ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಹೂಂ’ ಎನ್ನಲು ಕಲಿಯಿರಿ!

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ಭರತ್‌ ಮತ್ತು ಶಾಲನ್‌ ಸವೂರ್‌

ಆರೋಗ್ಯಪೂರ್ಣ ಸ್ಥಿತಿ ಎಂದರೆ ಯಾವುದು? ಸಾಮಾನ್ಯವಾಗಿ ಎಲ್ಲರೂ ಹೇಳುವ ಉತ್ತರ, ‘ಯಾವುದೇ ರೋಗ ಇಲ್ಲದಿರುವುದು.’ ಹೀಗೆ ಹೇಳುವವರು ನಾವು ಯಾವುದನ್ನು ಇದುವರೆಗೆ ‘ರೋಗ’ ಎಂದು ಗುರ್ತಿಸುತ್ತೇವೆಯೋ ಅದರಿಂದ ತಪ್ಪಿಸಿಕೊಳ್ಳುವುದೇ ಬದುಕಿನ ನೆಮ್ಮದಿಯ ಸ್ಥಿತಿ ಎಂದು ಯೋಚಿಸುವವರು. ಆದರೆ ಪ್ರಾಜ್ಞರು– ಪರಿಣತವೈದ್ಯರು ‘ಆರೋಗ್ಯ’ ಎಂಬ ಸ್ಥಿತಿಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಗುರುತಿಸುತ್ತಾರೆ.

‘ಆರೋಗ್ಯಪೂರ್ಣ ಸ್ಥಿತಿ ಎಂದರೆ ಅದು ಕಾಯಿಲೆಗಳ ಗೈರುಹಾಜರಿಯಲ್ಲ; ಬದಲಿಗೆ ಪ್ರೇಮದ ಹಾಜರಿ’ – ಇದು ನಾನು ಹಲವು ಗುರುಗಳು, ವೈದ್ಯರ ಬಾಯಿಯಿಂದ ಮತ್ತೆ ಮತ್ತೆ ಕೇಳಿದ ವ್ಯಾಖ್ಯಾನ. ಇಲ್ಲಿ ‘ಪ್ರೇಮದ ಹಾಜರಿ’ ಎಂದರೆ ಅದು ಸಂತೋಷದ – ನೆಮ್ಮದಿಯ ಸಂಕೇತವೂ ಹೌದು.

ಈ ಒಂದು ಸಾಲಿನಲ್ಲಿ ನಮ್ಮ ಬದುಕನ್ನು ಬೆಳಗಬಲ್ಲ, ಬೆಳಕಿನ ಬೀಜವೇ ಅಡಗಿದೆ. ಅದು ನಮಗೆ ಬದುಕನ್ನು ಕಟ್ಟಿಕೊಳ್ಳುವ ಹೊಸ ದಾರಿಯನ್ನು ತೋರಿಸುತ್ತದೆ. ಈ ಬದುಕಿನಲ್ಲಿ ಯಾವುದು ಮುಖ್ಯ, ಪ್ರೇಮದ ಅನನ್ಯ ಶಕ್ತಿಯನ್ನು ನಮ್ಮಲ್ಲಿ ನಮ್ಮ ಬದುಕಿನಲ್ಲಿ ತುಂಬಿಕೊಳ್ಳಬಹುದಾದ ದಾರಿಗಳು ಯಾವುವು ಎಂಬುದರ ಕುರಿತು ನಮ್ಮಲ್ಲಿ ಅರಿವನ್ನು ಬೆಳಗುತ್ತದೆ.

ಅಂಥದ್ದೊಂದು ಪ್ರೇಮದ ಬೆಳಕಿನ ಮೂಲವನ್ನು ನಮ್ಮೊಳಗೆ ಬಿತ್ತಿಕೊಳ್ಳುವ, ಆ ಮೂಲಕ ನಮ್ಮ ಬದುಕಿನ ದಾರಿಯನ್ನು ಬೆಳಕಾಗಿಸಿಕೊಳ್ಳುವುದು ಹೇಗೆ?

ಪ್ರೇಮ ಎಂಬುದು ನಮ್ಮಲ್ಲಿ ಹಲವು ವಿಷಯಗಳಿಗೆ ‘ಉಹೂಂ’ ಎಂದು ದಿಟ್ಟವಾಗಿ ಹೇಳುವ ಶಕ್ತಿಯನ್ನು ನೀಡುತ್ತದೆ. ಬರೀ ಹೊರಜಗತ್ತಿಗಲ್ಲ, ನಮ್ಮೊಳಗಿನ ಜಗತ್ತಿನ ಹಲವು ಸಂಗತಿಗಳಿಗೂ ‘ಉಹೂಂ’ ಎಂದು ಹೇಳುವ ಶಕ್ತಿ ಅದು! ಪ್ರೇಮದ ವಿಶ್ವಾತ್ವಕ ಭಿತ್ತಿಯಲ್ಲಿ ‘ಉಹೂಂ’ ಎಂಬ ಶಬ್ದಕ್ಕೆ ಹಲವು ಅರ್ಥಸಾಧ್ಯತೆಗಳಿವೆ. ಅದು ಆಯಾ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಏನಾದರೂ ಆಗಬಹುದು. ಇದರರ್ಥ, ನೀವಿನ್ನೂ ‘ಹೂಂ’ ಎನ್ನಲು ಸನ್ನದ್ಧರಾಗಿಲ್ಲ’, ಅಥವಾ ‘ನಾನು ನನ್ನ ಬದುಕಿನ ಶಾಂತಿ, ನೆಮ್ಮದಿ, ಆರೋಗ್ಯವನ್ನು ಕದಿಯಬಹುದಾದ ತಪ್ಪನ್ನು ಮಾಡಲಾರೆ’ – ಹೀಗೆ ಹಲವು ಅರ್ಥಸಾಧ್ಯತೆ ಅದಕ್ಕಿದೆ. ಅಲ್ಲದೇ ಅದು ಲಾಲಸೆಗೆ ಮರುಳಾಗದ, ನಿಮ್ಮ ಸಮಚಿತ್ತ ಮನಃಸ್ಥಿತಿಯ ಪ್ರತೀಕವೂ ಆಗಬಲ್ಲದು.

ಬಹುತೇಕ ಸಲ ‘ಉಹೂಂ’ ಎಂಬ ಶಬ್ದವನ್ನು ನಕಾರಾತ್ಮಕವಾಗಿಯೇ ಪರಿಗಣಿಸುತ್ತಾರೆ; ಬಳಸುತ್ತಾರೆ. ಯಾವುದೋ ಒಳ್ಳೆಯ ಸಂಗತಿಗೆ ತಡೆ ಎಂಬ ರೀತಿಯಲ್ಲಿಯೇ ಗ್ರಹಿಸಲಾಗುತ್ತದೆ. ಹೀಗೆ ಹೇಳುವವರು ಆ ಶಬ್ದದ ಪರಿಮಿತ ಅರ್ಥವನ್ನಷ್ಟೇ ಗ್ರಹಿಸಿರುತ್ತಾರೆ. ‘ಉಹೂಂ’ ಎಂಬ ಶಬ್ದಕ್ಕಿರುವ ವಿಶಾಲವಾದ ಅರ್ಥವನ್ನು ವಿವರಿಸುವವರು ವಿರಳ. ಈ ಶಬ್ದವನ್ನು ಸಕಾರಾತ್ಮಕವಾಗಿ ಸ್ವೀಕರಿಸಲು, ಅರ್ಥೈಸಿಕೊಳ್ಳಲು ನಮಗೆ ಯಾರೂ ಕಲಿಸುವುದೇ ಇಲ್ಲ. 

ವಿಶಾಲಾರ್ಥದಲ್ಲಿ ಒಂದು ಪರಿಭಾಷೆಯಾಗಿ ಗಮನಿಸಿದರೆ ‘ಉಹೂಂ’ ಎನ್ನುವ ಶಬ್ದ, ಅದಕ್ಕೆ ಬೇಕಾದ ಮನಃಸ್ಥಿತಿ ನಮಗೆ ಸಹಿಷ್ಣುತೆಯನ್ನು ಕಲಿಸುತ್ತದೆ. ಸ್ವೀಕರಣಗುಣವನ್ನು ಕಲಿಸುತ್ತದೆ, ಸಹನೆಯನ್ನು ಕಲಿಸುತ್ತದೆ. ಮಾನವೀಯ ಅಂತಃಕರಣವನ್ನು ಕಲಿಸುತ್ತದೆ. ಈ ಎಲ್ಲ ಗುಣಗಳು ನಮ್ಮಲ್ಲಿ ಸಮಚಿತ್ತತೆಯನ್ನು ತರುತ್ತವೆ. ಹೆಚ್ಚು ಸೃಜನಶೀಲರಾಗಿಸುತ್ತದೆ. ನೇರ ಮತ್ತು ಸಮತೋಲಿತ ಮನಃಸ್ಥಿತಿಯವರನ್ನಾಗಿಸುತ್ತದೆ. ಸರಳ, ಚೇತೋಹಾರಿ, ಮಾನವೀಯ ಮನುಷ್ಯರನ್ನಾಗಿಸುತ್ತದೆ.

‘ಉಹೂಂ’ ಎಂಬ ಶಬ್ದದಿಂದ ನಮ್ಮ ಬದುಕಿಗೆ ಏನು ಸಿಗುತ್ತದೆ? ಏನು ಬದಲಾವಣೆಯಾಗುತ್ತದೆ ಎಂದು ನೀವು ಕೇಳಬಹುದು.

ಅದು ನಮ್ಮನ್ನು ನಿಜವಾದ ಮನುಷ್ಯರನ್ನಾಗಿಸುತ್ತದೆ. ನೈಜ ವ್ಯಕ್ತಿತ್ವವನ್ನು ರೂಪಿಸುತ್ತದೆ. ಪ್ರತಿಯೊಂದು ಸಲ ನಾನು ‘ಉಹೂಂ’ ಶಬ್ದ ಬಳಸಿದಾಗಲೂ ನನಗೆ ನನ್ನ ಮನಸ್ಸನ್ನು ಇನ್ನಷ್ಟು ಉದಾರವಾಗಿಸಿಕೊಳ್ಳಲು, ಗುರುಗಳಿಂದ ನಾನು ಕೇಳಿದ್ದನ್ನು ಬದುಕಿಗೆ ಅಳವಡಿಸಿಕೊಳ್ಳಲು ಇನ್ನಷ್ಟು ಸಮಯ, ಇನ್ನಷ್ಟು ಅವಕಾಶ ದೊರೆತಿದೆ. ಇದರಿಂದ ನನ್ನ ಮನಸ್ಸು ಇನ್ನಷ್ಟು ಸ್ವಸ್ಥಗೊಂಡಿದೆ. ಹೀಗೆ ಸ್ವಸ್ಥ ಮನೋಧರ್ಮವನ್ನು ಹೊಂದುವುದು ಎಷ್ಟು ಅವಶ್ಯ ಎನ್ನುವುದನ್ನೂ ಈ ಶಬ್ದವೇ ನನಗೆ ಕಲಿಸಿದೆ.

ನಾವ್ಯಾರೂ ಹುಟ್ಟಿನಿಂದಲೇ ಬುದ್ಧಿವಂತರಲ್ಲ, ಅತಿಯಾದ ಚಿಂತೆ, ಇನ್ನಷ್ಟು ಸಮಸ್ಯೆಗಳನ್ನೇ ಸೃಷ್ಟಿಸುತ್ತದೆ. ಇದರಿಂದ ಇನ್ನಷ್ಟು ತೊಂದರೆಗಳು, ಗೊಂದಲಗಳು, ಪರಿಣಾಮವಾಗಿ ಇನ್ನಷ್ಟು ರೋಗಗ್ರಸ್ತ ಮನಃಸ್ಥಿತಿಗಳು ಹುಟ್ಟಿಕೊಳ್ಳುತ್ತದೆ. ಆದರೆ ನಮ್ಮ ಗಮನ ಬದುಕನ್ನು ಇನ್ನಷ್ಟು ಸರಳಗೊಳಿಸುವತ್ತ ಇರಬೇಕಲ್ಲವೇ? ನಾವು ಬದುಕುವ ಈ ಜಗತ್ತನ್ನು ಇನ್ನಷ್ಟು ಉನ್ನತ, ಸುಂದರ ಮತ್ತು ಆರೋಗ್ಯಪೂರ್ಣ ಸ್ಥಳವನ್ನಾಗಿ ಮಾಡುವುದು ಹೇಗೆ ಎಂಬ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು.

‘ಉಹೂಂ’ ಎಂಬ ಶಬ್ದವನ್ನು ಸಮಯೋಚಿತ ಮತ್ತು ವಿವೇಕಯುತವಾಗಿ ಬಳಸಿಕೊಳ್ಳಲು ಕಲಿತರೆ ಆಗ ನಾವೂ ಗೊಂದಲಗಳಿಗೆ ಸಿಲುಕಿಕೊಳ್ಳದೆ ಇತರರನ್ನೂ ತೊಂದರೆಗೆ ಸಿಲುಕಿಸದೆ ಬದುಕುವ ದಾರಿಯ ಕೀಲಿಕೈ ಸಿಕ್ಕಂತೆ. ಆಗ ನಿಮ್ಮ ಪ್ರಾರ್ಥನೆ ಸ್ವಾರ್ಥದ ಚೌಕಟ್ಟನ್ನು ಮೀರಿ ಜಗತ್ತಿನ ಒಳಿತಿನ ಕುರಿತಾಗಿ ಇರುತ್ತದೆ.

ಇನ್ನೂ ಮುಂದುವರೆದು ಹೇಳಬೇಕು ಎಂದರೆ ವಿವೇಕಯುತವಾಗಿ ಬಳಸಿದ ‘ಉಹೂಂ’ ಎಂಬ ಶಬ್ದ ತುಂಬ ಮೌಲ್ಯಯುತವಾದ ‘ಹೂಂ’ಗಳಿಗೆ ಕಾರಣವಾಗುತ್ತದೆ. ಅಂದರೆ ನಮ್ಮ ಎಷ್ಟೋ ನಿರಾಕರಣೆಗಳು ಬದುಕಿನಗೆ ಹಲವು ಸಕಾರಾತ್ಮಕ ಸಂಗತಿಗಳನ್ನು ದಯಪಾಲಿಸುತ್ತದೆ.

ಸಾಧ್ಯವಾದಷ್ಟೂ ನೀವು ಗೌರವಿಸುವ, ಪ್ರಾಜ್ಞರ ಬಳಿ ಈ ಕುರಿತು ಚರ್ಚಿಸಿ. ಅವರು ನಿಮಗೆ ಘನತೆಯಿಂದ, ವಿವೇಚನೆಯಯಿಂದ ಬದುಕುವ ಬಗೆಯನ್ನು ಕಲಿಸಿಕೊಡುತ್ತಾರೆ. ನಿಮ್ಮ ಬದುಕನ್ನು ಉಜ್ವಲಗೊಳಿಸುವ ಅನುಭವದ ಇಂಧನ ನಿಮ್ಮೊಳಗೇ ಇದೆ. ಅದಕ್ಕೆ ಚಿಕ್ಕ ಬೆಂಕಿಯ ಕಿಡಿಯನ್ನು ತಾಕಿಸುವ ಕೆಲಸವಷ್ಟೇ ನಾವು ಮಾಡಬೇಕಾಗಿರುವುದು. ಆಗ ಅದು ಉಜ್ವಲವಾಗಿ ಹೊತ್ತಿ ಉರಿಯುತ್ತದೆ. ಅದು ನಮಗೆ ಬದುಕಿನ ರೋಮಾಂಚಕಾರಿ ಅನುಭವನ್ನು ನೀಡುತ್ತದೆ. ಖಂಡಿತ ಈ ಅನುಭವ ನಿಮ್ಮನ್ನು ಆಕ್ರಮಣಕಾರಿ ಮನೋಭಾವದಿಂದ ಶಾಂತಚಿತ್ತದತ್ತ ಹೊರಳಿಸುತ್ತದೆ. ಈ ಸಮಚಿತ್ತದ ಸ್ಥಿತಿಯಲ್ಲಿ ನಿಮಗೆ ಮೊಗೆದಷ್ಟೂ ಮಿಗುವಷ್ಟು ಸಕಾರಾತ್ಮಕ ‘ಹೂಂ’ಗಳು ಸಿಗುತ್ತಿರುತ್ತವೆ. ಹೀಗೆ ‘ಉಹೂಂ’ನ ಮೂಲಕವೇ ‘ಹೂಂ’ನ ಸ್ಥಿತಿಗೆ ತಲುಪುವುದೇ ಒಂದು ಅದ್ಭುತ ಅರಿವಿನ ದಾರಿ.

ಆ ದಾರಿಯಲ್ಲಿ ಎಲ್ಲ ‘ಉಹೂಂ’ಗಳೂ ನಿಮ್ಮನ್ನು ಇನ್ನೊಂದು ಮೆಟ್ಟಿಲು ಮೇಲಕ್ಕೆ ಏರಿಸುತ್ತವೆ. ನಿಮ್ಮ ಬದುಕಿನ ಸರಿಹೊಂದುವ ಪ್ರತಿ ಸಂಗತಿಗಳೂ ನಿಮಗೆ ದಕ್ಕುತ್ತಿರುತ್ತವೆ. ಅವುಗಳತ್ತ ಗಮನಕೊಡುವ, ಆಯ್ದುಕೊಳ್ಳುವ ವಿವೇಚನೆಯೂ ಸಿಗುತ್ತದೆ. ಅದು ಬೆಳಕಿನ ದಾರಿ. ಈ ದಾರಿಯಲ್ಲಿ ಬದುಕು ಸಾಗಿದಷ್ಟೂ ನಮ್ಮ ಅಹಂಕಾರ ಕಳೆದು ಆತ್ಮಚೈತನ್ಯವನ್ನು ಗಳಿಸಿಕೊಳ್ಳುತ್ತೇವೆ.

ಉದಾಹರಣೆಗೆ, ನೀವೊಂದು ಒಳ್ಳೆಯ ಹಾಡನ್ನು ಕೇಳುತ್ತಿದ್ದೀರಿ ಎಂದುಕೊಳ್ಳಿ. ಆಗ ‘ನಿಮ್ಮತನ’ವನ್ನು ಪೂರ್ತಿಯಾಗಿ ಕಳೆದುಕೊಡು ನೀವು ಆ ಹಾಡೇ ಆಗಿಬಿಟ್ಟಿರುತ್ತೀರಲ್ಲವೇ? ಇದೂ ಹಾಗೆಯೇ. ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೂ ತನ್ಮಯರಾಗಿ ಗಮನಿಸಲು ಸಾಧ್ಯವಾದರೆ ಆಗ ಇಡೀ ಬದುಕೇ ಒಂದು ಧ್ಯಾನವಾಗುತ್ತದೆ. ದೈನಂದಿನ ಕೆಲಸಗಳು, ದಿನಚರಿ ಎಲ್ಲವೂ ನಿಮ್ಮನ್ನು ನೀವು ಕಳೆದುಕೊಂಡು ಆ ಸಂಗತಿಯೇ ಆಗಿಬಿಡುವ ಧ್ಯಾನಸ್ಥ ಸ್ಥಿತಿಯೇ ಆಗುತ್ತದೆ! ಬೀದಿಯಲ್ಲಿ ನಡೆಯುವುದು, ತರಕಾರಿ ಕೊಳ್ಳುವುದು, ಅಡುಗೆ ಮಾಡುವುದು – ಹೀಗೆ ಬದುಕಿನ ಎಲ್ಲ ಸಂಗತಿಗಳೂ ಧ್ಯಾನಸ್ಥ ಸ್ಥಿತಿಯೇ ಆಗಿಬಿಟ್ಟರೆ ಅದಕ್ಕಿಂತ ಮಿಗಿಲು ಏನಿದೆ?

ಹೀಗೆ ಎಲ್ಲವನ್ನೂ ತನ್ಮಯರಾಗಿ ಅನುಭವಿಸಲು ಸಾಧ್ಯವಾದ ಮನಸ್ಸು ಇನ್ನೊಂದು ಮನಸ್ಸಿನೊಂದಿಗೂ ಅಷ್ಟೇ ಸುಮಧುರ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತದೆ. ಸೌಹಾರ್ದವೆಂಬುದು ಬುದಕಿನ ಭಾಗವೇ ಆಗುತ್ತದೆ. ಆಗ ಇನ್ನೊಬ್ಬರ ವ್ಯಕ್ತಿತ್ವದ ಹುಳುಕುಗಳನ್ನು ಹುಡುಕುವುದು ಮುಖ್ಯ ಎನಿಸುವುದಿಲ್ಲ. ಬದಲಿಗೆ ಅವರನ್ನು ಇದ್ದ ಹಾಗೆಯೇ ಸ್ವೀಕರಿಸುವ ಔದಾರ್ಯ ಬೆಳೆಯುತ್ತದೆ.

ಒಳ್ಳೆಯ ಹಾರೈಕೆ, ನಿರ್ವಾಜ್ಯಪ್ರೇಮ, ಅಂತಃಕರಣ – ಇವೆಲ್ಲವೂ ಎದೆಯಿಂದ ಎದೆಗೆ ಹರಿಯುವ ಮಾನವೀಯ ಝರಿಗಳು. ಈ ಝರಿ ಹರಿಯುತ್ತ ಹೋದಂತೆಲ್ಲ ಮನುಷ್ಯರು ಇನ್ನಷ್ಟು ಮತ್ತಷ್ಟು ಮಾನವೀಯಗೊಳ್ಳುತ್ತ ಹೋಗುತ್ತಾರೆ. ಸ್ವಸ್ಥ, ಮಾನವೀಯ ಸಮಾಜವೊಂದರ ನಿರ್ಮಾಣಕ್ಕೂ ಅದು ಕಾರಣವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT