ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ವರ್ಷ ಕಳೆದರೂ ದೇವದುರ್ಗದ ಜನರಿಗೆ ಸಿಕ್ಕಿಲ್ಲ 'ಆಸರೆ ಭಾಗ್ಯ’

Last Updated 20 ಸೆಪ್ಟೆಂಬರ್ 2017, 9:18 IST
ಅಕ್ಷರ ಗಾತ್ರ

ದೇವದುರ್ಗ: ಏಳು ವರ್ಷಗಳ ಹಿಂದೆ ನೆರೆಹಾವಳಿಯಲ್ಲಿ ಇಡೀ ತಾಲ್ಲೂಕಿನ ಜನ ತತ್ತರಿಸಿ ಹೋಗಿದ್ದರು. ವಾರಗಳ ಕಾಲ ಇಡೀ ಸಂಪರ್ಕವೇ ಕಡಿದು ಹೋಗಿತ್ತು. ಅದರಲ್ಲಿ ಕರ್ಕಿಹಳ್ಳಿ, ವೀರಗೋಟ, ಮ್ಯಾದರಗೋಳ, ಕೊಳ್ಳೂರು, ಹೇರುಂಡಿ, ಹಿರೇಕೂಡ್ಲಗಿ ಗ್ರಾಮಗಳ ಜನರು ಮನೆ, ಮಠ ಬಿಟ್ಟು ದಿಕ್ಕು ಕಾಣದೆ ದೂರದ ಪ್ರದೇಶಕ್ಕೆ ರಾತ್ರೋರಾತ್ರಿ ಹೋಗಿಬಿಟ್ಟರು.

ಅಲ್ಲಲ್ಲಿ ಇದ್ದ ಗಂಜಿ ಕೇಂದ್ರದಲ್ಲಿ ಇದ್ದುಕೊಂಡು ಕಾಲ ಕಳೆದ ಜನರು ಮರಳಿ ಊರಿಗೆ ಬಂದರೆ ಇಡೀ ಗ್ರಾಮವೇ ಸ್ತಬ್ಧ, ಮನೆ, ಮಠಗಳು ನೆಲಸಮ, ಎಲ್ಲಿ ನೋಡಿದರೂ ಪ್ರಾಣಿ, ಪಕ್ಷಿಗಳ ಮಾರಣ ಹೋಮ ಆಗಿ ಹೋಗಿತ್ತು. ಇದುವರೆಗೂ ಇಲ್ಲಿನ ಜನರಿಗೆ ಸರ್ಕಾರದ ಆಸರೆ ಭಾಗ್ಯ ದೊರಕಿಲ್ಲ.

ನದಿ ದಂಡೆಯಲ್ಲಿ ಇರುವ ಕರ್ಕಿಹಳ್ಳಿ ಗ್ರಾಮ ಸೇರಿದಂತೆ ಇಂತಹ ಪರಿಸ್ಥಿತಿ ಇರುವ ಇತರ 11 ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ನಂತರ ಸರ್ಕಾರ 11 ಗ್ರಾಮಗಳನ್ನು ಸ್ಥಳಾಂತರಕ್ಕಾಗಿ ಕೋಟಿಗಟ್ಟಲೇ ಹಣ ಬಿಡುಗಡೆಗೊಳಿಸಿದರೂ ಅದರ ಪ್ರಯೋಜನ ಗ್ರಾಮಸ್ಥರಿಗೆ ಸಿಕ್ಕಿಲ್ಲ. ಈಗಲೂ ಅಲ್ಲಿನ ಜನರು ಅತಂಕದಲ್ಲಿ ಕಾಲಕಳಿಯುತ್ತಿದ್ದಾರೆ.

ಕರ್ಕಿಹಳ್ಳಿ ಗ್ರಾಮದ ಒಟ್ಟು 117 ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ನಿರ್ಧರಿಸಿದ ನಂತರ ಗ್ರಾಮದ ಹೊರವಲಯದ ಅಣೇ ಮಲ್ಲೇಶ್ವರ ದೇವಸ್ಥಾನದ ಹತ್ತಿರ ಇರುವ ಸರ್ಕಾರದ ಜಮೀನಿನಲ್ಲಿ ಗ್ರಾಮದ ಎಲ್ಲ ಕುಟುಂಬಗಳಿಗೆ ಆಸರೆ ಭಾಗ್ಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಮಂಗಳೂರು ಮೂಲದ ಎಂಆರ್‌ಪಿಎಲ್‌ ಖಾಸಗಿ ಕಂನಿಯೊಂದು ಮುಂದೆ ಬಂದಿತು.

ಸರ್ಕಾರ ಮನೆ ಸೇರಿದಂತೆ ಹೊಸ ಗ್ರಾಮದಲ್ಲಿ ಇರಬೇಕಾದ ಅಗತ್ಯ ಮೂಲ ಸೌಕರ್ಯಗಳನ್ನು ನಿರ್ಮಿಸಿ ಕೊಡಲು ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ನೀಡಿದ ನಂತರ ವರ್ಷಗಳೇ ಉರುಳಿದರೂ ಇದುವರೆಗೂ ಅದರ ಭಾಗ್ಯ ಗ್ರಾಮಸ್ಥರಿಗೆ ಸಿಕ್ಕಿಲ್ಲ.

ಕಾಮಗಾರಿ ಏಜನ್ಸಿ ಪಡೆದ ಭೂ ಸೇನಾ ನಿಗಮ ಸರ್ಕಾರದ ನಿರ್ದೇಶನದಂತೆ ನಿಗದಿತ ಸಮಯಕ್ಕೆ ಕಾಮಗಾರಿಯನ್ನು ಮುಗಿಸದೆ ವರ್ಷಗಟ್ಟಲೇ ವಿಳಂಬ ಮಾಡಿದೆ. ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂಬುವುದು ಗ್ರಾಮಸ್ಥರ ಆರೋಪ ಇದೆ.

ನಿಗದಿ ಪಡಿಸಿದ ಮನೆಗಳು, ಬಸ್‌ ನಿಲ್ದಾಣ, ಶಾಲೆ, ಅಂಗನವಾಡಿ ಕೇಂದ್ರ, ಒಳ ಚರಂಡಿ, ಕುಡಿಯುವ ನೀರಿನ ಸೌಕರ್ಯ, ರಸ್ತೆ ಸೇರಿದಂತೆ ಇತರ ಸೌಕರ್ಯಗಳನ್ನು ಸ್ಥಳಾಂತರ ಗ್ರಾಮದಲ್ಲಿ ಇರಬೇಕಾಗಿರುವುದು ಕಡ್ಡಾಯವಾಗಿದ್ದರೂ ಇದರ ಪಾಲನೆ ಆಗಿಲ್ಲ ಎಂದು ಗ್ರಾಮದ ನಿವೃತ್ತ ಉಪ ತಹಶಈಲ್ದಾರ್‌ ನಾಗಪ್ಪ ಅವರು ಆರೋಪಿಸಿದರು.

ಸ್ಥಳಾಂತರ ಗ್ರಾಮಗಳ ಮೇಲುಸ್ತುವಾರಿಯನ್ನು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕಟ್ಟುನಿಟ್ಟಾಗಿ ನಿರ್ವಹಿಸಲು ಸರ್ಕಾರ ಆದೇಶಿಸಿದರೂ ಅದಕ್ಕೆ ಬೆಲೆ ಇಲ್ಲದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಎಂಟು ವರ್ಷಗಳು ಕಳೆದರೂ ಕರ್ಕಿಹಳ್ಳಿ ಗ್ರಾಮವನ್ನು ಸ್ಥಳಾಂತರ ಮಾಡಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.

ನೆರೆಹಾವಳಿಗೆ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಹಾನಿಗೊಳಗಾದ ತಾಲ್ಲೂಕು ದೇವದುರ್ಗ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಹೆಚ್ಚು ಗಮನ ಹರಿಸಿದೆ ಇರುವುದರಿಂದ ಇತರ 10 ಗ್ರಾಮಗಳ ಪರಿಸ್ಥಿತಿ ಹೇಳ ತೀರದಾಗಿದೆ. ಇದಕ್ಕೆ ಕಾರಣ ಕೋಟಿಗಟ್ಟಲೇ ಹಣ ಖರ್ಚಾದರೂ ಸ್ಥಳಾಂತರ ಗ್ರಾಮದಲ್ಲಿ ನಿರ್ಮಿಸಲಾದ ಮನೆಗಳು ತೀರ ಕಳಪೆ ಮತ್ತು ಅಗತ್ಯ ಸೌಲಭ್ಯ ದೊರಕಿಸಿಕೊಡದ ಕಾರಣ ಕರ್ಕಿಹಳ್ಳಿ ಗ್ರಾಮಸ್ಥರು ಮೂಲ ಗ್ರಾಮವನ್ನು ಬಿಡಲು ಒಪ್ಪುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT