ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಜಗತ್ತಿನ ವೈಯ್ಯಾರಿ!

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ದೀಪಕ್ ಆರ್.ಕರಾಡೆ

ಫೋನ್ ಎನ್ನುವ ತಾಂತ್ರಿಕ ಲೋಕದ ಮಾಂತ್ರಿಕ ಕಣ್ಬಿಟ್ಟು ಭರ್ತಿ ಹತ್ತು ವರ್ಷಗಳೇ ಉರುಳಿವೆ. ಈ ಅವಧಿಯಲ್ಲಿ ಅದು ಇಟ್ಟ ಪ್ರತಿ ಹೆಜ್ಜೆಯೂ ಐಫೋನ್ ತಂತ್ರಜ್ಞಾನದಲ್ಲಿ ಮಹತ್ವವಾದದ್ದೇ. ಇಡೀ ಒಂದು ದಶಕ ತನ್ನ ದಾಖಲೆಗಳನ್ನು ತಾನೇ ಮುರಿಯುತ್ತ, ವರ್ಷಕ್ಕೊಂದು ಹೊಸರೂಪ, ಹೊಸ ಹುಟ್ಟು ಪಡೆಯುತ್ತ, ಹಂತ-ಹಂತವಾಗಿ ಬೆಳೆಯುತ್ತ, ಅದೇ ಬೇಡಿಕೆ, ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬರುವುದೆಂದರೆ ಸುಮ್ಮನೇ ಅಲ್ಲ. ಈ ಹಿರಿಮೆಯ ಗರಿ ಆ್ಯಪಲ್‌ ಮುಡಿಗೇರಲೇಬೇಕು.

ಟಚ್‌ಸ್ಕ್ರೀನ್ ಮೊಬೈಲ್ ಆವೃತ್ತಿಯ ಮೊದಲ ಅಧ್ಯಾಯ ಆರಂಭವಾದುದು 90ರ ದಶಕದಲ್ಲಿ. ಆಗ ಸ್ಪರ್ಧೆಯಲ್ಲಿದ್ದುದು ಬೆರಳೆಣಿಕೆಯಷ್ಟು ಕಂಪೆನಿಗಳು. ಕೇವಲ ಉಳ್ಳವರ ಸ್ವತ್ತಾಗಿದ್ದ ಟಚ್‌ಸ್ಕ್ರೀನ್ ಮೊಬೈಲ್ ಆಗ ಪ್ರತಿಷ್ಠೆಯ ಸಂಗತಿಯಾಗಿದ್ದೇನೊ ನಿಜ. ಆದರೆ ಈ ಕ್ಷೇತ್ರದಲ್ಲಿ ನಿಜವಾದ ಕ್ರಾಂತಿಗೆ ಮುನ್ನುಡಿ ಹಾಡಿದ್ದು ಆ್ಯಪಲ್‌, ಅದೂ 2007ರಲ್ಲಿ. ಅಂದರೆ ಟಚ್‌ಸ್ಕ್ರೀನ್ ಯುಗ ಆರಂಭವಾದ 15 ವರ್ಷಗಳ ನಂತರ.

2007ರಲ್ಲಿ ಕೇವಲ 3.5 ಇಂಚಿನ ಪರದೆಯ ಮೂಲಕ, ಸಾಮಾನ್ಯ ಎನ್ನಬಹುದಾದ ಕಾರ್ಯಕ್ಷಮತೆಯೊಂದಿಗೆ ಸ್ಪರ್ಧೆಗಿಳಿದ ಆ್ಯಪಲ್‌, 2ಜಿ ಮೂಲಕ ಐಫೋನ್ ಕ್ರಾಂತಿಗೆ ಮುನ್ನುಡಿ ಹಾಡಿತು. ಕಾಲಕಾಲಕ್ಕೆ ತನ್ನನ್ನೇ ತಾನು ತಿದ್ದಿಕೊಳ್ಳುತ್ತ, ತನ್ನನ್ನೇ ತಾನು ಮೀರುತ್ತ, ಬೀಳುತ್ತ, ಬೆಳೆಯುತ್ತ, ತನ್ನ ಗ್ರಾಹಕರ ಆಸಕ್ತಿ-ಅಭಿರುಚಿ-ಅವಶ್ಯಕತೆಗೆ ತಕ್ಕಂತೆ ಹೊಸ ಹೊಸ ರೂಪ, ವಿನ್ಯಾಸಗಳೊಂದಿಗೆ ಬೆಳೆಯಿತು.

ಮಾರುಕಟ್ಟೆಯಲ್ಲಿ ತನ್ನ ಎಲ್ಲ ಪ್ರಬಲ ಎದುರಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಐಫೋನ್, 10 ವರ್ಷಗಳ ಈ ಅವಧಿಯಲ್ಲಿ ದೈತ್ಯನಾಗಿ ಬೆಳೆದು ನಿಂತಿದೆ. ಇದೀಗ ಎಕ್ಸ್ ಆವೃತ್ತಿ ಬಿಡುಗಡೆ ಮೂಲಕ ಇನ್ನೊಂದು ಇತಿಹಾಸ ಬರೆಯಲು ಸಜ್ಜಾಗಿದೆ. ಇದರ ಜೊತೆಗೆ 8, 8 ಪ್ಲಸ್‌ ಆವೃತ್ತಿಗಳೂ ಹೊರಬರುತ್ತಿವೆ.

ಆರಂಭದಿಂದಲೂ ಅನುಕೂಲತೆಗಾಗಿ, ಅಗತ್ಯಕ್ಕಾಗಿ, ಪ್ರತಿಷ್ಠೆಗಾಗಿ ಜನರ ಬದುಕಿನೋಟಕ್ಕೆ ಒಗ್ಗೂಡುತ್ತ ಬೆಳೆದು ಬಂದ ಐಫೋನ್, ಬೆಲೆ ಸಮರದಲ್ಲಿ ಎಂದೂ ಜಿದ್ದಿಗೆ ಬೀಳಲಿಲ್ಲ. ವೈಶಿಷ್ಟ್ಯಗಳ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳಲಿಲ್ಲ. ಗುಣಮಟ್ಟ, ನಾವೀನ್ಯ, ಶ್ರೇಷ್ಠತೆ, ಭದ್ರತೆ, ವಿನ್ಯಾಸದ ವಿಚಾರದಲ್ಲಿ ಯಾವತ್ತೂ ತನ್ನ ಗ್ರಾಹಕರಿಗೆ ನಿರಾಶೆಯನ್ನುಂಟು ಮಾಡಲಿಲ್ಲ.

ಭದ್ರತೆ, ದಕ್ಷತೆ, ಕಾರ್ಯಕ್ಷಮತೆ: ಐಫೋನ್‌ನ ಜೀವನಾಡಿ ಎಂದರೆ ಅದರ ಆಪರೇಟಿಂಗ್ ಸಿಸ್ಟಂ ಐಓಎಸ್. ಮಾರುಕಟ್ಟೆ ಯಲ್ಲಿರುವ ಇತರೆ ಆಪರೇಟಿಂಗ್ ಸಿಸ್ಟಂಗಳಿಗೆ ಹೋಲಿಸಿದರೆ ಇದು ಹೆಚ್ಚು ಸುರಕ್ಷಿತ. ವೈರಸ್ ದಾಳಿಗಳಿಂದ ಮುಕ್ತ. ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸಬಲ್ಲ ಸ್ಮಾರ್ಟ್‌ಫೋನ್ ಇದಾಗಿದ್ದು, ತನ್ನ ಪ್ರತಿಯೊಂದು ಆವೃತ್ತಿಯಲ್ಲಿ ದೋಷರಹಿತ ಕಾರ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ.

ಐಫೋನ್ 3ಜಿ ಬಿಡುಗಡೆಯ ನಂತರ ಆ್ಯಪಲ್‌ ಮೊಟ್ಟ ಮೊದಲ ಬಾರಿಗೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ ಅನ್ನು ಪರಿಚಯಿಸಿತು. ಈ ಮೂಲಕ ಮೊಬೈಲ್‌ಗೆ ಅವಶ್ಯಕವಿರುವ ಥರ್ಡ್ ಪಾರ್ಟಿ ಸಾಫ್ಟ್‌ವೇರ್ ಬಳಕೆಗೆ ಒಂದು ವೇದಿಕೆ ಕಲ್ಪಿಸಿದಂತಾಯಿತು. ಐಟ್ಯೂನ್ಸ್ ಅಸ್ತಿತ್ವಕ್ಕೆ ಬರಲು ಇದೇ ಮೂಲವಾಯಿತು. ಈ ಆವೃತ್ತಿಯಲ್ಲಿ ಇದೊಂದು ಸಂವಹನ ಸಾಧನವಾಗಿ ಕೆಲಸ ಮಾಡಲಿ ಎನ್ನುವುದಕ್ಕಿಂತ ಹೆಚ್ಚು ಇದನ್ನು ಪಾಕೆಟ್ ಕಂಪ್ಯೂಟರ್‌ನಂತೆ ದುಡಿಸಬೇಕು ಎನ್ನುವ ಆಶಯವೇ ಪ್ರಧಾನವಾಗಿತ್ತು.

ಮತ್ತೊಂದು ಮೈಲಿಗಲ್ಲು ಐಫೋನ್‌ 4, 5, 6 : 2010ರಲ್ಲಿ ಮಾರುಕಟ್ಟೆಗೆ ಪರಿಚಿತವಾದ ಐಫೋನ್ 4 ಮತ್ತು ಅನಂತರದ ಆವೃತ್ತಿಗಳು ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಿದ್ದು ನಿಜ. ಹೆಚ್ಚು ರೆಸೊಲ್ಯೂಶನ್ ಇರುವ ರೆಟಿನಾ ಸ್ಕ್ರೀನ್, ಸುಧಾರಿತ ಕ್ಯಾಮೆರಾ ಮತ್ತು ವಿಡಿಯೊ ಕಾಲಿಂಗ್‌ಗಾಗಿ ಫ್ರಂಟ್ ಕಾಮೆರಾ ಈ ಆವೃತ್ತಿಯ ಪ್ರಮುಖ ಲಕ್ಷಣಗಳಾಗಿದ್ದವು.

ಐಫೋನ್ 4s, 5, 5s, 5s, 5se ಒಳಗೊಂಡು ಮುಂದಿನ ಎಲ್ಲಾ ಆವೃತ್ತಿಗಳಲ್ಲಿ ಸಂಪೂರ್ಣ ಸುಧಾರಿತ ಮತ್ತು ತಂತ್ರಜ್ಞಾನಸ್ನೇಹಿ ಬದಲಾವಣೆಗಳನ್ನು ಅಳವಡಿಸಲಾಯಿತು. ಐಓಎಸ್ 5ರಲ್ಲಿ ಐಮೆಸೇಜ್, ನೋಟಿಫಿಕೇಶನ್ ಸೆಂಟರ್ ಜೊತೆಗೆ ಮೊಟ್ಟ ಮೊದಲ ಬಾರಿಗೆ ಐಕ್ಲೌಡ್ ಮತ್ತು ಧ್ವನಿ ಆಧಾರಿತ ‘ಸಿರಿ’ ಎನ್ನುವ ಅದ್ಭುತ ತಂತ್ರಜ್ಞಾನವನ್ನು ಪರಿಚಯಿಸಲಾಯಿತು.

ಹೊಸ ತಲೆಮಾರಿನ ಆಸಕ್ತಿ ಮತ್ತು ಅಭಿರುಚಿಯನ್ನು ಮೈಗೂಡಿಸಿಕೊಂಡು ಐಫೋನ್ 5ಎಸ್ ಮಾರುಕಟ್ಟೆಗೆ ಲಗ್ಗೆಯಿಟ್ಟಾಗ ಗ್ರಾಹಕರು ಅಚ್ಚರಿ ಹಾಗೂ ಉತ್ಸಾಹದಿಂದ ಬಾಚಿಕೊಂಡರು. ಹಿಂದೆಂದಿಗಿಂತಲೂ ತೆಳುವಾದ ಮತ್ತು ಹಗುರ ವಿನ್ಯಾಸ, ಕಡಿಮೆ ಬೆಳಕಿನ ಸಂದರ್ಭಗಳಲ್ಲಿ ‘ಲೋ ಲೈಟ್ ಮೋಡ್’ ಮತ್ತು ಪನೋರಮಾ ವೈಶಿಷ್ಟಗಳಿಂದ ಇದು ಜನರನ್ನು ಸೆಳೆದುಕೊಂಡಿತು. ಐಫೋನ್ 5, 5ಎಸ್, 5ಸಿ, 5ಎಸ್‌ಇ ಆವೃತ್ತಿಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎ5 ಮತ್ತು ಎ6 ಚಿಪ್ ಬಳಕೆ ಮಾಡಲಾಗಿತ್ತು. ಮಾರುಕಟ್ಟೆಯನ್ನು ಆಕರ್ಷಿಸುವ ಸಲುವಾಗಿ 5 ಬಗೆಯ ವಿವಿಧ ಬಣ್ಣಗಳಲ್ಲಿ ಐಫೋನ್ 5ಸಿ ಗ್ರಾಹಕನ ಕೈಸೇರಿತು.

ಇನ್ನಷ್ಟು ನಾವೀನ್ಯಗಳನ್ನು ಒಳಗೊಂಡ 6ನೇ ಆವೃತ್ತಿ ಬಂದಾಗಲೂ ತಂತ್ರಜ್ಞಾನಸ್ನೇಹಿ ಜನ ಅಷ್ಟೇ ಆದರದಿಂದ ಬರಮಾಡಿಕೊಂಡರು. ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ 5 ಮತ್ತು 5.5 ಇಂಚಿನ ಫೋನ್‌ಗಳ ಮೋಹ ಹೆಚ್ಚಾಗಿದ್ದರಿಂದ ಐಫೋನ್ 6 ನಿರೀಕ್ಷಿತ ಗೆಲುವು ಕಂಡಿತು. ಆಕಾರ ಮತ್ತು ಗಾತ್ರದಲ್ಲಿ ಆಗಾಗ ಬದಲಾವಣೆ ಮಾಡುತ್ತ ಬಂದಿದ್ದ ಆ್ಯಪಲ್‌, ಐಫೋನ್ 6ರಲ್ಲಿ 4.7 ಇಂಚು ಮತ್ತು 6ಎಸ್‌ನಲ್ಲಿ 5.5 ಇಂಚಿನಷ್ಟು ಗಾತ್ರವನ್ನು ಹಿಗ್ಗಿಸಿಕೊಂಡಿತು. ಇದರೊಂದಿಗೆ ಗ್ರಾಹಕನ ಸಮಯವನ್ನು ಉಳಿಸಲು 3ಡಿ ಟಚ್ ಆಯ್ಕೆಯನ್ನು ಸಹ ನೀಡಿತು. ಪ್ರತಿಯೊಂದು ಆ್ಯಪ್ ತೆರೆದು ಆಯ್ಕೆಗಳನ್ನು ಬಳಸಿಕೊಂಡು ಕೆಲಸ ಮಾಡುವ ಜಟಿಲತೆಯನ್ನು ಇದರ ಮೂಲಕ ತಪ್ಪಿಸಲಾಯಿತು. 2016ರ ಅಂತ್ಯದಲ್ಲಿ ಮಾರುಕಟ್ಟೆಗೆ ಬಂದ ಐಫೋನ್ 7 ಮತ್ತು 7 ಪ್ಲಸ್‌ನಲ್ಲಿ ಎ10 ಫ್ಯೂಜನ್ ಚಿಪ್ ಬಳಕೆ ಮಾಡಲಾಗಿದ್ದು, ವೇಗವಾಗಿ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುವುದರ ಮೇಲೆ ಗಮನಹರಿಸಲಾಗಿತ್ತು.

ಇದೀಗ ಐಫೋನ್ ಎಕ್ಸ್, 8, 8 ಪ್ಲಸ್, ಹೊಸ ಸಂಚಲನ ಮೂಡಿಸುತ್ತ, ಗ್ರಾಹಕರ ಎದೆಬಡಿತವನ್ನು ಹೆಚ್ಚಿಸಿದೆ. ಹತ್ತು ವರ್ಷಗಳ ಹಿಂದೆ ಮೊದಲ ಐಫೋನ್ ಮಾರುಕಟ್ಟೆಯಲ್ಲಿ ಎಂತಹ ಜಾದೂ ಮಾಡಿತ್ತು ಎನ್ನುವುದು ಇನ್ನೂ ನೆನಪಿನಲ್ಲಿರುವಾಗಲೇ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಅಂಥದ್ದೇ ಸಂಭ್ರಮ ಮೂಡಿದೆ.

ಐಫೋನ್ ಎಕ್ಸ್, 8, 8 ಪ್ಲಸ್: 10ನೇ ವರ್ಷದ ಮೈಲಿಗಲ್ಲನ್ನು ಅಜರಾಮರಗೊಳಿಸುವ ಪ್ರಯತ್ನದಲ್ಲಿ ಆ್ಯ‍ಪಲ್‌ ತನ್ನ ಹಿಂದಿನ ಎಲ್ಲಾ ಆವೃತ್ತಿಗಳನ್ನೂ ಮೀರಿಸುವಂತಹ ಸಾಮರ್ಥ್ಯ ಹೊಂದಿರುವ ಮೂರು ನೂತನ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಐಫೋನ್‌-8, ಐಫೋನ್‌-8 ಪ್ಲಸ್ ಮತ್ತು ಐಫೋನ್‌ ಎಕ್ಸ್‌ನಲ್ಲಿ ಏನೆಲ್ಲಾ ಅಚ್ಚರಿಗಳಿವೆ ಎನ್ನುವ ಬಗ್ಗೆ ಗ್ರಾಹಕರು ಈಗಾಗಲೇ ಉತ್ಸಾಹದಿಂದ ಕಾದಿದ್ದಾರೆ.

ಈ ಬಾರಿ ವಿಶೇಷತೆಗಳು: ಸ್ಕ್ರೀನ್‌ನ ಅಳತೆಯು ಐಫೋನ್‌ಎಕ್ಸ್‌ನಲ್ಲಿ 5.8, 8ರಲ್ಲಿ 4.7 ಹಾಗೂ 8 ಪ್ಲಸ್‌ನಲ್ಲಿ 5.5 ಇದೆ. ಪರದೆಯ ಸ್ಪಷ್ಟತೆಯಲ್ಲಿ ಐಫೋನ್‌-8, ಹಾಗೂ 8 ಪ್ಲಸ್ ನಡುವೆ (326- 401 ಪಿಪಿಐ) 75 ಫಿಕ್ಸೆಲ್ ಅಂತರವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ 8ರಲ್ಲಿ 50 ಫಿಕ್ಸೆಲ್ ಇದೆ. ಆದರೆ ಆ್ಯಪಲ್‌ನ ಈ ಆವೃತ್ತಿಯಲ್ಲಿ ಸ್ಕ್ರೀನ್ ಸ್ಪಷ್ಟತೆಗಾಗಿ ಓಎಲ್ಇಡಿ ತಂತ್ರಜ್ಞಾನವನ್ನು ಬಳಸಿರುವುದರಿಂದ ಇದರ ಸ್ಪಷ್ಟತೆ ಸ್ಯಾಮಸಂಗ್‌ಗಿಂತ ಹೆಚ್ಚು ನಿಚ್ಚಳವಾಗಿದೆ.

ಕ್ಯಾಮೆರಾ: ಐಫೋನ್‌-8, ಐಫೋನ್‌-8 ಪ್ಲಸ್‌ನಲ್ಲಿ 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಟಚ್ ಐಡಿ ಈ ಎರಡೂ ಆವೃತ್ತಿಗಳಲ್ಲಿ ಮುಂದುವರಿಯಲಿದೆ. ಈ ಎರಡೂ ಆವೃತ್ತಿಗಳು ಐಓಎಸ್ 11ರ ಮೇಲೆ ಕೆಲಸ ಮಾಡಲಿವೆ.

ಶೇಖರಣಾ ಸಾಮರ್ಥ್ಯ 64 ಜಿಬಿ ಹಾಗೂ 256 ಜಿಬಿ ಇದೆ. ವೈರ್‌ಲೆಸ್ ಚಾರ್ಜರ್ ನೀಡಲಾಗಿದೆ. ಏರ್ ಪವರ್ ಮ್ಯಾಟ್ ಮೇಲೆ ಇಟ್ಟರೆ ಫೋನ್ ಚಾರ್ಜ್ ಆಗುತ್ತದೆ. ಐಫೋನ್ ಪ್ರಧಾನವಾಗಿರುವ ದೇಶಗಳಲ್ಲಿ ಸಾರ್ವಜನಿಕವಾಗಿ ಏರ್ ಪವರ್ ಮ್ಯಾಟ್ ಅಳವಡಿಕೆಯ ಚಿಂತನೆಗಳೂ ನಡೆದಿವೆ. ಆದರೆ ಭಾರತದಲ್ಲಿ ಇದು ಇನ್ನೂ ಪ್ರಚಲಿತದಲ್ಲಿಲ್ಲ. ದೂಳು ಮತ್ತು ಜಲನಿರೋಧಕ ತಂತ್ರಜ್ಞಾನವನ್ನು ಬಳಸಲಾಗಿದೆ.

l ಬಯೋನಿಕ್ ಚಿಪ್: ಇಲ್ಲಿ ಎ11 ಬಯೋನಿಕ್ ಚಿಪ್ ಬಳಸಲಾಗಿದೆ. ಐಫೋನ್‌ನಲ್ಲಿ ಈವರೆಗೆ ಬಳಸಲಾದ ಅತ್ಯದ್ಭುತ ತಂತ್ರಜ್ಞಾನ ಇದಾಗಿದ್ದು, ಪ್ರತಿ ಸೆಕೆಂಡಿಗೆ 600 ಬಿಲಿಯನ್ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಎ 11 ಬಯೋನಿಕ್ ಚಿಪ್ ಬಳಸಲಾಗಿರುವುದರಿಂದ ಇದು ಸುಮಾರು 70 ಪ್ರತಿಶತ ವೇಗವಾಗಿ ಯಾವುದೇ ಅಡೆತಡೆಯಿಲ್ಲದೆ ಕಾರ್ಯ ನಿರ್ವಹಿಸಬಲ್ಲದು ಮತ್ತು ಇದರ ಜಿಪಿಯು 30 ಪ್ರತಿಶತ ಹೆಚ್ಚು ಕ್ಷಮತೆಯಿಂದ ಕಾರ್ಯ ನಿರ್ವಹಿಸಬಲ್ಲದು. ಇದರಿಂದ ಗ್ರಾಹಕರು ತಡೆರಹಿತ ಕೆಲಸವನ್ನು ಆನಂದಿಸಬಹುದು.

l ಐಓಎಸ್ 11: ಈ ಬಾರಿ ಕಂಟ್ರೋಲ್ ಸೆಂಟರ್ ಐಓಎಸ್ 11ರ ಪ್ರಮುಖ ಆಕರ್ಷಣೆ. ಸುಮಾರು 15 ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ. ಜೊತೆಗೆ ಸ್ಕ್ರೀನ್ ರೆಕಾರ್ಡಿಂಗ್ ಅನ್ನೂ ಸೇರಿಸಲಾಗಿದೆ. ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಜಗತ್ತಿನಲ್ಲಿಯೇ ಅತ್ಯಂತ ಸುಧಾರಿತ ಮತ್ತು ಸುರಕ್ಷಿತವಾದ ಐಓಎಸ್ ಇದಾಗಿದೆ.

ಐಫೋನ್ ‘ಎಕ್ಸ್’

ತನ್ನ ಹತ್ತು ವರ್ಷಗಳ ಸಾಧನೆಯ ನೆನಪಿಗಾಗಿ ಐಫೋನ್ ’ಎಕ್ಸ್’ ಅನ್ನು ರೂಪಿಸಲಾಗಿದೆ (ಎಕ್ಸ್ ಎಂದರೆ 10). ಇದು ಇಲ್ಲಿಯವರೆಗಿನ ಐಫೋನ್‌ಗಳಲ್ಲಿಯೇ ಅತ್ಯಂತ ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಒಳಗೊಂಡಿದೆ. ಓಎಲ್ಇಡಿ ತಂತ್ರಜ್ಞಾನದ ಡಿಸ್‌ಪ್ಲೇ ಹೊಂದಿದ್ದು, 5.8 ಇಂಚಿನ ಪರದೆಯಲ್ಲಿ 2 ಮಿಲಿಯನ್ ಪಿಕ್ಸೆಲ್‌ಗಳಿವೆ. ಎಡ್ಜ್ ಟು ಎಡ್ಜ್ ತಂತ್ರಜ್ಞಾನ ಇನ್ನೊಂದು ವಿಶೇಷ.

l ವಿಶಾಲ ವೀಕ್ಷಣೆ : ಈ ಬಾರಿ ಕ್ಯಾಮೆರಾದ ಕೋನಗಳ ವಿಶಾಲತೆಯನ್ನು ಹೆಚ್ಚಿಸಲಾಗಿದೆ. ಮೊದಲ ಬಾರಿಗೆ 12 ಮೆಗಾ ಪಿಕ್ಸಲ್ ಡುಯೆಲ್ ಕ್ಯಾಮೆರಾ ಪರಿಚಯಿಸಲಾಗಿದೆ. 10x ಇಮೇಜ್ ಜೂಮ್ ಮತ್ತು 6x ವಿಡಿಯೊ ಜೂಮ್‌ಗೆ ಅವಕಾಶ ನೀಡಲಾಗಿದೆ. ಫೋಟೊ ತೆಗೆಯುವಾಗ ಬೆಳಕಿನ ನಿಯಂತ್ರಣ ಮತ್ತು ಆಟೋ ಫೋಕಸ್ ಮೇಲೆ ಅತೀ ಸೂಕ್ಷ್ಮವಾಗಿ ಕೆಲಸ ಮಾಡಲಾಗಿದೆ.

l ಫೇಸ್ ಐಡಿ: ಇಲ್ಲಿ ಟಚ್ ಐಡಿಯ ಬದಲಾಗಿ ಫೇಸ್ ಐಡಿಯನ್ನು ಪರಿಚಯಿಸಲಾಗಿದೆ. ಇಲ್ಲಿ ನಿಮ್ಮ ಮುಖವೇ ನಿಮ್ಮ ಪಾಸ್‌ವರ್ಡ್ ಆಗಲಿದೆ. ಸ್ಯಾಮ್‌ಸಂಗ್‌ನ ಇತ್ತೀಚಿನ ಮಾಡೆಲ್ ಗ್ಯಾಲಕ್ಸಿ 8ರಲ್ಲಿ ಸಹ ಈ ತಂತ್ರಜ್ಞಾನ ಬಳಸಲಾಗಿದೆ. ಆದರೆ ಆ್ಯಪಲ್ 3ಡಿ ಇಮೇಜನರಿ ತಂತ್ರಜ್ಞಾನವನ್ನು ಬಳಸಿಕೊಂಡು ಮುಖವನ್ನು ಗುರುತಿಸುತ್ತದೆ. ಯಾವುದೇ ರೀತಿಯ ಜಾಲಗಳಿಗೂ ಈ ತಂತ್ರಜ್ಞಾನ ಮೋಸ ಹೋಗದು ಎಂದು ಆ್ಯಪಲ್‌ ಹೇಳಿದೆ.

***

ಬೆಲೆ
ಐಫೋನ್‌-8, 64 ಜಿಬಿ, ರೂ 64 ಸಾವಿರ; 256 ಜಿಬಿ ರೂ 77 ಸಾವಿರ
ಐಫೋನ್‌-8 ಪ್ಲಸ್ 64 ಜಿಬಿ, ರೂ ೭೩ ಸಾವಿರ; 256 ಜಿಬಿ, ರೂ ೮೬ ಸಾವಿರ
ಐಫೋನ್‌ ಎಕ್ಸ್‌- 64 ಜಿಬಿ ರೂ 89 ಸಾವಿರ ; 256 ಜಿಬಿ ರೂ 1 ಲಕ್ಷದ 2 ಸಾವಿರ

***

2007ರಲ್ಲಿ ಸ್ಟೀವ್ ಜಾಬ್ಸ್ ಒಂದು ಮಾತು ಹೇಳಿದ್ದ-ತಂತ್ರಜ್ಞಾನದಲ್ಲಿ ಈ ಐಫೋನ್ ಸದ್ಯ ಮಾರುಕಟ್ಟೆಯಲ್ಲಿರುವ ಯಾವುದೇ ಮೊಬೈಲ್‌ಗಿಂತ ಐದು ವರ್ಷ ಮುಂದಿದೆ ಎಂದು. ಮಾರುಕಟ್ಟೆಯ ಅವಶ್ಯಕತೆ, ವೈಯಕ್ತಿಕ ಆಸಕ್ತಿ, ವ್ಯವಹಾರದ ಮಾದರಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅದಕ್ಕೆ ಅಗತ್ಯವಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದು, ಇಂದಿಗೂ ತನ್ನ ಎದುರಾಳಿಗಳಿಗಿಂತ ಐದಾರು ವರ್ಷ ಮುಂದೆ ಸಾಗುತ್ತ ಕಾರ್ಪೋರೆಟ್ ಹಾಗೂ ಬಿಸಿನೆಸ್ ವರ್ಗದ ಒಲವಿಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT