ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯೊಳಗೆ ನೀರಾವರಿ ಯೋಜನೆ

Last Updated 21 ಸೆಪ್ಟೆಂಬರ್ 2017, 5:55 IST
ಅಕ್ಷರ ಗಾತ್ರ

ಕುಷ್ಟಗಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇತರ ಎಲ್ಲ ಕೆಲಸಗಳನ್ನು ಬದಿಗಿಟ್ಟು ಕೃಷ್ಣಾ ಬಿ ಸ್ಕೀಂನ ಮೂರನೇ ಹಂತದ ಯೋಜನೆಗಳನ್ನು ಕಾಲಮಿತಿಯೊಳಗೆ ಕಾರ್ಯಗತಗೊಳಿಸಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. ಕೃಷ್ಣಾ ಬಿ ಸ್ಕೀಂನ ಕೊಪ್ಪಳ ಏತ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಬುಧವಾರ ಪಕ್ಷದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಜನಜಾಗೃತಿ ಹೋರಾಟ ಸಮಾವೇಶದಲ್ಲಿ ಅವರು ಮಾತನಾಡಿದರು.

'ಜಿಲ್ಲೆಯ ಐದೂ ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕುವುದು ನಿಮ್ಮ ಜವಾಬ್ದಾರಿ. ಅದೇ ರೀತಿ ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಿ ತೋರಿಸಿ ಬದ್ಧತೆ ಮೆರೆಯುವುದು ನಮ್ಮ (ಪಕ್ಷದ) ಕೆಲಸ' ಎಂದು ಹೇಳಿದರು.

'ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕಡೆಗಣಿಸಿದೆ, ಕೂಡಲಸಂಗಮನ ಮೇಲೆ ಮಾಡಿದ ಆಣೆ, ಪ್ರಮಾಣ ಮರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಪ್ರತಿ ವರ್ಷ ₹40 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿ ನಾಲ್ಕೂವರೆ ವರ್ಷದಲ್ಲಿ ಕೇವಲ 5,200 ಕೋಟಿ ರೂಪಾಯಿ ಅನುದಾನ ಮಾತ್ರ ನೀಡುವ ಮೂಲಕ ಈ ಭಾಗದ ಜನರಿಗೆ ದ್ರೋಹ ಬಗೆದಿದೆ. ಇದು ರೈತರಿಗೆ ಮಾಡಿದ ಅಪಮಾನ' ಎಂದರು.

'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಸೇರಿದಂತೆ 9 ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ. ಆಲಮಟ್ಟಿ ಆಣೆಕಟ್ಟೆಯನ್ನು 524 ಮೀಟರ್‍ಗೆ ಹೆಚ್ಚಿಸುವುದಕ್ಕೆ ಅಡ್ಡಿಯಾಗಿರುವ ಭೂ ಸ್ವಾಧೀನ, ಪುನರ್ವಸತಿ ಮತ್ತು ಪರಿಹಾರ ನೀಡುವುದಕ್ಕೆ ಯೋಚಿಸಿಲ್ಲ. ಈ ಭಾಗದ ಜನರ ಜೀವನದ ಜೊತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ' ಎಂದು ಹೇಳಿದರು.

ಮುಖಕ್ಕೆ ಹಿಡಿಯಿರಿ: ಕೊಟ್ಟ ಮಾತನ್ನು ಉಳಿಸಿಕೊಳ್ಳದ ಕಾಂಗ್ರೆಸ್ ಸರ್ಕಾರ ಇದ್ದೂ ಸತ್ತಂತೆ. ಯಾವ ಮುಖ ಇಟ್ಟುಕೊಂಡು ಕೊಪ್ಪಳಕ್ಕೆ ಬರುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಅವರು, ಕೊಪ್ಪಳ ಏತ ನೀರಾವರಿ ಪ್ರಗತಿ ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಅವರ ಮುಖಕ್ಕೆ ಹಿಡಿಯುವಂತೆ ರೈತರಿಗೆ ಹೇಳಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಸೂಪರ್ ಸಿಎಂ ಜಲಸಂಪನ್ಮೂಲ ಸಚಿವರು ತಮ್ಮ ಕೆಲಸ ಬಿಟ್ಟು ಪ್ರತ್ಯೇಕ ಧರ್ಮ ಮತ್ತಿತರ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಕೂಡಲಸಂಗಮನ ಮೇಲೆ ಆಣೆ ಮಾಡಿ ತಪ್ಪು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ಚುನಾವಣೆಯಲ್ಲಿ ಶಿಕ್ಷೆ ಕಾದಿದೆ ಎಂದರು.

ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಸಂಸದರಾದ ಸಂಗಣ್ಣ ಕರಡಿ, ಬಿ.ಶ್ರೀರಾಮುಲು, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ತಿಪ್ಪೇರುದ್ರಸ್ವಾಮಿ ಮಾತನಾಡಿದರು.

ಮಾಜಿ ಸಚಿವರಾದ ನಾರಾಯಣಸ್ವಾಮಿ, ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ಮಾಜಿ ಸಂಸದರಾದ ಶಿವರಾಮಗೌಡ, ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಪ್ರಮುಖರಾದ ಬಸವರಾಜ ಧಡೇಸ್ಗೂರು, ಸಿ.ವಿ.ಚಂದ್ರಶೇಖರ, ಸಿ.ಎಚ್.ಪೊಲೀಸಪಾಟೀಲ, ಅಮರೇಶ ಕರಡಿ ಇತರರು ಇದ್ದರು. ವಿರೂಪಾಕ್ಷಪ್ಪ ಸಿಂಗನಾಳ ಸ್ವಾಗತಿಸಿದರು. ಸಿ.ವಿ.ಜಡಿಯವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT