ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಉದ್ಯಾನದಲ್ಲಿ ಉಕ್ಕುತ್ತಿದೆ ಜೀವಕಳೆ

ಉಕ್ಕಿ ಹರಿಯುತ್ತಿರುವ ಜಲಮೂಲಗಳು, ಹಸಿರು ಮೊಗೆಯುತ್ತಿದೆ ಅರಣ್ಯ
Last Updated 20 ಸೆಪ್ಟೆಂಬರ್ 2017, 20:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ಸುರಿದ ದಾಖಲೆ ಮಳೆಯಿಂದಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದೊಳಗೂ ಜಲಮೂಲಗಳು ಉಕ್ಕಿ ಹರಿಯುತ್ತಿವೆ.

ಉದ್ಯಾನದೊಳಗಿರುವ 217 ಜಲಮೂಲಗಳಲ್ಲಿ ನೀರು ಹರಿಯುತ್ತಿದೆ. ಹತ್ತು ವರ್ಷಗಳಿಂದ ಬತ್ತಿದ್ದ ಬಿಳಿನೀರು ತೊರೆಯಲ್ಲಿ ಈ ಸಲ ನೀರು ಹರಿಯುವ ಶಬ್ದ ಕೇಳುತ್ತಿದೆ ಎಂದು ಅರಣ್ಯ ಇಲಾಖೆ ಬೇಟೆ ನಿಗ್ರಹ ಸಿಬ್ಬಂದಿ ಖುಷಿಯಿಂದ ಹೇಳುತ್ತಾರೆ.

ವನ್ಯಜೀವಿಗಳಿಗೆ ಪ್ರಮುಖ ನೀರಿನ ಸೆಲೆಯಾಗಿರುವ ತಟ್ಟೆಕೆರೆ, ಚಿಕ್ಕಗೊಂಡನಹಳ್ಳಿ ಕೆರೆ, ಹುಣಸನಹಳ್ಳಿಕೆರೆ, ಚಿಕ್ಕನಾಚನಕೆರೆ, ದೊಡ್ಡಣ್ಣನಕೆರೆ, ಬಿದರಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಹುಚ್ಚನಕುಂಟೆಯಿಂದ ತಟ್ಟುಗುಪ್ಪೆವರೆಗಿನ ತೊರೆಯಲ್ಲೂ ನೀರಿನ ಹರಿವು ಇದೆ. ಉದ್ಯಾನದ ಉದಿಗೆಬಂಡೆ ಕಣಿವೆಯಲ್ಲಿ 1989ರಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂ ಉಕ್ಕಿ ಹರಿಯುತ್ತಿದೆ.

‘ರಾಷ್ಟ್ರೀಯ ಉದ್ಯಾನದಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗಿ ಹರಿಯಲು ಬಿಟ್ಟಿಲ್ಲ. ನೀರನ್ನು ವೈಜ್ಞಾನಿಕವಾಗಿ ಅರಣ್ಯದೊಳಗೆ ಹಿಡಿದಿಡುವ ಕೆಲಸ ಮಾಡಿದ್ದೇವೆ. ಇಂಗುಗುಂಡಿ ನಿರ್ಮಿಸಿ, ಗುಂಡಿಯೊಳಗೂ ಮತ್ತು ದಿಣ್ಣೆಯಲ್ಲೂ ಗಿಡಗಳನ್ನು ಬೆಳೆಸಲಾಗಿದೆ. ನೈಸರ್ಗಿಕ ನೀರಿನ ಸೆಲೆಗಳ ಜತೆಗೆ, 150ಕ್ಕೂ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಬೇಸಿಗೆಯಲ್ಲೂ ವನ್ಯಜೀವಿಗಳಿಗೆ ನೀರಿನ ಕೊರತೆಯಾಗುವುದಿಲ್ಲ’ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಕಲ್ಲು ಗಣಿಗಾರಿಕೆಯಿಂದ ನೈಸರ್ಗಿಕ ಸ್ವರೂಪ ಕಳೆದುಕೊಂಡಿದ್ದ ರಾಷ್ಟ್ರೀಯ ಉದ್ಯಾನದ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆ ನಡೆಸಿರುವ ‘ಬೀಜ ಬಿತ್ತುವ ಮತ್ತು ಸಸಿ ನೆಡುವ ಅಭಿಯಾನ’ದಿಂದ ಹಸಿರು ಚಿಗುರಲಾರಂಭಿಸಿದೆ.

ಉದ್ಯಾನದ ಕಲ್ಕೆರೆ ವಲಯದಲ್ಲಿ ಸುಮಾರು 241 ಹೆಕ್ಟೇರ್‌ ಅರಣ್ಯವು ನೀಲಗಿರಿ ಮರಗಳಿಂದಲೇ ತುಂಬಿದೆ. ಕ್ರಮೇಣ ನೀಲಗಿರಿ ಮರಗಳ ಸಂಖ್ಯೆ ಕಡಿಮೆ ಮಾಡಿ, ಇದನ್ನು ನೈಸರ್ಗಿಕ ಅರಣ್ಯವಾಗಿ ಪರಿವರ್ತಿಸುವ ಪ್ರಯೋಗವನ್ನು ಅರಣ್ಯ ಇಲಾಖೆ ಆರಂಭಿಸಿದೆ.

ಜೂನ್‌ನಲ್ಲಿ ಕಲ್ಕೆರೆ ಭಾಗದಲ್ಲಿ ಬಿತ್ತಿರುವ ಹುಣಸೆ, ನೇರಳೆ, ಹೊಂಗೆ, ಹಲಸು, ಗೇರು ಬೀಜಗಳು ಮೊಳಕೆಯೊಡೆದು ಗೇಣುದ್ದ ಬೆಳೆದಿವೆ. ಹಿಂದಿನ ವರ್ಷ 25 ಹೆಕ್ಟೇರ್‌ನಲ್ಲಿ ಸುಮಾರು 10,000 ಬಿದಿರು ಮತ್ತು ಹಣ್ಣಿನ ಗಿಡಗಳನ್ನು ನೆಡಲಾಗಿತ್ತು, ಇವು ಸೊಂಪಾಗಿ ಬೆಳೆದಿವೆ. ಆನೆಗಳ ಪ್ರಿಯ ಆಹಾರ ಜೊಂಡು ಮತ್ತು ಬಿದಿರು ಕೂಡ ಸಮೃದ್ಧವಾಗಿ ಬೆಳೆದಿದೆ.

‘ಅರಣ್ಯ ಇಲಾಖೆಯ ಬೀಜ ಘಟಕದಿಂದ ವಿವಿಧ ಜಾತಿಯ ಮರಗಳ ಬೀಜಗಳನ್ನು ತರಲಾಗಿತ್ತು. ಸಿಬ್ಬಂದಿಯೂ ಅರಣ್ಯದಲ್ಲಿ ಬೀಜ ಸಂಗ್ರಹಿಸಿದ್ದರು. ಮುಂಗಾರು ಮಳೆ ಬಿದ್ದಾಗ ಅಲ್ಲಲ್ಲಿ ಗುಣಿ ಮಾಡಿ ಸಿಬ್ಬಂದಿಯೇ ಬಿತ್ತಿದ್ದರು. ಎಲ್ಲವೂ ಮೊಳಕೆಯೊಡೆದು ಗಿಡಗಳಾಗಿ ಬೆಳೆಯುತ್ತಿವೆ. ಗಿಡಗಳ ಸುತ್ತಲೂ ಪಾತಿ ಮಾಡಿ, ಮಳೆ ನೀರುಣಿಸಲಾಗುತ್ತಿದೆ’ ಎನ್ನುತ್ತಾರೆ ಉದ್ಯಾನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌.

ಉದ್ಯಾನದಲ್ಲಿ 162 ಆನೆಗಳು
ಸುಮಾರು 260 ಚದರ ಕಿ.ಮೀ. ವಿಸ್ತೀರ್ಣದ ರಾಷ್ಟ್ರೀಯ ಉದ್ಯಾನ ಆನೆ, ಚಿರತೆ, ಕಾಟಿ, ಜಿಂಕೆ, ಕಾಡುಹಂದಿಗಳಿಗೆ ನೆಲೆಯಾಗಿದೆ. ಇತ್ತೀಚೆಗಿನ ಆನೆ ಗಣತಿ ಪ್ರಕಾರ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 162 ಆನೆಗಳಿರುವುದು ಪತ್ತೆಯಾಗಿದೆ. ಹುಲಿಯೂ ಆವಾಸ ಸ್ಥಾನ ಮಾಡಿಕೊಂಡಿರುವುದು ಕ್ಯಾಮೆರಾ ಟ್ರ್ಯಾಪ್‌ಗಳಲ್ಲೂ ಸೆರೆಯಾಗಿದೆ. ಬೇಟೆ ನಿಗ್ರಹ ಸಿಬ್ಬಂದಿ ಗಸ್ತಿನಲ್ಲಿದ್ದಾಗ 15 ದಿನಗಳ ಹಿಂದೆಯಷ್ಟೇ ದೊಡ್ಡಣ್ಣನಕೆರೆ ಸಮೀಪ ಕಾಡಿನ ಹುಲಿ ಕಾಣಿಸಿದೆ. ಸುಮಾರು 50 ಚಿರತೆಗಳು ಕ್ಯಾಮೆರಾ ಟ್ರಾಪ್‌ಗಳಲ್ಲಿ ಪತ್ತೆಯಾಗಿವೆ. ಆದರೆ, ಇಲಾಖೆ ಅಧಿಕಾರಿಗಳ ಪ್ರಕಾರ 90ಕ್ಕೂ ಹೆಚ್ಚು ಚಿರತೆಗಳಿರುವ ಅಂದಾಜಿಸಿದೆ.

ವನ್ಯಜೀವಿ ಮಾನವ ಸಂಘರ್ಷ ನಿಯಂತ್ರಣ
ಆನೆ, ಕಾಟಿ, ಕಡವೆ, ಜಿಂಕೆಗಳು ರಾಷ್ಟ್ರೀಯ ಉದ್ಯಾನದಿಂದ ಹೊರ ಬಂದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆ ಹಾನಿ ಮಾಡುತ್ತಿದ್ದವು. ಕಗ್ಗಲಿಪುರ ಮಾರ್ಗವಾಗಿ ನಗರ ಪ್ರದೇಶಕ್ಕೂ ಆನೆಗಳು ಆಗಾಗ ಬರುತ್ತಿದ್ದವು. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ದೊಡ್ಡಣ್ಣನಕೆರೆ ಅಂಚಿನಲ್ಲಿ ಹಾದುಹೋಗುವಂತೆ ಹಕ್ಕಿಪಿಕ್ಕಿ ಕಾಲೊನಿಯಿಂದ ಮುನಿನಗರಕೆರೆವರೆಗೆ ಸುಮಾರು 7.50 ಕಿ.ಮೀ. ದೂರ ರೈಲು ಹಳಿಯ ಕಂಬಿಗಳಿಂದ ಆನೆ ತಡೆ ಬೇಲಿ ನಿರ್ಮಿಸಲಾಗಿದೆ.

‘ಉದ್ಯಾನದ ಸುತ್ತಲೂ ಆನೆ ನಿರೋಧಕ ಕಂದಕ, ಸೌರವಿದ್ಯುತ್‌ ಬೇಲಿ ಇದ್ದರೂ ಆನೆಗಳು ಆಗಾಗ ದಾಟಿ ಹೊರ ಹೋಗುತ್ತಿದ್ದವು. ಇದನ್ನು ಶಾಶ್ವತವಾಗಿ ತಡೆಯಲು ರೈಲು ಕಂಬಿಗಳ ಬೇಲಿಗೆ ಸೌರವಿದ್ಯುತ್‌ ಬೇಲಿಯನ್ನೂ ಜೋಡಿಸಲಾಗುತ್ತಿದೆ. ಇದರಿಂದ ಆನೆಗಳು ರಾಷ್ಟ್ರೀಯ ಉದ್ಯಾನದಿಂದ ಹೊರಹೋಗುವುದು ನಿಯಂತ್ರಣಕ್ಕೆ ಬಂದಿದೆ. ಈ ವರ್ಷ 2 ಕಿ.ಮೀ. ರೈಲು ಕಂಬಿಯ ತಡೆ ಬೇಲಿ ನಿರ್ಮಿಸಲಾಗುತ್ತಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಾವೆದ್‌ ಮುಮ್ತಾಜ್‌.

*
ರಾಷ್ಟ್ರೀಯ ಉದ್ಯಾನದಲ್ಲಿ ನಾಲ್ಕು ವರ್ಷಗಳಿಂದಲೂ ವನ್ಯಜೀವಿಗಳಿಗೆ ನೀರು, ಆಹಾರದ ಕೊರತೆ ಉಂಟಾಗಿಲ್ಲ. ಈ ಬಾರಿಯಂತೂ ಜಲಮೂಲಗಳು ನಿರೀಕ್ಷೆಗೂ ಮೀರಿ ಭರ್ತಿಯಾಗಿವೆ. ಆಹಾರವೂ ಸಮೃದ್ಧವಾಗಿದೆ.
–ಜಾವೆದ್‌ ಮುಮ್ತಾಜ್‌, ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

*


ಗಣಿಗಾರಿಕೆಯಿಂದ ಹಾನಿಯಾಗಿದ್ದ ಜಾಗಗಳನ್ನೆಲ್ಲ ಪುನಶ್ಚೇತನಗೊಳಿಸುವ ಗುರಿ ಇದೆ. ಇನ್ನು ಹತ್ತು ವರ್ಷಗಳಲ್ಲಿ ಬಟಾಬಯಲು ಜಾಗಗಳು ನೈಸರ್ಗಿಕ ಅರಣ್ಯ ಸ್ವರೂಪ ಪಡೆಯಬಹುದೆಂಬ ವಿಶ್ವಾಸವಿದೆ.
–ಸುರೇಶ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT