ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಗಳಲ್ಲಿ ಹಸಿರು: ಗರಿಗೆದರಿದ ನಿರೀಕ್ಷೆ

Last Updated 20 ಸೆಪ್ಟೆಂಬರ್ 2017, 9:48 IST
ಅಕ್ಷರ ಗಾತ್ರ

ರಾಮನಗರ: ಐದಾರು ವರ್ಷಗಳಿಂದ ಬರದಿಂದ ಕಂಗಾಲಾಗಿದ್ದ ರೈತರ ಬದುಕಿಗೆ ಈ ಬಾರಿ ರಾಗಿ ಬೆಳೆಯ ಮೂಲಕ ಸುಗ್ಗಿ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದೆ. ವರುಣ ಕೃಪೆ ತೋರುತ್ತಿರುವುದರಿಂದ ದೀಪಾವಳಿಯ ಬೆಳಕು ರೈತರ ಮೊಗದಲ್ಲಿ ಮಿನುಗುವ ಸಾಧ್ಯತೆ ಇದೆ.

ಮುಂಗಾರು ವೈಫಲ್ಯದಿಂದ ಬೇಸರಗೊಂಡಿದ್ದ ರೈತರು ಬೆಳೆ ಬಾರದೇ ಅವುಗಳನ್ನು ಉಳುಮೆ ಮಾಡಿ ರಾಗಿ ಬಿತ್ತನೆ ಮಾಡಿದ್ದರು. ಆದರೆ ರಾಗಿ ಬಿತ್ತನೆಯಾದ ಸಂದರ್ಭದಲ್ಲಿ ಬೆಳೆ ಎದ್ದು ನಿಂತಿತ್ತು. ವಾರದಿಂದ ಸುರಿಯುತ್ತಿರುವ ಮಳೆ ರೈತರ ಆತಂಕ ದೂರ ಮಾಡಿ ಹೊಸ ಭರವಸೆ ಮೂಡಿಸಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಇದೇ 12ರವರೆಗೆ 792 ಮಿಲಿಮೀಟರ್‌ನಷ್ಟು ಮಳೆಯಾಗಿದೆ. ಈ ಸಂದರ್ಭದಲ್ಲಿ 493.38 ಮಿ.ಮೀ. ವಾಡಿಕೆ ಮಳೆ ಆಗಬೇಕಾಗಿತ್ತು. ಶೇ 61.8 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದರಿಂದ ರೈತರು ಉತ್ಸಾಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 1.14 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಇದ್ದು, ಪ್ರಸ್ತುತ 94,030 ಹೆಕ್ಟೇರ್‌ ಬಿತ್ತನೆಗೆ ಒಳಪಟ್ಟಿದೆ. ಈ ಮೂಲಕ ಶೇ 91 ರಷ್ಟು ಬಿತ್ತನೆ ಆದಂತಾಗಿದೆ.

ರಾಮನಗರ ನೀರಾವರಿ ಮತ್ತು ಮಳೆಯಾಶ್ರಿತ ಸೇರಿದಂತೆ ಒಟ್ಟು 17,867 ಹೆಕ್ಟೇರ್ (ಶೇ 88.62), ಚನ್ನಪಟ್ಟಣ 13, 890 (ಶೇ 89.46), ಕನಕಪುರ 34,830 (ಶೇ 72), ಮಾಗಡಿ 27,443 (ಶೇ 90.98) ಹೆಕ್ಟೇರ್‌ನಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆ ಆಗಿದೆ. ಸರ್ಕಾರ ಕ್ವಿಂಟಲ್ ರಾಗಿಗೆ ₹2,500 ಬೆಂಬಲ ಬೆಲೆ ಘೋಷಿಸಿದ್ದು, ರೈತರಲ್ಲಿ ಇನ್ನಷ್ಟು ಉತ್ಸಾಹ ಹೆಚ್ಚಿಸಿದೆ.

ಮುಸುಕಿನ ಜೋಳ 1,730 ಹೆಕ್ಟೇರ್, ಭತ್ತ 2906 ಹೆಕ್ಟೇರ್, ತೊಗರಿ 3925 ಹೆಕ್ಟೇರ್, ಅವರೆ 6405 ಹೆಕ್ಟೇರ್ ಬಿತ್ತನೆ ಆಗಿದೆ. ಅಂತೆಯೇ ಹರಳು 1,672 ಹೆಕ್ಟೇರ್, ಹುಚ್ಚೆಳ್ಳು 487 ಹೆಕ್ಟೇರ್ ಸಾಸಿವೆ 366 ಹೆಕ್ಟೇರ್ ಸೇರಿದಂತೆ ಒಟ್ಟು 2,525 ಹೆಕ್ಟೇರ್ ಎಣ್ಣೆಕಾಳುಗಳ ಬೀಜ ಬಿತ್ತನೆ ಮಾಡಲಾಗಿದೆ.

ಈ ಬಾರಿ ವಿಶೇಷವಾಗಿ ಸಿರಿಧಾನ್ಯಗಳ ಬಿತ್ತನೆಗೆ ಕೃಷಿ ಇಲಾಖೆ ಹೆಚ್ಚಿನ ಒತ್ತು ನೀಡಿತ್ತು. 385 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಸಜ್ಜೆ, ನವಣೆ, ಆರ್ಕಾ, ಕೊರ್ಲೆ ಸೇರಿದಂತೆ ಸುಮಾರು 420 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ.

ರೈತರ ನಿರೀಕ್ಷೆ: ‘ಉತ್ತಮವಾಗಿ ಮಳೆ ಬಂದರೆ ರಾಗಿ ಬೆಳೆ ರೈತರ ಕಣ ಸೇರುವುದು ನಿಶ್ಚಿತ’ ಎಂದು ಹುಣಸೆ ದೊಡ್ಡಿ ರೈತ ಯೋಗೀಶ್ ಹೇಳುತ್ತಾರೆ. ‘ರೈತರ ಬಳಿ ತಿನ್ನಲು ರಾಗಿ ಇಲ್ಲ, ಅಲ್ಲದೆ ಜಾನುವಾರುಗಳಿಗೆ ಮೇವಿನ ಅಭಾವ ಇರುವುದರಿಂದ ಈ ಬಾರಿ ರಾಗಿ ಬೆಳೆ ಕಡೆ ರೈತರು ಮುಖ ಮಾಡಿದ್ದಾರೆ. ಅಲ್ಪ, ಸ್ವಲ್ಪ ಬಿದ್ದ ಮಳೆಗೆ ಗುರಿ ಮೀರಿ ರಾಗಿ ಬಿತ್ತನೆ ಮಾಡಿದ್ದಾರೆ’ ಎನ್ನುತ್ತಾರೆ ಅವರು.

‘ಪ್ರಾರಂಭದಲ್ಲಿ ಬಂದ ಮುಂಗಾರು ಮಳೆಯ ಬಿರುಸು ಕಂಡು ಸಂತೋಷವಾಗಿದ್ದೆವು. ಕಳೆದ ಐದಾರು ವರ್ಷಗಳಿಂದ ಇರುವ ಬರ ಈ ವರ್ಷ ಕೊನೆಯಾಗುತ್ತದೆ ಎಂದು ಕೊಂಡಿದ್ದೆವು. ಆದರೆ, ತದನಂತರದಲ್ಲಿ ನಿರೀಕ್ಷೆಯಂತೆ ಮಳೆ ಬರದೆ ಬಿತ್ತನೆ ಮಾಡಿದ್ದ ಬೆಳೆ ಒಣಗಿ ಹೋಗುತ್ತಿತ್ತು. ಆದರೆ ಕಳೆದ ಒಂದೂವರೆ ತಿಂಗಳಿನಿಂದ ಮಳೆ ಆಗುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ’ ಎನ್ನುತ್ತಾರೆ ರೈತ ಮಹಿಳೆ ಪಾರ್ವತಮ್ಮ,.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT