ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮನಾಭ ಸ್ವಾಮಿ ದೇಗುಲ ಪ್ರವೇಶಕ್ಕೆ ಯೇಸುದಾಸ್‌ಗೆ ಅನುಮತಿ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ತಿರುವನಂತಪುರ : ಖ್ಯಾತ ಗಾಯಕ ಕೆ.ಜೆ. ಯೇಸುದಾಸ್ ಅವರಿಗೆ ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ದೇಗುಲದ ವ್ಯವಹಾರಗಳನ್ನು ನಿರ್ವಹಿಸಲು ಸುಪ್ರೀಂಕೋರ್ಟ್ ನೇಮಿಸಿರುವ ಆಡಳಿತ ಮಂಡಳಿ ಸದಸ್ಯರು ವಿಶೇಷ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದ್ದಾರೆ.

‘ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಹ ಯೇಸುದಾಸ್ ಅವರ ಮನವಿ ಹಾಗೂ ಘೋಷಣಾ ಪತ್ರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಅವರಿಗೆ ಅಧಿಕೃತವಾಗಿ ಮಾಹಿತಿ ನೀಡಲಾಗುತ್ತದೆ. ಯಾವ ದಿನ ದೇಗುಲಕ್ಕೆ ಭೇಟಿ ನೀಡಬೇಕು ಎಂದು ನಿರ್ಧರಿಸುವುದು ಅವರಿಗೆ ಬಿಟ್ಟ ವಿಚಾರ’ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿ.ರತೀಶನ್ ತಿಳಿಸಿದ್ದಾರೆ.

ದೇಗುಲದ ನಿಯಮದ ಪ್ರಕಾರ, ಹಿಂದು ಧರ್ಮದಲ್ಲಿ ನಂಬಿಕೆ ಇರಿಸಿರುವವರಿಗೆ ಮಾತ್ರ ದೇಗುಲ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

ಮೂಲತಃ ರೋಮನ್ ಕ್ಯಾಥೊಲಿಕ್‌ ಕ್ರೈಸ್ತರಾಗಿರುವ ಯೇಸುದಾಸ್ ಅವರು, ಮನವಿ ಹಾಗೂ ತಾವು ಹಿಂದು ಧರ್ಮದಲ್ಲಿ ನಂಬಿಕೆ ಇರಿಸಿರುವ ಘೋಷಣಾ ಪತ್ರವನ್ನು ಸಹಾಯಕರ ಮೂಲಕ ದೇಗುಲಕ್ಕೆ ತಲುಪಿಸಿದ್ದರು. ಪತ್ರದಲ್ಲಿ ಉಲ್ಲೇಖಿಸದೆ ಇದ್ದರು ಸಹ, ಯೇಸುದಾಸ್ ಅವರು ಸೆಪ್ಟೆಂಬರ್ 30ರ ವಿಜಯದಶಮಿಯಂದು ಪದ್ಮನಾಭ ಸ್ವಾಮಿ ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದಾರೆ ಎಂದು ಸಹಾಯಕ ತಿಳಿಸಿದ್ದರು.

ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹಾಗೂ ಕರ್ನಾಟಕದ ಕೊಲ್ಲೂರಿನಲ್ಲಿರುವ ಮುಕಾಂಬಿಕಾ ದೇಗುಲಕ್ಕೆ ಯೇಸುದಾಸ್ ಅವರು ನಿಯಮಿತವಾಗಿ ಭೇಟಿ ನೀಡುತ್ತಲೇ ಇರುತ್ತಾರೆ.

ತ್ರಿಶೂರ್ ಜಿಲ್ಲೆಯ ಗುರುವಾಯೂರಿನಲ್ಲಿರುವ ಶ್ರೀಕೃಷ್ಣ ದೇಗುಲ ಹಾಗೂ ಕಡಂಪುಳದ ದೇವಿ ದೇಗುಲ ಪ್ರವೇಶಿಸಲು ಯೇಸುದಾಸ್‌ ಅವರಿಗೆ ಈ ಹಿಂದೆ ನಿರಾಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT