ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಮಾರ್ಗಗಳ ಸಮೀಕ್ಷೆಗೆ ಸೂಚನೆ

Last Updated 20 ಸೆಪ್ಟೆಂಬರ್ 2017, 5:29 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ 100 ವರ್ಷಗಳ ಹಿಂದಿನ ಮೇಲ್ಸೇತುವೆಯನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಿಸಲು ರೇಲ್ವೆ ಇಲಾಖೆ ಮುಂದಾಗಿದೆ. ಆದರೆ, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಮೊದಲು ಮೇಲ್ಸೇತುವೆ ತೆರವುಗೊಳಿಸದಿರಲು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ನಿರ್ಣಯಿಸಿದ್ದಾರೆ.

ಮೇಲ್ಸೇತುವೆ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದಕ್ಕಾಗಿ ಮೊದಲು ಪರ್‌್ಯಾಯ ಮಾರ್ಗ ಕಂಡುಕೊಂಡ ನಂತರ ಹೊಸ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡುವ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ. ಅದಕ್ಕಾಗಿ ಪರ್‌್ಯಾಯ ಮಾರ್ಗಗಳ ಕುರಿತು ವರದಿ ನೀಡುವಂತೆ ಡಿಸಿಪಿ
(ಅಪರಾಧ– ಸಂಚಾರ) ಅವರಿಗೆ ಸೂಚನೆ ನೀಡಿದ್ದಾರೆ.

‘ಈಗಲೇ ಕಾಮಗಾರಿ ಆರಂಭಿಸಿದರೆ, ಸೇತುವೆ ಮೇಲಿನ ವಾಹನಗಳ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಮೊದಲು ಪರ್‌್ಯಾಯ ಮಾರ್ಗಗಳನ್ನು ಗುರುತಿಸಬೇಕಾಗಿದೆ. ಇದರ ಬಗ್ಗೆ ಸ್ಥಳ ಪರಿಶೀಲಿಸಿ, ವರದಿ ನೀಡುವಂತೆ ಡಿಸಿಪಿ (ಕಾನೂನು– ಸಂಚಾರ) ಅವರಿಗೆ ಮೌಖಿಕವಾಗಿ ತಿಳಿಸಿದ್ದೇನೆ. ಸದ್ಯದಲ್ಲಿಯೇ ಪತ್ರ ಬರೆಯಲಿದ್ದೇನೆ’ ಎಂದು ಜಿಯಾವುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪರ್ಯಾಯ ಮಾರ್ಗಗಳನ್ನು ಗುರುತಿಸಿದ ನಂತರ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗುವುದು. ನಂತರ ಮೇಲ್ಸೇತುವೆ ತೆರವುಗೊಳಿಸಲು ರೇಲ್ವೆ ಇಲಾಖೆಗೆ ಅನುವು ಮಾಡಿಕೊಡಲಾಗುವುದು’ ಎಂದು ಹೇಳಿದರು.

ನಗರದ ಉತ್ತರ ಹಾಗೂ ದಕ್ಷಿಣ ಭಾಗದ ನಡುವಿನ ಪ್ರದೇಶಗಳಿಗೆ ಈ ಮೇಲ್ಸೇತುವೆ ಪ್ರಮುಖ ಕೊಂಡಿಯಾಗಿದೆ. ಇಲ್ಲಿ ಸಂಚಾರ ಸ್ಥಗಿತಗೊಳಿಸಿದರೆ, ಪಕ್ಕದ 1ನೇ ರೈಲ್ವೆ ಗೇಟ್‌ ಮಾರ್ಗದ ಮೇಲೆ ಒತ್ತಡ ಬೀಳಲಿದೆ. ರೇಲ್ವೆ ಸಂಚರಿಸುವ ವೇಳೆ ಗೇಟ್‌ ಬಂದ್‌ ಮಾಡುವುದರಿಂದ ವಾಹನಗಳ ಸಂಚಾರಕ್ಕೆ ತಡೆಯುಂಟಾಗುತ್ತದೆ. ಆಗ ವಾಹನಗಳ ದಟ್ಟಣೆ ಸಮಸ್ಯೆ ಉಂಟಾಗುತ್ತದೆ.

ಇನ್ನೊಂದು ಬದಿಗೆ ಕೋಟೆ ಬಳಿ ನಿರ್ಮಿಸಲಾಗುತ್ತಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. ಹೀಗಾಗಿ ವಾಹನಗಳ ಸಂಚಾರಕ್ಕೆ ಪರ್‌್ಯಾಯ ಮಾರ್ಗಗಳ ಹುಡುಕಾಟದಲ್ಲಿ ಜಿಲ್ಲಾಡಳಿತ ತೊಡಗಿದೆ.

ಎತ್ತರ ಹೆಚ್ಚಿಸಬೇಕಾಗಿದೆ: ಬ್ರಿಟಿಷರು ನಿರ್ಮಿಸಿದ ಈ ಸೇತುವೆ ಈಗಲೂ ಗಟ್ಟಿಮುಟ್ಟಾಗಿದೆ. ಕಳೆದ ಮೂರು– ನಾಲ್ಕು ತಿಂಗಳ ಹಿಂದೆ ರೇಲ್ವೆ ಸುರಕ್ಷಾ ವಿಭಾಗದ ಎಂಜಿನಿಯರ್‌ಗಳ ತಂಡವು ಭೇಟಿ ನೀಡಿ, ಸೇತುವೆ ಗಟ್ಟಿಮುಟ್ಟಾಗಿದೆ. ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವರದಿ ನೀಡಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗಾಗಿ ಮೇಲ್ಸೇತುವೆ ಕೆಡವಿ, ಹೊಸದಾಗಿ ನಿರ್ಮಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

‘ದ್ವಿಪಥ ರೈಲು ಹಳಿ ನಿರ್ಮಾಣ ಮಾಡಬೇಕಾಗಿದೆ. ಇದಲ್ಲದೇ, ನೆಲದಿಂದ ಮೇಲ್ಸೇತುವೆಯ ಎತ್ತರ ಕಡಿಮೆ ಇದೆ. ರೈಲ್ವೆಗಿಂತ ಕನಿಷ್ಠ 6.25 ಮೀಟರ್‌ ಎತ್ತರದಲ್ಲಿ ಸೇತುವೆ (ಸದ್ಯಕ್ಕೆ ರೈಲ್ವೆಯಿಂದ ಕೇವಲ 4 ಮೀಟರ್‌ ಎತ್ತರದಲ್ಲಿದೆ) ಇರಬೇಕಾಗಿತ್ತು. ಇವೆಲ್ಲ ಕಾರಣಗಳಿಂದ ಮೇಲ್ಸೇತುವೆಯನ್ನು ಕೆಡವಿ, ಪುನರ್‌ ನಿರ್ಮಿಸಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ರೇಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

₹12 ಕೋಟಿ ವೆಚ್ಚ:   ಪ್ರಸ್ತುತ ಇರುವ ಮೇಲ್ಸೇತುವೆಯನ್ನು ತೆರವುಗೊಳಿಸುವುದು ಹಾಗೂ ಹೊಸ ಮೇಲ್ಸೇತುವೆ ನಿರ್ಮಿಸಲು ₹ 12 ಕೋಟಿ ವೆಚ್ಚದ ಯೋಜನೆಯನ್ನು ರೇಲ್ವೆ ಇಲಾಖೆ ಸಿದ್ಧಪಡಿಸಿದೆ. ಇದಕ್ಕೆ ಪೂರಕವಾಗಿ ರಸ್ತೆಯ ಅಕ್ಕಪಕ್ಕದ ಜಾಗವನ್ನು ಮಹಾನಗರ ಪಾಲಿಕೆ ಒದಗಿಸಿಕೊಡಲಿದೆ. ಸುಮಾರು 11 ತಿಂಗಳ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು ಇಲಾಖೆಯ ಎಂಜಿನಿಯರ್‌ಗಳು ಹೊಂದಿದ್ದಾರೆ.

ಪರ್ಯಾಯ ಮಾರ್ಗ: ಇದನ್ನು ಕೈಗೆತ್ತಿಕೊಳ್ಳುವ ಮೊದಲು 1ನೇ ಗೇಟ್‌, 2ನೇ ಗೇಟ್‌ ಅಥವಾ 3ನೇ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಿಸಬೇಕು. ಇನ್ನೊಂದು ಬದಿಯ ಕೋಟೆ ಬಳಿಯ ಮೇಲ್ಸೇತುವೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಇವೆಲ್ಲ ಕಾಮಗಾರಿ ಪೂರ್ಣಗೊಂಡ ನಂತರ ರೇಲ್ವೆ ನಿಲ್ದಾಣದ ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ದ್ವಿಚಕ್ರ ವಾಹನ ಸವಾರ ಮಂಜುನಾಥ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT