ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಮದಾಯಕವಷ್ಟೇ ಅಲ್ಲ ಜಾಗ್ವಾರ್

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಷಾರಾಮಿ ಕಾರುಗಳು ಆರಾಮದಾಯಕ ಸವಾರಿಗಷ್ಟೇ ಹೇಳಿಮಾಡಿಸಿದ್ದು ಎಂಬ ಕಲ್ಪನೆ ಜನಜನಿತವಾಗಿದೆ. ಐಷಾರಾಮಿ ಕಾರುಗಳನ್ನು ಸಲೂನ್‌ ಎಂದು ಕರೆಯಲಾಗುತ್ತದೆ. ನೂರಾರು ಕಿ.ಮೀ ಚಾಲನೆಯಲ್ಲೂ ಚಾಲಕನಿಗೆ, ಪ್ರಯಾಣಿಕರಿಗೆ ಆಯಾಸವಾಗದಂತೆ ಇವನ್ನು ವಿನ್ಯಾಸ ಮಾಡಲಾಗಿರುತ್ತದೆ. ಮಧ್ಯಮ ಗಾತ್ರದ ಸೆಡಾನ್‌ಗಳನ್ನು ಈ ಸಲೂನ್‌ಗಳಿಗೆ ಹೋಲಿಸಲು ಸಾಧ್ಯವೇ ಇಲ್ಲ.

ಜಗತ್ತಿನ ಬಹುತೇಕ ಎಲ್ಲಾ ಐಷಾರಾಮಿ ಕಾರು ತಯಾರಕಾ ಕಂಪೆನಿಗಳ ಸಲೂನ್‌ಗಳು ಭಾರತದಲ್ಲಿ ಇವೆ. ಅವಗಳಲ್ಲಿ ಜಾಗ್ವಾರ್‌ ಸಹ ಒಂದು (ಜಾಗ್ವಾರ್ ಅಂಡ್ ಲ್ಯಾಂಡ್‌ ರೋವರ್). ಜಾಗ್ವಾರ್‌ ಸಲೂನ್‌ಗಳು ಭಾರಿ ವೇಗ ಮತ್ತು ಆರಾಮದಾಯಕಕ್ಕೆ ಹೆಸರುವಾಸಿ. ದಶಕಗಳಿಂದ ಸಲೂನ್‌ಗಳನ್ನಷ್ಟೇ ತಯಾರಿಸುತ್ತಿದ್ದ ಕಂಪೆನಿ ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಎರಡು ಎಸ್‌ಯುವಿಗಳನ್ನೂ ಬಿಡುಗಡೆ ಮಾಡಿದೆ. ಅವು ಎಫ್ ಪೇಸ್ ಮತ್ತು ಇ ಪೇಸ್.

‘ನಮ್ಮ ಕಾರುಗಳು ಆರಾಮದಾಯಕ ಸವಾರಿಗಷ್ಟೇ ಅಲ್ಲ’ ಎಂಬುದನ್ನು ಪರಿಚಯ ಮಾಡಿಸಿಕೊಡಲು ಈಚೆಗೆ ಕಂಪೆನಿ ಬೆಂಗಳೂರಿನ ಸಮೀಪದಲ್ಲಿ ಜಾಗ್ವಾರ್ ಪರ್ಫಾರ್ಮೆನ್ಸ್ ಆರ್ಟ್‌ ಕಾರ್ಯಕ್ರಮವನ್ನು ಆಯೋಜಿಸಿತ್ತು. ಖಾಸಗಿ ವಿಮಾನ ನಿಲ್ದಾಣದಲ್ಲಿ ಪರ್ಫಾಮೆನ್ಸ್‌ ಆರ್ಟ್ ಅನ್ನು ಆಯೋಜಿಸಲಾಗಿತ್ತು. ಆದರೆ ಇಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಲೇಬೇಕಾದಂತೆ ಟ್ರಾಕ್‌ಗಳನ್ನು ವಿನ್ಯಾಸ ಮಾಡಲಾಗಿತ್ತು. ಕಂಪೆನಿಯ ಎಲ್ಲಾ ಕಾರುಗಳನ್ನೂ ಇಲ್ಲಿ ಚಲಾಯಿಸಲೇ ಬೇಕಿತ್ತು.

ಮೊದಲ ಟ್ರಾಕ್‌ನಲ್ಲಿ ಸಲೂನ್ ಮತ್ತು ಎಸ್‌ಯುವಿಗಳನ್ನು ಭಾರಿ ವೇಗದಲ್ಲಿ ಚಲಾಯಿಸುತ್ತಾ, ದಿಢೀರ್ ಎಂದು ಆರು ಬಾರಿ ಲೇನ್ ಬದಲಿಸಬೇಕಿತ್ತು. ಭಾರಿ ವೇಗದಲ್ಲಿ ಹೀಗೆ ಲೇನ್ ಬದಲಿಸುವುದರಲ್ಲಿ ಭಾರಿ ಅಪಾಯವಿದೆ. ಒಮ್ಮೆ ಲೇನ್ ಬದಲಿಸಿ ಕಾರು ನೇರವಾಗುವ ಮುನ್ನವೇ ಮತ್ತೆ ಲೇನ್ ಬದಲಿಸಿದರೆ (ವಿರುದ್ಧ ದಿಕ್ಕಿಗೆ) ಕಾರಿನ ಮೇಲೆ ಚಾಲಕನಿಗೆ ನಿಯಂತ್ರಣ ತಪ್ಪುವ ಅಪಾಯವಿರುತ್ತದೆ. ಅಪಾಯವೆಂದರೆ ಕಾರಿನ ಹಿಂಭಾಗ ಒಂದೆಡೆಗೇ ಜಾರುತ್ತಾ ರಸ್ತೆ ಹಿಡಿತವನ್ನೇ ಕಳೆದುಕೊಳ್ಳುತ್ತವೆ. ಹೆದ್ದಾರಿಗಳಲ್ಲಿ ಹೀಗೆ ಆದಾಗಲೆಲ್ಲಾ ಕಾರುಗಳು ವಿಭಜಕವನ್ನು ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವ ವಾಹನಗಳಿಗೆ ಡಿಕ್ಕಿಯಾಗುವ ಅಪಾಯ.

ಹೀಗೆ ಭಾರಿ ವೇಗದಲ್ಲೂ ನಿಯಂತ್ರಣ ತಪ್ಪಬಾರದು ಎಂದರೆ ಹಲವು ಸಂಗತಿಗಳು ಮುಖ್ಯವಾಗುತ್ತವೆ. ಅತ್ಯಂತ ಪ್ರಮುಖವಾದುದು ಕಾರಿನ ತೂಕದ ಹಂಚಿಕೆ. ಸಾಮಾನ್ಯವಾಗಿ ಕಾರುಗಳ ಮುಂಭಾಗದಲ್ಲಿ ಹೆಚ್ಚು ತೂಕವಿರುತ್ತದೆ (ಎಂಜಿನ್‌ ಭಾರ) ಮತ್ತು ಹಿಂಭಾಗ ಹಗುರವಾಗಿರುತ್ತವೆ. ಈ ಕಾರಣಕ್ಕೇ ವಾಹನಗಳ ಹಿಂಭಾಗದ ಚಕ್ರಗಳು ರಸ್ತೆ ಹಿಡಿತ ಕಳೆದುಕೊಳ್ಳುವುದು ಮತ್ತು ದಿಢೀರ್‌ ಬ್ರೇಕಿಂಗ್‌ನಲ್ಲಿ ಮುಂಭಾಗ ಮುಗ್ಗರಿಸುವುದು. ವಾಹನದ ಒಟ್ಟು ತೂಕ ಮುಂಭಾಗ ಮತ್ತು ಹಿಂಭಾಗಕ್ಕೆ ಸರಿಯಾಗಿ ಹಂಚಿಕೆಯಾದರೆ (50:50) ಈ ಅಪಾಯವಿರುವುದಿಲ್ಲ.

ಜತೆಗೆ, ಭಾರಿವೇಗದಲ್ಲಿ ಕಾರಿನ ಲೇನ್ ಬದಲಿಸಿದರೆ ಕಾರಿನ ಪ್ರತೀ ಚಕ್ರಗಳಿಗೂ ರವಾನೆಯಾಗುವ ಶಕ್ತಿ ಭಿನ್ನವಾಗಿರಬೇಕಿರುತ್ತದೆ. ಒಂದೇ ರೀತಿ ಶಕ್ತಿ ರವಾನೆಯಾದರೆ ಕಡಿಮೆ ರಸ್ತೆ ಹಿಡಿತ ಇರುವ ಚಕ್ರ ಸ್ಪಿನ್‌ ಆಗಿ ಕಾರಿನ ಮೇಲೆ ಚಾಲಕ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಟ್ರಾಕ್ಷನ್ ಕಂಟ್ರೋಲ್, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರುಬ್ಯೂಷನ್ ಸವಲತ್ತುಗಳು ಇದ್ದಲ್ಲಿ ಪ್ರತೀ ಚಕ್ರಗಳಿಗೂ ಅಗತ್ಯವಿದ್ದಷ್ಟೇ ಪ್ರಮಾಣದ ಶಕ್ತಿ ಮತ್ತು ಬ್ರೇಕ್‌ ಅನ್ನು ರವಾನಿಸುತ್ತವೆ. ಆಗ ಚಕ್ರಗಳು ಹಡಿತ ತಪ್ಪಲು ಅವಕಾಶವಿರುವುದಿಲ್ಲ. ಇವುಗಳ ಜತೆಯಲ್ಲಿ ಆಲ್‌ ವ್ಹೀಲ್‌ ಡ್ರೈವ್‌ ಸವಲತ್ತು ಇರಲೇಬೇಕು. ಸಾಮಾನ್ಯ ಸೆಡಾನ್‌ಗಳಲ್ಲಿ ಈ ಎಲ್ಲಾ ಸವಲತ್ತುಗಳು ಇರುವುದಿಲ್ಲ. ಹೀಗಾಗಿ ಅವುಗಳನ್ನು ಭಾರಿ ವೇಗದಲ್ಲಿ ಯದ್ವಾ–ತದ್ವಾ ತಿರುಗಿಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ಅದು ಹೆಚ್ಚು ಅಪಾಯಕಾರಿಯಾಗಿರುತ್ತದೆ.

ಈ ಎಲ್ಲಾ ಅಂಶಗಳನ್ನು ವಿವರಿಸಿದ್ದು ಏಕೆಂದರೆ, ಜಾಗ್ವಾರ್‌ನ ಎಲ್ಲಾ ಸಲೂನ್‌ಗಳಲ್ಲೂ ಈ ಸವಲತ್ತುಗಳು ಇವೆ. ಹೀಗಾಗಿಯೇ ಭಾರಿ ವೇಗದಲ್ಲಿ ಲೇನ್ ಬದಲಿಸಿದಾಗ ಹಿಂಬದಿಯ ಒಂದೊಂದು ಚಕ್ರ ನೆಲಬಿಟ್ಟು ಮೇಲೇಳುತ್ತಿದ್ದರೂ ಕಾರಿನ ಮೇಲಿನ ನಿಯಂತ್ರಣ ತಪ್ಪುತ್ತಿರಲಿಲ್ಲ. 100 ಮೀಟರ್‌ ಅಂತರದಲ್ಲಿ ಆರು ಬಾರಿ (ಸರಿಸುಮಾರು 80 ಕಿ.ಮೀ/ಗಂಟೆ ವೇಗ) ಲೇನ್‌ ಬದಲಿಸುವುದು ಸುಲಭದ ಮಾತಲ್ಲ. ಆದರೆ ಜಾಗ್ವಾರ್ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕುಸುರಿ ಕೆಲಸ ಇದನ್ನು ಸುಲಭ ಸಾಧ್ಯವಾಗಿದೆ.

ಸೆಡಾನ್–ಸಲೂನ್‌ಗಳಲ್ಲಿ ಲೇನ್‌ ಬದಲಿಸಿದಂತೆ ಎಸ್‌ಯುವಿಗಳಲ್ಲಿ ಬದಲಿಸಲು ಪ್ರಯತ್ನಿಸುವುದು ಅತ್ಯಂತ ಅಪಾಯಕಾರಿ. ಭಾರಿ ವೇಗದಲ್ಲಿ ಲೇನ್ ಬದಲಿಸಿದರೆ ಎಸ್‌ಯುವಿಗಳು ಪಲ್ಟಿ ಹೊಡೆದೇ ಬಿಡುತ್ತವೆ. ಎಸ್‌ಯುವಿಗಳ ಎತ್ತರ ಮತ್ತು ತೂಕವೇ ಇದಕ್ಕೆ ಕಾರಣ. ಆದರೆ ಜಾಗ್ವಾರ್ ತನ್ನ ಎಫ್‌ ಪೇಸ್ ಎಸ್‌ಯುವಿಯನ್ನು ಇದಕ್ಕೆ ಅಪವಾದವೆಂಬಂತೆ ವಿನ್ಯಾಸ ಮಾಡಿದೆ. ಭಾರಿ ವೇಗದಲ್ಲಿ ಲೇನ್ ಬದಲಿಸಿದಾಗಲೂ ಎಫ್‌ ಪೇಸ್ ಹೆಚ್ಚು ಓಲಾಡದೆ (ಬಾಡಿ ರೋಲಿಂಗ್) ಸಲೂನ್‌ನಂತೆಯೇ ವರ್ತಿಸಿತು. ನಿಜಕ್ಕೂ ಇದು ಸ್ವಾಗತಾರ್ಹ. ಈ ಎಲ್ಲಾ ಸವಲತ್ತುಗಳು ತುರ್ತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತವೆ.

(ಮೇಲೆ ವಿವರಿಸಿದ ಎಲ್ಲಾ ಸ್ರೂಪದ ಚಾಲನೆಯನ್ನು ನಿಯಂತ್ರಿತ ವಾತಾವರಣದಲ್ಲಿ ನಡೆಸಲಾಗಿತ್ತು. ರಸ್ತೆ ಮತ್ತು ಹೆದ್ದಾರಿಗಳಲ್ಲಿ ಹೀಗೆ ಮಾಡುವುದು ಅತ್ಯಂತ ಅಪಾಯಕಾರಿ ಮತ್ತು ಕಾನೂನು ಬಾಹಿರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT