ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಹಸ್ತಾಂತರಕ್ಕೆ ಒತ್ತಡ ಬೇಡ

ಕೇಂದ್ರಕ್ಕೆ ವಿದೇಶಿ ಸಂಸ್ಥೆಗಳ ಕೋರಿಕೆ
Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ತಾಂತ್ರಿಕ ಜ್ಞಾನ ಹಸ್ತಾಂತರಿಸುವಂತೆ ಕೇಳುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡಬೇಕು’ ಎಂದು ಭದ್ರತಾ ಪಡೆಗಳಿಗೆ ರಕ್ಷಣಾ ಸಲಕರಣೆ ಪೂರೈಸುವ ಗುತ್ತಿಗೆ ಪಡೆಯಲು ಪ್ರಯತ್ನಿಸುತ್ತಿರುವ ವಿದೇಶಿ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಕೋರಿವೆ. ಯುಎಸ್‌–ಇಂಡಿಯಾ ಬ್ಯುಸಿನೆಸ್‌ ಕೌನ್ಸಿಲ್‌ (ಯುಎಸ್‌ಐಬಿಸಿ) ಎಂಬ ಒತ್ತಡ ಗುಂಪು ಈ ಬಗ್ಗೆ ರಕ್ಷಣಾ ಸಚಿವರಿಗೆ ಪತ್ರ ಬರೆದಿದೆ.

ಭಾರತದ ಸಹಭಾಗಿ ಸಂಸ್ಥೆಗಳ ಜತೆ ಸೇರಿ ಇಲ್ಲಿಯೇ ತಯಾರಿಕೆ ನಡೆಸಲು ಈ ಸಂಸ್ಥೆಗಳು ಮುಂದಾಗಿವೆ. ಆದರೆ ಸ್ಥಳೀಯ ಪಾಲುದಾರರ ಜತೆ ಸೇರಿ ತಯಾರಿಸಿದ ಸಲಕರಣೆಗಳಲ್ಲಿ ದೋಷಗಳು ಕಂಡು ಬಂದರೆ ಅದಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದೂ ಈ ಸಂಸ್ಥೆಗಳು ಬಯಸಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಸೋವಿಯತ್‌ ಒಕ್ಕೂಟದ ಕಾಲದಲ್ಲಿ ಪೂರೈಕೆಯಾದ ಮಿಗ್‌ ಯುದ್ಧ ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪ‍ಡೆದು ಹೊಸ ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತದಲ್ಲಿ ತಯಾರಿಸಿ’ ಯೋಜನೆ ಅಡಿಯಲ್ಲಿ ರಕ್ಷಣಾ ಸಲಕರಣೆಗಳನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ. ರಕ್ಷಣಾ ಸಲಕರಣೆ ತಯಾರಿಕೆ ಉದ್ಯಮ ನೆಲೆಯನ್ನು ರೂಪಿಸುವುದು ಕೇಂದ್ರದ ಉದ್ದೇಶವಾಗಿದೆ. ಅದಕ್ಕಾಗಿ ಸಲಕರಣೆ ಪೂರೈಕೆಗೆ ಆಯ್ಕೆಯಾದ ವಿದೇಶಿ ಸಂಸ್ಥೆಗಳು ಭಾರತದ ಸಹಭಾಗಿ ಸಂಸ್ಥೆಗಳ ಜತೆ ಇಲ್ಲಿಯೇ ತಯಾರಿಕೆ ನಡೆಸಬೇಕು ಎಂಬ ಷರತ್ತನ್ನು ಮುಂದಿಡಲಾಗಿದೆ.

ವಾಯುಪಡೆಗೆ ಯುದ್ಧ ವಿಮಾನ ಪೂರೈಸುವ ಗುತ್ತಿಗೆ ಪಡೆದುಕೊಳ್ಳಲು ಅಮೆರಿಕದ ಲಾಕ್‌ಹೀಡ್‌ ಮಾರ್ಟಿನ್‌ ಮತ್ತು ಬೋಯಿಂಗ್‌ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಒಂದು ಎಂಜಿನ್‌ನ ಕನಿಷ್ಠ ನೂರು ವಿಮಾನ ಪೂರೈಕೆಯ ಗುತ್ತಿಗೆ ದೊರೆತರೆ ಭಾರತದಲ್ಲಿಯೇ ತಯಾರಿಸಲು ಸಿದ್ಧ ಎಂದು ಲಾಕ್‌ಹೀಡ್‌ ಮಾರ್ಟಿನ್‌ ಹೇಳಿದೆ. ಅದಕ್ಕಾಗಿ ಟಾಟಾ ಅಡ್ವಾನ್ಸ್‌ಡ್‌ ಸಿಸ್ಟಮ್ಸ್‌ ಸಂಸ್ಥೆಯನ್ನು ಸ್ಥಳೀಯ ಪಾಲುದಾರನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಇಂತಹ ಸಹಭಾಗಿತ್ವದ ಯೋಜನೆಯಲ್ಲಿ ವಿದೇಶಿ ಸಂಸ್ಥೆಯು ಶೇ 49ರಷ್ಟು ಪಾಲು ಹೊಂದುವುದಕ್ಕೆ ಅವಕಾಶ ಇದೆ.

ಇಂತಹ ಯೋಜನೆಗಳಲ್ಲಿ ತಂತ್ರಜ್ಞಾನ ಹಸ್ತಾಂತರಕ್ಕೆ ಬೇಡಿಕೆ ಇರಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡಬೇಕು. ಜತೆಗೆ ಹೀಗೆ ತಯಾರಿಸಲಾದ ಸಲಕರಣೆಗಳಲ್ಲಿ ಲೋಪಗಳು ಕಂಡು ಬಂದರೆ ಅದಕ್ಕೆ ವಿದೇಶಿ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ರಕ್ಷಣಾ ಸಚಿವರಿಗೆ ಬರೆದ ಪತ್ರದಲ್ಲಿ ಯುಎಸ್‌ಐಬಿಸಿ ಹೇಳಿದೆ. ತಂತ್ರಜ್ಞಾನ ಹಸ್ತಾಂತರಕ್ಕೆ ಸಂಬಂಧಿಸಿ ನೀತಿ ಪತ್ರದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ ಎಂದು 400 ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ಯುಎಸ್‌ಐಬಿಸಿ ಹೇಳಿದೆ.

ತಂತ್ರಜ್ಞಾನ ಹಸ್ತಾಂತರಕ್ಕೆ ಮಹತ್ವ

ದೇಶೀಯವಾದ ರಕ್ಷಣಾ ಸಾಮಗ್ರಿ ತಯಾರಿಕಾ ಕ್ಷೇತ್ರವನ್ನು ರೂಪಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶವಾಗಿರುವ ಭಾರತಕ್ಕೆ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶ ಇದೆ.

ಶಸ್ತ್ರಾಸ್ತ್ರ ಪೂರೈಕೆಗೆ ಸಂಬಂಧಿಸಿ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ತಂತ್ರಜ್ಞಾನ ಹಸ್ತಾಂತರದ ವಿಚಾರವೇ ಇರಲಿಲ್ಲ. ಹಾಗಾಗಿ ಭಾರತದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳು ವಿದೇಶಗಳಿಂದ ತರಿಸಿದ ಸಲಕರಣೆಗಳ ಜೋಡಣೆಗಷ್ಟೇ ಸೀಮಿತವಾಗಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಗುಣಮಟ್ಟದ ಷರತ್ತು

ಭಾರತದಲ್ಲಿ ತಯಾರಾದ ರಕ್ಷಣಾ ಸಾಧನಗಳ ಗುಣಮಟ್ಟದ ಹೊಣೆಗಾರಿಕೆ ವಿದೇಶಿ ಪೂರೈಕೆದಾರ ಸಂಸ್ಥೆಯದ್ದೂ ಆಗಿದೆ ಎಂಬ ಷರತ್ತಿನ ಬಗ್ಗೆಯೂ ಯುಎಸ್‌ಐಬಿಸಿ ಅತೃಪ್ತಿ ವ್ಯಕ್ತಪಡಿಸಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಒಪ್ಪಂದದಲ್ಲಿ ಇಂತಹ ಬಾಧ್ಯತೆ ಬಹಳ ಮಹತ್ವದ ಅಂಶ ಎಂದು ಅದು ಹೇಳಿದೆ.

‘ತಮ್ಮ ನಿಯಂತ್ರಣದಲ್ಲಿ ಇಲ್ಲದ ವಿಚಾರಗಳಲ್ಲಿ ಆಗಿರುವ ದೋಷಗಳಿಗೆ ವಿದೇಶಿ ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ರಕ್ಷಣಾ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ’ ಎಂದು ಯುಎಸ್‌ಐಬಿಸಿ ತಿಳಿಸಿದೆ.

ಅನನುಭವದ ಕಳವಳ

ಭಾರತದ ಸಂಸ್ಥೆಗಳಿಗೆ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಅನುಭವವೇ ಇಲ್ಲ ಎಂಬುದು ಸಹಭಾಗಿ ಯೋಜನೆಗಳಿಗೆ ಸಂಬಂಧಿಸಿ ಕಳವಳಕಾರಿ ಅಂಶ ಎಂದು ಬೋಯಿಂಗ್‌ ಸಂಸ್ಥೆಯ ಭಾರತ ವಿಭಾಗದ ಅಧ್ಯಕ್ಷ ಪ್ರತ್ಯೂಷ್‌ ಕುಮಾರ್‌ ಇತ್ತೀಚೆಗೆ ಹೇಳಿದ್ದರು.

ಹಿಂದುಸ್ಥಾನ್‌ ಎರೊನಾಟಿಕ್ಸ್‌ ಲಿ.ಗೆ ಮಾತ್ರ ಜಂಟಿ ಸಹಭಾಗಿತ್ವದಲ್ಲಿ ವಿಮಾನ ತಯಾರಿಸಿದ ಅನುಭವ ಇದೆ. ಭಾರತದ ಖಾಸಗಿ ಸಂಸ್ಥೆಗಳು ವಿಮಾನದ ಬಿಡಿಭಾಗವನ್ನು ಕೂಡ ಈವರೆಗೆ ತಯಾರಿಸಿಲ್ಲ. ಅನುಭವವೇ ಇಲ್ಲದ ಸಂಸ್ಥೆಗಳು ತಂತ್ರಜ್ಞಾನ ಹಸ್ತಾಂತರ ಆಧಾರದಲ್ಲಿ ವಿಮಾನ ತಯಾರಿಕೆಗೆ ಇಳಿದಿರುವ ನಿದರ್ಶನ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎಂದು ಪ್ರತ್ಯೂಷ್‌ ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT