ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ನಮ್ಮ ಶಿವಮೊಗ್ಗ, ಟೈಗರ್ಸ್‌

ಮಳೆಯ ಆಟ; ವಾರಿಯರ್ಸ್‌ ತಂಡ 52 ರನ್‌ಗೆ ಆಲೌಟ್‌!
Last Updated 19 ಸೆಪ್ಟೆಂಬರ್ 2017, 20:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ: ಮಳೆಯ ‘ಆಟ’ದ ನಡುವೆ ನಡೆದ ಮಹತ್ವದ ಕೆಪಿಎಲ್‌ ಪಂದ್ಯದಲ್ಲಿ ಸೋಲು ಕಂಡ ಮೈಸೂರು ವಾರಿಯರ್ಸ್ ತಂಡ ಟೂರ್ನಿಯಿಂದ ಹೊರಬಿದ್ದಿತು. ಚುರುಕಿನ ಬೌಲಿಂಗ್‌ ಮಾಡಿದ ನಮ್ಮ ಶಿವಮೊಗ್ಗ ಸೆಮಿಫೈನಲ್‌ ಪ್ರವೇಶಿಸಿತು.

ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ಮಂಗಳವಾರ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 142 ರನ್‌ ಗಳಿಸಿತು. ಈ ತಂಡದ ಬ್ಯಾಟಿಂಗ್ ಮುಗಿದ ಬಳಿಕ ಮಳೆ ಬಂದ ಕಾರಣ ವಾರಿಯರ್ಸ್ ತಂಡಕ್ಕೆ 14 ಓವರ್‌ಗಳಲ್ಲಿ 110 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಗಿತ್ತು. ಆದರೆ ತಂಡ 11.1 ಓವರ್‌ಗಳಲ್ಲಿ 52 ರನ್‌ಗೆ ಆಲೌಟ್ ಆಯಿತು. ಇದು ಟೂರ್ನಿಯಲ್ಲಿ ದಾಖಲಾದ ಅತಿ ಕಡಿಮೆ ಸ್ಕೋರು.

ಪದೇ ಪದೇ ಮಳೆ ಸುರಿದ ಕಾರಣ ಒಂದು ಗಂಟೆ ಆಟ ನಿಲ್ಲಿಸಲಾಗಿತ್ತು. ಶಿವಮೊಗ್ಗ ತಂಡ ಆರಂಭದಲ್ಲಿ ರನ್ ಗಳಿಸಲು ಪರದಾಡಿತು. 15 ಓವರ್‌ಗಳು ಮುಗಿದಾಗ ತಂಡದ ಖಾತೆಯಲ್ಲಿ 89 ರನ್‌ಗಳಿದ್ದವು. ಮಧ್ಯಮ ಕ್ರಮಾಂಕದಲ್ಲಿ ಆರ್‌. ಜೊನಾಥನ್‌ ಮತ್ತು ಶೋಯಬ್‌ ಮ್ಯಾನೇಜರ್‌ ತಲಾ 38 ರನ್‌ ಗಳಿಸಿ ಮೊತ್ತ ಹೆಚ್ಚಿಸಿದರು. ನಾಯಕ ಬಾಲಚಂದ್ರ ಅಖಿಲ್‌ ಕೊನೆಯಲ್ಲಿ ಆರು ಎಸೆತಗಳಲ್ಲಿ 16 ರನ್‌ ಸಿಡಿಸಿದರು.

ಚುರುಕಿನ ಬೌಲಿಂಗ್‌

ಶಿವಮೊಗ್ಗ ತಂಡ ಗೆಲುವು ಸಾಧಿಸಲು ಬೌಲರ್‌ಗಳೇ ಪ್ರಮುಖ ಕಾರಣರಾದರು. ವಾರಿಯರ್ಸ್‌ 39 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೆಯಲ್ಲಿ 13 ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ ಐದು ವಿಕೆಟ್‌ಗಳು ಪತನವಾದವು. ಪ್ರದೀಪ್‌, ಆದಿತ್ಯ ಸೋಮಣ್ಣ ತಲಾ ಎರಡು ವಿಕೆಟ್‌ ಮತ್ತು ಅಬ್ರಾರ್‌ ಖಾಜಿ ಮೂರು ವಿಕೆಟ್‌ ಉರುಳಿಸಿದರು.
ಚಾಂಪಿಯನ್ನರು ಹೊರಕ್ಕೆ

ರೋಚಕ  ಅಂತ್ಯ ಕಂಡ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಎಂಟು ರನ್‌ಗಳ ಗೆಲುವು ಸಾಧಿಸಿದ ಹುಬ್ಬಳ್ಳಿ ಟೈಗರ್ಸ್‌ ಕೆಪಿಎಲ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ಗಳಾದ ಮಯಂಕ್‌ ಅಗರವಾಲ್‌ (35; 30 ಎಸೆತ, 5 ಬೌಂಡರಿ) ಮತ್ತು ಅಭಿಷೇಕ್‌ ರೆಡ್ಡಿ (46; 31ಎ, 6 ಬೌಂ,) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಟೈಗರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 154 ರನ್ ಕಲೆ ಹಾಕಿತು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಟಸ್ಕರ್ಸ್‌ ತಂಡಕ್ಕೆ 15 ಓವರ್‌ಗಳಲ್ಲಿ 124 ರನ್‌ ಗಳಿಸುವ ಗುರಿ ನೀಡಲಾಗಿತ್ತು. ಟಸ್ಕರ್ಸ್‌ ಆರು ವಿಕೆಟ್‌ ನಷ್ಟಕ್ಕೆ 115 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿತು.

ಟಸ್ಕರ್ಸ್ ತಂಡವು ಜಯಿಸಲು ಕೊನೆಯ ಓವರ್‌ನಲ್ಲಿ 20 ರನ್ ಗಳಿಸಬೇಕಿತ್ತು. ಆದರೆ ಟೈಗರ್ಸ್‌ ತಂಡದ ಬೌಲರ್‌ ಹರೀಶ್ ಕುಮಾರ್‌ ಇದಕ್ಕೆ ಅವಕಾಶ ನೀಡಲಿಲ್ಲ.

ಸಂಕ್ಷಿಪ್ತ ಸ್ಕೋರು
ನಮ್ಮ ಶಿವಮೊಗ್ಗ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 142 (ಅಬ್ರಾರ್‌ ಖಾಜಿ 13, ಸಾದಿಕ್‌ ಕಿರ್ಮಾನಿ 16, ಆರ್‌. ಜೊನಾಥನ್‌ 38, ಶೋಯಬ್‌ ಮ್ಯಾನೇಜರ್‌ 38, ಬಾಲಚಂದ್ರ ಅಖಿಲ್‌ ಔಟಾಗದೆ 16; ಎಸ್‌.ಎಲ್‌. ಅಕ್ಷಯ್‌ 34ಕ್ಕೆ2, ವೈಶಾಖ ವಿಜಯಕುಮಾರ್‌ 27ಕ್ಕೆ2). ಮೈಸೂರು ವಾರಿಯರ್ಸ್‌: 11.1 ಓವರ್‌ಗಳಲ್ಲಿ 52 (ಸುನಿಲ್ ರಾಜು 15, ಶ್ರೇಯಸ್‌ ಗೋಪಾಲ್‌ 14; ಟಿ. ಪ್ರದೀಪ್‌ 11ಕ್ಕೆ2, ಆದಿತ್ಯ ಸೋಮಣ್ಣ 10ಕ್ಕೆ2, ಅಬ್ರಾರ್‌ ಖಾಜಿ 9ಕ್ಕೆ3). ಫಲಿತಾಂಶ: ವಿ. ಜಯದೇವನ್‌ ನಿಯಮದ ಪ್ರಕಾರ ನಮ್ಮ ಶಿವಮೊಗ್ಗ ತಂಡಕ್ಕೆ 57 ರನ್‌ ಗೆಲುವು.

ಪಂದ್ಯಶ್ರೇಷ್ಠ: ಅಬ್ರಾರ್‌ ಖಾಜಿ; ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 154 (ಮಯಂಕ್‌ ಅಗರವಾಲ್‌ 35, ಅಭಿಷೇಕ್ ರೆಡ್ಡಿ 46; ಜಹೂರ್‌ ಫಾರೂಕ್‌ 29ಕ್ಕೆ2, ಐ.ಜಿ. ಅನಿಲ್‌ 32ಕ್ಕೆ2).

ಬಳ್ಳಾರಿ ಟಸ್ಕರ್ಸ್‌: 15 ಓವರ್‌ಗಳಲ್ಲಿ 6 ವಿಕೆಟ್‌ಗೆ 115 (ಕುಣಾಲ್‌ ಕಪೂರ್ 21, ಅಮಿತ್‌ ವರ್ಮಾ 26, ರೋಹನ್‌ ಕದಮ್‌ ಔಟಾಗದೆ 19; ಅಭಿಷೇಕ ಸಕುಜಾ 12ಕ್ಕೆ2).

ಫಲಿತಾಂಶ: ವಿ. ಜಯದೇವನ್‌ ನಿಯ ಮದ ಪ್ರಕಾರ ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೆ 8 ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT