ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆಯಿಂದ ಜೀವಜಲ ನಾಶ

Last Updated 20 ಸೆಪ್ಟೆಂಬರ್ 2017, 9:40 IST
ಅಕ್ಷರ ಗಾತ್ರ

ದೇವನಹಳ್ಳಿ: ಬಯಲು ಪ್ರದೇಶ ಗ್ರಾಮಾಂತರ ಜಿಲ್ಲೆಯ ಅರ್ಕಾವತಿ ನದಿ ಪಾತ್ರದಲ್ಲಿ ಗಣಿಗಾರಿಕೆಯಿಂದ ಜೀವಜಲ ನಾಶವಾಗುತ್ತಿದೆ ಎಂಬ ಆರೋಪಗಳು ಎಲ್ಲೆಡೆ ಕೇಳಿಬರುತ್ತಿದೆ. ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಹರಿಯುವ ಅರ್ಕಾವತಿ ನದಿ ಪಾತ್ರ ಮತ್ತು ನದಿ ಉಗಮ ಸ್ಥಾನದಲ್ಲಿ ಪರಿಸರ ನಾಶದ ಜತೆಗೆ ನದಿ ಪಾತ್ರದಲ್ಲಿ ಸ್ಥಳೀಯರಿಗೆ ಹೆಚ್ಚುತ್ತಿರುವ ಪ್ರತಿಕೂಲ ಪರಿಣಾಮವನ್ನು ಲೆಕ್ಕಿಸದೆ ಸರ್ಕಾರದಲ್ಲಿ ಪ್ರಭಾವಿಗಳಾಗಿರುವವರಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡುತ್ತಿರುವ ಸರ್ಕಾರದ ಕ್ರಮ ಆಕ್ಷೇಪಾರ್ಹ ಎಂಬುದು ರೈತರ ಆರೋಪ.

ಎರಡು ತಾಲ್ಲೂಕಿನಲ್ಲಿ ಹರಿಯುವ ನದಿ ಪಾತ್ರ ವ್ಯಾಪ್ತಿಯಲ್ಲಿ ಬರುವ 28ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ನೂರಾರು ಕೆರೆ, ಸಾವಿರಾರು ಕುಟುಂಬಗಳು ಅವಲಂಬಿಸಿರುವ ಕುಡಿಯುವ ನೀರು, ಕೃಷಿ ಮತ್ತು ನೀರಾವರಿಗಾಗಿ ಕೊರೆಯಿಸಲಾದ ಕೊಳವೆ ಬಾವಿಗಳಿಗೆ ಅಂತರ್ಜಲದ ಮಟ್ಟ ಕುಸಿತದಿಂದ ವಾರ್ಷಿಕವಾಗಿ ತೀರ ಕೆಳಹಂತಕ್ಕೆ ಸೇರಿದೆ.

ಸರ್ಕಾರ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವ ಬದಲು ದೇವಾಲಯ, ಮಂದಿರ ಎಂದು ವಿಶೇಷ ಪರವಾನಗಿ ನೀಡಿ ದೇವಾಲಯದ ಹೆಸರಿನಲ್ಲಿ ಕಲ್ಲು ಸಾಗಾಣಿಕೆ ಜತೆಗೆ ಅಕ್ರಮ ಕಲ್ಲು ಗಣಿಗಾರಿಕೆಗೆ ಅನುವು ಮಾಡಿಕೊಡುತ್ತಿದೆ ಎಂಬುದು ರೈತರ ಮತ್ತೊಂದು ಆರೋಪ.

ದೇವನಹಳ್ಳಿ ತಾಲ್ಲೂಕಿನಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ನಂತರ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೊಂಡು ವಿಮಾನ ನಿಲ್ದಾಣದಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೆ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ತೀರ್ಮಾನಿಸಲಾಗಿತ್ತು.

ಪರಿಸರ ಮಾಲಿನ್ಯ ಇಲಾಖೆ, ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಮತ್ತು ನಗರ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದೆ, ಗಣಿಗಾರಿಕೆ ಸ್ಥಗಿತಗೊಳಿಸಿ 15 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ , ಗೋಮಾಳ, ಖರಾಬು, ನಡುತೋಪುಗಳಲ್ಲಿ ಅರಣ್ಯೀಕರಣಗೊಳಿಸಬೇಕು ಎಂದು ನಿರ್ಣಯಿಸಿತ್ತು ಪ್ರಸ್ತುತ ತನ್ನ ನಿರ್ಣಯವನ್ನೆ ಮೂಲೆ ಗುಂಪುಮಾಡಿ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ ಎಂಬುದು ಸ್ಥಳೀಯರ ಆಕ್ರೋಶ.

ಸರ್ಕಾರ ಅರ್ಕಾವತಿ ನದಿ ಪುನಃಶ್ಚೇತನ ಮಾಡಿ ತಿಪ್ಪಗೊಂಡನಹಳ್ಳಿ (ಚಾಮರಾಜ) ಜಲಾಶಯಕ್ಕೆ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಕಾವೇರಿ ನಿಗಮ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಟಾನಗೊಳಿಸಲು ಅಲ್ಪ ಸ್ವಲ್ಪ ಕಾಮಗಾರಿ ನಡೆಸಿದೆ ಹೊರತು ಸಮಗ್ರವಾಗಿ ನಡೆಸಿಲ್ಲ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತೈಲಗೆರೆ, ಮುದ್ದನಾಯಕನಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಅಕ್ರಮ ಮತ್ತು ಪರವಾನಗಿ ಪಡೆದು ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯ ಗ್ರಾಮಸ್ಥರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಲ್ಲು ಗಣಿಗೆ ಬಳಸುವ ರಾಸಾಯನಿಕ ಸ್ಫೋಟದ ಹೊಗೆ ಮತ್ತು ಕಲ್ಲುಗಣಿ ದೂಳಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಮತ್ತು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿತ, ರೈತರ ಬೆಳೆ ಹಾನಿ ಕೂಡಲೆ ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯಿತಿ ಸರ್ವಸದಸ್ಯರ ಸಭೆಯಲ್ಲಿ ಠರಾವು ಮಂಡಿಸಲಾಗಿದೆ.

ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಈ ಕಡತ ರವಾನಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಠರಾವು ಮಂಡಿಸಿದ್ದರು ಯಾವುದೆ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕಾರಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ದೇವರಾಜ್.

ಬೆಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ, ರಾಜ್ಯದ ಪರಿಸರ ಮಾಲಿನ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಥಳೀಯ ಕಂದಾಯ ಇಲಾಖೆ ನಿರಪೇಕ್ಷಣಾ ಪತ್ರ ನೀಡುತ್ತಿರುವುದು ನದಿ ಪಾತ್ರ ಆಪೋಶನಕ್ಕೆ ಕಾರಣವಾಗುತ್ತಿದೆ. ಕಳೆದ ನಲವತ್ತು ವರ್ಷಗಳಿಂದ ನದಿ ಪಾತ್ರದ ಕೆರೆಗಳ ಕೊಡಿ ಹರಿದಿಲ್ಲ ಎನ್ನುತ್ತಾರೆ ಗ್ರಾಮಾಂತರ ಜಿಲ್ಲೆ ರೈತ ಸಂಘದ ಅಧ್ಯಕ್ಷ ಎಸ್.ವೀರಣ್ಣ.

ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್‌ ಸರ್ಕಾರ ಗಣಿಗಾರಿಗೆ ಅನುಮತಿ ನೀಡಲು ತರಾತುರಿಯಲ್ಲಿ ಸಿದ್ದತೆ ನಡೆಸುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಅಧ್ಯಕ್ಷ ಬಿಜ್ಜವಾರ ನಾಗರಾಜ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT