ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರ, ಎಂಜಿನಿಯರ್‌ ವಿರುದ್ಧ ಆಕ್ರೋಶ

Last Updated 20 ಸೆಪ್ಟೆಂಬರ್ 2017, 5:23 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದ ಹೃದಯ ಭಾಗದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರ ಹಾಗೂ ಎಂಜಿನಿಯರ್‌ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ತಿಂಗಳ ಹಿಂದೆ ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ₹ 1 ಕೋಟಿ ಅನುದಾನದಲ್ಲಿ ಚನ್ನಮ್ಮನ ಸಮಾಧಿ ಸ್ಥಳ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು. ಕೆಲಸ ಕೈಗೆತ್ತಿಕೊಂಡ ಗುತ್ತಿಗೆದಾರ ಫಂಡರಿನಾಥ ಮಾಳೋದೆ ಚನ್ನಮ್ಮನ ಸಮಾಧಿ ಸುತ್ತಲಿನ ಕಾಂಪೌಂಡ್‌ ಕೆಡವಿ ಕಲ್ಲುಗಳನ್ನು ತಮ್ಮ ಮನೆ ಆವರಣದಲ್ಲಿಟ್ಟು ಬೇರೆ ಕಲ್ಲು ತಂದು ಬಿಟ್ಟಿರುವುದು ಬಿಟ್ಟರೆ ಸಮಾಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ.

ಈ ಕುರಿತು ಕೆಲ ಹಿರಿಯರು, ಯುವಕ ಸಂಘಟನೆಗಳ ಮುಖಂಡರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡಿದ್ದರು. ಗುಣಮಟ್ಟದ ಗೋಡೆ ಒಡೆದು ಕಲ್ಲುಗಳನ್ನು ಬೇರೆ ಕಡೆ ಸಾಗಿಸಿರುವುದಕ್ಕೆ ಕೋಪಗೊಂಡಿದ್ದರು. ಕೂಡಲೇ ಆ ಕಲ್ಲುಗಳನ್ನು ತಂದು ಅದರಿಂದಲೇ ಹೊಸದಾಗಿ ಗೋಡೆ ಕಟ್ಟುವಂತೆ ಸೂಚಿಸಿದ್ದರು.

ಅದಕ್ಕೆ ಕಿವಿಗೊಡದ ಗುತ್ತಿಗೆದಾರ ಸಮಾಧಿ ಸುತ್ತಮುತ್ತ ಕಳಪೆ ಮಟ್ಟದ ಕಲ್ಲು, ಖಡಿ, ಇಟ್ಟಂಗಿ ತಂದು ಇಳಿಸಿರುವದು ಬಿಟ್ಟರೆ ಯಾವುದೇ ಕೆಲಸ ಮುಂದುವರಿಸಿಲ್ಲ. ಕೇಳಿದರೆ ಎಂಜಿನಿಯರ್‌ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ದೂರಿದರು.

ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ: ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕಿದ್ದ ಗುತ್ತಿಗೆದಾರ ಫಂಡರಿನಾಥ ಮಾಳೋದೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಬೇಕು. ಸಮಾಧಿ ಸ್ಥಳದ ಅಭಿವೃದ್ಧಿ ಕಾರ್ಯವನ್ನು ಬೇರೆ ಗುತ್ತಿಗೆದಾರರಿಗೆ ಒಪ್ಪಿಸಿ ಕೂಡಲೇ ಕೆಲಸ ನಡೆಸುವಂತೆ ಸೂಚಿಸಬೇಕು.

ಇಲ್ಲವಾದರೆ ವಿವಿಧ ಸಂಘಟನೆ ಆಶ್ರಯದಲ್ಲಿ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ತಾಲ್ಲೂಕು ಘಟಕ ಅಧ್ಯಕ್ಷ ರಫೀಕ ಬಡೇಘರ ಎಚ್ಚರಿಸಿದ್ದಾರೆ.

* * 

ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೆ ಕಾರಣ ಕೇಳಿ ನೋಟಿಸ್ ನೀಡುವೆ. ಇನ್ನೆರಡು ದಿನಗಳಲ್ಲಿ ಕೆಲಸ ಆರಂಭಿಸಲು ಸೂಕ್ತ ಕ್ರಮ ಕೈಕೊಳ್ಳಲಾಗುವುದು
ಡಾ.ವಿಜಯಕುಮಾರ ಹೊನಕೇರಿ
ಅಧ್ಯಕ್ಷರು, ಕಿತ್ತೂರು ಚನ್ನಮ್ಮ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT