ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿ: ಬಟಾ ಬಯಲಾದ ಬೇಬಿಬೆಟ್ಟ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಬೇಬಿಬೆಟ್ಟದಲ್ಲಿ 20 ವರ್ಷಗಳಿಂದ ನೂರಾರು ಗಣಿ ಕಂಪೆನಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇಡೀ ಬೆಟ್ಟ ಬಟಾಬಯಲಾಗಿದೆ.

ಮೈಸೂರು ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ಬೇಬಿಬೆಟ್ಟವನ್ನು ಅಮೃತ್‌ ಮಹಲ್‌ ಕಾವಲು ಎಂದು ಗುರುತಿಸಲಾಗಿದ್ದು, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಈಗಲೂ ಬೆಟ್ಟದ ಮೇಲಿರುವ ಸಿದ್ಧಲಿಂಗೇಶ್ವರ, ತಪ್ಪಲಲ್ಲಿರುವ ಮಹದೇಶ್ವರ ದೇವಾಲಯಗಳನ್ನು ಮೈಸೂರು ಅರಮನೆ ಆಡಳಿತ ಮಂಡಳಿಯೇ ನಿರ್ವಹಿಸುತ್ತಿದೆ. ಆದರೆ, ಅಮೃತ್‌ ಮಹಲ್‌ ಕಾವಲು ಪ್ರದೇಶ ಮಾತ್ರ ಅಕ್ರಮ ಗಣಿಗಳ ಪಾಲಾಗಿದೆ. ಈ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಗಣಿಗಳು ಅಕ್ರಮವಾಗಿ ತಲೆ ಎತ್ತಿದ್ದು ಅತ್ಯಾಧುನಿಕ ಮೆಗ್ಗರ್‌ ಸ್ಫೋಟಕದ ಮೂಲಕ ಕಲ್ಲು ಸ್ಫೋಟಿಸಲಾಗುತ್ತಿದೆ. ಮಧ್ಯರಾತ್ರಿ ಸ್ಫೋಟಕ ಸಿಡಿಸುವ ಕಾರಣ ಬೆಟ್ಟದ ಸುತ್ತಲಿನ 11 ಕಿ.ಮೀ ವ್ಯಾಪ್ತಿಯ 40 ಹಳ್ಳಿಗಳ ಜನರಿಗೆ ಹಲವು ಆರೋಗ್ಯ ಸಮಸ್ಯೆ ಸೃಷ್ಟಿಯಾಗಿದೆ. ದೂಳಿನ ಕಾರಣದಿಂದ ಸಾವಿರಾರು ಎಕರೆ ಜಮೀನು ಪಾಳು ಬಿದ್ದಿದೆ. ಸುತ್ತಲಿನ ಹಳ್ಳಿಗಳ ಮನೆಗಳು ಬಿರುಕು ಬಿಟ್ಟಿವೆ. ಜಾನುವಾರು ತಿನ್ನುವ ಮೇವು ವಿಷವಾಗಿದೆ. ತೆಂಗಿನಮರಗಳ ಸುಳಿ ಒಣಗಿದೆ. ಕುಡಿಯುವ ನೀರು ಮಲಿನಗೊಂಡಿದೆ. ಬೆಟ್ಟದ ತಪ್ಪಲಲ್ಲಿರುವ ರಾಮಯೋಗೇಶ್ವರ ಮಠದ ಪ್ರೌಢಶಾಲೆ ಸ್ಥಗಿತಗೊಂಡಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಳಾಂತರಗೊಂಡಿದೆ. ಕೇವಲ 4 ಕಿ.ಮೀ ದೂರದಲ್ಲಿರುವ ಕೆ.ಆರ್‌.ಎಸ್‌ ಜಲಾಶಯಕ್ಕೆ ಧಕ್ಕೆಯಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

‘ನಮ್ಮ ಊರಿನಲ್ಲಿ ಗರ್ಭಿಣಿಯರು, ಬಾಣಂತಿಯರು ಬದುಕಲು ಸಾಧ್ಯವಿಲ್ಲ. ಹೆರಿಗೆಗಾಗಿ ಹೆಣ್ಣುಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸುತ್ತೇವೆ. ಎದೆ ನಡುಗುವ ಆ ಶಬ್ದ ಕೇಳಿದರೆ ಹೃದಯಾಘಾತವಾಗುತ್ತದೆ. ಕಲ್ಲು ಸಿಡಿಸುವಾಗ ಮಕ್ಕಳು ಭಯದಿಂದ ಪೋಷಕರನ್ನು ಅಪ್ಪಿ ಮಲಗುತ್ತವೆ. ಕಲ್ಲು ಗಣಿಗಳಿಂದ ನಮ್ಮ ಊರಿನ ಜನರ ನೆಮ್ಮದಿ ಹಾಳಾಗಿದೆ. ಇದು ಎರಡನೇ ಬಳ್ಳಾರಿಯಾಗಿದೆ’ ಎಂದು ಬೇಬಿ ಗ್ರಾಮದ ಪಟೇಲ್‌ ನಿಂಗಪ್ಪ ನೋವು ತೋಡಿಕೊಂಡರು.

‘ದಶಕದಿಂದ ಈ ಅಕ್ರಮ ಗಣಿಗಳ ವಿರುದ್ಧ ಹೋರಾಡುತ್ತಿದ್ದೇನೆ. ನನ್ನದು ಅರಣ್ಯರೋದನ. ನೂರಾರು ಮಕ್ಕಳು ಕಲಿಯುತ್ತಿದ್ದ ಶಾಲೆ ಮುಚ್ಚಿ ಹೋದಾಗ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಚಾರಿತ್ರಿಕ ಬೆಟ್ಟ ಮಾಯವಾಗಿದ್ದು ಇನ್ನೇನು ದೇಗುಲಗಳನ್ನೂ ಒಡೆಯುತ್ತಾರೆ. ಸ್ಫೋಟಕಕ್ಕೆ ಈಗಾಗಲೇ ಮಠದ ಚಾವಣಿ ಹಾರಿ ಹೋಗಿದೆ. ಕಿಟಕಿಗಳು ಮುರಿದಿವೆ. ನೆಲ ಬಿರುಕು ಬಿಟ್ಟಿದೆ’ ಎಂದು ರಾಮಯೋಗೇಶ್ವರ ಮಠದ ಸದಾಶಿವ ಸ್ವಾಮೀಜಿ ಕಣ್ಣು ತುಂಬಿಕೊಂಡರು.

‘2007ರ ನಂತರ ಬೆಟ್ಟದ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಗಣಿ ಯಂತ್ರಗಳು ಸದ್ದು ಮಾಡಿದವು. 2010ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ವಿನಯಕುಮಾರ್‌, ಜಿಲ್ಲಾಧಿಕಾರಿಗೆ ಪತ್ರ ಬರೆದು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಬೇಬಿ ಬೆಟ್ಟ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಾದ್ಯಂತ ಹೋರಾಟ ಆರಂಭಗೊಂಡಿತು. ಆದರೆ, ಇಲ್ಲಿಯವರೆಗೂ ಯಾವ ಗಣಿಯನ್ನೂ ನಿಲ್ಲಿಸಲು ಸಾಧ್ಯವಾಗಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ತಿಳಿಸಿದರು.

ಪ್ರಕರಣ ದಾಖಲು: ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ 2017ರ ಜೂನ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ರವೀಂದ್ರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಈ ಕುರಿತು ಪರಿಶೀಲನೆ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಗಣಿ
ಗಾರಿಕೆ ನಡೆಸುತ್ತಿದ್ದ 18 ಕಂಪೆನಿಗಳ ವಿರುದ್ಧ ₹ 90 ಲಕ್ಷ ದಂಡ ವಿಧಿಸಿದರು. ಅದರಲ್ಲಿ ಸಂಸದ ಪುಟ್ಟರಾಜು ಪಾಲುದಾರರಾಗಿರುವ ಎಸ್‌.ಟಿ.ಜಿ. ಅಸೋಸಿಯೇಟ್ಸ್‌ಗೆ ₹ 41 ಲಕ್ಷ ದಂಡವೂ ಸೇರಿತ್ತು. ನಂತರ ಎಸ್‌.ಟಿ.ಜಿ. ಗಣಿ ಕಂಪೆನಿ ಮಾಲೀಕರು ಸೇರಿ 48 ಮಂದಿಯ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಎಫ್‌.ಐ.ಆರ್‌ ದಾಖಲಾಗಿದೆ.

‘ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಪೊಲೀಸರ ನೆರವಿನೊಂದಿಗೆ ಅಕ್ರಮ ಗಣಿಗಳಿಗೆ ಬೀಗ ಹಾಕಿತ್ತು. ಆದರೆ ಕೆಲವೇ ದಿನಗಳಲ್ಲಿ ಮಾಲೀಕರು ಬೀಗ ಒಡೆದು ಗಣಿಗಾರಿಕೆ ಮುಂದುವರಿಸಿದ್ದಾರೆ. ಇದರ ವಿರುದ್ಧವೂ ದೂರು ದಾಖಲಾಗಿದೆ. ಪರಿಶೀಲನೆ ನಡೆಸಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದ 400 ವ್ಯಕ್ತಿಗಳ ವಿರುದ್ಧವೂ ದೂರು ದಾಖಲಾಗಿದೆ. ಆದರೆ, ಪೊಲೀಸರು ಯಾರನ್ನೂ ಬಂಧಿಸಿಲ್ಲ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ’ ಎಂದು ಕೆ.ಆರ್‌.ರವೀಂದ್ರ ದೂರಿದರು.

‘ಅನುಮತಿ ಹಾಜರುಪಡಿಸದ ಗಣಿ ಮಾಲೀಕರಿಗೆ ದಂಡ ಹಾಕಿದ್ದೇವೆ. ಹೊನಗಾನಹಳ್ಳಿ ಗ್ರಾಮ ಪಂಚಾಯಿತಿಯಿಂದ ಸರ್ಕಾರಕ್ಕೆ ಬರಬೇಕಾಗಿದ್ದ ₹ 30 ಕೋಟಿ ಗಣಿ ರಾಜಧನ ವಸೂಲಿಗಾಗಿ ನೋಟಿಸ್‌ ನೀಡಲಾಗಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ.ಎಂ.ನಾಗಭೂಷಣ್‌ ತಿಳಿಸಿದರು.

ಛಾಯಾಚಿತ್ರ ತೆಗೆಯಲು ಆಕ್ಷೇಪ
ಬೇಬಿಬೆಟ್ಟದ ಗಣಿ ಪ್ರದೇಶದಲ್ಲಿ ಶನಿವಾರ ‘ಪ್ರಜಾವಾಣಿ’ ಛಾಯಾಗ್ರಾಹಕ ಚಿತ್ರ ತೆಗೆಯುತ್ತಿದ್ದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಬೈಕ್‌ನಲ್ಲಿ ಬಂದ 10ಕ್ಕೂ ಹೆಚ್ಚು ಜನರು ‘ಯಾರನ್ನು ಕೇಳಿ ಫೋಟೊ ತೆಗೆಯುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ಛಾಯಾಗ್ರಾಹಕರನ್ನು ಸುತ್ತುವರಿದ ಜನರು ಫೋಟೊ ತೆಗೆಯದಂತೆ ತಾಕೀತು ಮಾಡಿದರು. ನಂತರ ಅವರು ಗಣಿ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸುತ್ತಿರುವಾಗ ಛಾಯಾಗ್ರಾಹಕ ಹಾಗೂ ವರದಿಗಾರ ಬೈಕ್‌ ಏರಿ ಸ್ಥಳದಿಂದ ತೆರಳಿದರು.

ಗಣಿಗಾರಿಕೆಗೆ ನೆರವು: ಸಿ.ಎಂ ವಿರುದ್ಧ ಎಸಿಬಿಗೆ ದೂರು
ಮಂಡ್ಯ: ‘ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಆರ್‌.ರವೀಂದ್ರ ಮಂಗಳವಾರ ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದಾರೆ.

ಬೇಬಿ ಬೆಟ್ಟದ ಅಮೃತ್‌ ಮಹಲ್‌ ಕಾವಲು ಪ್ರದೇಶದ ಸರ್ವೆ ನಂಬರ್‌ 1ರಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿರುವ ಯತೀನ್‌ ಸ್ಟೋನ್‌ ಕ್ರಷರ್‌ ಮಾಲೀಕ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ಎಂ.ನಟರಾಜು ಅವರು ಸಿದ್ದರಾಮಯ್ಯ ಅವರ ದೂರದ ಸಂಬಂಧಿ. ಗಣಿ ಉದ್ಘಾಟನೆಯನ್ನು ಅವರೇ ನೆರವೇರಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ 2014, ಫೆ. 24ರಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಕ್ರಷರ್‌ಗಳಿಗೆ ಕಚ್ಚಾ ಸಾಮಗ್ರಿ ಪೂರೈಸಬೇಕು ಎಂದು ಸೂಚಿಸಿದ್ದರು. ಆ ಮೂಲಕ ಅಕ್ರಮ ಕಲ್ಲು ಗಣಿ ವ್ಯವಹಾರ ನಡೆಸುವವರಿಗೆ ನೆರವು ನೀಡಿದ್ದಾರೆ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರಿನ ಪ್ರತಿಯನ್ನು ಎಸಿಬಿ ಪೊಲೀಸ್‌ ಮಹಾನಿರ್ದೇಶಕರು ಹಾಗೂ ರಾಜ್ಯಪಾಲರಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. ಈಚೆಗೆ 18 ಅನಧಿಕೃತ ಕಲ್ಲು ಗಣಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ₹ 90 ಲಕ್ಷ ದಂಡ ವಿಧಿಸಿತ್ತು. ಅದರಲ್ಲಿ ಬಿ.ಎಂ.ನಟರಾಜು ಗಣಿ ಕೂಡ ಸೇರಿದೆ. ಅವರ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT