ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ: ಪ್ರಬಲ ಭೂಕಂಪಕ್ಕೆ 250 ಬಲಿ

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ:  ಮೆಕ್ಸಿಕೊದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 21 ಮಕ್ಕಳು ಸೇರಿದಂತೆ ಸುಮಾರು 250 ಜನರು ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ.

ಬದುಕುಳಿದವರಿಗಾಗಿ ರಕ್ಷಣಾ ಕಾರ್ಯ ನಡೆಯತ್ತಿದೆ ಎಂದು ಸೇನೆ ತಿಳಿಸಿದೆ.

1985ರಲ್ಲಿ ಸೆ. 20ರಂದೇ ಮೆಕ್ಸಿಕೊದಲ್ಲಿ ಸಂಭವಿಸಿದ್ದ ಭಾರಿ ದುರಂತದ ಬಳಿಕ ಸಂಭವಿಸಿದ ಅವಘಡ ಇದಾಗಿದೆ.  ಭೂಕಂಪದ 32ನೇ ವರ್ಷಾಚರಣೆ ದಿನವೇ ಈ ದುರಂತ ಮರುಕಳಿಸಿದೆ. 1985ರಲ್ಲಿ 10 ಸಾವಿರ ಜನರು ಮೃತಪಟ್ಟಿದ್ದರು.

ದುರಂತದ ಮೇಲೆ ದುರಂತ: ಕೇವಲ 12 ದಿನಗಳ ಹಿಂದಷ್ಟೇ ಮೆಕ್ಸಿಕೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 200ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ದಕ್ಷಿಣ ಭಾಗದ ಒಕ್ಸಾಕ ಹಾಗೂ ಚಿಯಾಪಾಸ್‌ ರಾಜ್ಯಗಳಲ್ಲಿ ಸಂಭವಿಸಿದ ಈ ಅವಘಡದ ದುಃಖ ಆರುವ ಮುನ್ನವೇ ಮತ್ತೊಂದು ವಿಪ್ಲವ ನಡೆದುಹೋಗಿದೆ. ಭೂಕಂಪನದ ಕಾರಣ ಮೆಕ್ಸಿಕೊ ವಿಮಾನ ನಿಲ್ದಾಣವನ್ನು ಮೂರು ಗಂಟೆ ಕಾಲ ಸ್ಥಗಿತಗೊಳಿಸಲಾಗಿತ್ತು. ನೆರವು ನೀಡುವುದಾಗಿ ನೆರೆ ದೇಶಗಳು ಮುಂದೆ ಬಂದಿವೆ.

ಶಾಲೆಯೇ ಸ್ಮಶಾನವಾಯಿತು...
ಮೆಕ್ಸಿಕೊ ಸಿಟಿಯ ದಕ್ಷಿಣ ಭಾಗದಲ್ಲಿರುವ ‌ಎನ್ರಿಕ್ ರೆಬ್ಸ್‌ಮನ್ ಪ್ರಾಥಮಿಕ ಶಾಲೆಯ ದೃಶ್ಯಗಳು ಮನಕಲಕುವಂತಿದ್ದವು. ಶಾಲೆಯ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 21 ಪುಟ್ಟ ಮಕ್ಕಳು ಹಾಗೂ ಐವರು ಸಿಬ್ಬಂದಿ ಅವಶೇಷದಡಿ ಅಪ್ಪಚ್ಚಿಯಾಗಿದ್ದಾರೆ. ಕಟ್ಟಡದಡಿ 30–40 ಮಂದಿ ಸಿಲುಕಿದ್ದು, ಈವರೆಗೆ 11 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಸೇನೆಯ ಮೇಜರ್ ಜೋಸ್ ಲೂಯಿಸ್ ಅವರು ತಿಳಿಸಿದ್ದಾರೆ.

ರಾತ್ರಿಯಿಂದಲೂ ರಕ್ಷಣಾ ಕಾರ್ಯಾಚರಣೆ ಬಿಡುವಿಲ್ಲದೆ ನಡೆಯುತ್ತಿದೆ. ಜೀವಂತವಾಗಿದ್ದ ಮಗು ಹಾಗೂ ಶಿಕ್ಷಕಿಯನ್ನು ತುರ್ತುಸೇವೆಗಳ ಸಿಬ್ಬಂದಿ ರಕ್ಷಿಸಿದ್ದಾರೆ. ಕಟ್ಟಡದೊಳಗೆ ಬದುಕುಳಿದಿರುವ ಮಗುವಿಗೆ ಸೇನಾ ಸಿಬ್ಬಂದಿಯು ನಳಿಕೆ ಮೂಲಕ ಆಮ್ಲಜನಕ ಪೂರೈಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT