ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಡಿಕೇರಿ ಜನೋತ್ಸವ’ಕ್ಕೆ ವರುಣನ ಆತಂಕ

Last Updated 20 ಸೆಪ್ಟೆಂಬರ್ 2017, 6:35 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸಿದ್ಧ ಮಡಿಕೇರಿ, ಗೋಣಿಕೊಪ್ಪಲು ದಸರಾಕ್ಕೆ ಈ ಬಾರಿ ವರುಣನ ಭಯ ಕಾಡುತ್ತಿದೆ... ನಾಲ್ಕು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ. ‘ಇನ್ನೊಂದು ವಾರ ಇದೇ ರೀತಿ ಮಳೆ ಮುಂದುವರಿದರೆ ನಮ್ಮ ಶ್ರಮ ವ್ಯರ್ಥವಾಗಲಿದೆ’ ಎಂಬ ಆತಂಕ ದಸರಾ ಸಮಿತಿ ಸದಸ್ಯರದ್ದು.

2017ರ ದಸರಾಕ್ಕೆ ಚಾಲನೆಗೆ ಒಂದು ದಿವಸ ಮಾತ್ರ ಬಾಕಿಯಿದ್ದು, ಸಿದ್ಧತೆ ಮಾಡಿಕೊಳ್ಳಲೂ ಮಳೆ ಬಿಡುತ್ತಿಲ್ಲ. ರಸ್ತೆಬದಿಯ ಅಲಂಕಾರ, ಬೆಳಕಿನ ವ್ಯವಸ್ಥೆ, ವೇದಿಕೆ ನಿರ್ಮಾಣ, ರಸ್ತೆಗಳ ಗುಂಡಿಗಳನ್ನು ಮುಚ್ಚಲೂ ಮಳೆ ಅಡ್ಡಿಯಾಗುತ್ತಿದೆ. ರಾತ್ರಿ ವೇಳೆ ಅಬ್ಬರಿಸುತ್ತಿರುವ ಮಳೆ, ಹಗಲು ವೇಳೆ ಸ್ವಲ್ಪ ಬಿಡುವ ಕೊಡುತ್ತಿದೆ. ಆದರೂ, ಅಲ್ಲಲ್ಲಿ ನೀರು ನಿಂತು ಸಿದ್ಧತೆ ಸಾಧ್ಯವಾಗುತ್ತಿಲ್ಲ.

ಇದೇ 21ರಂದು ಸಂಜೆ 5ಕ್ಕೆ ಮಹದೇವಪೇಟೆ ಪಂಪಿನಕೆರೆಯ ಬಳಿ ನಾಲ್ಕು ಶಕ್ತಿದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕುಂದೂರುಚೌಟಿ ಮಾರಿಯಮ್ಮ ದೇವಾಲಯದ ಕರಗಕ್ಕೆ ಸಂಪ್ರದಾಯಬದ್ಧ ಪೂಜೆ ಸಲ್ಲಿಸುವ ಮೂಲಕ ದಸರಾಕ್ಕೆ ಚಾಲನೆ ಸಿಗಲಿದೆ. ಅಲ್ಲಿಂದ ಎ.ವಿ. ಶಾಲೆ ಬಳಿಯ ಬನ್ನಿಮಂಟಪಕ್ಕೆ ತೆರಳಿ, ಅಲ್ಲಿಂದ ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ ಪೇಟೆ ಶ್ರೀರಾಮಮಂದಿರಕ್ಕೆ ನಾಲ್ಕು ಕರಗಗಳು ತಲುಪಲಿವೆ. 22ರಿಂದ ಕರಗಗಳು ಮನೆಮನೆಗೆ ತೆರಳಲಿವೆ ಎನ್ನುತ್ತಾರೆ ದಸರಾ ಸಮಿತಿ ಸದಸ್ಯರು.

‘ಕರಗೋತ್ಸವ’ದ ಹಿನ್ನೆಲೆ: ನವರಾತ್ರಿ ವೇಳೆ ನಡೆಯುವ ಪ್ರಸಿದ್ಧ ಕರಗೋತ್ಸವಕ್ಕೂ ಇತಿಹಾಸವಿದೆ. ಹಲವು ವರ್ಷಗಳ ಹಿಂದೆ ಮಂಜಿನ ನಗರಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿತ್ತು. ರೋಗಕ್ಕೆ ಕಾರಣ ಹುಡುಕಿ ಧಾರ್ಮಿಕ ಮುಖಂಡರು ದೇವರ ಮೊರೆ ಹೋಗಿದ್ದರು. ಮಹಾಮಾರಿ ರೋಗಕ್ಕೆ ದುಷ್ಟಶಕ್ತಿಗಳು ಕಾರಣವಾಗಿದ್ದು, ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭದಲ್ಲಿ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಬೇಕು.

ಆಗ ಸಾಂಕ್ರಾಮಿಕ ರೋಗ ನಿವಾರಣೆಯಾಗಲಿದೆ ಎಂದು ಸಲಹೆ ನೀಡಿದ್ದರು. ಅಂದಿನಿಂದ ಕರಗೋತ್ಸವ ಆರಂಭವಾಯಿತು ಎಂದು ದೇವಾಲಯ ಸಮಿತಿ ಮುಖಂಡರು ನೆನಪಿಸುತ್ತಾರೆ.

ರಸ್ತೆಗಳಲ್ಲಿ ಗುಂಡಿಗಳ ‘ದರ್ಬಾರ್‌’: ದಸರಾಕ್ಕೆ ಚಾಲನೆ ಸಿಗಲು ಒಂದು ದಿನ ಉಳಿದಿದ್ದರೂ ಎಲ್ಲ ರಸ್ತೆಗಳಲ್ಲೂ ಗುಂಡಿಗಳೇ ಗೋಚರಿಸುತ್ತಿವೆ. ಮಳೆಯ ನೀರು ನಿಂತು ರಸ್ತೆಗಳೆಲ್ಲಾ ಗದ್ದೆಗಳಾಗಿವೆ. ಗುಂಡಿಗಳನ್ನು ಮುಚ್ಚಲೂ ಮಳೆ ಬಿಡುವು ಕೊಡುತ್ತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಗಾಂಧಿ ಮೈದಾನಕ್ಕೆ ತೆರಳುವ ಮಾರ್ಗದುದ್ದಕ್ಕೂ ಗುಂಡಿಗಳದ್ದೇ ಹಾವಳಿ! ರಾಜಾಸೀಟ್‌ ರಸ್ತೆ, ಎಫ್‌ಎಂಸಿ ಕಾಲೇಜು ರಸ್ತೆ, ಹೊಸ ಬಡಾವಣೆ, ಜನರಲ್‌ ತಿಮ್ಮಯ್ಯ ಕ್ರೀಡಾಂಗಣ ರಸ್ತೆ ಎಲ್ಲೆಂದರಲ್ಲಿ ರಸ್ತೆ ಹಾಳಾಗಿದ್ದು, ದಸರಾ ವೈಭವಕ್ಕೆ ಸವಿಯಲು ಬರುವವರಿಗೆ ಅಡ್ಡಿಯಾಗಲಿದೆ.

ಅಷ್ಟು ಮಾತ್ರವಲ್ಲದೇ, ವಿಜಯದಶಮಿಯಂದು ನಡೆಯುವ ದಶಮಂಟಪ ಶೋಭಾಯಾತ್ರೆ, ನವರಾತ್ರಿಯ ಕರಗೋತ್ಸವಕ್ಕೆ ಇದೇ ಗುಂಡಿಗಳು ತೊಡಕಾಗಲಿವೆ ಎನ್ನುತ್ತಾರೆ ಜನರು. 23ರಿಂದ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟಗಳು ಆರಂಭಗೊಳ್ಳಲಿವೆ. ಕ್ರೀಡಾಂಗಣ ಸಂಪೂರ್ಣ ಹಾಳಾಗಿದೆ. ಮಳೆಯ ನಡುವೆ ಕ್ರೀಡೆಗೆ ಇಳಿದರೆ ಕೆಸರು ಮೆತ್ತಿಕೊಳ್ಳಲಿದೆ. ದಸರಾ ಮುಗಿಯುವ ತನಕ ಮಳೆ ಬಿಡುವ ಕೊಟ್ಟರೆ ಸಾಕು ಎನ್ನುತ್ತಾರೆ ಆಯೋಜಕರು.

ಇನ್ನು ಈ ಬಾರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಿಳಾ ದಸರಾ, ಮಕ್ಕಳ ದಸರಾ, ಮಹಿಳಾ ಒಕ್ಕೂಟಗಳು ತಯಾರಿಸಿದ ವಿವಿಧ ವಸ್ತುಗಳ ಪ್ರದರ್ಶನ– ಮಾರಾಟ ಮೇಳವೂ ಇದ್ದು, ನೈರುತ್ಯ ಮುಂಗಾರಿನ ಭಯ ಕಾಡುತ್ತಿದೆ. ಮೊದಲೇ ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಬರ; ಮಳೆ ಬಂದರೆ ಸಭಿಕರು ಕೊರತೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT