೊಡುವುದರ ಜೊತೆಗೆ ವಿವರವಾಗಿ ಆಡಿಯೊ ಫೈಲ್‌ಗಳ ರೂಪದಲ್ಲಿ ನೀಡಲಾಗುತ್ತೆ. ಇವು ಬಹುತೇಕ ಆಂಗ್ಲಭಾಷೆಯಲ್ಲಿ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT