ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯಕ್ಕೆ ಎಡೆಮಾಡಿದ ಯುವಕನ ಫೇಸ್‌ಬುಕ್‌ ಸಂದೇಶ!

Last Updated 20 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಮಸ್ಕಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರತಾಪ್‌ಗೌಡ ಪಾಟೀಲ ಅವರ ಅಭಿವೃದ್ಧಿಯನ್ನು ಪ್ರಶ್ನಿಸಿ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಛಾಯಾಚಿತ್ರ, ಸಂದೇಶ ಹಾಗೂ ಪ್ರತಿಕ್ರಿಯೆಗಳು ಇದೀಗ ವಿವಾದ ಸೃಷ್ಟಿಸಿದ್ದು, ಛಾಯಾಚಿತ್ರ ಹಾಕಿದ್ದ ಯುವಕನನ್ನು ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಆರಂಭಿಸಿದೆ.

ಒಂದು ವಾರದ ಹಿಂದೆ, ಹಂಚಿನಾಳ ಗ್ರಾಮದ ಕೆ.ಶರಣು ನಾಯಕ ಅವರು ಮಸ್ಕಿ ಕ್ಷೇತ್ರ ವ್ಯಾಪ್ತಿಯ ಸಿಂಧನೂರು ತಾಲ್ಲೂಕು ಕೊಳಬಾಳ ಗ್ರಾಮದಲ್ಲಿ ಹಾಳಾದ ರಸ್ತೆಯ ಛಾಯಾಚಿತ್ರವನ್ನು ಅಡಿಬರಹದೊಂದಿಗೆ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದರು. ಈ ಚಿತ್ರಕ್ಕೆ ಅನೇಕ ಜನರು ಪ್ರತಿಕ್ರಿಯೆ ನೀಡಿದ್ದರು.

ಇದರಿಂದ ಕೆರಳಿದ ಶಾಸಕರ ಅಭಿಮಾನಿಗಳ ಬಳಗವು ಸೆಪ್ಟೆಂಬರ್‌ 12 ರಂದು ಸಿಂಧನೂರು ನಗರ ಠಾಣೆಗೆ ಮೂವರು ಯುವಕರ ವಿರುದ್ಧ ದೂರು ಸಲ್ಲಿಸಿದ್ದರು. ‘ತುರ್ವಿಹಾಳದ ಖಾಜಾ ಎಸ್‌.ಕೆ., ಸಿಂಧನೂರಿನ ಬಸವರಾಜ ಹಾಗೂ ಹಂಚಿನಾಳಾದ ಶರಣು ನಾಯಕ ಅವರು ಫೇಸ್‌ಬುಕ್‌ನಲ್ಲಿ ಶಾಸಕರಿಗೆ ನಾಯಿ... ಮುಂತಾದ ಶಬ್ದಗಳನ್ನು ಬಳಸಿ ಅವಮಾನ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಸಿಂಧನೂರು ಪೊಲೀಸರು ದೂರು ಅರ್ಜಿ ಆಧರಿಸಿ ಛಾಯಾಚಿತ್ರ ಅಪ್‌ಲೋಡ್‌ ಮಾಡಿದ್ದ ಕೆ.ಶರಣು ನಾಯಕನನ್ನು ಠಾಣೆಗೆ ಕರೆದು ತಂದು ವಿಚಾರಿಸಿದ್ದರು. ಈ ಬಗ್ಗೆ ಪ್ರಥಮ ತನಿಖಾ ವರದಿ (ಎಫ್‌ಐಆರ್‌) ದಾಖಲಿಸಿಕೊಳ್ಳದೆ ಯುವಕನನ್ನು ಬಿಟ್ಟು ಕಳುಹಿಸಿದ್ದರು.

ಆನಂತರ ಠಾಣೆಯಿಂದ ಹೊರಬಂದ ಕೆ.ಶರಣಕುನಾಯಕ ಅವರನ್ನು ಬೆಂಬಲಿಸಿದ ಬಿಜೆಪಿ ಮಂಡಲದ ಕಾರ್ಯಕರ್ತರು ಇದೀಗ ಹೋರಾಟ ಆರಂಭಿಸಿದ್ದಾರೆ. ‘ಶಾಸಕರ ಸೂಚನೆಯ ಮೇರೆಗೆ ಪೊಲೀಸರು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಶಾಸಕರನ್ನು ಯುವಕ ಅವಹೇಳನ ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು’ ಎನ್ನುವುದು ಬಿಜೆಪಿ ಕಾರ್ಯಕರ್ತರ ವಾದ. ಯುವಕನ ಮೇಲಿನ ಹಲ್ಲೆ ಘಟನೆ ಖಂಡಿಸಿ ಸೆಪ್ಟೆಂಬರ್‌ 21 ಕ್ಕೆ ಮಸ್ಕಿ ಬಂದ್‌ಗೆ ಬಿಜೆಪಿ ಕರೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT