ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯ ಬಸವ ಸೇನೆ’ ಅಧ್ಯಕ್ಷರಾಗಿ ಸಚಿವ ವಿನಯ ಕುಲಕರ್ಣಿ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರನ್ನು ‘ರಾಷ್ಟ್ರೀಯ ಬಸವ ಸೇನೆ’ ಅಧ್ಯಕ್ಷರನ್ನಾಗಿ ಘೋಷಿಸಲು ಸಿದ್ಧತೆ ನಡೆದಿದೆ.

ಇದೇ 24ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಲಿಂಗಾಯತ ರ‍್ಯಾಲಿಯಲ್ಲಿ ಈ ಕುರಿತ ಘೋಷಣೆ ಮಾಡುವಂತೆ ಶಾಸಕ ಬಿ.ಆರ್.ಪಾಟೀಲ ಲಿಂಗಾಯತ ರ‍್ಯಾಲಿ ಹೋರಾಟ ಸಮಿತಿಯ ಪ್ರಮುಖರಿಗೆ ಪ್ರಸ್ತಾವ ಸಲ್ಲಿಸಲಿದ್ದಾರೆ.

ಸೇನೆಯ ರೂಪುರೇಷೆಗಳ ಬಗ್ಗೆ ಬುಧವಾರ (ಸೆ.20) ಕಲಬುರ್ಗಿಯಲ್ಲಿ ನಡೆಯಲಿರುವ ಲಿಂಗಾಯತ ರ‍್ಯಾಲಿಯ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಗುವುದು. ಸಚಿವರಾದ ಎಂ.ಬಿ.ಪಾಟೀಲ, ಡಾ.ಶರಣ ಪ್ರಕಾಶ ಪಾಟೀಲ, ವಿನಯ ಕುಲಕರ್ಣಿ, ಶಾಸಕ ಬಿ.ಆರ್. ಪಾಟೀಲ, ಕೂಡಲಸಂಗಮ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಸಾರಂಗಧರ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರದ ಅಹಮದ್‌ಪುರದಲ್ಲಿರುವ ಶತಾಯುಷಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಲಬುರ್ಗಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ವಿನಯ ಕುಲಕರ್ಣಿ ಅವರ ಹೆಸರನ್ನು 24ರ ರ‍್ಯಾಲಿಯಲ್ಲಿ ಎಂ.ಬಿ.ಪಾಟೀಲ ಘೋಷಿಸಲಿದ್ದಾರೆ.

ವಲಯವಾರು ಸಂಚಾಲಕರು: ‘ವಿನಯ ಕುಲಕರ್ಣಿ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಕ್ಷ ಸ್ಥಾನ ನಿರ್ವಹಿಸಲಿದ್ದಾರೆ. ರಾಜ್ಯದ ಸಂಘಟನೆಯನ್ನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಎಂಬ ಐದು ವಲಯಗಳಾಗಿ ವಿಂಗಡಿಸಲಾಗುವುದು. ಅವುಗಳಿಗೆ ಪ್ರತ್ಯೇಕ ಸಂಚಾಲಕರನ್ನು ನೇಮಕ ಮಾಡಲಾಗುವುದು’ ಎಂದು ಶಾಸಕ ಬಿ.ಆರ್‌. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಾದ್ಯಂತ ಪ್ರತಿ ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಸೇನೆಯ ಘಟಕಗಳನ್ನು ರಚಿಸಲಾಗುವುದು. ಸಂಘಟನೆಗೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಳ್ಳುವ 10 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗುವುದು. ಈ ಮೂಲಕ ಸ್ವತಂತ್ರ ಧರ್ಮದ ಮಾನ್ಯತೆಗೆ ಚಳವಳಿಯ ಚೌಕಟ್ಟು, ಸಾಂಸ್ಥಿಕ ಸ್ವರೂಪ ನೀಡಲಾಗುವುದು’ ಎಂದರು.

ಮಾತೆ ಮಹಾದೇವಿ ಬೆಂಬಲ: ರಾಷ್ಟ್ರೀಯ ಬಸವ ಸೇನೆಗೆ ರಾಷ್ಟ್ರೀಯ ಬಸವ ದಳ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ರಾಷ್ಟ್ರೀಯ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT