ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಕಂಚಿ ವರದರಾಜಸ್ವಾಮಿ ಅಂಬಿನೋತ್ಸವ

Last Updated 20 ಸೆಪ್ಟೆಂಬರ್ 2017, 9:25 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಪುರಾಣ ಪ್ರಸಿದ್ಧ ದಶರಥ ರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಕಂಚೀಪುರದ ಕಂಚೀವರದರಾಜ ಸ್ವಾಮಿಯ ನಾಮಧಾರಣೆ ಹಾಗೂ ಅಂಬಿನೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವೈಭವದಿಂದ ನಡೆಯಿತು.

ನಾಡಿನ ಹಲವೆಡೆ ಬಾಳೆಕಂದು ನೆಟ್ಟು ಅಂಬಿನೋತ್ಸವ ಆಚರಿಸುವುದು ಸಾಮಾನ್ಯ. ಆದರೆ, ಇಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ನಡೆಯುತ್ತದೆ. ಬಾಣದಿಂದ ಬಿಲ್ಲನ್ನು ಹೊಡೆದ ಸ್ಥಳಕ್ಕೆ ತೆಂಗಿನಕಾಯಿ ಒಡೆಯುವುದು ಇಲ್ಲಿನ ವಿಶೇಷ. ಹೀಗೆ ಇಲ್ಲಿನ ಉತ್ತರೆ ಬೆಟ್ಟದ ವಿವಿಧೆಡೆ 9 ಬಾರಿ ಅಂಬಿನ ಆಚರಣೆ ಮಾಡಲಾಯಿತು. ಭಕ್ತರಿಗೆ ಬುತ್ತಿಬಾನದ ಪ್ರಸಾದ ವಿತರಿಸಲಾಯಿತು.

ಉತ್ತರೆ ಮಳೆ ನೀರಲ್ಲಿ ನಾಮಧಾರಣೆ: ಉತ್ತರೆ ಬೆಟ್ಟದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ (ದೊಡ್ಡವಜ್ರ) ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರೆ ಮಳೆ ನೀರಿನಿಂದ ಕಂಚಿ ವರದರಾಜಸ್ವಾಮಿ ಮೂರ್ತಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಾಮಧಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಾಸಯ್ಯಂದಿರು ಜಾಗಟೆ ಹಾಗೂ ಶಂಕುವಿನ ನಾದದೊಂದಿಗೆ ‘ಕಂಚಿ ವರದರಾಜ ಸ್ವಾಮಿ ಗೋವಿಂದಾ.. ಗೋವಿಂದಾ...!’ ಎಂದು ಘೋಷಣೆ ಕೂಗಿದರು.

ಅನ್ನಸಂತರ್ಪಣೆ: ರಾಜ್ಯದ ವಿವಿಧೆಡೆ ನಡೆಯುವ ಜಾತ್ರೆ ಹಾಗೂ ಉತ್ಸವಗಳಿಗೆ ಭಕ್ತರಿಗೆ ಸಿಹಿ ಅಡುಗೆ ಅನ್ನಸಂತರ್ಪಣೆ ಮಾಡಿಸುವುದು ಸಾಮಾನ್ಯ. ಆದರೆ, ಇಲ್ಲಿ ಸ್ವಾಮಿಗೆ ಇಷ್ಟವಾದ ಹಾಗೂ ಜಿಲ್ಲೆಯ ಜನರಿಗೆ ಪ್ರಿಯವಾದ ರಾಗಿ ಮುದ್ದೆ, ಹುಳಿಸೊಪ್ಪು ಸಾಂಬಾರ್‌ ತಯಾರಿಸಿ ಅನ್ನಸಂತರ್ಪಣೆ ಏರ್ಪಡಿಸಿದ್ದು ವಿಶೇಷವಾಗಿತ್ತು.

ಉತ್ತರೆ ಮಳೆ ಖಚಿತ: ಪ್ರತಿ ವರ್ಷ ಅಂಬಿನೋತ್ಸವದ ಅಂಗವಾಗಿ ಸ್ವಾಮಿ ಪಟ್ಟಕ್ಕೆ ಕೂತಾಗ ಉತ್ತರೆ ಮಳೆ ಬರುವುದು ಖಚಿತ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ ಈ ಬಾರಿ ಅಂಬಿನೋತ್ಸವಕ್ಕೆ ಕಂಚೀವರದರಾಜಸ್ವಾಮಿ ಸೆ.14ರ ರಾತ್ರಿ ಪಟ್ಟಕ್ಕೆ ಕೂತಾಗ ಉತ್ತರೆ ಮಳೆ ಬಂದಿದ್ದು ಭಕ್ತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು ಎನ್ನುತ್ತಾರೆ ಪುರೋಹಿತರು.

ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಸೆ. 22ರವರೆಗೂ ಅಂಬಿನೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT