ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ನಿಯಂತ್ರಣ: ನೆರವಾಗಲಿದೆ ಜಿಐಎಸ್‌ ತಂತ್ರಜ್ಞಾನ

Last Updated 19 ಸೆಪ್ಟೆಂಬರ್ 2017, 20:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಪದೇ ಪದೇ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್‌) ಬಳಸಿ ಪ್ರವಾಹದ ಹಾನಿಯನ್ನು ಕಡಿಮೆಗೊಳಿಸಲು ಸಾಧ್ಯವೇ? ಹೌದು ಎನ್ನುತ್ತಾರೆ ಭೌಗೋಳಿಕ ತಂತ್ರಜ್ಞಾನ ಕ್ಷೇತ್ರದ ತಜ್ಞರು.

‘ಪ್ರವಾಹದಿಂದ ಉಂಟಾಗುವ ಹಾನಿಯ ತೀವ್ರತೆ ಕಡಿಮೆ ಮಾಡಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಐಎಸ್‌ ಪ್ರಯೋಜನಕಾರಿ’ ಎನ್ನುತ್ತಾರೆ ‘ವಿಝ್‍ ಎಕ್ಸ್‌ಪರ್ಟ್ಸ್‌’ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಭನಿರಾಮ್ಕ.

‘ಜನಸಂಖ್ಯಾ ಸಾಂದ್ರತೆ, ಮಳೆಯ ಮಾದರಿ, ನಗರ ಮೂಲಸೌಕರ್ಯದ ಸ್ಥಿತಿಗತಿ, ಒಳಚರಂಡಿ ವ್ಯವಸ್ಥೆಯ ವಿವರಗಳನ್ನು ಜಿಐಎಸ್ ಮೂಲಕ ಪಡೆಯಬಹುದು. ನಗರದ ಅಲ್ಲಲ್ಲಿ ಸೆನ್ಸರ್‌ಗಳನ್ನು ಅಳವಡಿಸುವ ಮೂಲಕ ಮಳೆ ನೀರಿನ ಒಳಹರಿವು ಹಾಗೂ ಹೊರಹರಿವು ಎಷ್ಟಿದೆ ಎಂಬ ಮಾಹಿತಿಗಳನ್ನು ಪಡೆಯಬಹುದು. ಇವುಗಳನ್ನು ಬಳಸಿ ಪ್ರವಾಹದ ಸಂದರ್ಭದಲ್ಲಿ ಉಂಟಾಗುವ ಸಂಭಾವ್ಯ ಪರಿಸ್ಥಿತಿಯ ನಿಖರ ಚಿತ್ರಣವನ್ನು ಕಲ್ಪಿಸಿಕೊಳ್ಳಬಹುದು. ಈ ಮಾಹಿತಿ ಬಳಸಿ ನಗರಗಳಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಸಂಭಾವ್ಯ ತೊಂದರೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದು’ ಎಂದು ಅವರು ವಿವರಿಸಿದರು.

ಪ್ರವಾಹ ನಿಯಂತ್ರಣಕ್ಕೆ ನೆರವಾಗುವಂತಹ ‘ಜಿಯೊಆರ್ಬಿಸ್‌’ ಎಂಬ ತಂತ್ರಾಂಶವನ್ನು ‘ವಿಝ್‌ ಎಕ್ಸ್‌ಪರ್ಟ್ಸ್‌’ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ಬೇರೆ ಬೇರೆ ಮೂಲಗಳಿಂದ ಪಡೆದ ಮಾಹಿತಿಯನ್ನು ಬಳಸಿಕೊಂಡು ಪ್ರವಾಹ ಪರಿಸ್ಥಿತಿಯ ಸಿಮುಲೇಷನ್‌ಗಳನ್ನು ರೂಪಿಸುತ್ತದೆ.

ತೆಲಂಗಾಣದ ಶಡ್ನಗರದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್‌ ಸೆಂಟರ್‌ನಲ್ಲಿ 3ಡಿ ವಿಷುವಲೈಜೇಷನ್‌ ಸೌಲಭ್ಯವನ್ನು ಹೊಂದಿರುವ ಸಂಸ್ಥೆಯು ನೈಸರ್ಗಿಕ ವಿಕೋಪ ನಿಭಾಯಿಸಲು ಹಲವು ರಾಜ್ಯ ಸರ್ಕಾರಗಳಿಗೆ ನೆರವಾಗುತ್ತಿದೆ. ಚೆನ್ನೈನಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಪ್ರವಾಹ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ.

’ಚರಂಡಿ ದತ್ತಾಂಶ ಮತ್ತು ಮುಳುಗಡೆ ಆಗಬಹುದಾದ ಪ್ರದೇಶಗಳ ಅಂಕಿ–ಅಂಶಗಳನ್ನು ಬಳಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಡಿಜಿಟಲ್ ಎಲಿವೇಶನ್ ಮಾದರಿಯನ್ನು ನಾವು ಸಿದ್ಧಪಡಿಸಿದ್ದೇವೆ. ಚೆನ್ನೈನಲ್ಲಿ ‘3ಡಿ ಜಿಯೋ–ಸ್ಪೇಷಿಯಲ್‌ ವಿಜುವಲೈಜೇಷನ್‌ ಆ್ಯಂಡ್‌ ಡಿಸಿಷನ್‌ ಸಪೋರ್ಟ್‌ ಪ್ಲಾಟ್‍ಫಾರ್ಮ್’ ರೂಪಿಸಲಾಗಿದೆ. ಇದು ಬೇರೆ ಬೇರೆ ಮೂಲಗಳಿಂದ ಬರುವ ಮಾಹಿತಿಗಳನ್ನು ಕಲೆಹಾಕುತ್ತದೆ. ರಿಮೋಟ್‌ ಸೆನ್ಸಿಂಗ್‌ ಮಾಹಿತಿ, ಸೆನ್ಸರ್‌ಗಳಲ್ಲಿ ದಾಖಲಾಗುವ ಮಾಹಿತಿ, ಪ್ರವಾಹದ ಮಾದರಿಗಳ ಮಾಹಿತಿಗಳು ನಿರ್ಧಾರ ತಳೆಯುವ ಘಟಕಕ್ಕೆ ನೆರವಾಗುತ್ತದೆ’ ಎಂದು ಅವರು ವಿವರಿಸಿದರು.

‘ಪ್ರತಿವರ್ಷವೂ ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗುತ್ತಿದೆ. ನೈಸರ್ಗಿಕ ವಿಕೋಪ ತಡೆಗೆ ಆಧುನಿಕ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಕರ್ನಾಟಕ ಸಾಕಷ್ಟು ಪ್ರಗತಿ ಸಾಧಿಸಿದೆ. ರಾಜಧಾನಿಯ ಪ್ರವಾಹ ನಿಯಂತ್ರಣಕ್ಕೆ ನೆರವಾಗಬಲ್ಲ ಜಿಐಎಸ್‌ ಮಾಹಿತಿಯೂ ಲಭ್ಯ ಇದೆ. ಆದರೂ ನಗರದಲ್ಲಿ ಪ್ರವಾಹದಿಂದ ಜನ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಇಂತಹ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿಲ್ಲ’ ಎಂದು ಪ್ರವೀಣ್‌ ಬೇಸರ ವ್ಯಕ್ತಪಡಿಸಿದರು.

‘ಮಾಹಿತಿ ಹಾಗೂ ಅಂಕಿ–ಅಂಶಗಳು ಸರ್ಕಾರಿ ಅಧಿಕಾರಿಗಳ ಬಳಿ ಇವೆ. ಆದರೆ, ಅವುಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳುವಂತಹ ಸಾಧನಗಳು ಮತ್ತು ಅಪ್ಲಿಕೇಶನ್‍ಗಳು ಇಲ್ಲ. ಉದಾಹರಣೆಗೆ, ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಹವಾಮಾನ ಮಾಹಿತಿ, ಮುನ್ಸೂಚನೆ, ಮುನ್ನೆಚ್ಚರಿಕೆ ಮತ್ತು ಪ್ರಕೃತಿ ವಿಕೋಪಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಒದಗಿಸುತ್ತದೆ. ಆದರೆ, ಅದನ್ನು ಕಟ್ಟಕಡೆಯ ವ್ಯಕ್ತಿಗೆ ಅಥವಾ ಇಲಾಖೆಗೆ ಸಕಾಲದಲ್ಲಿ ತಲುಪಿಸುವ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಮಾಹಿತಿಯನ್ನು ಆಧರಿಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ನೆರವಾಗುವ ವ್ಯವಸ್ಥೆಯ ಕೊರತೆ ಇದೆ. ವಿಕೋಪಗಳಿಗೆ ಸಂಬಂಧಿಸಿದ ವರದಿಗಳು ಕ್ಲಪ್ತ ಸಮಯದಲ್ಲಿ ಸಿದ್ಧವಾಗುತ್ತಿಲ್ಲ. ನಾವು ಅಭಿವೃದ್ಧಿಪಡಿಸಿದ ತಂತ್ರಾಂಶ ಈ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲುದು’ ಎಂದು ಅವರು ತಿಳಿಸಿದರು.

ಜಿಐಎಸ್‌ ಹೇಗೆ ಸಹಕಾರಿ?
* ನಗರದ ಪ್ರವಾಹ ಪೀಡಿತ ಪ್ರದೇಶಗಳ ನಕ್ಷೆಗಳನ್ನು ಜಿಐಎಸ್ ಮೂಲಕ ಸಿದ್ಧಪಡಿಸಬಹುದು.
* ಭೌಗೋಳಿಕ ಅಂಶಗಳಿಗೆ ಅನುಗುಣವಾಗಿ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆಯನ್ನು ಮರುರೂಪಿಸಲು ಜಿಐಎಸ್ ನೆರವಾಗುತ್ತದೆ.
* ಬೇರೆ ಬೇರೆ ಸನ್ನಿವೇಶಗಳಲ್ಲಿ, ವಿವಿಧ ಕಾರಣಗಳಿಂದ ಉಂಟಾಗುವ ಪ್ರವಾಹ ಮಟ್ಟದ ಕಾಲ್ಪನಿಕ ಚಿತ್ರಣವನ್ನು ರೂಪಿಸಲಾಗುತ್ತದೆ.
* ನಗರದ ನಿರ್ದಿಷ್ಟ ಪ್ರದೇಶದಲ್ಲಿನ ಪ್ರವಾಹ ಪ್ರಮಾಣ, ಅವಧಿ ಮತ್ತು ಅದನ್ನು ಮುಂದೂಡುವ ಕುರಿತು ವಿಶ್ಲೇಷಿಸಲು ಈ ಕಾಲ್ಪನಿಕ ಚಿತ್ರಣ ನೆರವಾಗುತ್ತದೆ. ಪ್ರವಾಹದ ನಿಖರ ಅಂದಾಜು ಲಭ್ಯವಾಗುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸುಲಭ.
* ಪ್ರವಾಹದ ಮುನ್ಸೂಚನೆ ಸಿಕ್ಕಾಗ ಏನು ಸುರಕ್ಷತಾ ಕ್ರಮ ಅನುಸರಿಸಬೇಕು ಎಂಬುದನ್ನು ಮೊದಲೇ ನಿಗದಿಪಡಿಸಿದರೆ, ಅಧಿಕಾರಿಗಳು ಹಾಗೂ ನಾಗರಿಕರು ಅವುಗಳನ್ನು ಪಾಲಿಸುವುದು ಸುಲಭ.
* ಪ್ರವಾಹದ ಸಂದರ್ಭದ ತುರ್ತು ಕಾರ್ಯಾಚರಣೆ ವಿಧಾನ ಸುಧಾರಿಸಲು ಹಾಗೂ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಈ ವ್ಯವಸ್ಥೆ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT