ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಹೆಚ್ಚಿದ ಮಳೆ; ಜನರಲ್ಲಿ ಆತಂಕ

Last Updated 21 ಸೆಪ್ಟೆಂಬರ್ 2017, 5:18 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಮಳೆಯ ಆರ್ಭಟ ಹೆಚ್ಚಿದ್ದು ಬೆಳಗಾವಿ, ಕಿತ್ತೂರು, ಚಿಕ್ಕೋಡಿ ಯಲ್ಲಿ ಜಿಟಿಜಿಟಿ ಮಳೆಯಾಗಿದೆ. ಅಥಣಿಯ ಅನಂತಪುರ, ಮಲಾಬಾದ, ಬಳ್ಳಿಗೇರಿ, ಗುಂಡೆವಾಡಿ, ಪ್ರಾರ್ಥನಹಳ್ಳಿ ಸುತ್ತಮುತ್ತ ಮಳೆಯಾಗಿದೆ.

ಪಶ್ಚಿಮಘಟ್ಟ ಪ್ರದೇಶಕ್ಕೆ ಹೊಂದಿ ಕೊಂಡಿರುವ ಖಾನಾಪುರ ತಾಲ್ಲೂಕಿನ ಕಣಕುಂಬಿ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. 9 ಸೆಂ.ಮೀ ಮಳೆಯಾಗಿದೆ. ಮಲಪ್ರಭಾ ಮೈದುಂಬಿ ಹರಿಯುತ್ತಿದೆ. ಹಬ್ಬನಹಟ್ಟಿ ಆಂಜನೇಯ ದೇಗುಲ ಜಲಾವೃತವಾಗಿದೆ.  ಕೆಲವು ಕಡೆ ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಖಾನಾಪುರ ವರದಿ: ತಾಲ್ಲೂಕಿನಾದ್ಯಂತ ಮುಂದುವರಿದ ವರುಣನ ಆರ್ಭಟದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ರಭಸದಿಂದ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಂಡ ವರದಿಯಾಗಿದೆ. ಪಾರವಾಡ ಮತ್ತು ಚಿಕಲೆ ಗ್ರಾಮಗಳ ನಡುವೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಅರಣ್ಯದಲ್ಲಿ ಹರಿಯುವ ಕ್ರಮೇಣ ಹೆಚ್ಚಿದ್ದು, ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ ಮತ್ತಿತರ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ದೇವಲತ್ತಿ, ಅವರೊಳ್ಳಿ, ಕೊಡಚವಾಡ, ಪಾರಿಶ್ವಾಡ, ಇಟಗಿ, ಗಂದಿಗವಾಡ, ತೋಲಗಿ, ಬೀಡಿ, ಕಕ್ಕೇರಿ, ನಂದಗಡ, ಹಲಸಿ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಮಳೆಯ ವಿವರ: ತಹಶೀಲ್ದಾರ್ ಕಚೇರಿ ಯಲ್ಲಿ ಲಭ್ಯವಾದ ಮಾಹಿತಿಯಂತೆ ಕಣಕುಂಬಿಯಲ್ಲಿ 89.6 ಮಿ.ಮೀ, ಅಸೋಗಾದಲ್ಲಿ 23.2 ಮಿ.ಮೀ, ಬೀಡಿ ಯಲ್ಲಿ 13.8 ಮಿ.ಮೀ, ಕಕ್ಕೇರಿಯಲ್ಲಿ 18.2 ಮಿ.ಮೀ, ಗುಂಜಿಯಲ್ಲಿ 40 ಮಿ.ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 50 ಮಿ.ಮೀ, ಲೋಂಡಾ ಪಿಡಬ್ಲ್ಯೂಡಿ ಯಲ್ಲಿ 39.4 ಮಿ.ಮೀ, ನಾಗರಗಾಳಿ ಯಲ್ಲಿ 26.4 ಮಿ.ಮೀ, ಜಾಂಬೋಟಿ ಯಲ್ಲಿ 17.4 ಮಿ.ಮೀ ಹಾಗೂ ಖಾನಾ ಪುರದಲ್ಲಿ 20 ಮಿ.ಮೀ ಮಳೆ ಸುರಿದಿದೆ.

ಚಿಕ್ಕೋಡಿ ವರದಿ: ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಗ್ರಾಮಗಳ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಮತ್ತು ದೂಧ ಗಂಗಾ ನದಿಗೆ ಕಾರದಗಾ–ಭೋಜ ಗ್ರಾಮಗಳ ಮಧ್ಯೆ ನಿರ್ಮಿಸಿರುವ ಸೇತುವೆ ಹಾಗೂ ವೇದಗಂಗಾ ನದಿಗೆ ಭೋಜ ವಾಡಿ–ಕುನ್ನೂರ ಗ್ರಾಮಗಳ ಮಧ್ಯೆ ನಿರ್ಮಿಸಿರುವ ಕೆಳಮಟ್ಟದ ಸೇತುವೆಗಳು ಬುಧವಾರ ಜಲಾವೃತಗೊಂಡಿದೆ.

‘ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಗ್ರಾಮಗಳ ಮಧ್ಯೆ ಇರುವ ಕೆಳಮಟ್ಟದ ಸೇತುವೆ ಮಳೆಗಾಲದಲ್ಲಿ ಬಹುತೇಕ ದಿನಗಳ ಕಾಲ ಜಲಾವೃತ ವಾಗಿಯೇ ಇರುತ್ತದೆ. ಇದರಿಂದಾಗಿ ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅಲ್ಲದೇ ನೀರಿನ ರಭಸಕ್ಕೆ ಸೇತುವೆಯೂ ಶಿಥಿಲ ಗೊಳ್ಳುತ್ತಿದೆ’ ಎಂಬುದು ಜನರ ಅನಿಸಿಕೆ.
ಮಳೆ ವಿವರ: ಮಹಾರಾಷ್ಟದ ಕೊಯ್ನಾ: 151 ಮಿ.ಮೀ, ನವಜಾ–221 ಮಿ.ಮೀ, ಮಹಾಬಳೇಶ್ವರ–193 ಮಿ.ಮೀ, ವಾರಣಾ–75 ಮಿ.ಮೀ., ಸಾಂಗ್ಲಿ–2 ಮಿ.ಮೀ., ಕೊಲ್ಹಾಪುರ–17 ಮಿ.ಮೀ. ಮಳೆ ದಾಖಲಾಗಿದೆ.

‘ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಂದ ಮತ್ತೆ ಮಳೆ ಆರ್ಭಟ ಶುರುವಾಗಿದೆ. ಇದರಿಂದಾಗಿ ಅಲ್ಲಿನ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಆಲಮಟ್ಟಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್‌ ನೀರಿನ ಹೊರಹರಿವು ಇದ್ದು, ತಾಲ್ಲೂಕಿನ ನದಿ ತೀರದ ಜನರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಚಿಕ್ಕೋಡಿ ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT