ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿನ ಮಾಡುವವರಿಂದಲೇ ದಂಡ ವಸೂಲಿ ಮಾಡಲು ಸಲಹೆ

Last Updated 19 ಸೆಪ್ಟೆಂಬರ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ವಿಪರೀತ ಮಲಿನಗೊಂಡಿರುವ ವೃಷಭಾವತಿ ಕಣಿವೆಯನ್ನು ಸ್ವಚ್ಛಗೊಳಿಸಲು, ‘ಮಲಿನಗೊಳಿಸುವವರೇ ದಂಡ ತೆರಬೇಕು’ ಎಂಬ 1974ರ ಜಲ ಕಾಯ್ದೆಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ವಿಜ್ಞಾನಿಗಳು ಮತ್ತು ನದಿ ಸಂರಕ್ಷಣಾ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೈಗಾರಿಕೆಗಳಿಂದ ಈ ಕಣಿವೆಗೆ ಯಾವುದೇ ತ್ಯಾಜ್ಯನೀರು ಸೇರ್ಪಡೆ ಆಗದಂತೆಯೂ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪರಿಸರ ವಿಜ್ಞಾನ ಕೇಂದ್ರವು ವೃಷಭಾವತಿ ಕಣಿವೆಯ ಕೆರೆಗಳ ಪುನರುಜ್ಜೀವನದ ಕುರಿತು ನಡೆಸಿರುವ ಅಧ್ಯಯನದ ವರದಿಯು ಕಣಿವೆಯ ಶೋಚನೀಯ ಪರಿಸ್ಥಿತಿಗೆ ಹಾಗೂ  ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

ವಿಜ್ಞಾನಿ ಪ್ರೊ.ಟಿ.ವಿ. ರಾಮಚಂದ್ರ, ‘ಕೈಗಾರಿಕೆಗಳ ತ್ಯಾಜ್ಯವು ಈ ಕಣಿವೆಯ ಪಾಲಿಕೆ ದೊಡ್ಡ ಕಂಟಕ. ರಾಜಕಾಲುವೆಗಳನ್ನು ಅಲ್ಲಲ್ಲಿ ಕಾಂಕ್ರಿಟೀಕರಣಗೊಳಿಸಿದ ಕಾರಣ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಇದನ್ನು ಅನೇಕ ಕಡೆ ಕೈಗಾರಿಕೆ ಮತ್ತು ವಸತಿ ಉದ್ದೇಶಕ್ಕಾಗಿ ಒತ್ತುವರಿ ಮಾಡಲಾಗಿದೆ. ಆದರೂ, ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸಿದೆ’ ಎಂದು ದೂರಿದರು.

‘ಕಣಿವೆಯ ಇಕ್ಕೆಲಗಳಲ್ಲಿ 50 ಮೀಟರ್ ಮೀಸಲು ಪ್ರದೇಶ ಹೊಂದಿರುವುದು ಕಡ್ಡಾಯ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಮಾಡಿದೆ. ಆದರೆ, ಪಾಲಿಕೆಯ 97 ವಾರ್ಡ್‌ಗಳಲ್ಲಿ 165 ಚ.ಕಿ.ಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಹರಡಿರುವ ಈ ಕಣಿವೆಯಲ್ಲಿ ಎಲ್ಲೂ ಈ ಆದೇಶ ಪಾಲನೆಯಾಗುತ್ತಿಲ್ಲ. ಕಾಲುವೆಗೆ ಕಸ ಸುರಿದಿದ್ದರಿಂದ, ಒತ್ತುವರಿಯಿಂದ ಹಾಗೂ ಅಲ್ಲಲ್ಲಿ ಕಸ ಕಟ್ಟಿಕೊಂಡಿದ್ದರಿಂದಾಗಿ ಇದೇ 10ರಂದು ಮೈಸೂರು ರಸ್ತೆ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು’ ಎಂದು ಅವರು ವಿವರಿಸಿದರು.

1970ರಲ್ಲಿ ಕಣಿವೆ ವ್ಯಾಪ್ತಿಯಲ್ಲಿ 70 ಕೆರೆಗಳಿದ್ದವು. ಈಗ 35 ಕೆರೆಗಳಷ್ಟೇ ಉಳಿದಿವೆ. ಇನ್ನುಳಿದ ಕೆರೆಗಳೂ ಒತ್ತುವರಿ ಸಮಸ್ಯೆ ಎದುರಿಸುತ್ತಿವೆ. 54 ಎಕರೆ 14 ಗುಂಟೆ ವಿಸ್ತೀರ್ಣದ ಹೊಸಕೆರೆಯ 10 ಎಕರೆ 11 ಗುಂಟೆ ಒತ್ತುವರಿಯಾಗಿದೆ. ಹಲಗೆವಡೇರಹಳ್ಳಿ ಕೆರೆಯ 7 ಎಕರೆ 33 ಗುಂಟೆ ಭೂಗಳ್ಳರ ಪಾಲಾಗಿದೆ ಎಂದು ವರದಿ ಬೆಳಕು ಚೆಲ್ಲುತ್ತದೆ.

ದಿನವೊಂದಕ್ಕೆ 49 ಕೋಟಿ ಲೀಟರ್‌ ಶುದ್ಧೀಕರಣ ಸಾಮರ್ಥ್ಯ ಹೊಂದಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ (ಎಸ್‌.ಟಿ.ಪಿ) ಕೇವಲ 26.8 ಕೋಟಿ ಲೀಟರ್ ನೀರು ಸಂಸ್ಕರಣೆಯಾಗುತ್ತಿದೆ ಎಂದು ವರದಿ ಹೇಳುತ್ತದೆ. ಒಂದೇ ಕಡೆ ಎಸ್‌.ಟಿ.ಪಿ. ಸ್ಥಾಪಿಸುವ ಬದಲು ಜಲಾನಯನ ಪ್ರದೇಶದ ಬೇರೆ ಬೇರೆ ಕಡೆ ನಿರ್ಮಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಪಾಲನೆ ಆಗುತ್ತಿಲ್ಲ ನಿರ್ದೇಶನ
‘ಎಲ್ಲ ಕಾರ್ಖಾನೆಗಳು ಎಸ್‌.ಟಿ.ಪಿ ಅಳವಡಿಕೊಳ್ಳಬೇಕು, ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ಕಣಿವೆಗೆ ಬಿಡಬಾರದು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪದೇ ಪದೇ ನಿರ್ದೇಶನ ನೀಡಿದೆ. ಆದರೆ, ವಾಸ್ತವ ಬೇರೆಯೇ ಇದೆ.

ಒಳನಾಡಿನ ಮೇಲ್ಮೈ ನೀರಿನ ಗುಣಮಟ್ಟದ ವರ್ಗೀಕರಣದ ಪ್ರಕಾರ ವೃಷಭಾವತಿ ಕಣಿವೆ ಮತ್ತು ಅದಕ್ಕೆ ಸಂಬಂಧಿಸಿದ ಕೆರೆಗಳು ಡಿ ಮತ್ತು ಇ ದರ್ಜೆಯವು. ಡಿ– ದರ್ಜೆಯ ಜಲಮೂಲದ ನೀರು ಮೀನು ಕೃಷಿಗೆ ಮತ್ತು ವನ್ಯ ಜೀವಿಗಳ ಸಂತಾನೋತ್ಪತ್ತಿಗೆ ಸೂಕ್ತ. ಇ ದರ್ಜೆಯ ಕೆರೆ ನೀರು ಕೈಗಾರಿಕೆಗಳ ಉಪಕರಣಗಳನ್ನು ತಣ್ಣಗೆ ಮಾಡಲು, ನೀರಾವರಿಗೆ ಮತ್ತು ನಿಯಂತ್ರಿತ ತ್ಯಾಜ್ಯ ವಿಲೇವಾರಿಗೆ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT