ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಕುಸಿತ ವಾಸ್ತವ: ಎಸ್‌ಬಿಐ ಸಂಶೋಧನಾ ವರದಿ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಆರ್ಥಿಕ ಚಟುವಟಿಕೆಗಳು 2016ರ ಸೆಪ್ಟೆಂಬರ್‌ ತಿಂಗಳಿನಿಂದಲೇ ಕುಸಿತದ ಹಾದಿಯಲ್ಲಿರುವುದು ನಿಜ. ಇದೊಂದು ತಾಂತ್ರಿಕ ವಿದ್ಯಮಾನವಾಗಿರದೆ ಕಟು ವಾಸ್ತವ ಸಂಗತಿಯಾಗಿದೆ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ಅಭಿಪ್ರಾಯ
ಪಟ್ಟಿದೆ.

ನಿರಂತರವಾಗಿರುವ ಈ ಆರ್ಥಿಕ ಕುಸಿತ ತಡೆಯಲು ಮತ್ತು ವೃದ್ಧಿ ದರ (ಜಿಡಿಪಿ) ಹೆಚ್ಚಿಸಲು ಕೇಂದ್ರ ಸರ್ಕಾರವು ಮೂಲಸೌಕರ್ಯ ಸೃಷ್ಟಿಯ ವಿವಿಧ ಯೋಜನೆಗಳ ಮೇಲೆ ಮಾಡುವ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು. ವಿತ್ತೀಯ ಕೊರತೆ ಹೆಚ್ಚಿದರೂ ಚಿಂತೆ ಇಲ್ಲ, ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಜ್ಞಾಪೂರ್ವಕವಾಗಿ ಹೆಚ್ಚು ಹಣ ಖರ್ಚು ಮಾಡಬೇಕು ಎಂದೂ ಸಲಹೆ ನೀಡಲಾಗಿದೆ.

ಈ ಹಿಂದೆ ಇಂತಹ ಕ್ರಮಗಳನ್ನು ಕೈಗೊಂಡಿದ್ದರೆ ಮೌಲ್ಯಮಾಪನಾ ಸಂಸ್ಥೆಗಳು ಅದನ್ನು ‘ವಿತ್ತೀಯ ಅಪವ್ಯಯ’ ಎಂದು ಬಣ್ಣಿಸುತ್ತಿದ್ದವು. ಜತೆಗೆ, ದೇಶಿ ಆರ್ಥಿಕತೆಯ ಮೌಲ್ಯಮಾಪನದಲ್ಲಿ ಶ್ರೇಣಿಯನ್ನು ತಗ್ಗಿಸುತ್ತಿದ್ದವು.

2008ರ ಜಾಗತಿಕ ಸಾಲ ಬಿಕ್ಕಟ್ಟಿನ ನಂತರದ ವರ್ಷಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಏರಿಕೆ ಕಂಡು ಬಂದಿದೆ. ಸದ್ಯಕ್ಕೆ ಆರ್ಥಿಕ ಬೆಳವಣಿಗೆ ಸಾಧಿಸಲು ಅರ್ಥ ವ್ಯವಸ್ಥೆಗೆ ತುರ್ತಾಗಿ ವಿತ್ತೀಯ ಉತ್ತೇಜನೆ ನೀಡಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

‘2016ರ ಸೆಪ್ಟೆಂಬರ್‌ನಿಂದಲೇ ದೇಶಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ದರದ ಕುಸಿತವು ಗರಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. ತಾಂತ್ರಿಕವಾಗಿ ಇದು ಅಲ್ಪಾವಧಿಯದಲ್ಲ ಮತ್ತು ತಾತ್ಕಾಲಿಕವೂ ಅಲ್ಲ ಎಂದು ವರದಿಯು ತಿಳಿಸಿದೆ. ಸತತ ಆರನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ವೃದ್ಧಿ ದರ ಕುಸಿತ ದಾಖಲಿಸಿತ್ತು.

‘ಈ ಹಣಕಾಸು ವರ್ಷದ  ಜೂನ್‌ ತಿಂಗಳಿಗೆ ಕೊನೆಗೊಂಡಿದ್ದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ(ಶೇ 5.7) ಕುಸಿದಿರುವುದಕ್ಕೆ ತಾಂತ್ರಿಕ ಕಾರಣಗಳಿವೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರು ಇತ್ತೀಚೆಗೆ ಹೇಳಿದ್ದರು. ಆದರೆ, ತಾಂತ್ರಿಕ ಕಾರಣಗಳ ಬಗ್ಗೆ ಅವರು ಹೆಚ್ಚು ವಿವರ ನೀಡಿರಲಿಲ್ಲ.

‘ಯು‍ಪಿಎ’ ಅಧಿಕಾರಾವಧಿಯಲ್ಲಿ 2014ರ ಹಣಕಾಸು ವರ್ಷದಲ್ಲಿ ಜಿಡಿಪಿ ವೃದ್ಧಿ ದರ ಶೇ 4.7ಕ್ಕೆ ಕುಸಿದಿತ್ತು. ನಂತರದ ದಿನಗಳಲ್ಲಿ ಶೇ 7.1ರವರೆಗೆ ಏರಿಕೆ ಕಂಡಿತ್ತು’  ಎಂದೂ ಷಾ ಹೇಳಿದ್ದರು.

ಅ. 6ಕ್ಕೇ ಜಿಎಸ್‌ಟಿ ಸಭೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 22ನೇ ಸಭೆಯು ಅಕ್ಟೋಬರ್‌ 24ರ ಬದಲಿಗೆ ಅ. 6ರಂದೇ ಸಭೆ ಸೇರಲಿದೆ. ಹೊಸ ತೆರಿಗೆ ವ್ಯವಸ್ಥೆಯಿಂದಾಗಿ ತೆರಿಗೆ ಮರುಪಾವತಿಯಲ್ಲಿ ಸಮಸ್ಯೆಗಳಾಗಿವೆ ಇದರಿಂದ ರಫ್ತು ಕ್ಷೇತ್ರ ಸೇರಿ ಎಲ್ಲ ಉದ್ಯಮಗಳಲ್ಲಿ ಬಿಕ್ಕಟ್ಟಿನಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಬೇಗನೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ಪ್ರಧಾನಿ ಸಭೆ ಮುಂದಕ್ಕೆ

ದೇಶದ ಆರ್ಥಿಕ ಪರಿಸ್ಥಿತಿಯ ಕುರಿತಾಗಿ ಪರಾಮರ್ಶೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವ ಅರುಣ್‌ ಜೇಟ್ಲಿ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಮಂಗಳವಾರ ನಡೆಸಬೇಕಾಗಿದ್ದ ಸಭೆಯನ್ನು ಮುಂದೂಡಲಾಗಿದೆ.

ಕೆಲವು ದಿನಗಳವರೆಗೆ ಸಭೆಯನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಧಿಕಾರಿಗಳ ಜತೆ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.

ಆರ್ಥಿಕ ಪರಿಸ್ಥಿತಿ: ಜೇಟ್ಲಿ ಪರಾಮರ್ಶೆ  

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮಂಗಳವಾರ ದೇಶದ ರಫ್ತು ವಲಯದ ಚಿತ್ರಣ, ಮೂಲಸೌಕರ್ಯಕ್ಕೆ ಮಾಡಲಾಗುತ್ತಿರುವ ವೆಚ್ಚ ಸೇರಿದಂತೆ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪರಾಮರ್ಶೆ ನಡೆಸಿದರು.

ಕುಂಠಿತಗೊಂಡಿರುವ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವುದಕ್ಕಾಗಿ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು, ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಇದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಅವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರೀಟಾ ಟಿಯೋಟಿಯಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಮತ್ತು ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.

ಅರ್ಥವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದ ನೀಲನಕ್ಷೆಯನ್ನು ಅಂತಿಮಗೊಳಿಸಿದ ನಂತರ, ಜೇಟ್ಲಿ ಹಾಗೂ ಹಣಕಾಸು ಸಚಿವಾಲಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಇದರ ಬಗ್ಗೆ ವಿವರಣೆ ನೀಡಲಿದ್ದಾರೆ. ಅಲ್ಲದೇ, ದೇಶದ ಆರ್ಥಿಕ ಪರಿಸ್ಥಿತಿಗೆ ಚೈತನ್ಯ ನೀಡಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

ಮುಖ್ಯಾಂಶಗಳು

* ಸತತ 6ನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಕುಸಿತ

* ಜಿಡಿಪಿ ಕುಂಠಿತ ತಾತ್ಕಾಲಿಕವಲ್ಲ

* ಜಿಡಿಪಿ ಬೆಳವಣಿಗೆಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುವುದು ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT