ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ದೂರ ಮಾಡಿತು ನಾ ಸಾಧನೆ ಮಾಡಿದೆ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಂದರ್ಶನ: ಭೀಮಪ್ಪ

'ಜೀವನವನ್ನು ಸವಾಲಾಗಿ ಸ್ವೀಕರಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು' ಎನ್ನುವುದಕ್ಕೆ ಸಾಕ್ಷಿ ಕೇರಳದ ಸೊಫಿಯಾ ಎಂ.ಜೋ. ಇವರ ಸಾಧನೆಗೆ ಶ್ರವಣದೋಷ ಅಡ್ಡಿಯಾಗಲೇ ಇಲ್ಲ. ಮಾಡೆಲಿಂಗ್, ಅಥ್ಲೀಟ್, ಫ್ಯಾಷನ್‌ ಡಿಸೈನರ್‌, ನಟಿ, ಗ್ಲಾಸ್‌ ಪೇಂಟರ್, ಜ್ಯುವೆಲ್ಲರಿ ಡಿಸೈನರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿದವರು ಸೊಫಿಯಾ. ನಗರದಲ್ಲಿ ಈಚೆಗೆ ‘ಆ್ಯಮ್‌ವೇ ಇಂಡಿಯಾ’ ಆಯೋಜಿಸಿದ್ದ 'ಅಂಧರಿಗಾಗಿ ಬ್ರೈಲ್ ಆಡಿಯೋ ಲೈಬ್ರೆರಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ‘ಮೆಟ್ರೊ’ ಪುರವಣಿಯೊಂದಿಗೆ ಮನದ ಮಾತು ಹಂಚಿಕೊಂಡರು.

* ಶಾಟ್‌ಪುಟ್‌ ಮತ್ತು ಡಿಸ್ಕಸ್‌ ಥ್ರೋನಲ್ಲಿ ನ್ಯಾಷನಲ್ ಚಾಂಪಿಯನ್ ಆದ ನಿಮಗೆ ಮಾಡೆಲಿಂಗ್ ಕ್ಷೇತ್ರ ಹೇಗೆ ಆಕರ್ಷಿಸಿತು?

ನಾನು ಆಂಗವಿಕಲೆ ಎಂಬ ಕಾರಣಕ್ಕೆ ಸಮಾಜ ನನ್ನನ್ನು ದೂರವೇ ಇರಿಸಿತ್ತು. ಜನರ ಜೊತೆಗೆ ಸುಲಭವಾಗಿ ಬೆರೆಯಲು ಆಗುತ್ತಿರಲಿಲ್ಲ. ನನ್ನನ್ನು ದೂರ ಇಡುತ್ತಿದ್ದರು. ಒಂದು ರೀತಿ ವಿಚಿತ್ರವಾಗಿ ಕಾಣುತ್ತಿದ್ದರು. ಇದರಿಂದ ಖಿನ್ನಳಾಗಿದ್ದೆ. ‘ಸಾಮಾನ್ಯ ಜನರಿಗೆ ಮಾದರಿಯಾಗುವಂತೆ ನೀನು ಬೆಳೆಯಬೇಕು’ ಎಂದು ನನ್ನ ತಂದೆ ಹೇಳುತ್ತಿದ್ದರು. ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ಮಾಡೆಲಿಂಗ್‌ ಕ್ಷೇತ್ರವನ್ನು ಆಯ್ಕೆಮಾಡಿಕೊಂಡೆ.

*ಫ್ಯಾಷನ್ ಜಗತ್ತಿನಲ್ಲಿ ನಿಮ್ಮ ನಡಿಗೆ...

ನಾನು ಟೀವಿ ಚಾನೆಲ್‌ನ ರಿಯಾಲಿಟಿ ಷೋನಲ್ಲಿ ಸ್ಪರ್ಧಿಯಾಗಿದ್ದೆ. ‘ಸೂಪರ್‌ ಮಾಡೆಲ್’ ಷೊ ಅದು. ಅಲ್ಲಿಗೆ ಬಂದಿದ್ದ ಪ್ರತಿಸ್ಪರ್ಧಿಗಳು ತಿರಸ್ಕಾರ ಮನೋಭಾವದಿಂದ ಕಾಣುತ್ತಿದ್ದರು. ಅದರಿಂದ ಸ್ವಲ್ಪ ನೋವಾಯಿತು. ಆದರೆ ಷೋನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ತೃಪ್ತಿ ನೀಡಿತು.

‘ಮಿಸ್ ಡೆಫ್ ಇಂಡಿಯಾ 2014’ರಲ್ಲಿ ರನ್ನರ್ ಅಪ್ ಆದೆ. ಅದು ಜೀವನದ ಆನಂದದ ಕ್ಷಣ. ಇಡೀ ದಕ್ಷಿಣ ಭಾರತಕ್ಕೆ ನನ್ನನ್ನು ಪರಿಚಯಿಸಿದ ಸನ್ನಿವೇಸ. ಅದನ್ನು ನಾನೆಂದಿಗೂ ಮರೆಯಲಾರೆ.

*‘ಬ್ಯಾಂಕಾಕ್ ಸಮ್ಮರ್‌’ ಮತ್ತು ‘ಬೆಸ್ಟ್‌ ವಿಶಶ್‌’ ಚಿತ್ರದಲ್ಲಿ ನಟಿಸುವಾಗ ಯಾವ ಸವಾಲುಗಳನ್ನು ಎದುರಿಸಿದಿರಿ?

ಎಲ್ಲ ಕ್ಷೇತ್ರದಲ್ಲಿ ಕಷ್ಟಗಳು ಇರುವಂತೆ ಅಲ್ಲಿಯೂ ಇದ್ದವು. ಸ್ವಲ್ಪ ಕಷ್ಟವೆನಿಸಿದರೂ ನಾನು ನಿಭಾಯಿಸಿದೆ. ಸಿದ್ಧತೆ ಚೆನ್ನಾಗಿ ಮಾಡಿಕೊಂಡಿದ್ದರೆ ಎಂಥದ್ದೇ ಸನ್ನವೇಶವನ್ನೂ ಸುಲಭವಾಗಿ ನಿಭಾಯಿಸಬಹುದು.

* ಗ್ಲಾಸ್‌ ಪೇಂಟಿಂಗ್ ಹಾಗೂ ಜ್ಯೂವೆಲರ್ ಡಿಸೈನ್‌ಗಳಲ್ಲಿ ಹೇಗೆ ಆಸಕ್ತಿ ಬೆಳೆಯಿತು?

ಜನರು ನನ್ನನ್ನು ಸಹಜವಾಗಿ ಸ್ವೀಕರಿಸದೇ ದೂರ ಇರಿಸಿದ್ದರು. ನನಗೂ ಜನರೊಂದಿಗೆ ಬೆರೆಯಲು ಮನಸು ಆಗುತ್ತಿರಲಿಲ್ಲ. ಹೀಗಾಗಿ ಏಕಾಂತ ಕಳೆಯಲು ಗ್ಲಾಸ್‌ ಪೇಂಟಿಂಗ್ ಮತ್ತು ಜ್ಯುವೆಲರಿ ಡಿಸೈನ್‌ ಕಲಿತೆ.

*ಕಾಲೇಜು ಜೀವನ ನೆನಪಿಸಿಕೊಳ್ತೀರಾ...?

ಅದು ನನ್ನ ಬದುಕಿನ ಗೋಲ್ಡನ್ ಮೊಮೆಂಟ್ಸ್. ಬಹುತೇಕ ವಿದ್ಯಾರ್ಥಿಗಳಿಗೆ ನಾನೇ ಆದರ್ಶವಾಗಿದ್ದೆ. ಆ ದಿನಗಳನ್ನು ಮತ್ತು ಆ ಖುಷಿಯನ್ನು ಮರೆಯಲು ಸಾಧ್ಯವಿಲ್ಲ.

*ಸಾಧನೆಗೆ ಯಾರು ಪ್ರೇರಣೆ ?

ನನ್ನ ಸಾಧನೆಗೆ ನನ್ನಪ್ಪನೇ ಕಾರಣ. ಅವರು ನನಗೆ ಸದಾ ಬೆಂಬಲಿಸುತ್ತಿದ್ದರು. ನನ್ನ ಯಶಸ್ಸು ಕಂಡು ಖುಷಿಪಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT