ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35ಕ್ಕೂ ಹೆಚ್ಚು ಶಾಸಕರಿಗೆ ‘ಕೈ’ ತಪ್ಪಲಿದೆ ಟಿಕೆಟ್‌?

ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ
Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಿಯಾಗಿ ಕೆಲಸ ಮಾಡದೆ ತಮ್ಮ ಕ್ಷೇತ್ರಗಳನ್ನು ಕಡೆಗಣಿಸಿರುವ 35ಕ್ಕೂ ಹೆಚ್ಚು ಶಾಸಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡದಿರಲು ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರ ಚಿಂತನೆ ನಡೆಸಿದೆ.

‘ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆ ಸಂದರ್ಭದಲ್ಲಿ ಪಕ್ಷದ ಸ್ಥಿತಿಗತಿ ಜೊತೆಗೆ ಶಾಸಕರ ಸಾಧನೆಯನ್ನೂ ಅಳೆಯಲಾಗಿದ್ದು, ಹಲವು ಶಾಸಕರ ಸಾಧನೆ ನಿರಾಶಾದಾಯಕ ಎಂಬುದು ಗಮನಕ್ಕೆ ಬಂದಿದೆ. ಪಕ್ಷದ ವರಿಷ್ಠರಿಗೆ ಈ ವರದಿ ಗೋಪ್ಯವಾಗಿ ಸಲ್ಲಿಕೆಯಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಸಿ– ಫೋರ್‌’ ಸಮೀಕ್ಷೆ ಮತ್ತು ಗುಪ್ತಚರ ಮಾಹಿತಿ ಪ್ರಕಾರ ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ. ಆದರೆ, ಅಭಿವೃದ್ಧಿ ಕೆಲಸ ಮಾಡದ ಶಾಸಕರ ಬಗ್ಗೆ ಸ್ಥಳೀಯವಾಗಿ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದರಿಂದ ಅಂಥವರಿಗೆ ಮತ್ತೆ ಟಿಕೆಟ್‌ ಕೊಡುವ ಬದಲು ಹೊಸ ಮುಖಗಳಿಗೆ ಮಣೆ ಹಾಕಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ’ ಎಂದೂ ಮೂಲಗಳು ಹೇಳಿವೆ.

‘ಎಲೆಕ್ಷನ್‌ ಟಿಕೆಟ್ ಹೆಲಿಕಾಪ್ಟರ್‌ನಲ್ಲಿ ಬರಲ್ಲ, ಪೋಸ್ಟರ್‌ನಲ್ಲೂ ಬರಲ್ಲ. ಜನರೊಂದಿಗೆ ಗುರುತಿಸಿಕೊಂಡ ಮುಖಂಡರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ. ಎಷ್ಟೇ ಹಿರಿಯರಾಗಿದ್ದರೂ ಜನರ ನಡುವೆ ಇಲ್ಲದಿದ್ದರೆ ಟಿಕೆಟ್ ಇಲ್ಲ ಎಂದು ಈಗಾಗಲೇ ಹೇಳಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಆ ಮೂಲಕ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಮಾನದಂಡವೇನು ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಟಿಕೆಟ್‌ ಖಚಿತ ಎಂಬ ಕೆಲವು ಹಾಲಿ ಶಾಸಕರ ನಿರೀಕ್ಷೆ ಹುಸಿಯಾಗಲಿದೆ’ ಎಂದೂ ಮೂಲಗಳು ಖಚಿತಪಡಿಸಿವೆ.

ಆಕಾಂಕ್ಷಿಗಳ ವಯಸ್ಸು ಮತ್ತು ಆರೋಗ್ಯ ಸ್ಥಿತಿಯೂ ಟಿಕೆಟ್‌ ಹಂಚಿಕೆ ವೇಳೆ ಪರಿಗಣನೆಗೆ ಬರಲಿದೆ. ಜೊತೆಗೆ, ಈ ಬಾರಿ ಜಾತಿ ಲೆಕ್ಕಾಚಾರವೂ ಆದ್ಯತೆ ಪಡೆಯಲಿದೆ. ಈಗಾಗಲೇ ಜಾತಿ ಗಣತಿ ವರದಿ ಸಿದ್ಧವಾಗಿದ್ದು, ಅದರಿಂದ ಕ್ಷೇತ್ರಾವಾರು ಜಾತಿ ಲೆಕ್ಕ ಸಿಗಲಿದೆ. ಯಾವ ಜಾತಿಯ ಪ್ರಭಾವಿ ನಾಯಕರಿಗೆ ಟಿಕೆಟ್‌ ನೀಡಿದರೆ ಗೆಲ್ಲುವ ಅವಕಾಶ ಹೆಚ್ಚು ಎಂಬುದನ್ನೂ ನೋಡಿಕೊಂಡು ಅಭ್ಯರ್ಥಿಯನ್ನು ಗುರುತಿಸಲು ಉದ್ದೇಶಿಸಲಾಗಿದೆ ಎಂದೂ ಗೊತ್ತಾಗಿದೆ.

‘ಜನ ನಾಯಕರಿಗಷ್ಟೇ ಈ ಬಾರಿ ಕಾಂಗ್ರೆಸ್ ಟಿಕೆಟ್. ಜನರ ಮಧ್ಯೆ ಇಲ್ಲದ ಶಾಸಕರು ಯಾರು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಪಟ್ಟಿ ಸಿದ್ಧಪಡಿಸಿ, ವರಿಷ್ಠರ ಗಮನಕ್ಕೂ ತಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಈಗಾಗಲೇ ಈ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಬೇರೆ ಪಕ್ಷಗಳಿಂದ ಬಂದು ಟಿಕೆಟ್ ಕೇಳಿದವರಿಗೂ ಟಿಕೆಟ್ ಸಿಗುವುದು ಕಷ್ಟ’ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಹೇಳಿದರು.

ಸಿದ್ದರಾಮಯ್ಯ ಮೇಲುಗೈ?

ಕಾಂಗ್ರೆಸ್ ಟಿಕೆಟ್ ಪಡೆಯಲು ಅನೇಕರು ಕಸರತ್ತು ಆರಂಭಿಸಿರುವ ಮಧ್ಯೆ, ಟಿಕೆಟ್‌ ಹಂಚಿಕೆಯಲ್ಲಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲುಗೈ ಸಾಧಿಸುವ ಸಾಧ್ಯತೆಯೇ ಹೆಚ್ಚು ಎಂದೂ ಪಕ್ಷದ ಮೂಲಗಳು ಹೇಳುತ್ತಿವೆ.

‘ಸಿದ್ದರಾಮಯ್ಯ ಈ ರಾಜ್ಯದ ಧ್ವನಿಯಾಗಿದ್ದಾರೆ. ಎಲ್ಲ ಸಮುದಾಯಗಳ ಬಡವರ ಪರ ಸರ್ಕಾರ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಹೈಕಮಾಂಡ್‌ ಹೊಂದಿದೆ. ಹೀಗಾಗಿ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತಿಗೆ ಹೆಚ್ಚು ಮಹತ್ವ ಸಿಗಬಹುದು’ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಎರಡಕ್ಕೂ ಹೆಚ್ಚು ಬಾರಿ ಸೋಲು ಕಂಡವರಿಗೆ, ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಸೋತವರಿಗೆ ಹಾಗೂ ಕ್ರಿಮಿನಲ್ ಹಿನ್ನೆಲೆ, ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿರುವವರಿಗೆ ಟಿಕೆಟ್‌ ದೊರೆಯುವ ಅನುಮಾನವಿದೆ ಎನ್ನಲಾಗಿದೆ.

ಬಂಡಾಯದ ಭೀತಿ

ಜೆಡಿಎಸ್ ಭಿನ್ನಮತೀಯ ಏಳು ಶಾಸಕರು ಈಗಾಗಲೇ ಟಿಕೆಟ್‌ಗಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಕಾಂಗ್ರೆಸ್ಸಿಗೆ ಬೇರೆ ಪಕ್ಷಗಳಿಂದ ವಲಸೆ ಬರುವುದನ್ನು ಸ್ವಾಗತಿಸಿರುವ ಸಿದ್ದರಾಮಯ್ಯ, ವಲಸೆ ಬಂದವರಿಗೆಲ್ಲ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿರುವುದು ಕುತೂಹಲ ಮೂಡಿಸಿದೆ.

ಈ ಮಧ್ಯೆ, ಈ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವ ಭೀತಿಯೂ ಕಾಂಗ್ರೆಸ್‌ಗಿದೆ. ಜೆಡಿಎಸ್‌ ಬಂಡಾಯ ಶಾಸಕರು ರಾಹುಲ್‌ ಅವರನ್ನು ಈಗಾಗಲೇ ಭೇಟಿ ಮಾಡಿದ್ದು ಟಿಕೆಟ್‌ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.

ಮುಖ್ಯಾಂಶಗಳು

* ಆಂತರಿಕ ಸಮೀಕ್ಷೆಯಲ್ಲಿ ಪಕ್ಷದ ಸ್ಥಿತಿಗತಿ ಅಧ್ಯಯನ

* ಕೆಲಸ ಮಾಡದವರಿಗೆ ಟಿಕೆಟ್‌ ನೀಡಲು ವಿರೋಧ

* ಕಾಂಗ್ರೆಸ್‌ ಹೈಕಮಾಂಡ್‌ಗೆ ಗೋಪ್ಯ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT