ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚಕರಿಗೆ ಜಿಎಸ್‌ಟಿ ಮಾರಕ

Last Updated 20 ಸೆಪ್ಟೆಂಬರ್ 2017, 9:02 IST
ಅಕ್ಷರ ಗಾತ್ರ

ಸಾಗರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ತೆರಿಗೆ ಪದ್ಧತಿ ಜಿಎಸ್‌ಟಿ ತೆರಿಗೆ ವಂಚಕರಿಗೆ ಮಾರಕವಾಗಿದೆ ಎಂದು ಲೆಕ್ಕ ಪರಿಶೋಧಕ ಅಬಸೆ ದಿನೇಶ್‌ಕುಮಾರ್‌ ಜೋಷಿ ಹೇಳಿದರು. ಇಲ್ಲಿನ ಸೇವಾಸಾಗರ ಶಾಲೆಯ ಅಜಿತ್‌ ಸಭಾಭವನದಲ್ಲಿ ತಾಲ್ಲೂಕು ಬಿಜೆಪಿ ಘಟಕ ಸೋಮವಾರ ಜಿಎಸ್‌ಟಿ ಕುರಿತು ಏರ್ಪಡಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕು ಮತ್ತು ಸೇವಾ ತೆರಿಗೆಯಿಂದ ಸಾರ್ವಜನಿಕರು ವಿವಿಧ ಹಂತಗಳಲ್ಲಿ ತೆರಿಗೆ ಪಾವತಿಸುವುದಕ್ಕೆ ಕಡಿವಾಣ ಬಿದ್ದಿದೆ. ಇದರಿಂದಾಗಿ ತೆರಿಗೆ ಪದ್ಧತಿಯಲ್ಲಿ ಏಕರೂಪತೆ ತರಲು ಸಾಧ್ಯವಾಗಿದೆ. ಆದರೆ, ಕೆಲವು ವರ್ತಕರು ಜಿಎಸ್‌ಟಿ ವಿಷಯದಲ್ಲಿ ಲಾಭ ಪಡೆಯಲು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಕೃಷಿ ಉತ್ಪಾದಿತ ವಸ್ತುಗಳು ಸೇರಿದಂತೆ ಹಲವು ಉತ್ಪನ್ನಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ವಾರ್ಷಿಕ ₹ 20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ಸಣ್ಣ ವರ್ತಕರು ಕೂಡ ಜಿಎಸ್‌ಟಿ ಪದ್ಧತಿಯಡಿ ನೋಂದಣಿ ಮಾಡಿಸುವ ಅಗತ್ಯವಿಲ್ಲ. ಆದರೆ ಮಾಹಿತಿ ಕೊರತೆಯಿಂದ ಕೆಲವು ವರ್ಗದವರಲ್ಲಿ ಜಿಎಸ್‌ಟಿ ಬಗ್ಗೆ ತಪ್ಪು ಕಲ್ಪನೆ ಮೂಡುತ್ತಿದೆ ಎಂದರು.

ಜಿಎಸ್‌ಟಿ ಜಾರಿಗೆ ಬಂದ ನಂತರ ಕೆಲವು ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಕಂಡ ಮಾತ್ರಕ್ಕೆ ಇಡೀ ಪದ್ಧತಿಯೇ ಸರಿ ಇಲ್ಲ ಎಂದು ವಿಶ್ಲೇಷಿಸಲಾಗದು. ಕೆಲವು ಉತ್ಪನ್ನಗಳ ಬೆಲೆ ಏರಿಕೆ ಅವೈಜ್ಞಾನಿಕ ಎಂದು ಕಂಡುಬಂದಲ್ಲಿ ಈ ಬಗ್ಗೆ ಜಿಎಸ್‌ಟಿ ಮಂಡಳಿಗೆ ದೂರು ನೀಡಿದರೆ ತೆರಿಗೆಯನ್ನು ಪರಿಷ್ಕರಿಸುವ ಅವಕಾಶ ಕೂಡ ಮುಕ್ತವಾಗಿದೆ ಎಂದು ತಿಳಿಸಿದರು.
ಯಾವುದೇ ಹೊಸ ಪದ್ಧತಿ ಜಾರಿಗೆಬಂದಾಗ ಅದನ್ನು ಅನುಷ್ಠಾನಗೊಳಿಸುವಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ.

ಈ ಹಾದಿಯಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳುವತ್ತ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎಂದರು. ಮಾಜಿ ಸಚಿವ ಎಚ್‌.ಹಾಲಪ್ಪ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಯು.ಎಚ್‌. ರಾಮಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್‌, ಕಾರ್ಯದರ್ಶಿ ಚೇತನ್‌ರಾಜ್‌ ಕಣ್ಣೂರು, ಸತೀಶ್‌ ಬಾಬು, ಕಲಸೆ ಚಂದ್ರಪ್ಪ ಹಾಜರಿದ್ದರು. ನಂದಿನಿ ಬಸವರಾಜ್‌ ಪ್ರಾರ್ಥಿಸಿದರು. ನಗರ ಘಟಕದ ಅಧ್ಯಕ್ಷ ಆರ್‌. ಶ್ರೀನಿವಾಸ್‌, ಬಿ.ಮೋಹನ್‌ ವಂದಿಸಿದರು. ಗಣೇಶ್‌ಪ್ರಸಾದ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT