ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋವಿ ಸಮಾಜದ ಅಭಿವೃದ್ಧಿಗೆ ₹ 60 ಕೋಟಿ

Last Updated 20 ಸೆಪ್ಟೆಂಬರ್ 2017, 5:20 IST
ಅಕ್ಷರ ಗಾತ್ರ

ಬೆಳಗಾವಿ: ‘ಭೋವಿ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 60 ಕೋಟಿ ಅನುದಾನ ನೀಡಿದೆ’ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ. ಸೀತಾರಾಂ ತಿಳಿಸಿದರು. ‘ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದಲೂ ₹ 20 ಕೋಟಿ ಅನುದಾನ ನಿರೀಕ್ಷಿಸುತ್ತಿದ್ದೇವೆ. ಸಮಾಜದವರ ಅನುಕೂಲಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಶೀಘ್ರವೇ ಅನುಷ್ಠಾನಗೊಳಿಸಲಾಗುವುದು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಬೇರ್ಪಡಿಸಿ ಸಮಾಜಕ್ಕಾಗಿಯೇ ನಿಗಮ ಮಾಡಲಾಗಿದೆ. ಪ್ರಥಮ ಅಧ್ಯಕ್ಷನಾದ ನಾನು ಭದ್ರಬುನಾದಿ ಹಾಕುವುದಕ್ಕೆ ಶ್ರಮಿಸುತ್ತಿದ್ದೇನೆ. ಮೊದಲ ಹೆಜ್ಜೆಯಾಗಿ, ನಿಗಮದ ಅಧಿಕೃತ ಲೋಕಾರ್ಪಣೆ ಸಮಾರಂಭ ಅ.8ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ತುಮಕೂರು ರಸ್ತೆಯ ಯಶವಂತಪುರದಲ್ಲಿರುವ ಪ್ರಭಾಕರ ಕೋರೆ ಸಮುದಾಯ ಭವನದಲ್ಲಿ ನೆರವೇರಲಿದೆ.

ನಿಗಮ ಸ್ಥಾಪನೆಗೆ ಕಾರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಗುವುದು. ಬಾಗಲಕೋಟೆ–ಚಿತ್ರದುರ್ಗ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು’ ಎಂದು ಹೇಳಿದರು.

ಸಮುದಾಯ ಭವನ ನಿರ್ಮಿಸಿ: ‘ಪ್ರಮುಖವಾಗಿ ಕಲ್ಲು ಒಡೆಯುವ ವೃತ್ತಿಯನ್ನು ಸಮಾಜದವರು ಅವಲಂಬಿಸಿದ್ದಾರೆ. ಊರೂರು ಅಲೆಯುತ್ತಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ, ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವಂತೆ ವಸತಿಶಾಲೆಗಳನ್ನು ತೆರೆಯಬೇಕು, ಭೋವಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಸಿದ್ದರಾಮೇಶ್ವರ ಸಮುದಾಯ ಭವನ ನಿರ್ಮಿಸಬೇಕು.

ಹಾಸ್ಟೆಲ್‌ ಸೌಲಭ್ಯ ಕಲ್ಪಿಸಬೇಕು. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸದಸ್ಯರನ್ನಾಗಿ ನೇಮಿಸಬೇಕು. ಯಾವುದಾದರೂ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಕೋರಲಾಗುವುದು’ ಎಂದು ವಿವರಿಸಿದರು.

‘ಕೊಳವೆಬಾವಿಗಳ ದುರಸ್ತಿಗೆ ಜೀಪ್‌್ ಖರೀದಿಗೂ ಸಹಾಯಧನ ಕೊಡಲಾಗುವುದು. ₹ 25 ಸಾವಿರ ನೇರ ಸಾಲ ದೊರೆಯಲಿದೆ. ₹ 20 ಲಕ್ಷದವರೆಗೆ ಸಾಲ ಪಡೆಯಬಹುದು. ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ’ ಎಂದು ವಿವರಿಸಿದರು.

ಜಯಂತಿ ಆಚರಣೆಗೆ ಅನುದಾನ: 2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ 11.70 ಲಕ್ಷ ಸಂಖ್ಯೆಯಲ್ಲಿದ್ದೇವೆ. ಸಮಾಜದ ಗುರುಗಳಾದ ಸಿದ್ದರಾಮೇಶ್ವರ ಜಯಂತಿ ಆಚರಿಸಲು ತಾಲ್ಲೂಕು ಕೇಂದ್ರಕ್ಕೆ ತಲಾ    ₹ 25ಸಾವಿರ, ಬೆಂಗಳೂರಿಗೆ ₹ 10 ಲಕ್ಷ ಹಾಗೂ ಜಿಲ್ಲಾ ಕೇಂದ್ರಗಳಿಗೆ ₹ 50 ಸಾವಿರ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಪ್ರತಿ ಜನವರಿಯಲ್ಲಿ ಜಯಂತಿ ಆಯೋಜಿಸಲಾಗುವುದು.

₹ 50 ಲಕ್ಷದವರೆಗಿನ ತುಂಡು ಗುತ್ತಿಗೆಯನ್ನು ಪರಿಶಿಷ್ಟರಿಗೆ ನೀಡುವುದಕ್ಕೆ ಸರ್ಕಾರ ನಿರ್ಧರಿಸಿರುವುದರಿಂದ, ಭೋವಿ ಸಮಾಜಕ್ಕೂ ಅನುಕೂಲ ಆಗಲಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸಲು ನಿಗಮ ಶ್ರಮಿಸಲಿದೆ. ಸ್ಥಳೀಯವಾಗಿ ಉದ್ಯೋಗ ಕಂಡುಕೊಳ್ಳಲು ಕೌಶಲ ತರಬೇತಿ ನೀಡಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಜು ವಡ್ಡರ, ಜಿಲ್ಲಾ ವಡ್ಡರ ಭೋವಿ ಕ್ಷೇಮಾಭಿವೃದ್ಧಿ ಸೊಸೈಟಿ ಅಧ್ಯಕ್ಷ ಕೆ.ಎಸ್‌. ಮಮದಾಪುರ, ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಜಾತಿ, ಪಂಗಡ ಘಟಕದ ಉಪಾಧ್ಯಕ್ಷ ವಿಠ್ಠಲ ಲಕ್ಷ್ಮಣ ವಡ್ಡರ, ಮುಖಂಡ ಬಾಳಾಸಾಹೇಬ ವಡ್ಡರ ಇದ್ದರು.

* * 

ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಲು ನಿಗಮದಿಂದ ಸಾಲಸೌಲಭ್ಯ ಒದಗಿಸಲಾಗುವುದು. ಸಮಾಜದ ಅಭಿವೃದ್ಧಿಗೆ ವಿವಿಧ ಯೋಜನೆ ರೂಪಿಸಲಾಗುವುದು
ಜಿ.ವಿ. ಸೀತಾರಾಂ
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT