ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ನೀರು ನಿರ್ವಹಣಾ ಮಂಡಳಿಗೆ ತಮಿಳುನಾಡು ಮತ್ತೆ ಮನವಿ

ಐತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ– ಕೇಂದ್ರ ಸರ್ಕಾರ
Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ಜಲವಿವಾದ ನ್ಯಾಯಮಂಡಳಿಯ ಸೂಚನೆಯ ಮೇರೆಗೆ ನದಿ ನೀರು ನಿರ್ವಹಣಾ ಮಂಡಳಿ ಸ್ಥಾಪಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮತ್ತೆ ಮನವಿ ಮಾಡಿತು.

ನ್ಯಾಯಮಂಡಳಿಯ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದೆದುರು ಈ ಬೇಡಿಕೆ ಇರಿಸಿದ ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ, ಕಳೆದ 25 ವರ್ಷಗಳಿಂದ ಇರುವ ಈ ಕುರಿತ ಬೇಡಿಕೆಯ ಈಡೇರಿಕೆಗೆ ನ್ಯಾಯಾಲಯ ಮುಂದಾಗಬೇಕಿದೆ ಎಂದರು.

ಮಂಡಳಿಯು ನೀರು ಹಂಚಿಕೆಯ ಹೊಣೆಯನ್ನು ನಿಭಾಯಿಸಲಿದೆ. ಮಂಡಳಿ ರಚನೆಯ ಹೊಣೆಯನ್ನು ಕೇಂದ್ರ ಸರ್ಕಾರಕ್ಕೆ ವಹಿಸದೆ ನ್ಯಾಯಾಲಯವೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ, ನೀರು ಹಂಚಿಕೆ ಉದ್ದೇಶದಿಂದಲೇ ಕೇಂದ್ರ ಸರ್ಕಾರ 2013ರಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಿದೆ. ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಬಗ್ಗೆ ಸ್ಪಷ್ಟನೆ ಕೋರಲಾಗಿದ್ದು, ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ರಂಜಿತ್‌ಕುಮಾರ್‌ ಹೇಳಿದರು.

ಹೆಚ್ಚುವರಿಯಾಗಿ ಮಳೆ ಸುರಿದಾಗಲೂ ಯಾವ ರೀತಿ ನೀರು ಹಂಚಬೇಕು ಎಂಬ ಕುರಿತೂ ಐತೀರ್ಪಿನಲ್ಲಿ ಸ್ಪಷ್ಟ ನಿರ್ದೇಶನ ಇಲ್ಲ ಎಂದು ಕರ್ನಾಟಕದ ಪರ ವಕೀಲ ಫಾಲಿ ನಾರಿಮನ್‌ ಹೇಳಿದರು.

ಅಂತರರಾಜ್ಯ ಜಲ ವಿವಾದ ಕಾಯ್ದೆಯ ಪ್ರಕಾರ, ನದಿ ನೀರು ಹಂಚಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಂಡಳಿ ರಚನೆಯಲ್ಲಿ ಸಂಸತ್ತು ಪರಮಾಧಿಕಾರ ಹೊಂದಿದೆ. ನ್ಯಾಯಾಲಯ ಈ ಅಧಿಕಾರವನ್ನು ಕಿತ್ತುಕೊಳ್ಳಲಾಗದು. ಕೇಂದ್ರ ಸರ್ಕಾರವು ಮಂಡಳಿ ರಚನೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆ ಎಂದು ರಂಜಿತ್‌ಕುಮಾರ್‌ ಹೇಳಿದರು.

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಕೇಂದ್ರದ ಕರ್ತವ್ಯ. ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಕಾಲಮಿತಿ ವಿಧಿಸಲಾಗುವುದು. ಅಷ್ಟರೊಳಗೆ ಕ್ರಮ ಕೈಗೊಳ್ಳಬೇಕು. ನೀರು ಹಂಚಿಕೆ ಕುರಿತಂತೆ ತಟಸ್ತ ನಿಲುವಿಗೆ ಆದ್ಯತೆ ಇರಲಿ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಕೇಂದ್ರಕ್ಕೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT