ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರ ಯಾರು ಗೊತ್ತೆ?

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಭರ್ತೃಹರಿಯ ‘ನೀತಿಶತಕ’ ನಮಗೆ ಪರಿಚಯವಿದೆ. ಅದರಲ್ಲೊಂದು ಪದ್ಯ ‘ಧೀರ ಯಾರು?’– ಎನ್ನುವುದನ್ನು ವಿವರಿಸುತ್ತದೆ; ಹೀಗೆ:

ಕಾಂತಾ ಕಟಾಕ್ಷವಿಶಿಖಾ ನ ಲುನಂತಿ ಯಸ್ಯ

ಚಿತ್ತಂ ನ ನಿದರ್ಹತಿ ಕೋಪಕೃಶಾನುತಾಪಃ |

ಕರ್ಷಂತಿ ಭೂರಿವಿಷಯಾಶ್ಚ ನ ಲೋಭಪಾಶೈಃ

ಲೋಕತ್ರಯಂ ಜಯತಿ ಕೃತ್ಸ್ನಮಿದಂ ಸ ಧೀರಃ ||

‘ಸುಂದರ ತರುಣಿಯರ ಕಡೆಗಣ್ಣನೋಟದ ಬಾಣಗಳು ಯಾರಿಗೆ ನಾಟುವುದಿಲ್ಲವೋ, ಕೋಪ ಎಂಬ ಬೆಂಕಿಯ ಬಿಸಿ ಯಾರ ಮನಸ್ಸನ್ನು ಸುಡುವುದಿಲ್ಲವೋ, ಆಶಾಪಾಶಗಳಿಂದ ಭೌತಿಕ ಸುಖಗಳು ಯಾರನ್ನು ಎಳೆಯುವುದಿಲ್ಲವೋ, ಅಂಥ ಧೀರ ಮೂರು ಲೋಕಗಳನ್ನೇ ಗೆಲ್ಲುತ್ತಾನೆ’. ಇದು ಈ ಪದ್ಯದ ಸಾರಾಂಶ.

ಈ ಮಾತುಗಳು ಯಾರಿಗೆ ಸಲ್ಲುತ್ತವೆ? ಸಾಮಾನ್ಯವಾಗಿ ಇಂಥವು ವಯಸ್ಸಾದವರಿಗೆ ಬೇಕಾದ ಉಪದೇಶ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಇವು ಹೆಚ್ಚಾಗಿ ಯುವಕ/ಯುವತಿಯರಿಗೇ ಬೇಕಾದಂಥವು ಎಂದೆನಿಸದಿರದು. ಧೀರತೆ ಬೇಕಾಗಿರುವುದೂ ಹಾಗೂ ಅದನ್ನು ಸಂಪಾದಿಸಿಕೊಳ್ಳಲು ಅವಕಾಶವಿರುವುದೂ ಯೌವನದಲ್ಲಿಯೇ ಅಲ್ಲವೆ?

ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯವಾದ ಘಟ್ಟ ಎಂದರೆ ಯೌವನವೇ. ದೇಹದಲ್ಲಿ ಕಸುವೂ ಇರುತ್ತದೆ; ಬುದ್ಧಿಗೆ ಚುರುಕುತನವೂ ಇರುತ್ತದೆ. ದೇಹ ಮತ್ತು ಮನಸ್ಸುಗಳು– ಎರಡೂ ಒಂದಾಗಿ ವ್ಯಕ್ತಿತ್ವವನ್ನು ರೂಪಿಸಿ ಕೊಳ್ಳಲು ಅನುಕೂಲಿಸುವಂಥ ಹಂತವಿದು. ಈ ಕಾಲದಲ್ಲಿ ಎದುರಾಗಬಹುದಾದ ಅಪಾಯಗಳ ಬಗ್ಗೆ ಭರ್ತೃಹರಿ ಇಲ್ಲಿ ಎಚ್ಚರಿಸುತ್ತಿದ್ದಾನೆ. ಯೌವನದ ಪ್ರಧಾನ ಕಾಲ ವಿದ್ಯೆಯ ಸಂಪಾದನೆಗೇ ಮೀಸಲಾಗಿರುತ್ತದೆ. ವಿದ್ಯಾರ್ಥಿಜೀವನದಲ್ಲಿ ಯಾರ ಏಕಾಗ್ರತೆಯು ಕೆಡುತ್ತದೆಯೋ ಅಂಥವರ ಭವಿಷ್ಯದ ಹಾದಿಯೇ ದಿಕ್ಕು ತಪ್ಪಿದಂತಾಗುತ್ತದೆ. ಹೀಗೆಂದು ಆಗಿನ ಏಕಾಗ್ರತೆಯ ಅನಿವಾರ್ಯತೆ ಕೇವಲ ವಿದ್ಯಾರ್ಜನೆಗಷ್ಟೆ ಸೀಮಿತವಾಗಿರದು; ಅದು ಇಡಿಯ ವ್ಯಕ್ತಿತ್ವನಿರ್ಮಾಣದಲ್ಲೂ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.

ಯೌವನದಲ್ಲಿ ಭೌತಿಕವಾದ ಸೆಳೆತಗಳು ಹೆಚ್ಚು. ಇದರ ಪರಾಕಾಷ್ಠೆ ಎಂದರೆ ಹೆಣ್ಣು–ಗಂಡುಗಳ ನಡುವಿನ ಆಕರ್ಷಣೆ. ಹೆಣ್ಣಿಗೆ ಗಂಡೂ ಗಂಡಿಗೆ ಹೆಣ್ಣೂ ಜೀವನದಲ್ಲಿ ಜೊತೆಯಾಗಬೇಕಾದುದು ಅನಿವಾರ್ಯವಷ್ಟೆ ಅಲ್ಲ, ಅದು ಪ್ರಕೃತಿಯ ನಿಯಮವೂ ಹೌದೆನ್ನಿ! ಆದರೆ ತಾರುಣ್ಯದಲ್ಲಿ ಕಣ್ಣಿಗೆ ಕಾಣುವ ವಿವರಗಳ ಬಗ್ಗೆಯೇ ಹೆಚ್ಚಿನ ಗಮನವಿರುತ್ತದೆ. ಗುಣಕ್ಕಿಂತಲೂ ನೋಟಕ್ಕೇ ಹೆಚ್ಚಿನ ಮನ್ನಣೆ. ಇಂಥ ಸೆಳೆತದಲ್ಲಿ ಬಿದ್ದವರು ವಿವೇಕವನ್ನೇ ಕಳೆದುಕೊಂಡು ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡು ಜೀವನವನ್ನು ದುರಂತಮಯವನ್ನಾಗಿಸಿಕೊಳ್ಳುವ ಸಾಕಷ್ಟು ಉದಾಹರಣೆಗಳನ್ನು ನೋಡುತ್ತಲೇ ಇರುತ್ತೇವೆ. ದೇಹದಲ್ಲಿ ಶಕ್ತಿಯ ಸಂಚಯನ ಹೆಚ್ಚಾಗಿದ್ದಾಗ ಬುದ್ಧಿಯ ವಿನಿಯೋಗ ಕಡಿಮೆಯಾಗಿರುತ್ತದೆ. ಹೀಗಾಗಿಯೇ ಕೋಪದ ಮೆರೆದಾಟ ಯೌವನದಲ್ಲಿ ಹೆಚ್ಚು. ಮಾತಿಗೆ ಮೊದಲು ಏಟು– ಎಂಬ ಸೂತ್ರಕ್ಕೆ ವ್ಯಾಖ್ಯಾನವೋ ಎಂಬಂತೆ ದುಡುಕುತ್ತಲೇ ಇರುವುದು ಈ ಕಾಲದ ಸಹಜಧರ್ಮ. ಮತ್ತೆ, ವಾಸ್ತವಗಳ ನೆಲೆಯಲ್ಲಿ ಬದುಕುವುದಕ್ಕಿಂತಲೂ ಊಹೆಗಳ ಲೋಕದಲ್ಲಿ ವಿಹರಿಸುವುದು ತಾರುಣ್ಯದ ಇನ್ನೊಂದು ಪ್ರಧಾನ ಲಕ್ಷಣ. ಕನಸನ್ನು ಕಾಣುವುದು ತಪ್ಪಲ್ಲ. ಜೀವನದ ಉತ್ಕರ್ಷಕ್ಕೆ ಕನಸಿನ ಜೀವಸಂಚಾರ ಬೇಕು. ಆದರೆ ಊಹೆಗಳಿಗೂ ಕನಸಿಗೂ ವ್ಯತ್ಯಾಸವುಂಟು. ಕನಸು ಬದುಕಿನ ಹಗಲಿಗೆ ಇರುಳಿನ ದಾರಿದೀಪ. ಆದರೆ ಊಹೆ ಎಂಬುದು ಇಲ್ಲದ ತೇರನ್ನು ಎಳೆಯುವ ಬದುಕಿನ ಸಂಭ್ರಮವಾಗಬಾರದು. ನಮ್ಮ ಸುತ್ತಮುತ್ತಲು ಕಾಣುವ ಆಮಿಷಗಳೇ ನಮ್ಮನ್ನು ಕಟ್ಟಿಹಾಕುವ ಹಗ್ಗಗಳು. ಆಸೆಗಳಿಗೆ ಮಿತಿ ಇರಬೇಕು. ಭೌತಿಕವಾದ ಸಲಕರಣೆಗಳ ಸಂಖ್ಯೆ ಹೆಚ್ಚಿದ ಮಾತ್ರಕ್ಕೆ ಸುಖ ನಮ್ಮ ಜೊತೆಯಾಗುತ್ತದೆ ಎಂಬ ಮನೋಧರ್ಮದಿಂದ ಬಿಡುಗಡೆಯನ್ನು ಸಾಧಿಸಬೇಕು. ಇಲ್ಲೊಂದು ಉದಾಹರಣೆಯನ್ನು ನೋಡಬಹುದು. ಮೊಬೈಲ್‌ಗಳು ದಿನದಿಂದ ದಿನಕ್ಕೆ ಅಲ್ಲ, ಕ್ಷಣದಿಂದ ಕ್ಷಣಕ್ಕೇ ಹೊಸ ಹೊಸ ಮಾಡೆಲ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ನಾವು ಅವುಗಳಲ್ಲಿ ಎಷ್ಟನ್ನು ಕೊಳ್ಳಲಾದೀತು? ಎಷ್ಟಾದರೂ ಏಕೆ ಕೊಳ್ಳಬೇಕು? ಕೊಂಡದ್ದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ?  – ಇಂಥ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕು. ತೃಪ್ತಿ ಎಂಬ ಮಹಾಗುಣವನ್ನು ನಾವು ತಾರುಣ್ಯದಲ್ಲಿಯೇ ಗಟ್ಟಿ ಮಾಡಿಕೊಳ್ಳಬೇಕು.

ಮೇಲೆ ಹೇಳಿರುವ ಮೂರು ಗುಣಗಳನ್ನು ಸಂಪಾದಿಸಿರು ವವನೇ ಧೀರ ಎನ್ನುತ್ತಾನೆ, ಭರ್ತೃಹರಿ. ಅಂಥವನು ಮೂರು ಲೋಕಗಳನ್ನು ಗೆಲ್ಲಬಲ್ಲ ಎಂದೂ ಹೇಳುತ್ತಿದ್ದಾನೆ. ತನ್ನನ್ನು ತಾನು ಗೆಲ್ಲಬಲ್ಲವನೇ ಎಲ್ಲವನ್ನೂ ಎಲ್ಲರನ್ನೂ ಗೆಲ್ಲಬಲ್ಲ ಧೀರ – ಎನ್ನುವುದು ಇಲ್ಲಿರುವ ಧ್ವನಿ. ನಮ್ಮ ಭಾವ–ಬುದ್ಧಿಗಳ ಮೇಲೆ ನಮಗೆ ನಿಯಂತ್ರಣ ಇರಬೇಕು. ಆಗ ಇಡಿಯ ಪ್ರಪಂಚವೇ ನಮ್ಮ ಕೈವಶದಲ್ಲಿದ್ದಂತೆ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT