ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಓಟ ಮುಂದುವರಿಸುವ ಹಂಬಲ

ಸ್ಟೀವ್‌ ಸ್ಮಿತ್ ಪಡೆಗೆ ಪುಟಿದೇಳುವ ಛಲ; ಮಳೆ ಅಡ್ಡಿಯಾಗುವ ಸಾಧ್ಯತೆ
Last Updated 20 ಸೆಪ್ಟೆಂಬರ್ 2017, 20:35 IST
ಅಕ್ಷರ ಗಾತ್ರ

ಕೋಲ್ಕತ್ತ: ಮೊದಲ ಪಂದ್ಯದಲ್ಲಿ ಪಾರಮ್ಯ ಮೆರೆದು ಗೆಲುವಿನ ತೋರಣ ಕಟ್ಟಿದ್ದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಜಯದ ನಿರೀಕ್ಷೆಯಲ್ಲಿದೆ. ಮಳೆಯ ಆತಂಕದ ನಡುವೆಯೇ ಇಲ್ಲಿನ ಈಡನ್‌ ಗಾರ್ಡನ್ ಕ್ರೀಡಾಂಗಣ ಉಭಯ ತಂಡಗಳ ಹಣಾಹಣಿಗೆ ಸಜ್ಜಾಗಿದೆ.

ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಮೂರು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಯಲ್ಲಿ ಬಿದ್ದಿತ್ತು. ಆತಿಥೇಯ ತಂಡವು ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡು ವೆಯೂ ಮಹೇಂದ್ರ ಸಿಂಗ್ ದೋನಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಜಯಿಸಿತ್ತು.

ಆತಿಥೇಯರ ಯಶಸ್ಸಿನಲ್ಲಿ ಬೌಲರ್‌ಗಳು ಮಹತ್ವದ ಪಾತ್ರ ವಹಿಸಿದ್ದರು. ಇದೇ ಲಯದಲ್ಲಿ ಎರಡನೇ ಪಂದ್ಯವನ್ನೂ ಆಡಲು ಕೊಹ್ಲಿ ಬಳಗ ಸಜ್ಜಾಗಿದೆ. ಇನ್ನೊಂದೆಡೆ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲಿ ಇದನ್ನು ಮುಂದುವರಿಸದಿರಲು ಶ್ರಮಿಸಲಿದೆ.

ಭಾರತದ ಯುವ ಸ್ಪಿನ್ ಜೋಡಿ ಕುಲದೀಪ್ ಯಾದವ್ ಮತ್ತು ಯಜು ವೇಂದ್ರ ಚಾಹಲ್ ಅವರನ್ನು ಎದುರಿಸಲು ಹೊಸ ರಣತಂತ್ರ ಹೂಡಲಿದೆ. ಈ ಇಬ್ಬರು ಬೌಲರ್‌ಗಳ ಶೈಲಿಯನ್ನು ಹೋಲುವ ಬೌಲಿಂಗ್‌ ಅನ್ನು ನೆಟ್ಸ್‌ನಲ್ಲಿ ಎದುರಿಸಲು ಆಸ್ಟ್ರೇಲಿಯಾ ಪ್ರಯತ್ನಿಸುತ್ತಿದೆ. ಚೆನ್ನೈ ಪಂದ್ಯಕ್ಕೂ ಮುನ್ನ ಕೇರಳದ ಕೆ.ಕೆ.ಜಿಯಾಸ್‌ ಅವರ ಸಹಾಯ ಪಡೆದ ಬ್ಯಾಟ್ಸ್‌ಮನ್‌ಗಳು ಕೋಲ್ಕತ್ತದಲ್ಲಿ ಕ್ಲಬ್ ಮಟ್ಟದ ಆಟಗಾರರಾದ ಅಶುತೋಷ್‌ ಶಿಬ್ರಮ್‌ ಮತ್ತು ರೂಪಕ್‌ ಗುಹಾ ಅವರ ನೆರವು ಪಡೆದಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ 281 ರನ್ ಗಳಿಸಿತ್ತು. ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯಾಗೆ 21 ಓವರ್‌ಗಳಲ್ಲಿ 164 ರನ್‌ಗಳ ಗುರಿ ನೀಡಲಾಗಿತ್ತು. ಆದರೂ ತಂಡ 26 ರನ್‌ಗಳಿಂದ ಸೋತಿತ್ತು.

ದುಃಸ್ವಪ್ನವಾಗಿ ಕಾಡುತ್ತಿರುವ ಹಾರ್ದಿಕ್ ಪಾಂಡ್ಯ: ಮೊದಲ ಪಂದ್ಯದಲ್ಲಿ ಭಾರತ 76 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದಾಗ ಸ್ಮಿತ್‌ ಮತ್ತು ಬಳಗದವರು ಸಂಭ್ರಮದಿಂದ ಕೇಕೆ ಹಾಕಿದ್ದರು. ಆದರೆ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಬೌಲರ್‌ಗಳಿಗೆ ನಿರಾಸೆ ಉಂಟು ಮಾಡಿದ್ದರು.

ಮಹೇಂದ್ರ ಸಿಂಗ್ ದೋನಿ ಜೊತೆಗೂಡಿ ಅವರು 118 ರನ್‌ಗಳನ್ನು ಸೇರಿಸಿದ್ದರು. 66 ಎಸೆತಗಳಲ್ಲಿ 83 ರನ್‌ ಗಳಿಸಿದ್ದ ಅವರು ಐದು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಪಾಂಡ್ಯ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕನೇ ಬಾರಿ ಹ್ಯಾಟ್ರಿಕ್‌ ಸಿಕ್ಸರ್ ಗಳಿಸಿದ ಸಾಧನೆ ಮಾಡಿದ್ದರು. ಇದೆಲ್ಲವೂ ಈಗ ಆಸ್ಟ್ರೇಲಿಯಾ ತಂಡಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದು ಅವರನ್ನು ಕಟ್ಟಿಹಾಕಲು ತಂತ್ರ ಹೆಣೆಯುತ್ತಿದೆ.

ಪಾಂಡ್ಯ ಒಳಗೊಂಡಂತೆ ಭಾರತದ ಬ್ಯಾಟಿಂಗ್ ಬಳಗಕ್ಕೆ ತಡೆ ಹಾಕಲು ಚೆನ್ನೈನಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ಪಡೆ ವಿಫಲವಾಗಿತ್ತು. ಭರ ವಸೆಯ ಸ್ಪಿನ್ನರ್‌ ಆ್ಯಡಮ್ ಜಂಪಾ ಲಯ ಕಂಡುಕೊಳ್ಳಲು ಪರದಾಡಿದ್ದರು. ಆದ್ದರಿಂದ ಈಗ ಸಾಂದರ್ಭಿಕ ಸ್ಪಿನ್ನರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್‌, ಟ್ರಾವಿಸ್ ಹೆಡ್‌ ಮತ್ತು ಆ್ಯಷ್ಟನ್ ಅಗರ್‌ ಅವರನ್ನು ಆಶ್ರಯಿಸಬೇಕಾದ ಅಗತ್ಯ ತಂಡಕ್ಕೆ ಒದಗಿದೆ.

‘ನಮ್ಮಲ್ಲಿ ಉತ್ತಮ ಬೌಲಿಂಗ್ ಪಡೆ ಇದೆ. ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾದ ಅಗತ್ಯವಿದೆ’ ಎಂದು ಹೇಳಿದ ಜಂಪಾ ಇಲ್ಲಿ ಮರುಹೋರಾಟ ಮಾಡುವ ಭರವಸೆಯಲ್ಲಿದ್ದಾರೆ.

ಕಠಿಣ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬಲ್ಲ ನಾಯಕ ಸ್ಟೀವ್ ಸ್ಮಿತ್ ಅವರಿಗೆ ಎರಡನೇ ಪಂದ್ಯ ಸವಾ ಲಿನದ್ದು. ಮೊದಲ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದ ಅವರು ಲಯಕ್ಕೆ ಮರಳುವುದರ ಜೊತೆಯಲ್ಲಿ ತಂಡವನ್ನು ಜಯದತ್ತ ಮುನ್ನಡೆಸಬೇಕಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್ ಕೂಡ ಸಮರ್ಥ ಬ್ಯಾಟಿಂಗ್ ಮಾಡಬೇಕಾಗಿದೆ. ಟ್ರಾವಿಸ್ ಹೆಡ್‌, ಮಾರ್ಕಸ್ ಸ್ಟೊಯಿನಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲೆ ಭರವಸೆ ಹೊಂದಿ ರುವ ತಂಡ ಮಧ್ಯಮ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳೊಂದಿಗೆ ಎರಡನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಆರಂಭಿಕ ಜೋಡಿ ಮೇಲೆ ಕಣ್ಣು: ಭಾರತದ ಆರಂಭಿಕ ಜೋಡಿ ಮತ್ತು ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಶಿಖರ್ ಧವನ್‌ ಬದಲಿಗೆ ಚೆನ್ನೈನಲ್ಲಿ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ವೈಫಲ್ಯ ಅನುಭವಿಸಿದ್ದರು. ರೋಹಿತ್ ಶರ್ಮಾ ಕೂಡ ಪ್ರಭಾವ ಬೀರಿರಲಿಲ್ಲ. ವಿರಾಟ್‌ ಕೊಹ್ಲಿ ಕೂಡ ಚೆನ್ನೈನಲ್ಲಿ ನಿರೀಕ್ಷೆ ಹುಸಿಗೊಳಿಸಿದ್ದರು.

ಈ ವರ್ಷ ಒಟ್ಟು 19 ಇನಿಂಗ್ಸ್‌ಗಳಲ್ಲಿ ನಾಲ್ಕು ಶತಕ ಸೇರಿದಂತೆ 1017 ರನ್‌ ಗಳಿಸಿದ್ದಾರೆ. ಅವರು ಲಯಕ್ಕೆ ಮರ ಳಿದರೆ ಆಸ್ಟ್ರೇಲಿಯಾ ತಂಡದ ಮೇಲಿನ ಒತ್ತಡ ಹೆಚ್ಚುವುದು ಖಚಿತ.

ಕೋಲ್ಕತ್ತದಲ್ಲಿ ಎರಡನೇ ಪಂದ್ಯ
ಭಾರತ ಮತ್ತು ಆಸ್ಟ್ರೇಲಿಯಾ ಕೋಲ್ಕತ್ತದಲ್ಲಿ ಈ ವರೆಗೆ ಕೇವಲ ಒಂದು ಏಕದಿನ ಪಂದ್ಯ ಆಡಿವೆ. 2003ರಲ್ಲಿ ನಡೆದಿದ್ದ ಟಿವಿಎಸ್‌ ಕಪ್‌ ಟೂರ್ನಿಯ ಫೈನಲ್‌ನಲ್ಲಿ ಉಭಯ ತಂಡಗಳು ಇಲ್ಲಿ ಸೆಣಸಿದ್ದವು. ಗುರುವಾರದ ಪಂದ್ಯಕ್ಕೆ ಮಳೆ ಕಾಡುವ ಸಾಧ್ಯತೆ ಇರುವುದರಿಂದ ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಗೆ ಸಾಕ್ಷಿಯಾಗುವ ಕಾತರದಲ್ಲಿರುವ ಪ್ರೇಕ್ಷಕರಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ಸ್ಮಿತ್‌ಗೆ ‘ಶತಕ’ದ ಪಂದ್ಯ
ಭಾರತದ ವಿರುದ್ಧ ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌ ಅವರಿಗೆ ಇದು 100ನೇ ಪಂದ್ಯ ಆಗಲಿದೆ.

ಲೆಗ್ ಸ್ಪಿನ್ನರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಸ್ಮಿತ್ ನಂತರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು.  ಒತ್ತಡದ ಸಂದರ್ಭದಲ್ಲೂ ದಿಟ್ಟತನದಿಂದ ಆಡುವ ಸಾಮರ್ಥ್ಯ ಅವರನ್ನು ತಂಡದ ನಾಯಕ ಸ್ಥಾನಕ್ಕೆ ಏರಿಸಿದೆ.

56 ಟೆಸ್ಟ್ ಮತ್ತು 30 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 5370 ಮತ್ತು 431 ರನ್‌ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎಂಟು ಶತಕ ಮತ್ತು 17 ಅರ್ಧಶತಕಗಳನ್ನು ಒಳಗೊಂಡ 3188 ರನ್‌ ಕಲೆ ಹಾಕಿದ್ದಾರೆ.

‘ಏಕದಿನ ಕ್ರಿಕೆಟ್‌ನ ಮೊದಲ 30 ಪಂದ್ಯಗಳಲ್ಲಿ ನಾನು ಬೌಲರ್ ಆಗಿ ಹೆಚ್ಚು ಮಿಂಚಿದ್ದೆ. ಈಗ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಷ್ಟರ ಮಟ್ಟಕ್ಕೆ ಬೆಳೆದಿದ್ದೇನೆ. ಕಳೆದ 99 ಪಂದ್ಯಗಳು ನನಗೆ ಸಾಕಷ್ಟು ಅನುಭವ ನೀಡಿವೆ. 2015ರ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿದ್ದು ನನಗೆ ಹೆಚ್ಚು ಖುಷಿ ನೀಡಿದ ಗಳಿಗೆ’ ಎಂದು ಸ್ಮಿತ್ ಬುಧವಾರ ಹೇಳಿದರು.

*
ಮೊದಲ ಪಂದ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಸಿಗಲಿಲ್ಲ. ದೌರ್ಬಲ್ಯಗಳಿಂದ ಹೊರಬರಲು ಶ್ರಮಿಸುತ್ತಿದ್ದು ಇದರಲ್ಲಿ ಯಶಸ್ಸು ಗಳಿಸುವ ಭರವಸೆ ಇದೆ.
–ಸ್ಟೀವನ್‌ ಸ್ಮಿತ್, ಆಸ್ಟ್ರೇಲಿಯಾ ತಂಡದ ನಾಯಕ

*
ತಂಡಗಳು: ಭಾರತ: ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಮನೀಷ್ ಪಾಂಡೆ, ಕೇದಾರ್ ಜಾಧವ್‌, ಮಹೇಂದ್ರ ಸಿಂಗ್ ದೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್‌, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್ ಬೂಮ್ರಾ, ಕೆ.ಎಲ್‌.ರಾಹುಲ್‌, ಜಡೇಜ, ಉಮೇಶ್ ಯಾದವ್‌, ಮಹಮ್ಮದ್ ಶಮಿ.

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಹಿಲ್ಟನ್ ಕಾರ್ಟ್‌ ರೈಟ್‌, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್‌), ನೇಥನ್ ಕಾಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಜೇಮ್ಸ್ ಫಾಕ್ನರ್‌, ಪೀಟರ್ ಹ್ಯಾಂಡ್ಸ್‌ಕಂಬ್‌, ಟ್ರಾವಿಸ್ ಹೆಡ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಆ್ಯಡಮ್‌ ಜಂಪಾ, ಕೇನ್‌ ರಿಚರ್ಡ್ಸನ್‌, ಮಾರ್ಕಸ್ ಸ್ಟೊಯಿನಿಸ್‌, ಆ್ಯರನ್ ಫಿಂಚ್‌.

ಪಂದ್ಯ ಆರಂಭ: ಮಧ್ಯಾಹ್ನ 1.30. ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT