ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಿ

Last Updated 21 ಸೆಪ್ಟೆಂಬರ್ 2017, 4:56 IST
ಅಕ್ಷರ ಗಾತ್ರ

ಬೆಳಗಾವಿ: ಶಿಕ್ಷಕರು ಮಕ್ಕಳಿಗೆ ಪಠ್ಯದೊಂದಿಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಸಲಹೆ ನೀಡಿದರು.ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಗುರು ಸಂಭ್ರಮ’– ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರ ಸಂಬಂಧ ದುರ್ಬಲಗೊಳ್ಳುತ್ತಿದೆ. ಇದರಿಂದ ನಿರಾಸೆಗೊಳ್ಳುತ್ತಿರುವ ಶಿಕ್ಷಕರು ಸರಿಯಾಗಿ ಬೋಧಿಸದಿರುವುದನ್ನೂ ಕಾಣುತ್ತಿದ್ದೇವೆ. ಫಾಸ್ಟ್‌ಫುಡ್‌ ಕಾಲ ಬಂದುಬಿಟ್ಟಿದೆ. ಯಾರಲ್ಲೂ ತಾಳ್ಮೆ, ಸಮಾಧಾನವೇ ಇಲ್ಲದಂತಾಗಿದೆ. ನಾನು, ನನ್ನದು ಎನ್ನುವ ಭಾವನೆ ಬೆಳೆಯುತ್ತಿದೆ. ಈ ಬೆಳವಣಿಗೆಯು ಸಮಾಜ ಹಾಗೂ ದೇಶಕ್ಕೆ ಒಳ್ಳೆಯದಲ್ಲ’ ಎಂದು ಹೇಳಿದರು.

ಸಕಾರಾತ್ಮಕ ಸಂಗತಿ ತಿಳಿಸಿ: ‘ದೇಶದಲ್ಲಿ ಕೆಲವು ನ್ಯೂನತೆಗಳಿವೆ. ಹಲವು ಭಾಷೆ, ಸಂಸ್ಕೃತಿ, ಧರ್ಮ ಹಾಗೂ ಜಾತಿಗಳಿವೆ. ಆದರೂ ನಮ್ಮ ದೇಶವೇ ನಮಗೆ ದೊಡ್ಡದು. ಇಲ್ಲಿ ಕಲಿತು, ಬೆಳೆದು ವಿದೇಶಕ್ಕೆ ಹೋಗುವುದು ಸರಿಯಲ್ಲ. ಶಿಕ್ಷಕರಾದವರು ದೇಶದ ಸಕಾರಾತ್ಮಕ ಸಂಗತಿಗಳು ಹಾಗೂ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ವಿದೇಶಿ ಸಂಸ್ಕೃತಿಗೆ ಮಾರು ಹೋಗಿ, ನಮ್ಮ ಸಂಸ್ಕೃತಿ ಮರೆಯುವುದು ಒಳ್ಳೆಯದಲ್ಲ. ಇದರಿಂದ ನಮ್ಮ ಬೇರುಗಳೇ ಅಲುಗಾಡುತ್ತವೆ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ಫೇಸ್‌ಬುಕ್‌, ವಾಟ್ಸ್ಆ್ಯಪ್‌, ಇನ್ಸ್ಟಾಗ್ರಾಮ್‌ ಅನ್ನು ಹಿತಮಿತವಾಗಿ ಬಳಸಬೇಕು. ಮಿತಿ ಮೀರಿದ ಯಾವುದೇ ಸಂಗತಿಯಿಂದಲೂ ಒಳ್ಳೆಯದಾಗುವುದಿಲ್ಲ’ ಎಂದರು.
‘ಮಕ್ಕಳಲ್ಲಿ ಬುದ್ಧಿವಂತರು, ಚೇಷ್ಟೆ ಮಾಡುವವರು, ಕಲಿಕೆಯಲ್ಲಿ ಹಿಂದುಳಿದವರೆಲ್ಲರೂ ಇರುತ್ತಾರೆ. ಎಲ್ಲರನ್ನೂ ಒಂದೇ ರೀತಿಯಾಗಿ ನೋಡಬೇಕು. ಕಲಿಕೆಯಲ್ಲಿ ಹಿಂದುಳಿದವರಿಗೆ ಸರ್ಕಾರವೇ ವಿನಾಯಿತಿಗಳನ್ನು ನೀಡುತ್ತದೆ. ಅವರ ಕಲಿಕಾ ಮಟ್ಟ ಸುಧಾರಿಸುವಂತಾಗಲು ಶಿಕ್ಷಕರು ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌. ರಾಮಚಂದ್ರನ್‌, ‘ಶಿಕ್ಷಕರು ಮಕ್ಕಳಿಗೆ ಪಠ್ಯದಾಚೆಗಿನ ವಿಷಯಗಳನ್ನೂ ತಿಳಿಸಿಕೊಡಬೇಕು. ಅದರಲ್ಲೂ ವಸತಿ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಪೋಷಕರಂತೆಯೇ ಇರಬೇಕಾಗುತ್ತದೆ’ ಎಂದು ತಿಳಿಸಿದರು.

ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಮುನಿರಾಜು ಮಾತನಾಡಿ, ‘ರಾಜ್ಯದಲ್ಲಿಯೇ ಮೊದಲ ಬಾರಿಗೆ ವಸತಿ ಶಾಲೆಗಳ ಶಿಕ್ಷಕರನ್ನು ಸೇರಿಸಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ 53 ವಸತಿ ಶಾಲೆಗಳು ಹಾಗೂ 3 ವಸತಿ ಕಾಲೇಜುಗಳಿವೆ. ಉತ್ತಮ ಫಲಿತಾಂಶ ಪಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.

‘ವಸತಿಶಾಲೆಗಳ ಶಿಕ್ಷಕರ ಸ್ಥಿತಿ ಸಮುದ್ರದ ನೀರಿನಂತಾಗಿದೆ. ಯಾರಿಗೂ ಬಡ್ತಿ ಸಿಕ್ಕಿಲ್ಲ. ಅವರ ಸಮಸ್ಯೆಗಳ ನಿವಾರಣೆ ಸಂಬಂಧ ವರದಿ ಪಡೆಯಲು ಸರ್ಕಾರವು ನಿವೃತ್ತ ಅಧಿಕಾರಿ ಇ. ವೆಂಕಟಯ್ಯ ಅವರ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಿದೆ’ ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ವಿ. ದೊಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ವಿಜಯಪುರದ ಉಪನಿರ್ದೇಶಕ ಮಹೇಶ ಪೋತದಾರ, ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪನಿರ್ದೇಶಕ ಸದಾಶಿವ, ಲೇಖಕ ಕಲೀಮ್ ಉಲ್ಲಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೋಳಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್‌. ಮಠದ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮು ಗುಗವಾಡ, ಸಹಶಿಕ್ಷಕರ ಸಂಘ ಬೆಳಗಾವಿ ಘಟಕದ ಅಧ್ಯಕ್ಷ ಎಸ್‌.ಎಸ್. ಬಳಿಗಾರ, ಸ.ಪ್ರಾ. ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಹೆಬ್ಬಳಿ, ಹಾಸ್ಟೆಲ್‌ಗಳ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಪ್ರಹ್ಲಾದ ಗೆಜ್ಜಿ (ಸಮಾಜಕಲ್ಯಾಣ ಇಲಾಖೆ), ಆರ್‌.ಎಚ್‌. ಲೋಕೇಶ (ಹಿಂದುಳಿದ ವರ್ಗಗಳ ಇಲಾಖೆ), ವಸತಿ ಶಾಲೆಗಳ ಜಿಲ್ಲಾ ಸಮನ್ವಾಧಿಕಾರಿ ರಾಘವೇಂದ್ರ ಗಂಗರೆಡ್ಡಿ ಭಾಗವಹಿಸಿದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮಾ ಸಾಲಿಗೌಡರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT