ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಟ್ಟ ಕುತೂಹಲದಿಂದ ಒತ್ತಡ...’

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒತ್ತಡದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಆದರೆ ಅದನ್ನು ಎದುರಿಸುವ ಸಾಮರ್ಥ್ಯ ಪ್ರತಿಯೊಬ್ಬರಿಗೂ ಇರುತ್ತದೆ; ನಾವು ಕಂಡುಕೊಳ್ಳಬೇಕಷ್ಟೇ! ಕೆಲವರಂತೂ ಸುಖಾಸುಮ್ಮನೆ ಒತ್ತಡವನ್ನು ತಂದುಕೊಳ್ಳುತ್ತಾರೆ. ನೋವು ಮನುಷ್ಯನಿಗೆ ಪ್ರಬುದ್ಧತೆಯನ್ನು ಕಲಿಸುತ್ತದೆ. ಆದರೆ ಪ್ರಬುದ್ಧತೆಯನ್ನು ಕಂಡುಕೊಳ್ಳುವಲ್ಲಿ ಹಲವರು ಸೋಲುತ್ತಾರೆ.

ಇಂದಿನ ನಮ್ಮ ಜೀವನಶೈಲಿಯೂ ಒತ್ತಡವನ್ನು ಉಂಟುಮಾಡುತ್ತಿದೆ. ‘ಆಹಾರಶುದ್ಧ ಸತ್ವಶುದ್ಧಿ’ ಎಂಬ ಮಾತೊಂದಿದೆ. ಅಂದರೆ ನಾವು ತಿನ್ನುವ ಆಹಾರ ಶುದ್ಧವಾಗಿದ್ದರೆ ಮನಸ್ಸು ಕೂಡ ಸ್ವಚ್ಛವಾಗಿರುತ್ತದೆ ಎಂಬುದು ಇದರ ಅರ್ಥ. ಮೊಬೈಲ್‌ನಲ್ಲಿ ಮಾತನಾಡುತ್ತ, ಟೀವಿ ನೋಡುತ್ತ ಊಟ ಮಾಡುವುದರಿಂದ ತಿಂದದ್ದು ಮೈಗೆ ಹಿಡಿಯುವುದಿಲ್ಲ. ಇವೆಲ್ಲ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆಹಾರವನ್ನು ಅದರ ಸ್ವಾದವನ್ನು ಸವಿಯುತ್ತ ಖುಷಿಯಾಗಿ ತಿನ್ನಬೇಕು. ತಿನ್ನುವಾಗ ಆಹಾರವನ್ನು ಕಸದ ಬುಟ್ಟಿಗೆ ಕಸ ಹಾಕುವ ಹಾಗೆ ತಿನ್ನಬೇಡಿ. ತಿನ್ನುವಾಗ ಯಾವ ಒತ್ತಡವೂ ಇಲ್ಲದೇ ಖುಷಿಯಿಂದ ತಿನ್ನಿ – ಎಂದು ನನ್ನ ಬಳಿ ಒತ್ತಡ ಎಂದು ಬರುವವರಿಗೆ ನಾನು ಸಲಹೆ ಕೊಡುತ್ತೇನೆ.

ಒತ್ತಡ ಇಲ್ಲದ ಮನುಷ್ಯರು ಯಾರಿದ್ದಾರೆ ಹೇಳಿ? ಹಾಗೆಯೇ ನನಗೂ ಸಾಕಷ್ಟು ಒತ್ತಡಗಳು ಉಂಟಾಗುತ್ತಿರುತ್ತವೆ. ನಮ್ಮ ಬಳಿ ಬರುವ ರೋಗಿಗಳೆಲ್ಲ ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುವವರೇ. ಅವರ ಕಷ್ಟಗಳನ್ನು ಆಲಿಸಿದಾಗ ನನಗೂ ಒತ್ತಡ ಆಗುವುದಿದೆ. ಆದರೆ ವೈದ್ಯರು ಉಲ್ಲಾಸದಿಂದ ನಗುನಗುತ್ತಲೇ ಅವರ ಕಷ್ಟಗಳಿಗೆ ದನಿಯಾದರೆ, ಅವರು ಖುಷಿಯಿಂದಲೂ ಸಮಾಧಾನದಿಂದಲೂ ತೆರಳುತ್ತಾರೆ. ಆಗ ನಮಗೂ ಸಾರ್ಥಕ ಭಾವ.

ಒತ್ತಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಿಜ. ಆದರೆ ಅದನ್ನು ನಿರ್ವಹಿಸುವ ಕಲೆಯನ್ನು ಕಲಿಯಬಹುದು. ಕಚೇರಿಯ ತಲೆಬಿಸಿಯನ್ನು ಮನೆಗೆ ತಂದರೆ ಇನ್ನಷ್ಟು ಒತ್ತಡವನ್ನು ಅನುಭವಿಸಬೇಕಾಗುತ್ತದೆಯಷ್ಟೆ! ಆಗ ಮನೆಯಲ್ಲೂ ನೆಮ್ಮದಿ ಸಿಗುವುದಿಲ್ಲ. ಕಚೇರಿಯ ಒತ್ತಡವನ್ನೆಲ್ಲ ಮರೆತು ಮನೆಯೊಳಗೆ ಕಾಲಿಡಿ. ಕೆಲಸದಲ್ಲಿ ಕಠಿಣ ಶ್ರಮ ಇರಬೇಕು ನಿಜ. ಆದರೆ ಅದು ವೈಯಕ್ತಿಕ ಬದುಕಿಗೆ ಅಡ್ಡಿಯಾಗಬಾರದು.

ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು. ಅದರ ಫಲದ ಬಗ್ಗೆ ಅತಿಯಾಸೆ ಇಟ್ಟುಕೊಳ್ಳಬಾರದು. ಪಕ್ಕದ ಮನೆಯವರು ಕಾರು, ಆಭರಣ ಕೊಂಡರೂ ಕೆಲವರಿಗೆ ಸಹಿಸಲು ಆಗುವುದಿಲ್ಲ. ಹೀಗೆ ಇನ್ನೊಬ್ಬರ ಬಗ್ಗೆ ಯೋಚಿಸುತ್ತಲೇ ನೆಮ್ಮದಿ ಹಾಳುಮಾಡಿಕೊಳ್ಳುವ ಜನರು ಇರುತ್ತಾರೆ. ಈ ಕೆಟ್ಟ ಕುತೂಹಲ ಅವರ ಒತ್ತಡವವನ್ನು ಹೆಚ್ಚಿಸುತ್ತದೆ ಎಂಬ ಸೂಕ್ಷ್ಮತೆಯೂ ಅವರಿಗೆ ಅರಿವಾಗುವುದಿಲ್ಲ. ‌ನಿಮ್ಮ ಬಗ್ಗೆ ಯಾರೋ ಏನೋ ಮಾತನಾಡಿದರೂ ಎಂದು ಇನ್ಯಾರೋ ಆ ವಿಷಯವನ್ನು ಕಿವಿಗೆ ಹಾಕಿದಾಗ ವಿಚಾರವನ್ನು ಪರಾಮರ್ಶಿಸದೆ ಅವರ ಜೊತೆ ಜಗಳಕ್ಕೆ ಇಳಿಯುವ ಸ್ವಭಾವ ನಿಮ್ಮ ಆರೋಗ್ಯವನ್ನೇ ಕೆಡಿಸುತ್ತದೆ. ತಪ್ಪು ತಿಳಿವಳಿಕೆಯೂ ಒತ್ತಡಕ್ಕೆ ಕಾರಣವಾಗುತ್ತದೆ. ಇನ್ನು ಕೆಲವರಿರುತ್ತಾರೆ, ಅವರು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಪಂಚ ಹೊತ್ತಿ ಉರಿಯುತ್ತಿದ್ದರೂ, ಅವರಿಗೆ ಅವರದೇ ಲೋಕ. ಬೇರೆಯವರ ಬಗ್ಗೆ ಚಿಂತಿಸದೇ ಸ್ವಾರ್ಥದಲ್ಲಿಯೇ ಸುಖ ಕಾಣುತ್ತಾರೆ. ಅಂಥವರೂ ಸದಾ ಒತ್ತಡದಲ್ಲಿಯೇ ಬದುಕುತ್ತಾರೆ. ಜೀವನದಲ್ಲಿ ಖುಷಿಯಾಗಿರಬೇಕೆಂದರೆ ಮೊದಲು ಪ್ರೀತಿಸುವುದನ್ನು ಕಲಿಯಬೇಕು.

ಮನಸ್ಸಿಗೆ ತೀವ್ರ ಒತ್ತಡ ಅನ್ನಿಸಿದಾಗ ಸಂಗೀತ ಕೇಳಿ. ಒತ್ತಡ ಅದೆಷ್ಟೇ ತೀವ್ರತರವಾಗಿರಲಿ ಮಧುರವಾದ ಹಾಡೊಂದು ಅದನ್ನು ಮರೆಸಬಲ್ಲದು. ಅದು ಮನಸ್ಸನ್ನು ತಿಳಿಯಾಗಿಸುತ್ತದೆ. ಆಯುರ್ವೇದದಲ್ಲಿ ಒತ್ತಡ ನಿವಾರಣೆಗೆ ಹಲವು ಮದ್ದಿದೆ. ಒಂದೆಲಗ ಸೊಪ್ಪುಸೇವನೆ ಒತ್ತಡವನನು ಕರಗಿಸುತ್ತದೆ. ವಿದ್ಯಾರ್ಥಿಗಳಿಗೆ ಈ ಸೊಪ್ಪನ್ನು ಸೇವಿಸುವಂತೆ ಸಲಹೆ ಕೊಡುತ್ತೇನೆ. ಜೊತೆಗೆ ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಮನಸ್ಸು ಹಗುರವಾಗುತ್ತದೆ.

ಸಮಾಜಮುಖಿಯಾಗಿರಿ. ಇನ್ನೊಬ್ಬರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಾವು ಮಾತ್ರ ಬುದ್ಧಿವಂತರು ಎಂಬ ಭಾವನೆ ಕೆಲವರಿಗೆ ಇರುತ್ತದೆ; ಇದು ಸಲ್ಲ. ಚಿಕ್ಕವರು ಹೇಳುವ ವಿಚಾರವನ್ನು ಕೇಳಿಸಿಕೊಳ್ಳಿ. ಜೀವನದಲ್ಲಿ ತಾಳ್ಮೆ ಇದ್ದರೆ ಎಷ್ಟೋ ಕಷ್ಟಗಳು ನಿಮ್ಮ ಬಳಿ ಸುಳಿಯುವುದೇ ಇಲ್ಲ. ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಮಿತಿ ಇರಲಿ. ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ಬಿಟ್ಟು, ನಿಮ್ಮ ಸಾಮರ್ಥ್ಯವನ್ನು ಅರಿಯಿರಿ. ಇದರಿಂದ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತೀರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT