ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸೂಕ್ಷ್ಮ ಪ್ರದೇಶ ಅಧಿಕಾರ ದುರುಪಯೋಗ ನಿಲ್ಲಲಿ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅರಣ್ಯ ಮತ್ತು ಅರಣ್ಯಜೀವಿಗಳ ರಕ್ಷಣೆಯ ಉದ್ದೇಶದಿಂದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ತಾನೇ ಜಾರಿಗೆ ತಂದಿದ್ದ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಯನ್ನು ಕುಗ್ಗಿಸಿದ ನಿರ್ಧಾರವು ಸುಪ್ರೀಂ ಕೋರ್ಟ್‌ನ ಕೋಪಕ್ಕೆ ಗುರಿಯಾಗಿದೆ. ‘ದೇಶದ ರಾಷ್ಟ್ರೀಯ ಅರಣ್ಯ, ವನ್ಯಜೀವಿಗಳು ಹಾಗೂ ನದಿ ಮೂಲವನ್ನು ನಾಶ ಮಾಡುವುದೇ ನಿಮ್ಮ ಉದ್ದೇಶವೇ’ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿಯೇ ಇದೆ. ಪ್ರತಿಯೊಂದು ಅರಣ್ಯಕ್ಕೆ ಪರಿಸರ ಸೂಕ್ಷ್ಮ ವಲಯ ಎನ್ನುವುದು ರಕ್ಷಾಕವಚ ಇದ್ದಂತೆ. ಈ ವಲಯದಲ್ಲಿ ಗಣಿಗಾರಿಕೆ, ಪರಿಸರಕ್ಕೆ ಹಾನಿ ತರುವ ಅಭಿವೃದ್ಧಿ ಚಟುವಟಿಕೆ, ಕಟ್ಟಡ ನಿರ್ಮಾಣಕ್ಕೆ ತಡೆ ಇದೆ. ಯುಪಿಎ ಸರ್ಕಾರ 2002ರಲ್ಲಿ ಜಾರಿಗೆ ತಂದಿದ್ದ ಪರಿಸರ ರಕ್ಷಣೆ ಕಾಯ್ದೆಯಲ್ಲಿ ಅರಣ್ಯದ ಅಂಚಿನಿಂದ 10 ಕಿ.ಮೀ. ದೂರದವರೆಗಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲು ಅವಕಾಶವಿತ್ತು. ಆದರೆ, 2015ರಲ್ಲಿ ಎನ್‌ಡಿಎ ಸರ್ಕಾರ ಈ ಅಂತರವನ್ನು ಬರೀ 100 ಮೀಟರ್‌ಗೆ ಇಳಿಸಿದೆ. ದಾದ್ರಾ ಮತ್ತು ನಗರ್‌ಹವೇಲಿ ವನ್ಯಜೀವಿ ತಾಣದ 10 ಕಿ.ಮೀ. ವ್ಯಾಪ್ತಿಯೊಳಗೆ ಕೈಗಾರಿಕಾ ಘಟಕ ಸ್ಥಾಪನೆಗೆ ಕೇಂದ್ರ ಪರಿಸರ ಸಚಿವಾಲಯದ ಅನುಮತಿ ನೀಡಿಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಪ್ರದರ್ಶಿಸಿದ ಈ ನಿಲುವು ಸರಿಯಾದುದು.

ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಕುಗ್ಗಿಸಿದ ಕೇಂದ್ರ ಸರ್ಕಾರದ ನಿರ್ಧಾರ ಎಷ್ಟರಮಟ್ಟಿಗೆ ನ್ಯಾಯಯುತ ಮತ್ತು ಕ್ರಮಬದ್ಧ ಎನ್ನುವುದನ್ನು ನ್ಯಾಯಾಲಯ ಮುಂದಿನ ದಿನಗಳಲ್ಲಿ ಪರಿಶೀಲಿಸಲಿದೆ. ‘ಈ ನಿರ್ಧಾರ, ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಆಗಿರುವ ಅಧಿಕಾರ ದುರುಪಯೋಗ ಪ್ರಕರಣದಂತೆ ಮೇಲ್ನೋಟಕ್ಕೆ ಕಾಣುತ್ತದೆ’ ಎಂಬ ನ್ಯಾಯಾಲಯದ ಅಭಿಪ್ರಾಯವು ಸಾರ್ವಜನಿಕರು ಅದರ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕನಾಗಿಯೇ ಇದೆ. ಒಂದು ಅರಣ್ಯವನ್ನು ಮತ್ತೊಂದು ಅರಣ್ಯಕ್ಕೆಬೆಸೆಯುವ, ಕಾಡು ಪ್ರಾಣಿಗಳ ಓಡಾಟದ ಹಾದಿಯನ್ನುಒಳಗೊಂಡ ಸೂಕ್ಷ್ಮ ವಲಯವನ್ನು ಉದ್ಯಮಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದಲೇ ಕೇವಲ100 ಮೀಟರ್‌ಗೆ ಕುಗ್ಗಿಸಿರಬೇಕು ಎನ್ನುವ ಅನುಮಾನ ಮೂಡುತ್ತಿದೆ. ಪಕ್ಷಾತೀತವಾಗಿ ಉದ್ಯಮಿಗಳು ಇದರ ಲಾಭವನ್ನು ಪಡೆದಿದ್ದಾರೆ. ಕರ್ನಾಟಕದಲ್ಲೂ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ವಲಯ ಕುಗ್ಗಿದೆ. ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಆವರಿಸಿರುವ ಕಾವೇರಿ ವನ್ಯಜೀವಿಧಾಮ, ಬಿಳಿಗಿರಿ ರಂಗನಾಥ ಹುಲಿ ಅಭಯಾರಣ್ಯ, ಮಹದೇಶ್ವರ ಬೆಟ್ಟ ಅಭಯಾರಣ್ಯ ವ್ಯಾಪ್ತಿಯಲ್ಲಿ ಕರಿ ಕಲ್ಲು ಗಣಿಗಾರಿಕೆಯ ಗುತ್ತಿಗೆ ಪಡೆದವರ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಈ ವಲಯವನ್ನು ಮನಸೋ ಇಚ್ಛೆ ಕುಗ್ಗಿಸಲಾಗಿದೆ. ನಾಗರಹೊಳೆ, ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಫಿ ತೋಟಗಳ ಒತ್ತುವರಿಗೆ ಪರಿಸರ ಸೂಕ್ಷ್ಮ ವಲಯ ಬಲಿಯಾಗಿದೆ ಎನ್ನುವ ಆರೋಪವಿದೆ. ಇವನ್ನೆಲ್ಲ ನೋಡಿದರೆ, ಅರಣ್ಯ ಮತ್ತು ಜೀವವೈವಿಧ್ಯವನ್ನು ಉಳಿಸುವ ಆಸಕ್ತಿ ಸರ್ಕಾರಗಳಿಗೆ ಇದ್ದಂತಿಲ್ಲ. ನ್ಯಾಯಾಲಯವೇ ಮಧ್ಯಪ್ರವೇಶಿಸಿ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT