ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೋನಿಗೆ ಸ್ವಾಗತಿಸುವ ಆಳೆತ್ತರದ ಗುಂಡಿಗಳು

Last Updated 20 ಸೆಪ್ಟೆಂಬರ್ 2017, 7:06 IST
ಅಕ್ಷರ ಗಾತ್ರ

ತುಮಕೂರು: ಜನರಿಗೆ ಕುಡಿಯಲು ನೀರಿಲ್ಲ, ಸಾರ್ವಜನಿಕ ಆಸ್ಪತ್ರೆಯಂತೂ ಇಲ್ಲವೇ ಇಲ್ಲ. ಇನ್ನೂ ಮನೆಯ ಹೊರಗೆ ಬಂದರೆ ಸಾಕು ಜನರಿಗೆ ರಸ್ತೆಯಲ್ಲಿರುವ ಹತ್ತಾರು ಅಡಿ ಗುಂಡಿಗಳೇ ಸ್ವಾಗತ ಕೋರುತ್ತವೆ. ಇದು ಯಾವುದೋ ಹಳ್ಳಿಯಲ್ಲ; ನಗರದ 28ನೇ ವಾರ್ಡಿನಲ್ಲಿರುವ ಜನತಾ ಕಾಲೊನಿಯ ದುಸ್ಥಿತಿಯ ಚಿತ್ರಣ.

‘ಒಂದೊಂದು ಬೀದಿಯಲ್ಲಿಯೂ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಜನತಾ ಕಾಲೋನಿ ಜನಪ್ರತಿನಿಧಿಗಳಿಗೆ ಮತದ ಮೂಲ. ಆದರೆ ಈ ಜನರಿಂದ ಮತ ಪಡೆದುಕೊಂಡು ಆಯ್ಕೆಯಾಗುವ ಜನಪ್ರತಿನಿಧಿಗಳು ಮಾತ್ರ ಆಯ್ಕೆಯಾದ ನಂತರ ಈ ದಿಕ್ಕಿಗೆ ತಲೆ ಹಾಕಿಯೂ ಮಲಗುವುದಿಲ್ಲ’ ಎನ್ನುತ್ತಾರೆ ಕಾಲೊನಿಯ ನಿವಾಸಿಗಳು.

‘ಹೆಚ್ಚೇನು ಬೇಡ. ನಗರದ ಇತರ ಕಡೆಗಳಲ್ಲಿ ಕುಡಿಯುವ ನೀರು ಹರಿಸುವಂತೆ ನಮಗೆ ವಾರಕ್ಕೊಮ್ಮೆಯಾದರೂ ನೀರು ಹರಿಸಿದ್ದಿದ್ದರೆ ನಾವು ನೀರಿಗಾಗಿ ಇಷ್ಟೊಂದು ಕಷ್ಟ ಪಡಬೇಕಾಗುತ್ತಿರಲಿಲ್ಲ. ಪ್ರತಿದಿನ ನೀರಿಗಾಗಿ ನಾವು ಪಡುತ್ತಿರುವ ಪಾಡನ್ನು ಕೇಳಲು ಯಾವ ಜನಪ್ರತಿನಿಧಿಯು ಇತ್ತ ಸುಳಿಯುವುದಿಲ್ಲ’ ಎಂದು ನೊಂದುಕೊಳ್ಳುತ್ತಾರೆ ನಿತ್ಯ ನೀರಿನ ಸಮಸ್ಯೆ ಅನುಭವಿಸುತ್ತಿರುವ ಕಾಲೋನಿಯ ಮಹಿಳೆಯರು.

‘ಈ ಪ್ರದೇಶದಲ್ಲಿ ಸ್ವಚ್ಛತೆ ಸಮಸ್ಯೆಯೂ ಇದೆ. 6 ತಿಂಗಳಿಗೊಮ್ಮೆಯೂ ಚರಂಡಿಗಳನ್ನು ಸ್ವಚ್ಛ ಮಾಡಿಸುತ್ತಿಲ್ಲ. ಇದರಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ಅಲ್ಲೇ ನಿಂತುಕೊಳ್ಳುತ್ತಿದೆ. ಇದರಿಂದ ಕಾಲೋನಿಯೆಲ್ಲ ವಾಸನೆ ಹರಡುತ್ತಿದೆ’ ಎನ್ನುತ್ತಾರೆ ಕಾಲೊನಿ ನಿವಾಸಿ ಸುಮನ್‌.

‘ರಸ್ತೆಗಳಲ್ಲಿ ಆಳೆತ್ತರದ ಗುಂಡಿಗಳನ್ನು ಅಗೆದು ಹಾಗೆ ಬಿಡುತ್ತಿದ್ದಾರೆ. ವೃದ್ಧರು, ಮಕ್ಕಳು ಓಡಾಡುವ ರಸ್ತೆಗಳಲ್ಲಿಯೇ ಇಂತಹ ಗುಂಡಿಗಳಿರುವುದರಿಂದ ಜನರ ಭಯಕ್ಕೆ ಕಾರಣವಾಗಿದೆ. ಈ ಗುಂಡಿಗಳನ್ನು ಯಾರೂ, ಯಾಕೆ ತೆಗೆಸುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳಲ್ಲ, ಮನುಷ್ಯರು ನಡೆದು ಹೋಗುವುದೇ ಕಷ್ಟ ಎನ್ನುವಂತಾಗಿದೆ’ ಎನ್ನುತ್ತಾರೆ.

‘ಸ್ವಚ್ಛತೆಯ ಕೊರತೆಯಿಂದಾಗಿ ಆರೋಗ್ಯದ ಸಮಸ್ಯೆ ಹೆಚ್ಚಿದೆ. ಆದರೆ ಇಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿಲ್ಲ. ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆ ಮಂಜೂರಾಗದಂತೆ ಲಾಬಿ ನಡೆಸುತ್ತಿದ್ದಾರೆ. ಇದರಿಂದ ದಿನಕ್ಕೆ ನೂರು, ಇನ್ನೂರು ರೂಪಾಯಿ ದುಡಿಯುವ ಬಡವರು ತಮ್ಮ ದುಡಿಮೆಯ ಹಣವನ್ನೆಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸುರಿಯುವಂತಾಗಿದೆ’ ಎಂದು ಆರೋಪಿಸುತ್ತಾರೆ.

‘ಆಸ್ಪತ್ರೆ ತೆರೆಯುತ್ತಿದ್ದಂತೆಯೇ ರೋಗಿಗಳು ತುಂಬಿಹೋಗುತ್ತಿದ್ದಾರೆ. ಇದರಿಂದ ಖಾಸಗಿ ವೈದ್ಯರು ಹಣ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳನ್ನು ತೆರೆದು ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ.

‘ನಗರದ ಎಲ್ಲ ಭಾಗದ ಜನರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಕ್ಕಾಗಿ ಹೇಮಾವತಿ ನೀರನ್ನು ನಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿಸಲು ಮನವಿ ಮಾಡಿಕೊಂಡಿದ್ದೇವೆ. ಇಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆಯೂ ನಾನು ಸಂಬಂಧಪಟ್ಟವರ ಬಳಿ ಮಾತನಾಡುತ್ತೇನೆ’ ಎನ್ನುತ್ತಾರೆ ಶಾಸಕ ರಫೀಕ್‌ ಅಹಮದ್‌.
‘ನೀರಿನ ಸಮಸ್ಯೆ ನಗರದ ಎಲ್ಲ ಭಾಗಗಳಲ್ಲಿಯೂ ಇದೆ. ಈ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸುತ್ತೇವೆ’ ಎನ್ನುತ್ತಾರೆ 28ನೇ ವಾರ್ಡ್‌ ಸದಸ್ಯೆ ಎಂ.ಆರ್‌.ಜಯಲಕ್ಷ್ಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT