ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುನಿಷ್ಠತೆ ಮೆರೆಯೋಣ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಹಾಗೂ ಗಾಂಧಿವಾದ ಅತಿಹೆಚ್ಚು ಅವಗಣನೆಗೆ ಗುರಿಯಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಅವು ಇದ್ದರೆ, ಪಠ್ಯಪುಸ್ತಕಗಳಲ್ಲಿ ಮಾತ್ರ ಎನ್ನುವಷ್ಟು ದುರ್ಲಭವಾಗಿವೆ. ಅದಕ್ಕೆ ನಾವು ಕಾಲ, ರಾಜಕೀಯ, ನಂಬಿಕೆಗಳು- ಹೀಗೆ ಯಾವುದರ ಮೇಲೆ ಬೇಕಾದರೂ ಆರೋಪ ಮಾಡಬಹುದು.

ಆದರೆ, ಗಾಂಧಿವಾದದ ಬಗ್ಗೆ ಬುದ್ಧಿಜೀವಿಗಳು, ಚಿಂತಕರು ಪುನರ್ ಮೌಲ್ಯಮಾಪನ ಮಾಡುವುದು, ಚರ್ಚಿಸುವುದು ನಡೆಯುತ್ತಲೇ ಇದೆ. ಭಾರತದ ಎಲ್ಲಾ ಭಾಷೆಗಳಲ್ಲೂ ಗಾಂಧೀಜಿ ವಿಚಾರಗಳ ಪುನರ್ ವ್ಯಾಖ್ಯಾನ, ಅರ್ಥೈಸುವಿಕೆ, ಗಾಂಧೀಜಿಯ ಜೀವನವನ್ನು ಕುರಿತ ಸಾಹಿತ್ಯ ಕೃತಿ, ವಿಮರ್ಶೆ ಇತ್ಯಾದಿಗಳೂ ರಚನೆಯಾಗುತ್ತಿವೆ.

ಗಾಂಧೀಜಿ ಎಲ್ಲಾ ಕಾಲಕ್ಕೂ ಸಲ್ಲುವ ವ್ಯಕ್ತಿಯೆಂದು ಪರಿಗಣಿಸಿರುವುದರಿಂದ, ಅವರ ವಿಚಾರಗಳ ವಿಶ್ವ ವ್ಯಾಪಕತೆ, ಅದರಲ್ಲೂ ನಮ್ಮ ದೇಶದ ಇಂದಿನ ಪರಿಸ್ಥಿತಿಗೆ, ಗಾಂಧಿ ಹಾಗೂ ಗಾಂಧಿ ವಿಚಾರಗಳ ಆವಶ್ಯಕತೆ ಹಾಗೂ ಅನಿವಾರ್ಯಗಳ ಬಗ್ಗೆ ಚರ್ಚೆ, ಮಾತು ಮತ್ತು ಬರಹ ಎರಡರಲ್ಲೂ ನಡೆಯುತ್ತಲೇ ಇದೆ.

ಅದರಲ್ಲೂ ಇಂದಿನ ಪೀಳಿಗೆಗೆ, ಗಾಂಧಿಯವರನ್ನು ಪ್ರಸ್ತುತಪಡಿಸುವುದರ ಬಗ್ಗೆ– ಅಲ್ಲಲ್ಲಿ ಗೊಂದಲಗಳಿದ್ದರೂ- ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. ಅವರ ವಿಚಾರಗಳು ನಮ್ಮ ಇಂದಿನ ಸಾಮಾಜಿಕ ಹಾಗೂ ಆರ್ಥಿಕ ಸಂದರ್ಭಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿವೆ.

ಇಷ್ಟಾದರೂ ಗಾಂಧಿಯವರನ್ನು ಪುನರ್ ಮೌಲ್ಯಮಾಪನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಕೆಲವು ಲೇಖಕರು, ಬುದ್ಧಿಜೀವಿಗಳು ಅವರ ಬಗ್ಗೆ ನಕಾರಾತ್ಮಕ ದೃಷ್ಟಿ ತಾಳಿ ಬರೆಯುತ್ತಿರುವುದರಿಂದ, ಮೊದಲೇ ಅವರ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಇಂದಿನ ಪೀಳಿಗೆಯನ್ನು ದಿಕ್ಕು ತಪ್ಪಿಸುವಂತಾಗಿದೆ, ಅವರ ಬಗ್ಗೆ ತಪ್ಪು ಸಂದೇಶವೂ ರವಾನೆಯಾಗುತ್ತಿದೆ.

ಗಾಂಧಿಯವರನ್ನು ಮತ್ತೊಬ್ಬರೊಂದಿಗೆ, ಅದರಲ್ಲೂ ಅಂಬೇಡ್ಕರ್ ಅವರೊಂದಿಗೆ ಹೋಲಿಸುವ ಸಂದರ್ಭದಲ್ಲಿ ಗಾಂಧಿಯವರನ್ನು ಜರೆಯುವ ಅಥವಾ ಅವರ ಹಿರಿಮೆಯನ್ನು ಕುಂಠಿತಗೊಳಿಸುವ ಪ್ರಯತ್ನಗಳೇ ಹೆಚ್ಚು.

ಈ ಮಾತನ್ನು ಹೇಳಲು ಕಾರಣ, ಇತ್ತೀಚೆಗೆ ಕನ್ನಡ ಲೇಖಕ ಕುಂ.ವೀರಭದ್ರಪ್ಪ ಅವರು ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ‘ಮಾನಸಿಕವಾಗಿ ಗಾಂಧೀಜಿ ಶ್ರೀಮಂತ ಸೂಟುಧಾರಿ’ (ಪ್ರಜಾವಾಣಿ, ಸೆ. 10 ) ಎಂದು ಹೇಳಿರುವುದು. ಅಂಬೇಡ್ಕರ್ ಅವರೊಂದಿಗೆ ಹೋಲಿಸುತ್ತಾ, ‘ಅಂಬೇಡ್ಕರ್ ಅವರು ಸೂಟು ಧರಿಸಿದ್ದರೂ ಮಾನಸಿಕವಾಗಿ ಬಡವರ, ದೀನದಲಿತರ ಹಾಗೂ ಹಿಂದುಳಿದವರ ಬಗ್ಗೆ ಚಿಂತನೆ ನಡೆಸಿದ್ದರು’ ಎಂದೂ ಹೇಳಿದ್ದಾರೆ.

ಅವರ ವೈಯಕ್ತಿಕ ಅಭಿಪ್ರಾಯ ಏನೇ ಇರಲಿ. ಇಲ್ಲಿ ಪ್ರಶ್ನೆ ಎಂದರೆ, ಗಾಂಧಿಯವರಿಗೆ ಅಂತಹ ಕಾಳಜಿಗಳಿರಲಿಲ್ಲವೇ? ಸ್ವಾತಂತ್ರ್ಯದೊಂದಿಗೆ ಸಮಾನತೆಗಾಗಿ ತಾನೆ ಅವರ ಹೋರಾಟ ಮುಡಿಪಾಗಿದ್ದುದು? ಕಣ್ಣಿಗೆ ರಾಚುವ ಬಡತನದ ವಿರುದ್ಧವೂ ಅವರು ಸಮರ ಸಾರಿರಲಿಲ್ಲವೇ?

ಬಡತನ ಹೋಗಲಾಡಿಸಬೇಕಾದರೆ, ಮೊದಲು ಹಳ್ಳಿಗಳ ಉದ್ಧಾರವಾಗಬೇಕು ಎನ್ನುವುದು ಅವರ ಧ್ಯೇಯವಾಗಿರಲಿಲ್ಲವೇ? ಈ ನಿಟ್ಟಿನಲ್ಲಿ ದೊಡ್ಡ ಕೈಗಾರಿಕೆಗಳ ಬದಲು ಅವರು ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳ ಪರವಾಗಿರಲಿಲ್ಲವೇ? ಗಾಂಧಿಯವರಿಗೆ ಚಿಂತನೆಗಿಂತ ಅನುಷ್ಠಾನದಲ್ಲಿ ಹೆಚ್ಚು ನಂಬಿಕೆ ಇರಲಿಲ್ಲವೇ?

ಇನ್ನು ಅವರ ಉಡುಪಿನ ವಿಚಾರ ಇಲ್ಲಿ ಪ್ರಸ್ತುತವೇ ಅಲ್ಲ. ಆದರೂ ಅವರು ಹೇಳಿರುವಂತೆ, ಮಾನಸಿಕವಾಗಿ ಗಾಂಧಿಯವರು ಸೂಟುಧಾರಿಯಾಗಿದ್ದರು ಎಂಬುದು. ಜೀವನ ಪೂರ್ತಿ ಅರೆಬೆತ್ತಲೆಯಾಗಿಯೇ ಇದ್ದು – ಅದೂ ಚಾರಿತ್ರಿಕವಾದುದೇ - ಭಾರತದ ಬಡತನದ ಪ್ರತೀಕವೆಂದೇ ಬಿಂಬಿತವಾಗಲಿಲ್ಲವೇ? ಅಂಬೇಡ್ಕರ್ ಅವರಷ್ಟು ಗಾಂಧೀಜಿಗೆ ವೈಚಾರಿಕತೆ ಇಲ್ಲದಿರಬಹುದು.

ಗಾಂಧಿಯವರ ಹೋರಾಟ ಬಹುಮುಖಿಯಾಗಿತ್ತು. ಆದರೆ ಅವರ ವಿಚಾರಗಳು, ಕಾಳಜಿಗಳು ಯಾರನ್ನು ಕೇಂದ್ರೀಕರಿಸಿದ್ದವು ಎನ್ನುವುದು ತಿಳಿಯದ ವಿಚಾರವೇ? ‘ಪುನರ್‌ಜನ್ಮ ಎನ್ನುವುದು ಇದ್ದರೆ, ಈ ದೇಶದಲ್ಲೇ ದಲಿತನಾಗಿ ಹುಟ್ಟಬೇಕೆಂದು ನನ್ನ ಮನದಾಸೆ’ ಎಂದು ಘೋಷಿಸಿರಲಿಲ್ಲವೇ?

ಶ್ರೀಮಂತ ಸೂಟುಧಾರಿ ಎನ್ನುವುದು ರೂಪಕದಂತೆ ಬಳಕೆಯಾದಂತೆ ಕಂಡರೂ, ಆಂತರ್ಯದಲ್ಲಿ ಅದು ನಕಾರಾತ್ಮಕ ಧೋರಣೆಯನ್ನೇ ಎತ್ತಿ ಹಿಡಿಯುತ್ತದೆ. ತೇಜೋವಧೆ ಮಾಡುವುದರಲ್ಲಿ ನಾವು ನಿಸ್ಸೀಮರು.

ಕೆಲವು ಪತ್ರಿಕೆಗಳು, ಟ್ಯಾಬ್ಲಾಯಿಡ್‌ಗಳು ಈ ಕಾರ್ಯದಲ್ಲೇ ಸದಾ ನಿರತವಾಗಿವೆ. ಆದರೆ ಅವು ಉತ್ತೇಜಕ ಪ್ರತಿಕ್ರಿಯೆಯನ್ನು ಒದಗಿಸುವ ಬದಲು ನಕಾರಾತ್ಮಕ ಧೋರಣೆಯನ್ನೇ ಉಂಟು ಮಾಡಿಸುತ್ತವೆ.

ಹೀಗೆ ಕೆಲವು ಲೇಖಕರು, ಬುದ್ಧಿಜೀವಿಗಳು ಗಾಂಧಿ ಹಾಗೂ ಗಾಂಧಿವಾದವನ್ನು ಅಪಹಾಸ್ಯ ಮಾಡುತ್ತಿರುವುದರಿಂದಲೇ, ಗಾಂಧಿ ಕ್ಲಾಸು, ಗಾಂಧಿ ಪಾಸು (ಅಂದ ಹಾಗೆ ಕುಂ.ವೀ. ಅವರ ಆತ್ಮಕಥನಕ್ಕೆ ‘ಗಾಂಧಿ ಕ್ಲಾಸು’ ಎಂದೇ ಹೆಸರಿಡಲಾಗಿದೆ) ಎಂಬಂತಹ ಗೇಲಿ ಶಬ್ದಗಳ ಬಳಕೆ, ಗಾಂಧೀಜಿ ಬಗ್ಗೆ ಅವಗಣನೆಗೆ ಇಂಬು ಕೊಡುತ್ತಿವೆ. ಇಂತಹ ವಿಗ್ರಹ ಭಂಜಕತೆ, ನಮ್ಮ ಕೆಲವು ಟ್ಯಾಬ್ಲಾಯಿಡ್‍ಗಳ ಪರಿಭಾಷೆಯ ಮಾದರಿಯಂತಾಗುತ್ತದೆ. ಅದು ಸಮಾಜದ ಸ್ವಾಸ್ಥ್ಯವನ್ನೂ ಹಾಳು ಮಾಡುತ್ತದೆ ಎಂಬುದು ನನ್ನ ಅನಿಸಿಕೆ.

ಇಂತಹ ಭಾಷೆಯ ಬಳಕೆ ಹಾಗೂ ವ್ಯಕ್ತಿನಿಂದನೆ ಸಮಾಜದ ಒಳಿತಿಗೆ ಮಾರಕವಾಗುತ್ತದೆ. ಅನಗತ್ಯವಾದ ವಿವಾದಗಳಿಗೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿನಿಂದೆ ಮಾಡದೆಯೂ ಗಾಂಧಿಯವರ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ?

ಇಂದಿನ ಯುವ ಜನರು ಅವರ ಬಗ್ಗೆ ಕ್ರಿಯಾತ್ಮಕವಾಗಿ ಚಿಂತನ ಮಂಥನ ನಡೆಸಲು ಅನುವಾಗುವಂತೆ ನಾವು ಪ್ರೇರೇಪಿಸಲು ಸಾಧ್ಯವಿಲ್ಲವೇ? ಯಾವುದೇ ವಿಮರ್ಶೆಯಲ್ಲಿ ವಸ್ತುನಿಷ್ಠತೆಯನ್ನು ತರಲು ಪ್ರಾಮಾಣಿಕ ಪ್ರಯತ್ನ ಸಾಧ್ಯವಾಗುವುದಿಲ್ಲವೇ? ಗಾಂಧಿಯವರ ವಿಷಯದಲ್ಲಿ ವಿಗ್ರಹ ಭಂಜಕತೆ ಬೇಡ. ಸಾಧ್ಯವಾದ ಮಟ್ಟಿಗೆ ವಸ್ತುನಿಷ್ಠತೆ ಮೆರೆಯೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT