ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪುನಶ್ಚೇತನಕ್ಕೆ ಉತ್ತೇಜನಾ ಪ್ಯಾಕೇಜ್‌

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದು ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ನಂತರ ಕುಸಿದಿರುವ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಸರಿ ದಾರಿಗೆ ತರಲು ಕೇಂದ್ರ ಸರ್ಕಾರ ಉತ್ತೇಜನಾ ಪ್ಯಾಕೇಜ್‌ ಘೋಷಿಸಲು ಸಿದ್ಧತೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸರ್ಕಾರ ಕೈಗೊಳ್ಳಲಿರುವ ಕ್ರಮಗಳ ಕುರಿತು ಅಧಿಕೃತ ಘೊಷಣೆ ಮಾಡುವುದಾಗಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಬುಧವಾರ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಆರ್ಥಿಕ ತಜ್ಞರ ಜತೆ ಚರ್ಚೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಯಾರಿಕಾ ವಲಯ, ರಫ್ತು ಮತ್ತು ಉದ್ಯೋಗ ಸೃಷ್ಟಿ ವಲಯಗಳಿಗೆ ಪ್ಯಾಕೇಜ್‌ ನೀಡುವ ನಿರೀಕ್ಷೆ ಇದೆ.

ಖಾಸಗಿ ವಲಯದ ಹೂಡಿಕೆ ಚೇತರಿಸಲು ಅಗತ್ಯ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಚಿಂತನೆ ನಡೆಸಿದ್ದು, ಒಂದೇ ಬಾರಿ ಬಡ್ಡಿದರಗಳಲ್ಲಿ ಭಾರಿ ಕಡಿತ ಮಾಡುವ ಸಾಧ್ಯತೆ ಇದೆ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಯಾವ, ಯಾವ ವಲಯಗಳಿಗೆ ಪ್ಯಾಕೇಜ್‌ ದೊರೆಯಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅರುಣ್‌ ಜೇಟ್ಲಿ ನಿರಾಕರಿಸಿದರು. ಮೂಲಗಳ ಪ್ರಕಾರ, ಜವಳಿ, ತಯಾರಿಕಾ ವಲಯ, ಚರ್ಮೋದ್ಯಮ, ಹರಳು ಮತ್ತು ಆಭರಣ ವಲಯಗಳಿಗೆ ಆರ್ಥಿಕ ಉತ್ತೇಜನ ದೊರೆಯಲಿದೆ.

ಇನ್ನೂ ಕೆಲವು ಉದ್ಯಮ ಕ್ಷೇತ್ರಗಳಿಗೆ ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಪ್ಯಾಕೇಜ್‌ ಘೋಷಿಸಬಹುದು. ಆದರೆ, ರಫ್ತು ವಲಯಕ್ಕೆ ಮಾತ್ರ ಸರ್ಕಾರ ಇನ್ನೂ ಒಂದೆರೆಡು ವಾರಗಳಲ್ಲಿ ಉತ್ತೇಜನಾ ಪ್ಯಾಕೇಜ್‌ ಘೋಷಿಸಲಿದೆ. ಚಿನ್ನ ಆಮದು ಹೆಚ್ಚಾಗಲಿದೆ ಎಂದು ಆಶಾಭಾವನೆಯಲ್ಲಿರುವ ಸರ್ಕಾರ ಚಿನ್ನ ಮತ್ತು ಚಿನ್ನಾಭರಣ ಆಮದು ನಿಯಮಾವಳಿ ಸಡಿಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನೋಟು ರದ್ಧತಿ ಮತ್ತು ಜಿಎಸ್‌ಟಿ ಜಾರಿ ನಿರ್ಧಾರದಿಂದ ದೇಶದ ಅನೌಪಚಾರಿಕ ವಲಯ ಮತ್ತು ಉದ್ಯೋಗ ಸೃಷ್ಟಿ ಪಾತಾಳಕ್ಕೆ ಕುಸಿದಿವೆ ಎಂದು ಟೀಕೆಗಳು ಕೇಳಿ ಬಂದಿದ್ದು, ಕೇಂದ್ರ ಸರ್ಕಾರ ಭಾರಿ ಒತ್ತಡಕ್ಕೆ ಸಿಲುಕಿದೆ. ಜಿಎಸ್‌ಟಿ ಜಾರಿಯ ನಂತರ ಸರ್ಕಾರದ ವರಮಾನ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಉತ್ತೇಜನಾ ಕ್ರಮಗಳನ್ನು ಘೋಷಿಸದೆ ಮುಂದೆ ಬೇರೆ ಮಾರ್ಗ ಉಳಿದಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT