ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣ ರಸ್ತೆ ಗುಂಡಿಗಳ ತಾಣ

Last Updated 20 ಸೆಪ್ಟೆಂಬರ್ 2017, 9:04 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಮುಖ್ಯ ರೈಲು ನಿಲ್ದಾಣ ರಸ್ತೆಯು ಕೆಲವು ದಿನಗಳ ಹಿಂದೆ ಸುರಿದ ಮಳೆಯ ಹೊಡೆತಕ್ಕೆ ಮತ್ತೆ ಗುಂಡಿಗಳಿಂದ ಆವೃತವಾಗಿದೆ. ನಿಲ್ದಾಣದ ಮುಖ್ಯ ರಸ್ತೆ ಕಾಮಗಾರಿ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿತ್ತು. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಕಷ್ಟಪಟ್ಟು ಗುಂಡಿಗಳಿಂದ ತಪ್ಪಿಸಿಕೊಂಡು ಸಂಚರಿಸುತ್ತಿದ್ದರು.

ವಿವಿಧ ಸಂಘ, ಸಂಸ್ಥೆಗಳ ಸದಸ್ಯರು, ಸಾರ್ವಜನಿಕರ ಪ್ರತಿಭಟನೆ, ಹೋರಾಟದ ಫಲವಾಗಿ ಒಂದು ವರ್ಷದ ಹಿಂದಷ್ಟೇ ನೂತನವಾಗಿ ಡಾಂಬರು ರಸ್ತೆ ನಿರ್ಮಾಣ ಮಾಡಲಾಗಿತ್ತು. ಸುಗಮ ಸಂಚಾರಕ್ಕೆ ಆಸ್ಪದ ಕಲ್ಪಿಸಬೇಕಾಗಿದ್ದ ಈ ರಸ್ತೆ ಇದೀಗ ಗುಂಡಿ, ಗೊಟರುಗಳ ತಾಣವಾಗಿ ಮಾರ್ಪಡುತ್ತಿದೆ.

ನೂತನ ರಸ್ತೆ ನಿರ್ಮಾಣಕ್ಕೂ ಮುನ್ನ ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಬರಬೇಕಾದರೆ ರಸ್ತೆಗೆ ಹಿಡಿಶಾಪ ಹಾಕುತ್ತಿದ್ದರು. ಮಳೆಗಾಲದಲ್ಲಿ ಪಾದಚಾರಿಗಳೂ ಓಡಾಡಲು ಸಾಧ್ಯವಾಗದಷ್ಟು ಹದಗೆಟ್ಟಿತ್ತು. ಸಂಪೂರ್ಣ ಕೆಸರುಗದ್ದೆಯಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಒಂದು ವರ್ಷದ ಹಿಂದೆ ರೈಲು ನಿಲ್ದಾಣ ರಸ್ತೆ ಕಾಮಗಾರಿಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾಗಿತ್ತು. ಆದರೆ, ರಸ್ತೆ ನಿರ್ಮಾಣವಾಗಿ ಕೆಲವು ದಿನಗಳಲ್ಲೇ ಗುಂಡಿಗಳು ಕಾಣಿಸಿವೆ.

ಕೆಇಬಿ ವೃತ್ತದ ಮೂಲಕ ಮುಖ್ಯ ನಿಲ್ದಾಣದವರೆಗೂ ರಸ್ತೆ ವಿಭಜಕ ನಿರ್ಮಾಣ ಮಾಡಲಾಗಿದೆ. ಆದರೆ, ವಾಹನ ನಿಲುಗಡೆ (ದ್ವಿಚಕ್ರ ವಾಹನ ಪಾರ್ಕಿಂಗ್) ಸ್ಥಳದ ಬಳಿ ಮೂರ್ನಾಲ್ಕು ಗುಂಡಿಗಳಾಗಿವೆ. ಇದರ ಪರಿಣಾಮ ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಆತಂಕದಲ್ಲೇ ಓಡಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏನಾದರೂ ಅವಘಡ ನಡೆಯುವ ಮೊದಲೇ ಇದನ್ನು ಪರಿಹರಿಸಬೇಕು ಎಂಬುದು ಸ್ಥಳೀಯರ ಆಗ್ರಹ.

‘ರೈಲು ನಿಲ್ದಾಣದ ರಸ್ತೆಯಲ್ಲಿ ಉಂಟಾಗಿರುವ ಪ್ರಮಾಣವನ್ನು ನೋಡುತ್ತಿದ್ದರೆ, ಕಾಮಗಾರಿ ಕಳಪೆಯಾದಂತಿದೆ. ಗುಂಡಿಗಳನ್ನು ಮುಚ್ಚದೇ ಹೋದಲ್ಲಿ ಸವಾರರಿಗೆ ಮತ್ತಷ್ಟು ಸಮಸ್ಯೆ ಉಂಟಾಗಬಹುದು. ಸಣ್ಣ ಪ್ರಮಾಣದ ಗುಂಡಿ ಇರುವಾಗಲೇ ಕಾಮಗಾರಿ ನಡೆಸಿದರೆ ಉತ್ತಮ. ಇಲ್ಲವಾದಲ್ಲಿ ವಾಹನಗಳಿಂದ ಪಾದಚಾರಿಗಳಿಗೂ ಪೆಟ್ಟಾಗುವ ಸಂಭವವಿದೆ. ನಿಯಂತ್ರಣ ತಪ್ಪಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯ ಸುರೇಶ್ ಮೈಲಾರ್.

‘ಈ ಭಾಗದಲ್ಲಿ ದಿನದಿಂದ ದಿನಕ್ಕೆ ಗುಂಡಿಗಳು ಹೆಚ್ಚಾಗುತ್ತಿವೆ. ವಾಹನಗಳು ಗುಂಡಿ ತಪ್ಪಿಸುವ ಭರದಲ್ಲಿ ಸಣ್ಣ ಅಪಘಾತಗಳು ಸಂಭವಿಸುತ್ತಿದೆ. ಮನೆ ಒಳಗೆ ಅಡಿಗೆ ಮಾಡುವ ಸಂದರ್ಭದಲ್ಲಿ ಏನೋ ಶಬ್ಧವಾಗಿ ಹೊರಬಂದು ನೋಡುತ್ತೇವೆ. ನಿತ್ಯ ದ್ವಿಚಕ್ರ ವಾಹನಗಳು ಬೀಳುತ್ತಲೇ ಇರುತ್ತವೆ.

ಅಲ್ಲದೆ, ರೈಲು ನಿಲ್ದಾಣದ ರಸ್ತೆಯು ಸವಳಂಗ ರಸ್ತೆಯಿಂದ ಹೊನ್ನಾಳಿ ರಸ್ತೆಗೆ ಸಂಪರ್ಕಿಸಲು ತುಂಬಾ ಹತ್ತಿರದ ರಸ್ತೆಯಾಗಿದೆ. ಹಾಗಾಗಿ ವಾಹನಗಳ ದಟ್ಟಣೆ, ಜನದಟ್ಟಣೆಯೂ ದ್ವಿಗುಣ. ಸಂಬಂಧಪಟ್ಟವರು ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಸ್ಥಳೀಯ ನಿವಾಸಿ ತಬಸಮ್.

‘ರೈಲು ನಿಲ್ದಾಣದ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಈ ಹಿಂದೆಯೇ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ದೂರು ಸಲ್ಲಿಸಲಾಗಿತ್ತು. ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿ ನಡೆದಿದೆ. ರಸ್ತೆ ಸಮತಟ್ಟಾಗಿಲ್ಲ. ಮಳೆ ಜೋರಾಗಿ ಸುರಿದರೆ ಗುಂಡಿಗಳು ಹೆಚ್ಚಾಗುತ್ತವೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸುತ್ತಾರೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಮುಖಂಡ ಕೆ.ವಿ.ವಸಂತಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT